ಕುಮಟಾ: ಸುತ್ತಲೂ ಕಿಕ್ಕಿರಿದ ಜನರು. ಹಿನ್ನೆಲೆಯಲ್ಲಿ ದೇವರ ಸ್ತುತಿಯ ಹಾಡು. ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ಚೌಕಟ್ಟಿನ ಮಧ್ಯೆ ಯುವಕ, ಯುವಕರಿಂದ ಬೆಳಕಿನ (Aghanashini Aarti) ಆರತಿ. ನದಿಯ ಮಡಿಲಲ್ಲಿ ಆರತಿಯ ಸ್ತುತಿ! ಥೇಟ್ ವಾರಣಾಸಿಯ ಗಂಗಾ ನದಿ (Ganga River Varanasi) ದಡದಂತೆಯೇ ವಾತಾವರಣ!
ಹೌದು, ಇದು ಉತ್ತರ ಕನ್ನಡದ ಕುಮಟಾದಲ್ಲಿ (Kumta) ಮಿರ್ಜಾನ್ ಕೋಟೆಯ ತಾರಿಬಾಗಿಲಿನಲ್ಲಿ ಯುವ ತಂಡವೊಂದು ತಮ್ಮೂರಿನ ಜೀವನದಿ ಅಘನಾಶಿನಿಗೆ ಆರತಿ ಬೆಳಗಿದ ಅಪರೂಪದ ಕ್ಷಣ. ಅದ್ಹೇಗೆ ವಾರಣಾಸಿಯಲ್ಲಿ ಗಂಗಾರತಿ ನಡೆಯುತ್ತೋ ಅದೇ ರೀತಿಯ ಸಂಭ್ರಮ ಅಘನಾಶಿನಿ ದಡದಲ್ಲೂ ಕಳೆಗಟ್ಟಿತ್ತು.
ಅಘನಾಶಿನಿಗೆ ಆರತಿ ಎತ್ತಿ ಕೃತಜ್ಞತೆ
ಅತ್ತ ನದಿಯು ಶಾಂತವಾಗಿ ಹರಿಯುತ್ತಿದ್ರೆ, ಇತ್ತ ದಡದಲ್ಲಿ ನಿಂತು ಯುವಕ, ಯುವತಿಯರು ಶ್ವೇತವಸ್ತ್ರ ಧರಿಸಿ ಅಘನಾಶಿನಿಗೆ ಆರತಿ ಎತ್ತಿ ಕೃತಜ್ಞತೆ ಸಲ್ಲಿಸಿದರು. ನೆರೆದ ನೂರಾರು ಜನರು ಈ ಕ್ಷಣವನ್ನ ಕುತೂಹಲದಿಂದ ಕಣ್ತುಂಬಿಕೊಂಡರು. ಕರಾವಳಿಯಲ್ಲಿ ನಡೆಯುವ ಈ ಆರತಿಯು ಗಂಗೆಗೆ ನಡೆಯುವ ಆರತಿಯಂತೆ ಜನ ಖುಷಿಪಟ್ಟರು.
ಶಿರಸಿಯಲ್ಲಿ ಜನಿಸಿ ಕುಮಟಾದೆಡೆ ಪಯಣ!
ಶಿರಸಿಯ ಶಂಕರಹೊಂಡದಲ್ಲಿ ಜನಿಸಿ ಕುಮಟಾ ಮಾರ್ಗವಾಗಿ ಕಡಲು ಸೇರುವ ಅಘನಾಶಿನಿ ಇದರ ಮಧ್ಯೆ ಜಲಪಾತವಾಗಿ, ಅಬ್ಬಿನೀರಾಗಿ, ಪಾವನತೀರ್ಥವಾಗಿ ಹರಿಯುತ್ತಾಳೆ. ಅಷ್ಟೇ ಅಲ್ಲ ಶಿರಸಿಯ ಮಂಜುಗುಣಿಯಲ್ಲಿ ಪಾಪನಾಶಿನಿಯಾಗಿಯೂ ಹರಿಯುತ್ತಾಳೆ. ಇಂತಹ ಜೀವನದಿಗೆ ಯುವಾ ಬ್ರಿಗೇಡ್ ಯುವಕರ ತಂಡವು ಹಲವು ವರ್ಷಗಳಿಂದ ಈ ರೀತಿ ಕಾರ್ಯಕ್ರಮ ಮಾಡಬೇಕೆಂದು ಯೋಜನೆ ರೂಪಿಸಿತ್ತು.
ಇದನ್ನೂ ಓದಿ: Karwar: ಕರ್ನಾಟಕದ ಕಾಶ್ಮೀರದಲ್ಲಿ ಏರ್ ಕ್ರಾಫ್ಟ್ ಮ್ಯೂಸಿಯಂ!
ಸಾವಿರಾರು ಜನರ ನಡುವೆ 7 ನಿಮಿಷ ಆರತಿ!
ಕೊನೆಗೂ ತಮ್ಮ ಜೀವನಾಡಿಯಾದ ಜೀವನದಿಗೆ ಆರತಿ ಬೆಳಗಿ ಅಘನಾಶಿನಿಗೆ ಚಿನ್ನದ ಹೊಳಪು ನೀಡಿದರು. ನದಿಯ ನಾಲ್ಕೂ ದಿಕ್ಕಿನಲ್ಲಿ ದೀಪಾಲಂಕಾರ ಮಾಡಿ ಬಿಳಿ ಬಟ್ಟೆ ಉಟ್ಟುಕೊಂಡು ಹೂವನ್ನು ಸಮರ್ಪಿಸಿ ನಂತರ ಸಾವಿರಾರು ಜನರ ನಡುವೆ ಸುಮಾರು ಏಳು ನಿಮಿಷದ ಕಾಲ ಆರತಿ ಮಾಡಲಾಯಿತು.
ಇದನ್ನೂ ಓದಿ: Sirsi: ಪ್ರಾಣಿಗಳಿಗೂ ಅನಾಥಾಶ್ರಮ! ಶಿರಸಿ ದಂಪತಿಯ ವಿಶಿಷ್ಟ ಸೇವೆ
ಒಟ್ಟಿನಲ್ಲಿ ಅಘನಾಶಿನಿ ನದಿ ದಡ ಇಂತಹ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಕರಾವಳಿಯಲ್ಲಂತೂ ಇಂತಹ ಹೊಸ ಪದ್ಧತಿ ಗಮನಸೆಳೆಯಿತು.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ