ನವ ದೆಹಲಿ (ಆಗಸ್ಟ್ 19); ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾನೂನಿನ ವಿರುದ್ಧ ಕಳೆದ ಒಂದು ವರ್ಷದಿಂದ ದೇಶದ ರೈತರು ಹೋರಾಟ ನಡೆಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣದ ರೈತರು ಕಳೆದ 8 ತಿಂಗಳಿನಿಂದ ದೆಹಲಿಯ ಗಡಿಭಾಗದಲ್ಲಿ ಬೀಡುಬಿಟ್ಟು ಹೋರಾಟ ನಡೆಸುತ್ತಿರುವುದು ಮತ್ತು ಕಳೆದ ಜನವರಿ 26ರಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ರ್ಯಾಲಿಯನ್ನು ಭಾಗಶಃ ಯಾರೂ ಮರೆತಿರಲಿಕ್ಕೆ ಸಾಧ್ಯವಿಲ್ಲ. ಆದರೂ, ಕೇಂದ್ರ ಸರ್ಕಾರ ಕೃಷಿ ಕಾನೂನನ್ನು ಜಾರಿಗೆ ತಂದೇ ಸಿದ್ದ ಎನ್ನುತ್ತಿದೆ. ಈ ನಡುವೆ ಇಂದು ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, "ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಈ ಕಾನೂನುಗಳಲ್ಲಿ ಯಾವುದಾದರೂ ಅಂಶವಿದೆ ಎಂದು ರೈತರು ಭಾವಿಸಿದ್ದರೆ ರೈತರೊಂದಿಗೆ ಮಾತನಾಡಲು ಸರ್ಕಾರ ಸಿದ್ಧವಿದೆ" ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯ ವಿರುದ್ಧ ಇಡೀ ದೇಶದ ರೈತ ಸಮೂಹ ಅಸಮಾಧಾನಗೊಂಡಿದೆ. ಆದರೆ, ಈ ಬಗ್ಗೆ ಮಾತನಾಡಿರುವ ರಾಜನಾಥ್ ಸಿಂಗ್, "ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ. ರೈತರಿಗೆ ಲಾಭವಾಗುವ ಈ ಕಾಯ್ದೆಯ ಕುರಿತು ವಿರೋಧದ ವಾತಾವರಣವನ್ನು ಸೃಷ್ಟಿಮಾಡಲಾಗಿದೆ. ಇದನ್ನು ರೈತರು ಅರ್ಥಮಾಡಿಕೊಳ್ಳಬೇಕು" ಎಂದು ಮನವಿ ಮಾಡಿದ್ದಾರೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ ಯೋಜನೆಯಡಿ ರಾಜ್ಯ ಮಟ್ಟದ ಅನ್ನಪೂರ್ಣ ಕಾರ್ಯಕ್ರಮವನ್ನು ಗುರುವಾರ ಆನ್ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್, "ರೈತರ ಕಲ್ಯಾಣಕ್ಕಾಗಿ ನರೇಂದ್ರ ಮೋದಿ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಅದೇ ರೀತಿ ನಮ್ಮ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ತಂದಿದೆ. ಈ ಕಾನೂನುಗಳು ರೈತರಿಗೆ ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲ ಮಾಡಿಕೊಡುತ್ತದೆ. ಹೀಗಾಗಿ ರೈತ ಸಮೂಹ ಈ ಕಾನೂನುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ ಎಂದು ನಾನು ಭಾವಿಸುತ್ತೇನೆ. ಆದರೆ, ಅನಗತ್ಯವಾಗಿ ವಿರೋಧದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ರೈತರು ಇದನ್ನು ಅರ್ಥಮಾಡಿಕೊಳ್ಳಬೇಕು”ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜೈಲಿಂದಲೇ 10ನೇ ತರಗತಿ ಪರೀಕ್ಷೆಗೆ ತಯಾರಾಗುತ್ತಿರುವ ಹರಿಯಾಣದ ಮಾಜಿ ಸಿಎಂ 86 ವರ್ಷದ ಚೌಟಾಲಾ!
"ನಾನು ಕೃಷಿ ಶಾಸನಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದೇನೆ. ಇದರ ಪ್ರಕಾರ ನಮ್ಮ ರೈತ ಸಹೋದರರ ಹಿತಾಸಕ್ತಿಗೆ ವಿರುದ್ಧವಾಗಿ ಯಾವುದೇ ಅಂಶಗಳು ಇಲ್ಲ. ಯಾರಿಗಾದರೂ ಅಂತಹ ಅಂಶಗಳಿವೆ ಅನಿಸಿದರೆ, ನಾವು ಸಂಪೂರ್ಣ ವಿಶ್ವಾಸದಿಂದ ರೈತ ಸಹೋದರರೊಂದಿಗೆ ಕುಳಿತು ಮಾತುಕತೆ ನಡೆಸಲು ಸಿದ್ಧರಿದ್ದೇವೆ" ಎಂದು ರಾಜನಾಥ್ ಸಿಂಗ್ ಆಶ್ವಾಸನೆ ನೀಡಿದ್ದಾರೆ.
ರೈತರ ಹಿತಕ್ಕಾಗಿ ಮೋದಿ ಸರ್ಕಾರದ ಯೋಜನೆಗಳನ್ನು ಪಟ್ಟಿ ಮಾಡಿರುವ ಅವರು, ಎಂಎಸ್ಪಿ ಒಂದೂವರೆ ಪಟ್ಟು ಹೆಚ್ಚಿಸಲಾಗಿದೆ. ಸಣ್ಣ ರೈತರಿಗೆ ಅಗ್ಗದ ಸಾಲಗಳನ್ನು ನೀಡಲಾಗಿದೆ. 1.50 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆದರೆ, ಈ ಕೃಷಿ ಕಾನೂನುಗಳು ಎಪಿಎಂಸಿ ಮತ್ತು ಎಂಎಸ್ಪಿ ಖರೀದಿ ವ್ಯವಸ್ಥೆಗಳನ್ನು ಕೊನೆಗೊಳಿಸುತ್ತವೆ. ರೈತರನ್ನು ದೊಡ್ಡ ಕಾರ್ಪೊರೇಟ್ಗಳ ಕೃಪೆಗೆ ಒಳಪಡಿಸುತ್ತವೆ ಎಂಬುದು ರೈತ ಸಂಘಟನೆಗಳು ಆರೋಪ. ಇದೇ ಕಾರಣಕ್ಕೆ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ರೈತರು, ಕೃಷಿ ಕಾನೂನುಗಳನ್ನು ವಿರೋಧಿಸಿ ನವೆಂಬರ್ 26 ರಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಇವರಿಗೆ ಬೆಂಬಲ ನೀಡಿ ಆಂದೋಲನ ನಡೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ