• Home
  • »
  • News
  • »
  • uttara-kannada
  • »
  • Rani Mahal: ಇದು ಕರುನಾಡಿನ ಮೊಟ್ಟ ಮೊದಲ ರಾಜಮನೆತನದ ರಾಣಿ ನಿವಾಸ

Rani Mahal: ಇದು ಕರುನಾಡಿನ ಮೊಟ್ಟ ಮೊದಲ ರಾಜಮನೆತನದ ರಾಣಿ ನಿವಾಸ

ರಾಜ ಮನೆತನದ ರಾಣಿ ನಿವಾಸ

"ರಾಜ ಮನೆತನದ ರಾಣಿ ನಿವಾಸ "

ಕದಂಬ ರಾಜಮನೆತನದ ಕುರುಹುಗಳು ಇಂದಿಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಬಹುದಾಗಿದೆ. ಅದರಲ್ಲಿ ಕದಂಬ ಕೆರೆ, ರಾಣಿ ನಿವಾಸ ಕೂಡಾ ಒಂದು.

  • News18 Kannada
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: ಸುತ್ತಲೂ ಯಜ್ಞಕುಂಡಕ್ಕಿಟ್ಟಂತೆ ಕಾಣುವ ಇಟ್ಟಿಗೆಗಳು, ಮುಂದೆ ನೋಡಿದರೆ ಕಾಣುವುದು ದೇವಸ್ಥಾನ, ದೇವಾಲಯದೊಳಗೆ ಅಂಗಾತ ಬಿದ್ದಿರುವ ಬಾಹುಬಲಿ (Bahubali), ಮನ್ಮಥನಂತಹ ಶಿಲ್ಪಗಳು, ಎಲ್ಲಕ್ಕೂ ಮಿಗಿಲಾಗಿ ಅಲ್ಲೆಲ್ಲೋ ಸುರಂಗವಿದೆ (tunnel), ಕೆಳಗಡೆ ಮಹಲಿದೆ ಎನ್ನುವ ಸ್ಥಳೀಯರ ಗುಸುಗುಸು... ಹೌದು, ಇದೆಲ್ಲವೂ ಕನ್ನಡದ ಪ್ರಥಮ ರಾಜಮನೆತನ ಕುರುಹುಗಳು..


    ಕದಂಬ ಸಾಮ್ರಾಜ್ಯದ ಕುರುಹು


    ಉತ್ತರ ಕನ್ನಡದ ಶಿರಸಿಯ ಗುಡ್ನಾಪುರದ ರಾಣಿ ನಿವಾಸ ಕದಂಬ ಸಾಮ್ರಾಜ್ಯದ (Kadamba Empire) ಕುರುಹಾಗಿ ಇಂದಿಗೂ ಕಾಣಬಹುದಾಗಿದೆ. ರಾಣಿ ವಾಸದ ಇಟ್ಟಿಗೆ ನೆಲ, ಈ ದೇವಾಲಯ ಎಲ್ಲವೂ ಬರೋಬ್ಬರಿ 1500 ವರ್ಷಗಳಷ್ಟು ಹಳೆಯದು ಅನ್ನೋ ಇತಿಹಾಸವನ್ನ ಹೇಳುತ್ತದೆ. ಕದಂಬ ಸಾಮ್ರಾಜ್ಯದ ಕಾಲವಾದ 5ನೇ ಶತಮಾನದಲ್ಲಿ ಬದುಕಿದ್ದ ಜನಾನುರಾಗಿ ರಾಜ ಮಯೂರವರ್ಮನ ಮರಿಮೊಮ್ಮಗನು ಆತನ ರಾಣಿಗಾಗಿ ನಿರ್ಮಿಸಿದ ಮಹಲ್ ಈ ರಾಣಿ ನಿವಾಸ.


    ಗುಡ್ಡತಟಾಕ ಕೆರೆ


    ಇಲ್ಲಿ ಸ್ನಾನಗೃಹ, ನೃತ್ಯಶಾಲೆ, ಪ್ರಾಂಗಣ ಎಲ್ಲದರ ಅಡಿಪಾಯ ಕಾಣುತ್ತದೆ. ಮುಂದಿನ ಸ್ತಂಭದಲ್ಲಿ ಸಂಸ್ಕೃತ (Sanskrit) ಶಾಸನವಿದ್ದು, ಅದರಲ್ಲಿ ಕದಂಬ ವಂಶಾವಳಿ ಸಮೇತವಾಗಿ ಇಲ್ಲಿ ಮನ್ಮಥ ದೇವಸ್ಥಾನ ಇದ್ದ ಉಲ್ಲೇಖ ಹಾಗೂ ಊರಿನ ಜನರ ದಾಹ ನೀಗಲು 263 ಎಕರೆ ಪ್ರದೇಶದಲ್ಲಿ ‘ಗುಡ್ಡತಟಾಕ‘ (Guddatataka) ಎಂಬ ಕೆರೆಯನ್ನು ರಾಜ ನಿರ್ಮಿಸಿದ ಉಲ್ಲೇಖ ಇದೆ.


    ಬತ್ತದ ಕೆರೆ


    ಎಂದೂ ಬತ್ತದ ಈ ಗುಡ್ನಾಪುರದ ಕೆರೆಗೆ ‘ಕದಂಬ ಸರೋವರ‘ ಎಂದೇ ಹೆಸರು. ರಾಣಿ ಮಹಲಿಂದ ದಿಬ್ಬದ ರೀತಿ ರಚನೆಯಿದ್ದು ಅಲ್ಲಿಂದಲೇ ಅನೇಕ ಚಟುವಟಿಕೆಯನ್ನು ರಾಣಿಯರು ನೋಡುತ್ತಿದ್ದರಂತೆ. ಕಲ್ಯಾಣದ ಚಾಲುಕ್ಯರ ಹಸ್ತಕ್ಷೇಪದ ನಂತರ ವೀರಭದ್ರ ಮೂರ್ತಿ ದೇವಾಲಯದ ಒಳಗಡೆ ಪ್ರತಿಷ್ಠೆಯಾಗಿದೆ ಹೊರತು ಬೇರೆನೂ ವ್ಯತ್ಯಾಸವಾಗಿಲ್ಲ. ಎರಡು ರಾಜ ಕುಟುಂಬಗಳ ಶಿಲ್ಪ ಕಲಾ ವೈವಿಧ್ಯ ಹಾಗೂ ವಿಹಂಗಮ ದೃಶ್ಯಗಳನ್ನು ಹೊಂದಿರುವ ಸಮೀಪದಲ್ಲಿಯೇ ಬಂಗಾರೇಶ್ವರ ದೇವಸ್ಥಾನವನ್ನು ಹೊಂದಿರುವ ಗುಡ್ನಾಪುರದ ರಾಣಿನಿವಾಸ ರಾಜವೈಭೋಗದ ದರ್ಪಣವಿದು.

    First published: