ಮುಂಡಗೋಡ್: ಸಾಲಾಗಿ ಕುಳಿತು ಏನನ್ನೋ ಪಠಿಸುತ್ತಿರುವ ಬೌದ್ಧ ಭಿಕ್ಕುಗಳು. ಅಂದದ ಮಂಡಲ, ತರಹೇವಾರಿ ಹಣ್ಣುಗಳು, ಶಂಖ, ನಾದಸ್ವರ, ಚರ್ಮವಾದ್ಯಗಳು. ಹೌದು, ಹೀಗೆ ನೋಡುತ್ತಾ ಒಳಹೊಕ್ಕರೆ ಅದೇನೋ ಸೂಜಿಗಲ್ಲಿನಂತಹ ಸೆಳೆತ. ನಮ್ಮೆಲ್ಲರ ಆಚರಣೆಗೂ ವಿಭಿನ್ನತೆ ಇದೆ ಅನ್ನೋ ಅನುಭವ. ಇದ್ಯಾವ ಟಿಬೆಟ್ ರಾಷ್ಟ್ರದ ಊರು ಅಂತಾ ಕೇಳ್ತಿದ್ದೀರ? ಅಲ್ವೇ, ಅಲ್ಲ! ಇದು ನಮ್ಮದೇ ಕರುನಾಡಲ್ಲಿರುವ (Tibet In Karnataka) ಅಂದ ಚೆಂದದ ಪುಟ್ಟ ಟಿಬೆಟ್ (Tibetan Colony Mundgod).
ಉತ್ತರ ಕನ್ನಡದ ಮುಂಡಗೋಡಿನ ಡ್ರಿಪುಂಗ್ ಲಾಮಾ ಕ್ಯಾಂಪ್ನ ಶಾಖ್ಯಾ ಮಾನ್ಸ್ಟಿಯಲ್ಲಿ ನಡೆಯುತ್ತಿರುವ ಶ್ರಾದ್ಧ ಕಾರ್ಯಕ್ರಮ. ಹಾಗಂತ ಇವರ ಶ್ರಾದ್ಧ ಕಾರ್ಯಗಳು ಹಲವು ವೈಶಿಷ್ಟ್ಯತೆ ಹಾಗೂ ನಂಬಿಕೆ ಹೊಂದಿರುತ್ತದೆ. ವಜ್ರಯಾನ ಪಂಥದ ಪ್ರಕಾರ ಈ ಬೌದ್ಧ ಭಿಕ್ಕುಗಳು ಒಂದಲ್ಲ ಎರಡಲ್ಲ, ಬರೋಬ್ಬರಿ 49 ದಿನ ಶ್ರಾದ್ಧ ಮಾಡ್ತಾರೆ.
500 ಕ್ಕೂ ಹೆಚ್ಚು ಭಿಕ್ಕುಗಳು ಭಾಗಿ
ಮುಂಡಗೋಡಿನಲ್ಲಿ ನಡೆಯುತ್ತಿರುವ ಈ ಶ್ರಾದ್ಧದಲ್ಲಿ ಸುಮಾರು 500 ಕ್ಕೂ ಹೆಚ್ಚು ಭಿಕ್ಕುಗಳು ಭಾಗಿಯಾಗಿದ್ದಾರೆ. ಇವರು ಅಲ್ಲಿರುವ ವಾಚರ ಯೋಗಿನಿ ಮಂಡಲದ ಮುಂದೆ ಕೂತು ಭಕ್ತಿ ಭಾವದಿಂದ ತಮ್ಮ ಸ್ತ್ರೋತ್ರಗಳನ್ನು ಪಠಿಸುತ್ತಾರೆ.
ಪ್ರಭಾವಿ ಬೌದ್ಧ ಭಿಕ್ಕುವಿನ ಸಾವಾದರೆ ಮಾತ್ರ!
ಅಂದಹಾಗೆ ಹೀಗಂತ ಎಲ್ಲರ ಶ್ರಾದ್ಧಕ್ಕೂ ಇಂತಹ ವಿಧಿಯನ್ನ ಭಿಕ್ಕುಗಳು ಅನುಸರಿಸೋದಿಲ್ಲ. ಬದಲಿಗೆ, ಯಾವಾಗಾದರೂ ಒಮ್ಮೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತೆ. ಅದರಲ್ಲೂ ಯಾವುದಾದರೂ ಹಿರಿಯ ಹಾಗೂ ಪ್ರಭಾವಿ ಬೌದ್ಧ ಭಿಕ್ಕುವಿನ ಸಾವಾದರೆ 49 ದಿನಗಳ ಕಾಲ ಈ ಶ್ರಾದ್ಧ ನಡೆಯುತ್ತದೆ. ಇತ್ತೀಚೆಗೆ ಲುಡಿಂಗ್ ಕೆಂಚೆನ್ ಎಂಬ ಹಿರಿಯ ಸಂತರ ನಿಧನ ಬೌದ್ಧಗಯಾದಲ್ಲಿ ನಡೆದಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿ ಈ ಶ್ರಾದ್ಧ ವಿಧಿ ಇಲ್ಲಿ ನಡೆಯುತ್ತಿದೆ.
ಇದನ್ನೂ ಓದಿ: Uttara Kannada: ಶಿರಸಿಯ ಮನೆಯಲ್ಲಿ ಒಡಿಶಾದ ವಾಸ್ತುಶಿಲ್ಪ!
ಕಾಳಿಯನ್ನು ಹೋಲುವ ಯೋಗಿನಿಯ ಆಹ್ವಾನ!
ತಂತ್ರವಿದ್ಯೆಗೂ ಹೆಚ್ಚಿನ ಆದ್ಯತೆ ನೀಡುವ ಭಿಕ್ಕುಗಳು, ಆ ಮೂಲಕ ಕಾಳಿಯನ್ನು ಹೋಲುವ ಯೋಗಿನಿಯನ್ನು ಆಹ್ವಾನಿಸಿ ಅವಳ ಮೂಲಕ ಸತ್ತವರಿಗೆ ಮೋಕ್ಷ ಕೊಡುವ ಪದ್ಧತಿ ಇದಾಗಿದೆ. ಇದು ಅಪರೂಪದಲ್ಲಿ ಅಪರೂಪದ ಕ್ರಿಯಾಕರ್ಮ. ಬೆಳಿಗ್ಗೆಯಿಂದ ಶುರುವಾದರೆ ರಾತ್ರಿಯ ತನಕ ಮಂತ್ರ ಪಠಣ ಹಾಗೂ ಇತರ ಕರ್ಮಗಳು ನಡೆಯುತ್ತವೆ.
ಇದನ್ನೂ ಓದಿ: Positive Story: 25 ಸಾವಿರಕ್ಕೂ ಹೆಚ್ಚು ಗ್ರಾಮೀಣ ಯುವಕರ ಭವಿಷ್ಯ ರೂಪಿಸಿದ ನಮ್ಮ ಕರ್ನಾಟಕದ ಸಂಸ್ಥೆಯಿದು!
ಒಟ್ಟಿನಲ್ಲಿ ಮುಂಡಗೋಡು ಸದ್ಯ ಬೌದ್ಧ ಭಿಕ್ಕುಗಳ ಮಂತ್ರ, ತಂತ್ರಗಳಿಗೆ ಸಾಕ್ಷಿಯಾಗುತ್ತಿದ್ದು ಟಿಬೆಟಿಯನ್ನರ ನಾಡಿನಲ್ಲಿದ್ದಂತೆ ಭಾಸವಾಗುತ್ತಿದೆ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ