ನವ ದೆಹಲಿ (ಅಕ್ಟೋಬರ್ 21); ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಮಂಗಳವಾರ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿಯಾಗಿದ್ದರು. ಆದರೆ, ಈ ವೇಳೆ ಅವರು ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಏರಿಕೆಯಾಗುತ್ತಿವೆ ಎಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ಬಳಿ ಆರೋಪಿಸಿರುವುದು ಇದೀಗ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲೂ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ವಿರುದ್ಧ ತೀವ್ರ ಟೀಕೆಗಳು ಕೇಳಿಬರುತ್ತಿವೆ. ಮಂಗಳವಾರ ರಾಜ್ಯಪಾಲರೊಂದಿಗೆ ಲವ್ ಜಿಹಾದ್ ಪ್ರಕರಣಗಳ ಏರಿಕೆಯ ಬಗ್ಗೆ ಚರ್ಚಿಸಿದ ನಂತರ ರೇಖಾ ಶರ್ಮಾ ಟ್ವಿಟ್ಟರ್‌ನಲ್ಲಿ ಭಾರಿ ಟೀಕೆ ಮತ್ತು ಟ್ರೋಲ್‌ಗೆ ಒಳಗಾಗಿದ್ದಾರೆ. ರೇಖಾ ಶರ್ಮಾ ಅವರ ಹಳೆಯ ಟ್ವಿಟ್‌ಗಳನ್ನು ಮತ್ತೆ ಪೋಸ್ಟ್ ಮಾಡುತ್ತಾ ಹಲವು ಮಂದಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಮಂಗಳವಾರ ರೇಖಾ ಶರ್ಮಾ ರಾಜ್ಯಪಾಲರ ಭೇಟಿ ನಂತರ ರಾಷ್ಟ್ರೀಯ ಮಹಿಳಾ ಆಯೋಗದ ಟ್ವಿಟರ್ ಖಾತೆಯಲ್ಲಿ, "ನಮ್ಮ ಅಧ್ಯಕ್ಷೆ ರೇಖಾ ಶರ್ಮಾ ಅವರು ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿಯಾಗಿ ರಾಜ್ಯದ ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಕಾರ್ಯ ನಿರ್ವಹಿಸದೇ ಇರುವ ಒನ್ ಸ್ಟಾಪ್ ಕೇಂದ್ರಗಳು, ಕೊರೋನಾ ಆರೈಕೆ ಕೇಂದ್ರಗಳಲ್ಲಿ ಮಹಿಳಾ ರೋಗಿಗಳ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರದ ಬಗ್ಗೆ ವ್ಯಾಪಕ ಚರ್ಚೆ ನಡೆಸಿದ್ದಾರೆ. ಜೊತೆಗೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಬಗ್ಗೆಯೂ ಮಾತನಾಡಿದ್ದಾರೆ" ಎಂದು ಟ್ವೀಟ್ ಮಾಡಲಾಗಿತ್ತು.
ಆದರೆ, ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಖ್ಯಸ್ಥೆಯ ಭೇಟಿ ಮತ್ತು ಟ್ವಿಟರ್ನಲ್ಲಿ ‘ಲವ್ ಜಿಹಾದ್’ ಪದದ ಉಲ್ಲೇಖ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಲವ್ ಜಿಹಾದ್ ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಪರಿವರ್ತಿಸುವ ಉದ್ದೇಶದಿಂದ ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಮದುವೆಯಾಗುವಂತೆ ನಡೆಸುವ ಪಿತೂರಿ ಎಂದು ಬಲಪಂಥೀಯ ಗುಂಪುಗಳು ವಾದಿಸುತ್ತಿವೆ.
ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿ, ದೇಶದಲ್ಲಿ ಇದುವರೆಗೂ ಯಾವುದೇ ಲವ್ ಜಿಹಾದ್ ನಡೆದಿಲ್ಲ ಎಂದು ಹೇಳಿದ್ದು, ಕಾನೂನಿನಡಿಯಲ್ಲಿ ಈ ಪದವನ್ನು ವ್ಯಾಖ್ಯಾನಿಸಿಲ್ಲ ಎಂಬ ವಿಚಾರವನ್ನೂ ಸ್ಪಷ್ಟಪಡಿಸಿದೆ.
ಇತ್ತಿಚಿಗಷ್ಟೇ ತನಿಷ್ಕ್ ಆಭರಣ ಜಾಹೀರಾತನ್ನು ಲವ್ ಜಿಹಾದ್‌ಗೆ ಹೋಲಿಸಿ ಅನೇಕ ಮಂದಿ ಅವಾಚ್ಯ ಕಾಮೆಂಟ್‌ಗಳ ಮೂಲಕ ಟ್ರೋಲ್ ಮಾಡಿದ್ದರು. ಅಲ್ಲದೆ, ತನಿಷ್ಕ್ ಕೇಂದ್ರ ಕಚೇರಿಯ ಮೇಲೆ ದಾಳಿಯನ್ನೂ ನಡೆಸಲಾಗಿತ್ತು. ಹೀಗಾಗಿ ಕಂಪೆನಿ
ಈಗ ಜಾಹೀರಾತನ್ನು ಹಿಂಪಡೆದಿದೆ. ಇದರ ಬಗ್ಗೆಯೂ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗಾಗಿ ‘ಲವ್ ಜಿಹಾದ್’ ಪದವು ಈಗ ಮತ್ತೊಮ್ಮೆ ಚರ್ಚೆಯ ಕೇಂದ್ರವಾಗಿದೆ.
ರಾಜಕೀಯ ಮುಖಂಡರು ಮತ್ತು ಅವರ ಕುಟುಂಬಗಳ ವಿರುದ್ಧ ರೇಖಾ ಶರ್ಮಾ ಈ ಹಿಂದೆ ಮಾಡಿದ್ದ ಅವಹೇಳನಕಾರಿ ಮತ್ತು ಮಹಿಳೆಯರ ವಿರುದ್ಧವೇ ಸೆಕ್ಸಿಸ್ಟ್ ಹಾಗೂ ದ್ವೇಷ ಕಾರುವ ನಿಂದನಾತ್ಮಕ ಟ್ವೀಟ್‌ಗಳನ್ನು ನೆಟ್ಟಿಗರು ಈಗ ಹಂಚಿಕೊಂಡು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
"ಇಂತಹ ಅತಿರೇಕದ ಟ್ವೀಟ್‌ಗಳನ್ನು ಮಾಡಿದ್ದವರು ಇಂದು ಮಹಿಳೆಯರ ಸುರಕ್ಷತೆ ಬಗ್ಗೆ, ಲವ್ ಜಿಹಾದ್ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದೂ, ಅವರು ಈ ಹುದ್ದೆಗೆ ರಾಜೀನಾಮೆ ನೀಡಬೇಕು" ಎಂದೂ ಹಲವು ಮಂದಿ ಒತ್ತಾಯಿಸಿದ್ದಾರೆ. #SackRekhaSharma ಎಂಬ ಹ್ಯಾಶ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ.
ಮಹಿಳಾ ಆಯೋಗದ ಅಧ್ಯಕ್ಷರ ಹಳೆಯ ಟ್ವೀಟ್‌ಗಳು ನಾಚಿಕೆ ತರಿಸುವಂತಹದು. ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಹಲವು ಟ್ವಿಟ್ಟರ್ ಬಳಕೆದಾರರು ಆಗ್ರಹಿಸಿದ್ದಾರೆ.
ರೇಖಾ ಶರ್ಮಾ ತಮ್ಮ ಹಳೆಯ ಟ್ವೀಟ್‌ಗಳಲ್ಲಿ ಮಾಜಿ ಪ್ರಧಾನಿ ನೆಹರೂ, ಕಾಂಗ್ರೆಸ್ ಮುಖ್ಯಸ್ಥೆ ಪ್ರಿಯಾಂಕಾ ಗಾಂಧಿ, ಆಪ್ ಮುಖಂಡರು ಸೇರಿದಂತೆ ಹಲವರ ಬಗ್ಗೆ ತುಂಬಾ ಕೀಳು ಮಟ್ಟದ ಕಾಮೆಂಟ್‌ಗಳನ್ನು ಹಾಕಿದ್ದರು.
"ಇದು ಅತಿರೇಕದ ಸಂಗತಿ. ಮಹಿಳೆಯರು ಮತ್ತು ಅಲ್ಪಸಂಖ್ಯಾತರ ವಿರುದ್ಧದ ಅಪರಾಧಗಳ ಬಗ್ಗೆ ರಾಜ್ಯವು ಉದಾಸೀನತೆಯ ಜೊತೆಗೆ ಉಗ್ರವಾದ ಮತ್ತು ಅಸಹಿಷ್ಣುತೆ ಬೆಳೆಯುತ್ತಿದೆ. ಒಂದು ಧರ್ಮವನ್ನು ಗುರಿಯಾಗಿಸಲು ‘ಲವ್ ಜಿಹಾದ್’ ಎಂಬ ಪದವನ್ನು ಬಳಸುವುದು ನಿಜವಾಗಿಯೂ ಸಾಂವಿಧಾನಿಕವೇ?" ಎಂದು ಟ್ವಿಟ್ಟರ್ ಬಳಕೆದಾರರು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು, "ಎನ್‌ಸಿಡಬ್ಲ್ಯೂ ಮತ್ತು ಅದರ ಅಧ್ಯಕ್ಷರು ‘ಲವ್ ಜಿಹಾದ್’ ಎಂದರೇನು ಎಂಬುದನ್ನು ಸ್ಪಷ್ಟಪಡಿಸುತ್ತಾರೆಯೇ? ಕೆಲವು ಉಗ್ರಗಾಮಿ ಗುಂಪುಗಳು ಈ ಪದವನ್ನು ಬಳಸುತ್ತಿರುವ ಅದೇ ಅರ್ಥದಲ್ಲಿ ನೀವು ಬಳಸುತ್ತಿದ್ದೀರಾ?" ಎಂದು ಕೇಳಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, ಅಶಿಸ್ತು ಪ್ರದರ್ಶಿಸುವವರ ವಿರುದ್ಧ ಶಿಸ್ತುಕ್ರಮ; ನಳಿನ್ ಕುಮಾರ್ ಕಟೀಲ್
ತನ್ನ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿರುವ ರೇಖಾ ಶರ್ಮಾ, "ನನ್ನ ಖಾತೆಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದರಿಂದ ನಾನು ಟ್ವಿಟ್ಟರ್‌ಗೆ ದೂರು ನೀಡಿದ್ದೇನೆ ಮತ್ತು ಅದರ ಬಗ್ಗೆ ತನಿಖೆ ನಡೆಯುತ್ತಿದೆ. ಟ್ರೋಲ್‌ಗಳಿಗೆ ಉತ್ತರಿಸಲು ಇಷ್ಟಪಡುವುದಿಲ್ಲ" ಎಂದಿದ್ದಾರೆ.
ಸದ್ಯ ಮಹಿಳಾ ಆಯೋಗದ ಮುಖ್ಯಸ್ಥೆ ತನ್ನ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಿದ್ದರೂ ಸಹ ಅವರ ಹಳೆಯ ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ