ಎಲ್ಲಿ ನೋಡಿದರೂ ಘಂಟೆಗಳ ಸಾಲು.ಭಕ್ತಿಯಿಂದ ತಮ್ಮ ಬೇಡಿಕೆಗಳನ್ನ ಗಣಪನ ಮುಂದೆ ಬೇಡಿಕೊಳ್ಳುತ್ತಿರೋ ಭಕ್ತರು. ಮುಂದೆ ನಿಂತು ಹರಸುವವನು ಸಿದ್ಧಿ ವಿನಾಯಕ. ದೂರ ದೂರದ ಊರುಗಳಿಂದಲೂ ಹರಕೆ ತೀರಿಸೋಕೆ ಘಂಟೆ ತರುವ ಭಕ್ತರ ದಂಡು. ಇದು ನಾಡಿನೆಲ್ಲೆಡೆ ಘಂಟೆ ಗಣಪ (Ghante Ganapati Temple) ಎಂದೇ ಖ್ಯಾತವಾದ ದೇಗುಲದ ವಿಶೇಷ. ಉತ್ತರ ಕನ್ನಡ ಜಿಲ್ಲೆಯ (Uttara Kannada) ಯಲ್ಲಾಪುರದ ಚಂದಗುಳಿ ಗ್ರಾಮದಲ್ಲಿರುವ (Chandaguli Ghante Ganapati Temple) ಶ್ರೀ ಸಿದ್ಧಿವಿನಾಯಕ ದೇಗುಲಕ್ಕಿರುವ ಪರ್ಯಾಯ ಹೆಸರೇ ಘಂಟೆ ಗಣಪತಿ ದೇವಸ್ಥಾನ.
ನಿಜ, ಇಲ್ಲಿಗೆ ಸಾಮಾನ್ಯವಾಗಿ ಹರಕೆ ಹೊತ್ತವರು ಘಂಟೆಗಳನ್ನ ನೀಡಿ ಹರಕೆ ಸಲ್ಲಿಸುವ ಕ್ರಮವಿದೆ. ಹಿಂದಿನಿಂದಲೂ ನಡೆದುಕೊಂಡು ಬಂದ ಈ ಸಂಪ್ರದಾಯದಿಂದಾಗಿ ದೇವಸ್ಥಾನದ ಎಲ್ಲಿ ನೋಡಿದ್ರಲ್ಲಿ ಘಂಟೆಗಳ ಸಾಲು ಕಾಣಬಹುದು. ಅದೂ ಬೇರೆ, ಒಂದೊಂದು ಘಂಟೆಯೂ ಒಂದೊಂದು ಆಕಾರ, ಗಾತ್ರ, ತೂಕದ್ದಾಗಿದೆ.
ಘಂಟೆ ಕೊಡ್ತೇನೆ ಅಂದ್ರೆ ಸಾಕು
ಯಾವುದೇ ಸಮಸ್ಯೆಗಳ ನಿವಾರಣೆಗಾಗಿ ಈ ಕ್ಷೇತ್ರಕ್ಕೆ ಬಂದು, ಗಣಪನಿಗೆ ಘಂಟೆ ಕೊಡುತ್ತೇನೆ ಎಂದು ಬೇಡಿದರೆ ಸಾಕು, ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತೆ ಅನ್ನೋ ನಂಬಿಕೆಯಿದೆ. ಹೀಗಾಗಿಯೇ ಈ ಗಣಪನಿಗೆ ಘಂಟೆಯೇ ಹರಕೆ ರೂಪದಲ್ಲಿ ಸಲ್ಲಿಕೆಯಾಗುತ್ತೆ. ವಿಶೇಷವಾಗಿ ಸಂಕಷ್ಟಹರ ಚತುರ್ಥಿ, ಅಂಗಾರಕ ಚತುರ್ಥಿ, ಸೋಮವಾರ ಹೀಗೆ ಶುಭದಿನಗಳಲ್ಲಿ ಭಕ್ತ ಸಾಗರವೇ ಈ ದೇಗುಲಕ್ಕೆ ಹರಿದು ಬರುತ್ತೆ. ರಾಜ್ಯ ಮಾತ್ರವಲ್ಲದೇ ನೆರೆಯ ಗೋವಾ, ಮಹಾರಾಷ್ಟ್ರ ಸೇರಿದಂತೆ ಲಕ್ಷಾಂತರ ಭಕ್ತರಿಗೆ ಪ್ರಿಯ ಆರಾಧ್ಯನು ಈ ಸಿದ್ಧಿವಿನಾಯಕನಾಗಿದ್ದಾನೆ.
ಕಾಡಿನ ಮಧ್ಯೆ ನೆಲೆಸಿರೋ ಗಣಪ
ಈ ದೇವಸ್ಥಾನಕ್ಕೆ ಸುಮಾರು 200–300 ವರ್ಷದ ಇತಿಹಾಸವಿದೆ. ಕಾಡಿನ ಮಧ್ಯೆ ಗಣಪ ವಾಸವಿರೋ ಗಣಪನಿಗೆ ಬೇಡ್ತಿ ನದಿಯ ಹರಿವಿನ ಝುಳು ಝುಳು, ಹಸಿರು ಪರಿಸರದ ಹಕ್ಕಿಗಳ ಹಿನ್ನೆಲೆ ಗಾಯನವಿದೆ. ಮೊದಲಿಗೆ ಮಕ್ಕಳಿಗೆ ಮಾತು ಬರಲು ಘಂಟೆ ಕೊಡಲು ಭಕ್ತರು ಶುರು ಮಾಡಿದರು. ನಂತರ ನೌಕರಿ, ಮದುವೆ ಎಲ್ಲದ್ದಕ್ಕೂ ಗಣಪನ ಆಶೀರ್ವಾದ ಸಿಕ್ಕುತ್ತಿದ್ದಂತೆ ಖುಷಿಯಿಂದ ಕೃತಜ್ಞತೆಯಾಗಿ ಗಣೇಶನಿಗೆ ಜನ ಘಂಟೆ ಅರ್ಪಿಸುತ್ತಾ ಬಂದಿದ್ದಾರೆ.
ಕನ್ನಡದ ಗಣಪ!
ಇನ್ನು ಇಲ್ಲಿ ಕನ್ನಡದಲ್ಲಿ ಪ್ರಶ್ನಾ ಚಿಂತಾವಳಿ ಹಾಗೂ ಪರಿಹಾರ ನಡೆಯುತ್ತದೆ. ಸಂಕಲ್ಪವೂ ಕೂಡ ಕನ್ನಡದಲ್ಲಿಯೇ ನಡೆಯೋದು ಇಲ್ಲಿನ ವಿಶೇಷ. ಹಾಗಾಗಿ ಈತ ಕನ್ನಡದ ಗಣಪನೂ ಹೌದು ಅಂತಾರೆ ಭಕ್ತರು.
ಘಂಟೆ ಗಣಪತಿ ದರ್ಶನಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಗಣಪನ ದರ್ಶನಕ್ಕೆ ಹೀಗೆ ಬನ್ನಿ
ಇಲ್ಲಿಗೆ ಬರಬೇಕೆಂದರೆ ಯಲ್ಲಾಪುರಕ್ಕೆ ಬಂದು ಮಾಗೋಡು ಮಾರ್ಗವಾಗಿ ಬಂದು ಎಡಕ್ಕೆ ಸ್ವಲ್ಪ ದೂರ ಕ್ರಮಿಸಬೇಕು. ಅಥವಾ ಯಲ್ಲಾಪುರ-ಶಿರಸಿ ಮಾರ್ಗದ ಮಳಲಗಾಂವ್ ಕ್ರಾಸಿಂದ 4 ಕಿ.ಮೀ ಕ್ರಮಿಸಿ ಬರಬಹುದು. ಒಟ್ಟಿನಲ್ಲಿ ಮನಸ್ಸಿನ ಒಳಗಿರುವ ದುಗುಡಗಳನ್ನು ವಿಘ್ನ ನಿವಾರಕ ಮುಂದೆ ಘಂಟೆ ಹರಕೆ ಹೊತ್ತುಕೊಂಡಲ್ಲಿ ಬೇಡಿಕೆ ಈಡೇರುವ ಭರವಸೆ ಭಕ್ತರದ್ದಾಗಿದೆ.
ದೇವಸ್ಥಾನದ ದೂರವಾಣಿ ಸಂಖ್ಯೆ: 94829 12495
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ