ಉತ್ತರ ಕನ್ನಡ: ಚೆಂಡೆ, ಡಿಜೆ ಸದ್ದಿಗೆ ಯುವಕರ ಕುಣಿತ. ಭಕ್ತಿ ಕಡಲಲ್ಲಿ ತೇಲುತ್ತಾ ರಥೋತ್ಸವ ಕಣ್ತುಂಬಿಕೊಂಡ ಭಕ್ತರು. ಹೀಗೆ ಅದ್ಧೂರಿಯಾಗಿ ನಡೆಯಿತು ನೋಡಿ ರಾಮ ಬಂಟನ (Hanuman Temple Rathotsav) ರಥೋತ್ಸವ.
ಅಂದಹಾಗೆ ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಭಟ್ಕಳದ ಗ್ರಾಮ ದೇವರಾದ ಶ್ರೀಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವದಲ್ಲಿ. ಭಾರೀ ಜನಸಾಗರವೇ ನೆರೆದಿದ್ದ ರಥೋತ್ಸವದಲ್ಲಿ ಭಾರೀ ಸಂಭ್ರಮವೂ ಕಂಡು ಬಂತು. ಭಕ್ತರ ಜೈಕಾರದ ಘೋಷಣೆ, ಕಿವಿಗಡಚಿಕ್ಕುವ ಡಿಜೆ ಸದ್ದಿಗೆ ಯುವಕರ ಕುಣಿತ, ಚೆಂಡೆ, ಡೊಳ್ಳು, ವಿವಿಧ ಬಗೆಯ ವೇಷಗಳು ರಥೋತ್ಸವಕ್ಕೆ ಮೆರುಗು ನೀಡಿದವು. ನೋಡುಗರ ಕಣ್ಣಿಗಂತೂ ಹನುಮಂತ ದೇವರ ರಥೋತ್ಸವವು ವೈಭವವನ್ನೇ ಸೃಷ್ಟಿಸಿತ್ತು.
ವಿವಿಧ ಧಾರ್ಮಿಕ ಆಚರಣೆಗಳ ಸಂಭ್ರಮ
ಶ್ರೀಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವಕ್ಕೆ ಯುಗಾದಿಯ ಮಾರನೆಯ ದಿನದಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗರುಡನ ಪಟವನ್ನು ಧ್ವಜಸ್ತಂಭಕ್ಕೆ ಕಟ್ಟುವ ಮೂಲಕ ಚಾಲನೆ ನೀಡಲಾಗಿತ್ತು. ಪ್ರತಿ ದಿನವೂ ಕೂಡಾ ಒಂದೊಂದು ಉತ್ಸವಗಳು ನಡೆದು, ಸಪ್ತಮಿ ಹಾಗೂ ಅಷ್ಠಮಿಯಂದು ಹೂವಿನ ರಥೋತ್ಸವ ಸಹಸ್ರಾರು ಭಕ್ತವೃಂದದೊಂದಿಗೆ ನಡೆಯಿತು.
ಇದನ್ನೂ ಓದಿ: Yellow Watermelon: ಕೆಂಪಲ್ಲ, ಇದು ಹಳದಿ ಕಲ್ಲಂಗಡಿ! ಭರ್ಜರಿ ಲಾಭ ಗಳಿಸಿದ ಮಲೆನಾಡ ಕೃಷಿಕ
ಭಾವೈಕ್ಯತೆಯ ಸಂಭ್ರಮ
ರಥೋತ್ಸವದ ಸಂಜೆ ಸಹಸ್ರಕ್ಕೂ ಭಕ್ತರ ಹರ್ಷೋದ್ಘಾರಗಳ ನಡುವೆ ರಾಮ ಬಂಟ ಹನುಮನ ರಥೋತ್ಸವ ಜರುಗಿತು. ಸಂಪ್ರದಾಯದಂತೆ ಜೈನ ಹಾಗೂ ಮುಸ್ಲಿಂ ಕುಟುಂಬಕ್ಕೆ ಆಹ್ವಾನ ನೀಡುವುದರ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಜೊತೆಗೆ ಹಿಂದೂ- ಮುಸ್ಲಿಂ, ಜೈನರಾದಿಯಾಗಿ ಎಲ್ಲ ಧರ್ಮದವರೂ ಹನುಮಂತನ ಜಾತ್ರೆಯಲ್ಲಿ ನಾಡಹಬ್ಬದಂತೆ ಪಾಲ್ಗೊಂಡು ಸಂಭ್ರಮಿಸಿದರು.
ಇದನ್ನೂ ಓದಿ: Uttara Kannada: ಈ ಅಕ್ಕಿ ಯಾವ ಸುಗಂಧ ದ್ರವ್ಯಕ್ಕೂ ಕಡಿಮೆಯಿಲ್ಲ, ಊರೆಲ್ಲ ಪರಿಮಳ ಸೂಸುತ್ತೆ!
ರಥೋತ್ಸವ ಸಂಪನ್ನ
ಬಣ್ಣದ ಅಲಂಕಾರದಿಂದ ಸಿಂಗರಿಸಿಕೊಂಡಿದ್ದ ಬ್ರಹ್ಮರಥವನ್ನ ಹೂವಿನ ಪೇಟೆ, ಮುಖ್ಯ ರಸ್ತೆ ಮಾರ್ಗ, ರಥಬೀದಿಯ ಮೂಲ ದೇವಾಲಯದ ಮುಂಭಾಗದವರೆಗೂ ಎಳೆಯಲಾಯಿತು. ಒಟ್ಟಿನಲ್ಲಿ ರಾಮ ಬಂಟ ಹನುಮಂತ ದೇವರ ರಥೋತ್ಸವ ಭಾರೀ ವೈಭವ, ವಿಜೃಂಭಣೆಗೆ ಸಾಕ್ಷಿಯಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ