ಉತ್ತರ ಕನ್ನಡ: ಬಲೆ ಬೀಸಿ ಅದೇನ್ಮಾಡ್ತಿದ್ದಾರೆ ಈ ನಾಯಿನಾ ಅಂದ್ಕೊಂಡ್ರಾ? ನಿಜ, ನಾಯಿಯ ಈ ಸಂಕಟ, ಅಲ್ಲಿದ್ದವರ ಹರಸಾಹಸ ನೋಡ್ತಿದ್ರೆ ಇವ್ರು ಏನ್ ಮಾಡೋಕ್ ಹೊರಟಿದ್ದಾರೆ ಅಂತಾನೇ ಗೊತ್ತಾಗುತ್ತಿಲ್ವಲ್ಲ. ಇದೊಂಥರಾ ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಕಥೆ. ನಾಯಿಗಾಗಿ ಮಿಡಿದ ಮನುಷ್ಯನ ಮಾನವೀಯತೆಯ ಕಥೆ.
ರೀಲ್ ಅಲ್ಲ ರಿಯಲ್ ಕಥೆ!
ಚಾರ್ಲಿ ಸಿನೆಮಾ ರೀಲ್ ನಲ್ಲಿ ನಾಯಿ ಹಾಗೂ ಮನುಷ್ಯನ ನಡುವಿನ ಸಂಬಂಧ ತಿಳಿಸಿದ್ದರೆ, ಉತ್ತರ ಕನ್ನಡ ಕುಮಟಾದ ವಕ್ಕನಳ್ಳಿಯಲ್ಲಿ ನಡೆದ ಘಟನೆ ರಿಯಲ್ ಕಥೆ ಹೇಳುತ್ತಿದೆ. ಅಂದಹಾಗೆ ಇಲ್ಲಿನ ತೋಟವೊಂದರಲ್ಲಿ ಹಂದಿಗಳ ಕಾಟದಿಂದ ಬೇಸತ್ತು, ಅದರ ನಿಯಂತ್ರಣಕ್ಕಾಗಿ ಬಲೆ ಅಳವಡಿಸಲಾಗಿತ್ತು.
ಆ ಬಲೆಗೆ ಹೆಣ್ಣು ನಾಯಿಯೊಂದು ಉರುಳಿ ಸಿಕ್ಕಿ ಹಾಕಿಕೊಂಡಿತ್ತು. ಆ ಬಲೆಯ ಬಂಧನದಿಂದ ಬಿಡಿಸಿಕೊಂಡರೂ ಅದರ ಕತ್ತಿನ ಭಾಗದಲ್ಲಾದ ಗಾಯ, ರಕ್ತಸ್ರಾವ ಆ ನಾಯಿಯನ್ನ ಇನ್ನಷ್ಟು ಅನಾರೋಗ್ಯಕ್ಕೆ ತಳ್ಳಿತ್ತು.
ಇದನ್ನೂ ಓದಿ: Siddi Community God: ಆಫ್ರಿಕಾದಿಂದ ಮಲೆನಾಡಿಗೆ ವಲಸೆ ಬಂದ ದೇವರು!
ಸ್ಥಳೀಯರ ನೆರವು
ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಕಂಡ ಸ್ಥಳೀಯರಾದ ಸುರೇಶ್ ಶಾಸ್ತ್ರೀ ಅವರು ಇದನ್ನು ಹೇಗಾದ್ರೂ ಮಾಡಿ ರಕ್ಷಿಸಬೇಕು ಅಂತಾ ಪಣ ತೊಟ್ಟವರೇ ಅವರಿವರನ್ನ ಸಂಪರ್ಕಿಸಿದ್ದಾರೆ. ಕೊನೆಗೆ ಅವರ ನೆರವಿಗೆ ಬಂದಿದ್ದು ಪ್ರಾಣಿ ರಕ್ಷಕ ಪವನ್ ನಾಯ್ಕ್. ಸೊರಗಿ ಹೋಗಿದ್ದ ನಾಯಿ ಹಿಡಿಯಲು ಅದು ತಂಗಿದ್ದ ಕೊಠಡಿಯಿಂದ ಹೊರಬರುತ್ತಿದ್ದಂತೆ ಮತ್ತೆ ಬಲೆ ಬೀಸಿದರು.
ಸುಧಾರಿಸಿಕೊಂಡ ನಾಯಿ!
ಪಶುವೈದ್ಯರಾದ ವಿಕೆ ಹೆಗಡೆ ಹಾಗೂ ಅದ್ವೈತ್ ಭಟ್ ನಾಯಿಗೆ ಅರಿವಳಿಕೆ ನೀಡಿ ಚಿಕಿತ್ಸೆ ನೀಡಿದ್ದಾರೆ. ಹೀಗೆ ಕೆಲವು ದಿನಗಳ ಚಿಕಿತ್ಸೆ ಬಳಿಕ ನಾಯಿ ಸುಧಾರಿಸಿಕೊಂಡಿದೆ.
ಇದನ್ನೂ ಓದಿ: Children Swimming: ಈ ಹಳ್ಳಿ ಮಕ್ಕಳು ಹೇಗೆ ಈಜ್ತಾರೆ ನೋಡಿ, ಮಜಾ ಅಂದ್ರೆ ಇದು ಕಣ್ರೀ!
ಬರೋಬ್ಬರಿ ಮೂರು ತಿಂಗಳ ಬಳಿಕ ನಾಯಿಯು ಮತ್ತೆ ಸಹಜ ಸ್ಥಿತಿಗೆ ಬಂದಿದೆ. ನಾಯಿಯ ಪರಿಸ್ಥಿತಿ ಕಂಡು ಮರುಕಪಟ್ಟವರ ಮೊಗದಲ್ಲೀಗ ನಾಯಿಯ ಆರೋಗ್ಯ ಸುಧಾರಣೆ ಕಂಡು ಮಂದಹಾಸ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ