ತೆಲುಗು ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗ ಬಹು ನಿರೀಕ್ಷೆಯಿಂದ ಕಾಯುತ್ತಿರುವ ಚಿತ್ರ ತೆಲುಗು ಚಿತ್ರರಂಗದ ಖ್ಯಾತ ನಟರಾದ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಮುಖ್ಯಪಾತ್ರದಲ್ಲಿ ನಟಿಸಿ ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರೌದ್ರಂ ರಣಂ ರುಧಿರಂ (RRR) ಚಿತ್ರ. ಭಾರತದಲ್ಲಿ ಮೊದಲ ಬಾರಿಗೆ ಸಾವಿರ ಕೋಟಿಗೂ ಅಧಿಕ ಹಣ ಕಲೆಕ್ಷನ್ ಮಾಡಿದ್ದ ಬಾಹುಬಲಿ ಚಿತ್ರದ ನಂತರ ನಿರ್ದೇಶಕ ರಾಜಾಮೌಳಿ ನಿರ್ದೇಶಿಸುತ್ತಿರುವ ಚಿತ್ರ ಎಂಬ ಕಾರಣಕ್ಕೆ ಈ ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿತ್ತು. ಆದರೆ, ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಪರಿಣಾಮ ಈ ಚಿತ್ರ ಬಿಡುಗಡೆಯಾದರೆ ಸಿನಿಮಾ ಪ್ರದರ್ಶನ ಮಾಡುವ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ತೆಲಂಗಾಣದ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ಬಂಡಿ ಸಂಜಯ್ ಕುಮಾರ್ ಬೆದರಿಕೆ ಹಾಕಿದ್ದಾರೆ.
ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಅವರ ಪಾತ್ರವನ್ನು ಪರಿಚಯಿಸುವ ಟೀಸರ್ ಒಂದು ಇತ್ತೀಚೆಗಷ್ಟೇ ಅವರ ಹುಟ್ಟುಹಬ್ಬದ ದಿನದಂದು ಬಿಡುಗಡೆಗೊಂಡಿತ್ತು. ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಬುಡಕಟ್ಟು ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಟೀಸರ್ನ ಒಂದು ಭಾಗದಲ್ಲಿ ಅವರು ಮುಸ್ಲಿಂ ವೇಷದಲ್ಲಿ ತಲೆಗೆ ಟೋಪಿ ಹಾಕಿಕೊಂಡು ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ರಾಜಮೌಳಿ “ಐತಿಹಾಸಿಕ ಸಂಗತಿಗಳನ್ನು ವಿರೂಪಗೊಳಿಸುತ್ತಾರೆ” ಎಂದು ಆರೋಪಿಸಿದ ಬಿಜೆಪಿ ನಾಯಕ, “ವಿವಾದ ಸೃಷ್ಟಿಸಲು ರಾಜಮೌಳಿ ಕೊಮರಾಮ್ ಭೀಮ್ನ ತಲೆಯ ಮೇಲೆ ಟೋಪಿ ಹಾಕಿದರೆ, ನಾವು ಸುಮ್ಮನಿರುತ್ತೇವೆಯೇ? ಅದು ಎಂದಿಗೂ ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಎಸ್.ಎಸ್.ರಾಜಮೌಳಿ ಮೇಲೆ ದೈಹಿಕವಾಗಿಯೂ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, “ನೀವು ಕೋಮರಾಮ್ ಭೀಮ್ ಅವರ ವ್ಯಕ್ತಿತ್ವವನ್ನು ಚಿತ್ರದ ಮೂಲಕ ದುರ್ಬಲಗೊಳಿಸುತ್ತಿದ್ದೀರಿ. ಇದರಿಂದಾಗಿ ಆದಿವಾಸಿಗಳ ಭಾವನೆಗಳನ್ನು ಹಾಳು ಮಾಡಲು ಹೊರಟಿದ್ದೀರಿ. ಈ ಚಿತ್ರ ಏನಾದರೂ ಬಿಡುಗಡೆಯಾದರೆ ನಿಮ್ಮ ಮೇಲೆ ಹಲ್ಲೆ ನಡೆಸುತ್ತೇವೆ, ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರೆ ಚಿತ್ರ ಪ್ರದರ್ಶನ ಮಾಡುವ ಪ್ರತಿಯೊಂದು ಚಿತ್ರಮಂದಿರಕ್ಕೂ ನಾವು ಬೆಂಕಿ ಹಚ್ಚುತ್ತೇವೆ” ಎಂದು ಬಂಡಿ ಸಂಜಯ್ ಕುಮಾರ್ ಎಚ್ಚರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ