ಕಾರವಾರ: ಹಿರಿಯರಿಂದ ಕಿರಿಯವರೆಗೂ, ಹುಡುಗ, ಹುಡುಗಿಯರಿಂದ ಮಹಿಳೆಯರವರೆಗೂ ಎಲ್ರೂ ಬೀಚ್ನಲ್ಲಿ (Karwar Beach) ಜಮಾಯಿಸಿ ಸ್ವಚ್ಛತೆಯ ಪಣ ತೊಟ್ಟರು. ಎಲ್ಲೆಂದರಲ್ಲಿ ಎಸೆದು ಹೋಗಿದ್ದ ಪ್ಲಾಸ್ಟಿಕ್ಗಳು, ಬಾಟಲಿಗಳನ್ನು ಹೆಕ್ಕಿ ಹೆಕ್ಕಿ ತಮ್ಮಲ್ಲಿದ್ದ ಚೀಲಗಳಿಗೆ (Beach Cleaning In Karwar) ತುಂಬಿಕೊಂಡರು. ಹೀಗೆ ಕಡಲಿನ ಮಡಿಲಲ್ಲಿದ್ದ ಕಸ ಕಡ್ಡಿಗಳನ್ನ ಪ್ರತ್ಯೇಕಿಸಿ ಸ್ವಚ್ಛಗೊಳಿಸಿದ್ರು.
ಯೆಸ್, ಭಾರತ ಆಯೋಜಿಸಲಿರುವ ಜಿ-20 ಶೃಂಗಸಭೆಯ ಅಂಗವಾಗಿ ದೇಶದ ವಿವಿಧೆಡೆ ವಿವಿಧ ಚಟುವಟಿಕೆಗಳನ್ನ ಆಯೋಜಿಸಲಾಗುತ್ತಿದೆ. ಅದರ ಅಂಗವಾಗಿ ಉತ್ತರ ಕನ್ನಡದ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಸ್ವಚ್ಛತೆ ಕಾರ್ಯಕ್ರಮವನ್ನು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೈಗೊಳ್ಳಲಾಯಿತು.
ಸ್ವಇಚ್ಛೆಯಿಂದ ಸ್ವಚ್ಛತೆ!
ಯುವಕ, ಯುವತಿಯರು, ಮಹಿಳೆಯರು ಹಾಗೂ ಪುರುಷರೆಲ್ಲರೂ ಸೇರಿ ಭಾರೀ ಖುಷಿಯಿಂದ ಪಾಲ್ಗೊಂಡು, ಸ್ವಇಚ್ಛೆಯೊಂದಿಗೆ ಸ್ವಚ್ಛತೆಯಲ್ಲಿ ಪಾಲ್ಗೊಂಡರು. ಅರಣ್ಯ ಇಲಾಖೆ, ನೆಹರೂ ಯುವ ಕೇಂದ್ರ, ಕೋಸ್ಟ್ಗಾರ್ಡ್, ಎನ್ಸಿಸಿ, ಎನ್ಎಸ್ಎಸ್, ಕೋಸ್ಟಲ್ ಎಂಡ್ ಮರೈನ್ ಇಕೋ ಸಿಸ್ಟಮ್ ಕಾರವಾರ ಘಟಕ, ಕಡಲ ಉತ್ಸವ ತಂಡ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಸಾಥ್ ನೀಡಿದರು. ಈ ಮೂಲಕ ಕಡಲ ಪರಿಸರವನ್ನ ಸ್ವಚ್ಛವಾಗಿಡುವ ಪ್ರತಿಜ್ಞೆಯನ್ನ ಸ್ವೀಕರಿಸಲಾಯಿತು.
ಯಾವ ಕಸ ಕಡ್ಡಿಯೂ ಇಲ್ವೇ ಇಲ್ಲ!
ಇನ್ನು ಈ ಸ್ವಚ್ಛತಾ ಅಭಿಯಾನದಲ್ಲಿ ಮೂರು ತಂಡಗಳನ್ನಾಗಿ ವಿಭಾಗಿಸಿಕೊಂಡು ಸುಮಾರು 2 ಕಿಲೋ ಮೀಟರ್ನಷ್ಟು ವಿಶಾಲವಾಗಿರುವ ಟ್ಯಾಗೋರ್ ಕಡಲತೀರದಲ್ಲಿ ಒಂದು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯವನ್ನ ಕೈಗೊಳ್ಳಲಾಯಿತು. ಈ ವೇಳೆ ಕಡಲ ತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಗಾಜಿನ ಬಾಟಲ್ಗಳು ಸೇರಿ ಸುಮಾರು ಹತ್ತು ಚೀಲಗಳಷ್ಟು ತ್ಯಾಜ್ಯವನ್ನ ಸಂಗ್ರಹಿಸಲಾಯಿತು.
ಇದನ್ನೂ ಓದಿ: Uttara Kannada Artist: ಕಾಫಿ ಸ್ಟಿಕ್ನಲ್ಲಿ ಅದ್ಭುತ ಕಲಾಕೃತಿ, ಇವರ ನೈಪುಣ್ಯಕ್ಕೆ ಭೇಷ್ ಅಂತೀರಿ!
ಕಡಲ ತೀರ ವೀಕ್ಷಣೆಗೆ ಬರುವಂತಹ ಪ್ರವಾಸಿಗರು ಹಾಗೂ ಸಾರ್ವಜನಿಕರು ಕಸವನ್ನ ಎಲ್ಲೆಂದರಲ್ಲಿ ಎಸೆಯದೇ ಕಸದ ಬುಟ್ಟಿಗಳನ್ನ ಬಳಕೆ ಮಾಡಿ ಸ್ವಚ್ಚತೆ ಕಾಯ್ದುಕೊಳ್ಳುವಂತೆ ಅಭಿಯಾನದಲ್ಲಿ ಪಾಲ್ಗೊಂಡ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಡಲ ಪರಿಸರದ ಮಾಲಿನ್ಯದಿಂದ ಕಡಲಜೀವಿಗಳಿಗೆ ಮಾತ್ರವಲ್ಲದೇ ಮಾನವನ ಜೀವನದ ಮೇಲೂ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಸ್ವಚ್ಛ ಕಡಲಿನ ಗುರಿಯೊಂದಿಗೆ ಕಡಲ ತೀರದ ಸ್ವಚ್ಛತೆಯನ್ನ ಹಮ್ಮಿಕೊಂಡಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೂ ಓದಿ: Hanuman Temple: ನುಗ್ಗಿಕೇರಿಯ ಈ ಆಂಜನೇಯ ಬಲಭೀಮ ಎಂದೇ ಫೇಮಸ್!
ಒಟ್ಟಾರೆಯಾಗಿ ಕಡಲ ಪರಿಸರದ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರವಾರದಲ್ಲಿ ಮಾದರಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ