ಉತ್ತರ ಕನ್ನಡ: ಅಂತಿಂತ ಸಾರಥಿ ಅಲ್ಲ ಈ ಆಟೋ ಡ್ರೈವರ್. ಮಹಿಳೆಯಾದ್ರೂ ಪುರುಷರಷ್ಟೇ ಮುನ್ನುಗ್ಗಿ ಆಟೋ ಓಡಿಸಬಲ್ಲರು. ಬದುಕಿನ ಬಂಡಿಗೆ ಬ್ರೇಕ್ ಬೀಳದಂತೆ, ಬ್ಯಾಲೆನ್ಸ್ ಮಾಡೋ ಈ ಆಟೋ ಚಾಲಕಿಯದ್ದು ನಿಜಕ್ಕೂ ಮಾದರಿ ಕಥೆ.. ಹಾಗಿದ್ರೆ ಆಟೋದಲ್ಲಿ ಬದುಕು ಕಟ್ಟಿಕೊಂಡ ಈ ಹೆಣ್ಮಗಳಾದ್ರೂ ಯಾರೂ ಅಂತೀರಾ? ಹೇಳ್ತೀವಿ ನೋಡಿ..
ಮೊದಲ ಆಟೋ ಚಾಲಕಿ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಭಟ್ಕಳ ನಮ್ ಆಟೋರಾಜ ಶಂಕರನಾಗ್ ಬಾಲ್ಯ ಕಳೆದ ಊರುಗಳು. ಅಂತಹ ಆಟೋ ರಾಜನ ಊರಲ್ಲಿ ಆಟೋ ಏರಿ ಸವಾರಿ ಮಾಡ್ತಿದ್ದಾರೆ ಮಹಾದೇವಿ ಮೇಡಂ. ಹೌದು, ಮಹಾದೇವಿ ಜನಾರ್ದನ್ ನಾಯ್ಕ್ ಇವರು ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ತೇರ್ನಮಕ್ಕಿಯವರು. ಮೊದಲು ಊರಲ್ಲಿ ಧರ್ಮಸ್ಥಳ ಸಂಘದ ಮೇಲ್ವಿಚಾರಕಿಯಾಗಿ ನೌಕರಿ ಮಾಡುತ್ತಿದ್ದ ಇವರು ಈಗ ಜಿಲ್ಲೆಯ ಮೊದಲ ಸಕ್ರಿಯ ಆಟೋ ಚಾಲಕಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೆಲಸವೇ ಬಿಟ್ಟ ಮಹಾದೇವಿ
34ರ ಪ್ರಾಯದ ಮಹಾದೇವಿಯವರು ಹಿಂದೆ ಧರ್ಮಸ್ಥಳ ಸಂಘದ ಮೇಲ್ವಿಚಾರಕಿಯಾಗಿ ಮುರ್ಡೇಶ್ವರ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಉತ್ತರ ಕರ್ನಾಟಕಕ್ಕೆ ವರ್ಗ ಆಗಿದ್ದು, ಹುದ್ದೆ ಚೆನ್ನಾಗಿದ್ದರೂ ಪುಟ್ಟ ಮಕ್ಕಳು ವಯಸ್ಸಾದ ಅತ್ತೆ ಮಾವ ಇವರನ್ನೆಲ್ಲ ಅಲ್ಲಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಅನ್ನೋ ಕಾರಣ ಒಂದೆಡೆಯಾದರೆ, ಇನ್ನೊಂದೆಡೆ ಮಕ್ಕಳಿಗೆ ವಾತಾವರಣ ಹೊಂದಿಕೆಯಾಗಲಾರದು ಅನ್ನೋ ಕಾರಣವೂ ಅವರ ಸ್ಥಳಾಂತರಕ್ಕೆ ಅಡ್ಡಿಯಾಯಿತು. ಹೀಗಾಗಿ ಕುಟುಂಬದ ಹಿತ ನೆನಪಿಸಿಕೊಂಡು ಹಿಂದೆ ಮುಂದೆ ನೋಡದೇ ಮಹಾದೇವಿ ಅವ್ರು ಕೆಲಸಕ್ಕೆ ರಿಸೈನ್ ಮಾಡಿಬಿಟ್ಟರು.
ಖಾಕಿ ತೊಟ್ಟು ಆಟೋ ಚಾಲನೆ
ಕೆಲಸಕ್ಕೇನೋ ರಾಜೀನಾಮೆ ನೀಡಿದ್ರು ಆದ್ರೆ ಮುಂದೇನು ಎಂದು ಯೋಚಿಸುವಾಗ ಇವರ ಮನಸ್ಸಿಗೆ ತೋಚಿದ್ದೇ ಆಟೋ ಸಾರಥಿಯ ನೆನಪು. ಹೌದು, ಬಾಲ್ಯದಿಂದ ಇದ್ದ ಖಾಕಿ ಡ್ರೆಸ್ ಹಾಕುವ ಕನಸು ಮುಂದೆ ಬಂತಾದರೂ, ವಯಸ್ಸು ಹಾಗೂ ಮಹಿಳೆ ಎಂಬ ಹಿಂಜರಿಕೆಯಿಂದ ಕೊಂಚ ಹಿಂದು ಮುಂದೆ ನೋಡುವಂತಹ ಪರಿಸ್ಥಿತಿಯೂ ಇತ್ತು. ಆದ್ರೆ ಸ್ವಾಭಿಮಾನಿ ಆದವ್ರಿಗೆ ಇರೋ ಅಡ್ಡಿಯಾದ್ರೂ ಏನು ಎನ್ನುವಂತೆ ಮಹಾದೇವಿ ಅವರು ಕುಮಟಾದ ಪರಿಚಯಸ್ಥ ಚಾಲಕರೊಬ್ಬರ ಬಳಿ ಆಟೋ ತರಬೇತಿ ಪಡೆದು ಕೊನೆಗೂ ಆಟೋ ಖರೀದಿಸಿಯೇ ಬಿಟ್ಟರು. ಈಗ ಈಗ ಹೆರಾಡಿ ಕ್ರಾಸ್ ಅಲ್ಲಿ ಆಟೋ ಪಾರ್ಕ್ ನಲ್ಲಿ ಜಾಗ ಪಡೆದಿದ್ದು, ಎಂತಹದ್ದೇ ಪ್ರಯಾಣಿಕರು ಬಂದರು ಅವರನ್ನ ಸುರಕ್ಷಿತವಾಗಿ ಸ್ಥಳಕ್ಕೆ ತಲುಪಿಸೋ ಮೂಲಕ ಮಹಾದೇವಿ ಅವರು ಸೈ ಎನಿಸಿಕೊಂಡಿದ್ದಾರೆ.
ಫುಲ್ ಟೈಂ ಆಟೋ ಸಾರಥಿ
ಈಗ ಫುಲ್ ಟೈಂ ಆಟೋ ಸಾರಥಿಯಾಗಿರುವ ಮಹಾದೇವಿ ಅವ್ರು ಬೆಳಿಗ್ಗೆ 9 ರಿಂದ 1 ಗಂಟೆವರೆಗೂ ಹಾಗೂ 3 ಗಂಟೆಯಿಂದ ಸಂಜೆ 6 ಗಂಟೆ ತನಕ ತೇರ್ನಮಕ್ಕಿ-ಬಸ್ತಿ-ಮುರ್ಡೇಶ್ವರ ಭಾಗದಲ್ಲಿ ಆಟೋ ಚಾಲಕಿ ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಕ್ಕ ಪ್ರಯಾಣಿಕರಲ್ಲಿ ಮುರ್ಡೇಶ್ವರ ಕಡಿಗಾ? ಬಸ್ತಿ ಕಡಿಗಾ? ಎಂದು ನ್ಯಾಷನಲ್ ಹೈವೇ ಅಲ್ಲಿ ಹಾಯಾಗಿ ಆಟೋ ಓಡಸ್ಕೊಂಡ್ ತಮ್ಮ ಜೀವನಕ್ಕೂ ಬ್ರೇಕ್ ಬೀಳದಂತೆ ಸ್ವಾಭಿಮಾನದ ಬದುಕು ನಡೆಸುತ್ತಿರುವುದು ನಿಜಕ್ಕೂ ಗ್ರೇಟ್ ಎನ್ನಲೇಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ