ಉತ್ತರ ಕನ್ನಡ: ಸಾಲು ಸಾಲಿಗೂ ಸುಂದರ ಕೆತ್ತನೆಗಳು, ಅದ್ಭುತವೆನಿಸುವ ರಚನೆಗಳು. ಅದ್ಭುತ ದೇಗುಲದ ಶಿಲ್ಪ ಕಲೆ ನೋಡಿದಂತಹ ಅನುಭವ. ಹೌದು, ನೋಡೋದಕ್ಕೇನೋ ಪುಟ್ಟದಾದ ದೇಗುಲದಂತೆ (Hindu Temple) ಕಾಣೋ ಇದು ಇತಿಹಾಸ ಪ್ರಸಿದ್ಧ ತೇರು. ಇದೀಗ ತೆರೆಮರೆಗೆ ಸರಿಯುತ್ತಿರುವ ಈ ತೇರು (Banavasi Chariot) ಒಂದು ಸುದೀರ್ಘ ಅಧ್ಯಾಯಕ್ಕೆ ಅಂತಿಮ ಹಾಡುತ್ತಿದೆ.
4 ಶತಮಾನಗಳ ಇತಿಹಾಸ
ಯೆಸ್, ಬೃಹತ್ತಾದ ಎರಡು ಚಕ್ರಗಳನ್ನ ಹೊಂದಿರುವ ಈ ರಥ ಇರೋದು ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ. ಈ ರಥಕ್ಕೆ ಸುದೀರ್ಘ 414 ವರ್ಷಗಳ ಇತಿಹಾಸ ಬೇರೆ ಇದೆ. ಹೀಗಾಗಿ ಇಲ್ಲಿರೋ ರಥಕ್ಕೂ ದೇಗುಲದಂತೆಯೇ ಇತಿಹಾಸವಿರುವುದು ವಿಶೇಷ. ಬನವಾಸಿಯ ರಥ ಅಂದ್ರೆ ಹಾಗಾಗಿ ಸಹಜವಾಗಿಯೇ ಜನರ ಚಿತ್ತವನ್ನ ಸೆಳೆಯುತ್ತಿತ್ತು. ಇದೀಗ ಇಂತಹ ಅದ್ಭುತ ರಥಕ್ಕೆ 4 ಶತಮಾನಗಳ ನಂತರ ವಿದಾಯ ಹೇಳಲಾಗುತ್ತಿದೆ.
ಮಹಾಸ್ಯಂದನ ರಥ
ಕ್ರಿಸ್ತ ಶಕ 1608ರಲ್ಲಿ ಸೋದೆಯ ಅರಸ ರಘುನಾಥ ನಾಯಕ ಕಲ್ಲಿನ ಮಂಚ ಹಾಗೂ ಈ ಬೃಹತ್ ತೇರನ್ನು ಬನವಾಸಿಯ ಮಧುಕೇಶ್ವರನಿಗೆ ಅರ್ಪಿಸಿದ್ದರು. ಅಂದಿನಿಂದ ಇಂದಿನವರೆಗೂ ಬನವಾಸಿ ಜಾತ್ರೆಯಲ್ಲಿ ಈ ಮಹಾರಥಕ್ಕೆ ವಿಶೇಷ ಸ್ಥಾನಮಾನವಿದೆ. ಇದಕ್ಕೆ ‘ಮಹಾಸ್ಯಂದನ ರಥ‘ ಎಂದೇ ಹೆಸರೂ ಇದೆ. ರಘುನಾಥ ನಾಯಕ ಇಲ್ಲಿಗೆ ರಥವನ್ನ ನೀಡುವ ಮುನ್ನ ಇಲ್ಲಿ ಯಾವುದೇ ತೇರಿಲ್ಲದೇ ಉತ್ಸವ ನಡೆಯುತ್ತಿತ್ತು ಅನ್ನೋ ಉಲ್ಲೇಖವಿದೆ.
ವಿಶಿಷ್ಟ ಶಿಲ್ಪದ ರಥವಿದು
ಈಗ ನೂತನ ರಥದ ನಿರ್ಮಾಣವಾಗುತ್ತಿದೆಯಾದ್ರೂ ಈ ತೇರನ್ನೊಮ್ಮೆ ನೋಡೋ ಖುಷಿಯೇ ಬೇರೆ. ಇದರಲ್ಲಿರೋ ಶಿಲ್ಪಗಳು, ದೇವರ ಮೂರ್ತಿಗಳು, ಯಕ್ಷ-ಗಂಧರ್ವ-ಅಪ್ಸರೆಯ ಸಮೂಹ ಅಷ್ಟೇ ಅಲ್ಲದೇ, ಆ ಬೃಹತ್ ಚಕ್ರಗಳು ಮತ್ತೊಂದು ರಥಕ್ಕೆ ಸರಿಸಾಟಿಯಾಗುವ ಮಾತೇ ಇಲ್ಲ ಎನ್ನಬಹುದು.
ಇದನ್ನೂ ಓದಿ: ಶಿರಸಿಯಲ್ಲಿ IT ಕಂಪನಿ ಸ್ಥಾಪನೆ! ಮಲೆನಾಡು, ಕರಾವಳಿಯ ಪ್ರತಿಭೆಗಳಿಗೆ ಹೊಸ ಅವಕಾಶ
ರಥ ಎಳೆಯುತ್ತಿದ್ದ ಪಟ್ಟದಾನೆಗಳು
19 ನೇ ಶತಮಾನದ ತನಕ ಈ ತೇರನ್ನ ಎಳೆಯಲು ಶೃಂಗೇರಿ ಮಠದ ಪಟ್ಟದಾನೆಗಳು ಎಳೆಯುತ್ತಿದ್ದವಂತೆ, ಆದರೆ ಆನಂತರ ಮಾತ್ರ ಜನರೇ ಎಳೆಯುತ್ತಿದ್ದರು. ಇದು ದಕ್ಷಿಣ ಭಾರತದ ಅತಿ ಹಳೆಯ ಹಾಗೂ ಅತಿ ದೊಡ್ಡ ತೇರುಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
ಇದನ್ನೂ ಓದಿ: HDK ಹಾರದ ಹಿಂದಿನ ಕೈ! ಬೃಹತ್ ಅಡಿಕೆ ಮಾಲೆ ತಯಾರಿಸಿದ ಕಲಾವಿದ ಇವರೇ!
ಒಟ್ಟಿನಲ್ಲಿ ಇತಿಹಾಸ ಪ್ರಸಿದ್ಧ ಮಹಾಸ್ಯಂದನ ರಥ ಇದೀಗ ತೆರೆಮರೆಗೆ ಸರಿದಿದೆ. ಇನ್ನೇನು ಹೊಸ ತೇರು ಬಂದ್ರೂ ಈ ಮಹಾರಥ ತನ್ನ ಆಕರ್ಷಣೆ ಕಳೆದುಕೊಳ್ಳದು. 400 ವರ್ಷಕ್ಕೂ ಅಧಿಕ ಕಾಲ ಶ್ರೀ ಉಮಾಮಧುಕೇಶ್ವರ ಪರಿವಾರವನ್ನು ಮೆರೆಸಿದ ಈ ತೇರು ನಿಜಕ್ಕೂ ಧನ್ಯವೇ ಸರಿ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ