ಉತ್ತರ ಕನ್ನಡ: ನೇರಳೆ, ಮುಳ್ಹಣ್ಣು, ಕಂದ್ಲು, ಕೋಕಂ, ಜಂಬು ನೇರಳೆ! ಈಗಂತೂ ಈ ಕಾಡು ಹಣ್ಣುಗಳದ್ದೇ ಸುಗ್ಗಿ. ಅದೆಲ್ಲವನ್ನು ಬುಟ್ಟಿಯಲ್ಲಿಟ್ಟು ಚೆಂದದ ಎಲೆಯ ಪೊಟ್ಟಣ ಕಟ್ಟಿ ಮಾರಾಟ ಮಾಡೋದಿದ್ಯಲ್ವ ಅದು ಇನ್ನಷ್ಟು ಇಂಟೆರೆಸ್ಟಿಂಗ್.. ಹೀಗೆ ಮಹಿಳೆಯರು ಬಸ್ ನಿಲ್ದಾಣ, ಮಾರ್ಕೆಟ್ಗಳಲ್ಲಿ ಈ ಕಾಡು ಹಣ್ಣುಗಳ ಭರ್ಜರಿ ಮಾರಾಟದಲ್ಲಿ ತೊಡಗಿದ್ದಾರೆ. ಸಿಟಿ ಜನರಂತೂ ಈ ಹಣ್ಣಿನ ಟೇಸ್ಟ್ (Forest Fruits) ನೋಡೋದಕ್ಕೆ ಯಾವ ಬೆಲೆ ತೆರಲು ರೆಡಿ ಇದ್ದಾರೆ.
ಉತ್ತರ ಕನ್ನಡ ಅಂಕೋಲಾದ ಹಳ್ಳಿಗಳ ತಾಯಂದಿರು, ಹಾಲಕ್ಕಿ ಗೌಡತಿಯರು ಈಗ ನಗರದಲ್ಲಿ ಈ ಕಾಡುಹಣ್ಣುಗಳ ಮಾರಾಟದಲ್ಲಿ ತೊಡಗಿದ್ದಾರೆ.
ಗೋವಾದಿಂದ ಹುಬ್ಬಳ್ಳಿವರೆಗೂ ತಲುಪುತ್ತೆ!
ಕಾಡಿನ ರುಚಿಯಾದ ಹಣ್ಣುಗಳನ್ನು ಗೋವಾದಿಂದ ಹುಬ್ಬಳ್ಳಿ ತನಕ ಎಲ್ಲರ ಹೊಟ್ಟೆ ಸೇರುವಂತೆ ಮಾಡ್ತಾರೆ. ಇವರದ್ದು ಯಾರಿಗೂ ಟಾರ್ಚರ್ ಕೊಡದೇ ಮಾರ್ಕೆಟಿಂಗ್ ಮಾಡೋ ಕಲೆ ಒಂದೆಡೆಯಾದರೆ, ಕಾಡಲ್ಲಿ ಬೆಳೆಯುವ ಹಣ್ಣಿಂದ ಜೀವನ ಕಟ್ಟಿಕೊಳ್ಳುವ ಪರಿ ಮತ್ತೊಂದೆಡೆ. ಅಂಕೋಲಾದ ಪೇಟೆಗಳಲ್ಲಿ ಮಾರ್ಕೆಟ್, ಬಸ್ ಸ್ಟ್ಯಾಂಡ್, ರೈಲ್ವೇ ಸ್ಟೇಶನ್ ಸೇರಿದಂತೆ ಎಲ್ಲಾ ಕಡೆ ಈ ಕಾಡುಹಣ್ಣುಗಳನ್ನ ಮಾರಾಟ ಮಾಡುತ್ತಿದ್ದಾರೆ.
ಕಡಿಮೆ ದರಕ್ಕೆ ಕಾಡು ಹಣ್ಣು
ಬೆಂಗಳೂರಿನಂತಹ ಮಹಾನಗರಗಳಲ್ಲಿಯೂ ಈ ಹಣ್ಣುಗಳು ಸಿಗುತ್ತವೆಯಾದ್ರೂ, ಅಲ್ಲೆಲ್ಲ ದುಬಾರಿ ರೇಟಿಗೆ ಮಾರಾಟವಾಗುವ ಈ ಹಣ್ಣುಗಳು ಇಲ್ಲಿ ಕಡಿಮೆ ರೇಟಿಗೆ ಸಿಗುತ್ತೆ. ಪೊಟ್ಟಣಕ್ಕೆ ಹತ್ತು ರೂಪಾಯಿಯಂತೆ ಮಾರಾಟ ಮಾಡಲಾಗುತ್ತೆ. ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಬರುವ ಈ ಮಹಿಳೆಯರು ರಾತ್ರಿ 8 ರವರೆಗೂ ಅಲ್ಲಿಲ್ಲಿ ಸುತ್ತಾಡಿ ದಿನದ ಗಳಿಕೆ ಮಾಡಿಕೊಂಡು ಮನೆಗೆ ಹೋಗುತ್ತಾರೆ. ಅಂದಹಾಗೆ ಕಂದ್ಲು ಅಥವಾ ಕವಳೆಹಣ್ಣು ಹಾಗೂ ಮುಳ್ಹಣ್ಣು ಪೇಟೆಯವರಿಗೆ ವಿಶೇಷ. ಆರಾಮಾಗಿ ರವೆರವೆಯಾಗಿ ಕರಗುವ ಮುಳ್ಹಣ್ಣು ಒಂದೊಳ್ಳೆ ಜ್ಯೂಸಿಗೆ ಹೇಳಿ ಮಾಡಿಸಿದ ಫಲ ಕೂಡಾ.
ಇದನ್ನೂ ಓದಿ: Lizard Dosha: ಹಲ್ಲಿ ದೋಷಕ್ಕೆ ಇಲ್ಲಿ ಸಿಗುತ್ತಂತೆ ಪರಿಹಾರ!
ಎಲೆಯಿಂದ ಮಾಡಿದ ಪೊಟ್ಟಣ
ಇನ್ನು ಮಧುಮೇಹಕ್ಕೆ ರಾಮಬಾಣ ಅಂತೆಲ್ಲ ಕರೆಯಲ್ಪಡುವ ನೇರಳೆಗೂ ಸಖತ್ ಡಿಮ್ಯಾಂಡ್ ಇದೆ. ಇನ್ನು ಇವರ ಸಾಗುವಾನಿ ಅಥವಾ ಬೀಟೆಯದೋ ಎಲೆಯ ಪ್ಯಾಕೇಟ್ ಕೂಡ ಆಕರ್ಷಕವಾಗಿದೆ. ಈ ಹಣ್ಣಿನ ಪೊಟ್ಟಣಗಳಿಂದಾಗಿಯೇ ದಿನಕ್ಕೆ 500 ರೂಪಾಯಿಗಳನ್ನು ದುಡಿಯುತ್ತಾರೆ. ಈ ಮೂಲಕ ಕಷ್ಟದಾಯಕವಾದರೂ ಸ್ವಾಭಿಮಾನದ ಅನ್ನವನ್ನು ಗಳಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Uttara Kannada: ಕಾರ್ ಓಡಿಸುವ ಮುನ್ನ ಈ ಯಂತ್ರದೊಳಗೆ ಕುಳಿತು ನೋಡಿ!
ಆದರೆ ಅಂಕೋಲಾದ ಬಿರು ಬೇಸಿಗೆಯಲ್ಲಿ ಆ ಮಧ್ಯವಯಸ್ಸಲ್ಲಿ ಬಸ್ಸು ಹತ್ತಿ ಇಳಿದು, ಅಲೆದು ಮಾರಾಟ ಮಾಡೋದು ಸುಲಭದ ಮಾತಲ್ಲ. ಇವರ ಈ ಸ್ವಾಭಿಮಾನದ ಬದುಕಿಗೂ ಈ ಕಾಡು ಹಣ್ಣುಗಳೇ ಸ್ಫೂರ್ತಿಯಾಗಿರುವುದು ನಿಜ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ