ಶಿರಸಿ: ಹಸಿರು ಹಳ್ಳಿ ಮಧ್ಯೆ ಅದೇನೋ ಪುಟ್ಟ ಕಟ್ಟಡ, ಒಳಗಡೆ ಹೊಕ್ಕರೆ ನೀಟಾಗಿ ಜೋಡಿಸಿಟ್ಟಿರೋ ಕಂಪ್ಯೂಟರ್ಸ್. ಅಲ್ಲೇ ಚುರುಕಿನಿಂದ ಕಾಣಿಸಿಕೊಳ್ಳೋ ವೈಟ್ ಟೀ ಶರ್ಟ್ ಹಾಕೊಂಡು ಖುಷಿ ಖುಷಿಯಾಗಿರೋ ಹುಡುಗ, ಹುಡುಗಿಯರು. ಹೌದು, ಇದೇನಾದ್ರೂ ಕಂಪ್ಯೂಟರ್ ತರಬೇತಿ (Computer Training) ಸಂಸ್ಥೆನಾ? ಅಥವಾ ಅದ್ಯಾವುದಾದ್ರೂ NGO ಪ್ರಾಜೆಕ್ಟಾ ಅಂತ ನೀವೆಲ್ಲ ಕೇಳ್ಬಹುದು. ಆದ್ರೆ ಅದೆಲ್ಲಕ್ಕೂ ಬದಲಾಗಿ ಇದು ಐಟಿ ಕಂಪೆನಿ (IT Company) ಅಂದ್ರೆ ನೀವ್ ನಂಬ್ತೀರ?
ಯೆಸ್, ಹಳ್ಳಿಯಲ್ಲಿ ಯಾವ್ ಸೀಮೆ ಐಟಿ ಕಂಪೆನಿ ಮಾರಾಯ್ರೆ ಅನ್ನೋ ಪ್ರಶ್ನೆ ಹುಟ್ಟೋದು ಸಹಜ. ನಿಜ, ಆ ಪ್ರಶ್ನೆಗೆ ಉತ್ತರ ಎನ್ನುವಂತೆ ಉತ್ತರ ಕನ್ನಡದ ಹಳ್ಳಿಯೊಂದರ ಯುವಕರು ಸೇರಿಕೊಂಡು ಐಟಿ ಸ್ಟಾರ್ಟಪ್ ಕಂಪೆನಿ ಆರಂಭಿಸಿದ್ದಾರೆ.
ಎಲ್ಲಿದೆ ಈ ಆಫೀಸ್?
ಶಿರಸಿಯಿಂದ ಬನವಾಸಿಗೆ ಹೋಗೋ ರೋಡಲ್ಲಿ ಸಿಗೋ ಬೆಂಗಳೆ ಎಂಬ ಸಣ್ಣ ಗ್ರಾಮವೇ ಆಲ್ಟ್ ಡಿಜಿಟಲ್ನ ಆಫೀಸ್. ಇಲ್ಲಿನ ಗೌತಮ್ ಹಾಗೂ ಅವರ ಸ್ನೇಹಿತರ ಬಳಗ ಮೊದಲು ದೆಹಲಿಯಲ್ಲಿ ಇದೇ ಆಲ್ಟ್ ಸೊಲ್ಯೂಶನ್ ಅಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ನಂತರ ಊರಿಗೆ ಬಂದವರೇ ಊರಲ್ಲಿರುವ ಖಾಲಿಯಿದ್ದ ರೆಸಾರ್ಟ್ ಅನ್ನೇ ಕಚೇರಿಯಾಗಿಸಿಕೊಂಡಿದ್ದಾರೆ.
12 ನುರಿತ ತಂತ್ರಜ್ಞರ ಜೊತೆಗೂಡಿ ಕೆಲಸ
ತಡಮಾಡದೇ ಗೌತಮ್ ಅವರು ದೆಹಲಿಯ ಅವರ ಬ್ರಾಂಚ್ ಓನರ್ ಜೊತೆ ಮಾತಾಡಿ ಕೆಲಸ ಆರಂಭಿಸಿಬಿಟ್ಟರು. ಈಗ 12 ನುರಿತ ತಂತ್ರಜ್ಞರೊಡನೆ ಐಟಿ ಕಂಪನಿಯೊಂದು ಶಿರಸಿಯ ಮಡಿಲಿಗೆ ಬಿದ್ದಿದ್ದು, ಇಲ್ಲಿ ಕಲಿಯುವ ಇಲ್ಲಿಂದ ಕಲಿತು ಬೇರೆ ಕಡೆ ಹೋಗುವ ಎಂಜಿನಿಯರ್ಗಳನ್ನು ಹಿಡಿದಿಡುವ ಚುಂಬಕವಾಗಲಿದೆ.
ಇದನ್ನೂ ಓದಿ: HDK ಹಾರದ ಹಿಂದಿನ ಕೈ! ಬೃಹತ್ ಅಡಿಕೆ ಮಾಲೆ ತಯಾರಿಸಿದ ಕಲಾವಿದ ಇವರೇ!
ಏನೆಲ್ಲ ಸರ್ವೀಸ್ ಕೊಡುತ್ತೆ ಈ ಕಂಪನಿ?
ಡಿಜಿಟಲ್ ಮಾರ್ಕೆಟಿಂಗ್, ಡಿಜಿಟಲ್ ಸೇಲ್ಸ್, ಡಿಜಿಟಲ್ ಎಕ್ಸ್ಪೀರಿಯನ್ಸ್ ಹಾಗೂ ಡಿಜಿಟಲ್ ಕಸ್ಟಮರ್ ಸರ್ವೀಸ್ ಈ ನಾಲ್ಕು ವಿಭಾಗದಲ್ಲಿ ಕಂಪೆನಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ಡಿಪ್ಲೋಮಾ, ಪಿಯು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ಈ ಸಂಸ್ಥೆ ಟ್ರೈನಿಂಗ್ ಕೂಡ ಕೊಡಲಿದೆ. ಸದ್ಯ 12 ಉದ್ಯೋಗಿಗಳಿದ್ದು ಮುಂದೆ ಆ ಸಂಖ್ಯೆ ಡಬಲ್, ತ್ರಿಬಲ್ ಆಗುವ ಸಾಧ್ಯತೆಯಿದೆ.
ಇದನ್ನೂ ಓದಿ: Uttara Kannada: ಹೊಸ ಪ್ರಬೇಧದ ಏಡಿಗೆ ಪುಟ್ಟ ಬಾಲಕಿಯ ಹೆಸರು!
ಒಟ್ಟಿನಲ್ಲಿ ಐಟಿ ಬಿಟಿ ಎಂದಾಗ ಬೆಂಗಳೂರು, ಚೆನ್ನೈ, ದೆಹಲಿಯತ್ತ ಮುಖ ಮಾಡ್ತಿದ್ದ ಯುವಕ, ಯುವತಿಯರೆಲ್ಲ ಇನ್ಮುಂದೆ ಶಿರಸಿಯ ಈ ಪುಟ್ಟ ಹಳ್ಳಿಯತ್ತ ಮುಖ ಮಾಡುವ ದಿನ ಬಂದ್ರೂ ಅಚ್ಚರಿಯಿಲ್ಲ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ