ಉತ್ತರ ಕನ್ನಡ: ಎಲ್ಲಿ ನೋಡಿದ್ರಲ್ಲಿ ಬೀಗಗಳು. ಕಿಟಕಿ ಸರಳನ್ನೂ ಬಿಟ್ಟಿಲ್ಲ, ಕಂಪೌಂಡ್ ವಾಲ್ ಮೇಲಿರೋ ತಂತಿನೂ ಬಿಟ್ಟಿಲ್ಲ. ಎಲ್ಲೆಂದ್ರಲ್ಲಿ ಅವಕಾಶ ಸಿಕ್ರೆ ಸಾಕು, ಭಕ್ತರೆಲ್ಲರೂ ಬೀಗ ಜಡಿದೇ ಹೋಗ್ತಾರೆ. ಅಷ್ಟಕ್ಕೂ ಈ ಮಟ್ಟಿಗೆ ಬೀಗ (Lock) ಜಡಿದು ಹೋಗೂ ಇದರ ಹಿಂದಿನ ಕಥೆಯಾದ್ರೂ (Bhootaraja Chowdeshwari Temple) ಏನ್ ಅಂತೀರಾ? ಅದನ್ನೇ ಹೇಳ್ತೀವಿ ನೋಡಿ.
ಭೂತರಾಜನ ಸಾನಿಧ್ಯ
ಹೀಗೆ ಸಿಕ್ಕ ಸಿಕ್ಕಲ್ಲಿ ಬೀಗ ಜಡಿಯೋ ಈ ದೃಶ್ಯ ಕಂಡು ಬರೋದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಲ್ಕನೇ ಕ್ರಾಸಿನ ಬಳಿ. ಇಲ್ಲಿ ಶ್ರೀ ಭೂತರಾಜ ಹಾಗೂ ಶ್ರೀ ಚೌಡೇಶ್ವರಿಯ ಸನ್ನಿಧಾನವಿದೆ. ಇದು ಮರದಲ್ಲೇ ಮೂಡಿದ ದೇವಸ್ಥಾನ, ಹಾಗಾಗಿ ಇಲ್ಲಿ ಮರವೇ ದೇವರು. ಈ ಮರದಲ್ಲಿ ಶ್ರೀ ಭೂತರಾಜ ಹಾಗೂ ಶ್ರೀ ಚೌಡೇಶ್ವರಿಯ ಸನ್ನಿಧಾನವಿದೆ ಎಂಬ ನಂಬಿಕೆ ಭಕ್ತರದ್ದು.
ಬೀಗ ಹರಕೆ
ಈಗ ಇಪ್ಪತ್ತು ವರ್ಷದ ಹಿಂದೆ ದೇಗುಲ ನಿರ್ಮಾಣವಾಗಿದ್ದು, ಅದಕ್ಕಿಂತ ಹಿಂದೆ ತೆರೆದ ಬಯಲಿನಲ್ಲಿ ಪೂಜೆ ಪುನಸ್ಕಾರ ನಡೆಯುತ್ತಿತ್ತು. ಈ ದೇವಾಲಯಕ್ಕೆ ನಿರ್ದಿಷ್ಟ ಇತಿಹಾಸವಿಲ್ಲ ಹಾಗೂ ಯಾರೂ ಅದರ ಬಗ್ಗೆ ಮಾತಾಡುವುದೂ ಇಲ್ಲ. ಆದರೂ ತಮ್ಮ ಇಷ್ಟಾರ್ಥಗಳ ಬೇಡಿಕೆ ಈಡೇರಿಕೆಗೆ ದೇವರ ಮೊರೆ ಹೋಗುವ ಭಕ್ತರು ಬೀಗ ಹಾಕುವ ಮೂಲಕ ಹರಕೆ ಹೊತ್ತುಕೊಳ್ಳುವುದು ವಾಡಿಕೆ.
ಹಾರುಗೋಳಿ ವಿಶೇಷ
ಇನ್ನೇನಾದ್ರೂ ತಾವು ಕೇಳಿಕೊಂಡಿದ್ದು ಫಲಪ್ರದವಾದಲ್ಲಿ ಬಳಿಕ ಅದೇ ಭಕ್ತರು ವಾಪಸ್ ಬಂದು ಹರಕೆ ತೀರಿಸಿ ಬೀಗಗಳನ್ನ ತೆರವುಗೊಳಿಸುತ್ತಾರೆ. ಅದೆಷ್ಟೋ ಭಕ್ತರ ಆಸೆಗಳು ಈಡೇರಿದ ಉದಾಹರಣೆಗಳೂ ಇವೆ.
ಹಾಗಾಗಿ ಇಂದಿಗೂ ಪ್ರತಿದಿನ ಹಲವಾರು ಮಂದಿ ಬಂದು ಬೀಗ ಹಾಕಿ ತಮ್ಮ ದೇವರಿಗೆ ಕೈ ಮುಗಿದು ಹೋಗುತ್ತಾರೆ. ಇನ್ನು ಪ್ರತಿ ಅಮವಾಸ್ಯೆ, ಹುಣ್ಣಿಮೆ, ರವಿವಾರ, ಗುರುವಾರ, ಮಂಗಳವಾರ, ಶುಕ್ರವಾರ ಇಲ್ಲಿ ಹಬ್ಬದ ವಾತಾವರಣವಿರುತ್ತದೆ. ಜನ ಹಾರುಗೋಳಿಯನ್ನು ತೂರುತ್ತಾರೆ.
ಕಲ್ಲಿನ ಪವಾಡ!
ಭಕ್ತರು ತಮ್ಮ ಬಯಕೆಯನ್ನು ದೇವರ ರೂಪವಾದ ಒಂದು ಪ್ರತಿಮೆ ಹಾಗೂ ಶಿಲೆಗಳ ಮುಂದೆ ಕೇಳಿಕೊಂಡು ಅದನ್ನು ಎತ್ತುತ್ತಾರೆ. ಆಸೆಗಳು ಈಡೇರುವುದಿದ್ದರೆ ಕಲ್ಲು ಮೇಲೆ ಬರುತ್ತದೆ. ಹರಕೆ ಈಡೇರದಿದ್ದರೆ ಕಲ್ಲು ಮೇಲೆ ಬರುವದೇ ಇಲ್ಲ! ಹೀಗೆ ಹಲವು ನಿಗೂಢ ಹಾಗೂ ಪವಾಡಗಳ ಆಗರ ಈ ತಾಣ ಅನ್ನೋ ನಂಬಿಕೆ ಭಕ್ತರದ್ದು.
ಇಲ್ಲಿದೆ ಈ ದೇಗುಲ
ಹಾನಗಲ್ನಿಂದ 5 ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನವಿದೆ. ನೀವು ಹಾವೇರಿ, ಶಿರಸಿ, ಶಿವಮೊಗ್ಗ, ಹಾನಗಲ್ ಹೀಗೆ ಯಾವ ದಾರಿಯಲ್ಲಿ ಬಂದರೂ ಅರ್ಧ ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನ ಕಾಣಸಿಗುತ್ತದೆ. ಒಟ್ಟಿನಲ್ಲಿ ಭೂತೇಶ್ವರ ಮತ್ತು ಚೌಡೇಶ್ವರಿ ದೇಗುಲವು ಭಕ್ತರ ನಂಬಿಕೆಗೆ ಪಾತ್ರವಾಗಿದ್ದು, ಬೀಗ ಹಾಕುವ ಮೂಲಕ ಹರಕೆ ಕಟ್ಟಿಕೊಳ್ಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ