ಉತ್ತರ ಕನ್ನಡ: ಕಪ್ಪು ದ್ರಾಕ್ಷಿಯಂತೆ ಕಾಣೋ ಇದ್ರ ಟೇಸ್ಟ್ ಮಾತ್ರ ಮಸ್ತ್ ಆಗಿರುತ್ತೆ.. ಪಕ್ಕ ಕಾಡಿನ ಹಣ್ಣು ಆಗಿರೋ ಈ ಫಲಕ್ಕೆ ಮಳೆಗಾಲ ಬರುತ್ತಿದ್ದಂತೆ ಜನ ಫಿದಾ ಆಗ್ತಾರೆ. ಇನ್ನೇನು ಹಣ್ಣಾಗೋ ಈ ಜ್ಯೂನಿಯರ್ ದ್ರಾಕ್ಷಿ ಎಂತವನಿಗೂ ಸಖತ್ ಫೇವರಿಟ್. ಇನ್ನು ಇದ್ರ ಹುಳಿ, ಸಿಹಿ ಮಿಶ್ರಿತ ರುಚಿಯಿದ್ಯಲ್ಲ ಅದಂತೂ ಭಾರೀ ಬೊಂಬಾಟ್ ಅನ್ನಬಹುದು. ಹಾಗಿದ್ರೆ ಯಾವುದಿದು ಹಣ್ಣು ಅಂತೀರಾ? ಈ ಸ್ಟೋರಿ ನೋಡಿ..
ವೆರೈಟಿ ಹೆಸರಿನ ಹಣ್ಣು!
ಕಜ್ಲಣ್ಣು, ಕಂದ್ಲಣ್ಣು, ಕವಳೆ ಹಣ್ಣು ಎಂದು ಕರೆಯಲ್ಪಡುವ ಈ ಕಾಡಿನ ಹಣ್ಣು ಇನ್ನೇನು ಹಣ್ಣಾಗೋ ಸಮಯ. ಕರಾವಳಿ, ಮಲೆನಾಡಿನ ಕಾಡುಗಳ ಅಂಚಿನಲ್ಲಿ ಈ ಹಣ್ಣುಗಳು ವರ್ಷದಲ್ಲಿ ಒಂದು ಬಾರಿ ಆಗುತ್ತೆ. ಆಗೆಲ್ಲ ಬೆಟ್ಟ, ಗುಡ್ಡೆಗಳಿಗೆ ತೆರಳಿ ಜನ ಇದನ್ನ ಸಂಗ್ರಹಿಸುತ್ತಾರೆ. ಮಳೆಗಾಲದ ಆರಂಭದಲ್ಲೂ ಈ ಹಣ್ಣು ಹೇರಳವಾಗಿ ದೊರೆಯುತ್ತೆ. ಅದ್ರಲ್ಲೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಂತೂ ಸದ್ಯ ಈ ಕಾಡು ಹಣ್ಣಿನದ್ದೇ ಸದ್ದು.
ಇದನ್ನೂ ಓದಿ: Success Story: ಕೆಮಿಕಲ್ ಡಿಟರ್ಜೆಂಟ್ ವಿರುದ್ಧ ಬಿಗ್ ಫೈಟ್ ಮಾಡಿ ಸ್ವಂತ ಕಂಪನಿ ಕಟ್ಟಿದ ಶಿರಸಿ ಲೇಡಿ!
ಉಪ್ಪಿನಕಾಯಿಗೂ ಸೂಪರ್
ಉತ್ತರಕನ್ನಡದ ಕುರುಚಲು ಕಾಡುಗಳಲ್ಲಿ ಕೈಗೆ ಸಿಗುವಷ್ಟು ಎತ್ತರದಲ್ಲೇ ಬೆಳೆಯುವ ಈ ಹಣ್ಣುಗಳು ಚೈತ್ರ ಮಾಸಕ್ಕೆ ಕಾಯಿ ಬಿಡಲು ಶುರು ಮಾಡಿ ಇನ್ನೇನು ಮೊದಲ ಮಳೆ ಬೀಳುವ ವೇಳೆಗೆ ಮಾಗಿಬಿಡುತ್ತವೆ. ಅಂಕೋಲಾದ ಹಳ್ಳಿಯ ಎಲ್ಲಾ ಜನರಿಗೂ ಕಂದ್ಲಣ್ಣು ಕಾಯಿ ಉಪ್ಪಿನಕಾಯಿಗೆ ಒಳ್ಳೆ ಪದಾರ್ಥ.
ಮಹಿಳೆಯರ ಅನ್ನದ ತಟ್ಟೆ
ತಿನ್ನಲು ರುಚಿಯಾದ ಈ ಹಣ್ಣನ್ನು ಬೆಳಗ್ಗೆ ನಸುಕಿನ ಜಾವಕ್ಕೆ ಕಾಡಿಗೆ ನುಗ್ಗುವ ಹೆಂಗಳೆಯರು 10 ಗಂಟೆಯ ಹೊತ್ತಿಗೆ ಬುಟ್ಟಿ ತುಂಬಾ ತುಂಬಿಕೊಂಡು ಬರುತ್ತಾರೆ. ಹಾಗೆ ತಂದ ಹಣ್ಣುಗಳನ್ನು ಹತ್ತು ರುಪಾಯಿ ಒಂದರಂತೆ ಎಲೆಯ ಪಟ್ಟಣಗಳಲ್ಲಿ ಮಾರಾಟವಾಗುತ್ತವೆ. ಗಮನಾರ್ಹ ವಿಷಯವೇನೆಂದರೆ ಯಾವುದೇ ಕಾಗದದಂತಹ ವಸ್ತು ಬಳಸದೇ ಅದೇ ಹಣ್ಣಿನ ಎಲೆ ಬಳಸಿ ಇಲ್ಲಿನ ಮಹಿಳೆಯರು ಪೊಟ್ಟಣ ಕಟ್ಟುತ್ತಾರೆ.
ಇದನ್ನೂ ಓದಿ: Uttara Kannada News: ಈ 88ರ ಹರೆಯದ ಅಜ್ಜಿಯ ಜೀವನ ಪ್ರೀತಿಗೆ ಬಿಗ್ ಸೆಲ್ಯೂಟ್!
ಸಂಪಾದನೆಯ ಮೂಲ ಈ ಕಾಡು ಹಣ್ಣು
ಇಲ್ಲಿನ ಹೆಣ್ಣುಮಕ್ಕಳು ದಿನಕ್ಕೆ 500 ರಿಂದ 1000 ರೂಪಾಯಿ ಬರೀ ಕವಳೆಹಣ್ಣಿನಿಂದ ದುಡಿಯುತ್ತಾರೆ. ಇದು ಕೇವಲ 20 ದಿನದ ಸಂಭ್ರಮವಷ್ಟೇ ಕಾಡಲ್ಲಿ ಬೆಳೆದವರಿಗೆ ಇದು ಪರಿಚಿತ. ಆದರೆ ಪೇಟೆಯಲ್ಲಿದ್ದವರಿಗೆ ಹೊಸ ವಿಷಯ. ಒಟ್ಟಿನಲ್ಲಿ ಕವಳೆಹಣ್ಣು ಕಾಡಿನ ಜನರ ಪಾಲಿಗೆ ತಾನಿದ್ದಷ್ಟು ದಿನ ಅನ್ನದ ತಟ್ಟೆಯಾಗಿ ಆಧಾರವಾಗಿರುತ್ತೆ ಅನ್ನೋದು ವಿಶೇಷ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ