ವಿಜಯಪುರ (ನವೆಂಬರ್. 30); ಉಪ ಚುನಾವಣಾ ಫಲಿತಾಂಶದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಕಳೆದ ಒಂದೂವರೆ ವರ್ಷದಿಂದ ಈ ಬಗೆಗಿನ ಮಾತುಗಳು ಕೇಳಿಬರುತ್ತಲೇ ಇವೆ. ಆದರೂ ಉಪ ಚುನಾವಣೆ ನಂತರ ಸಿಎಂ ಯಡಿಯೂರಪ್ಪ ಸಂಪುಟವನ್ನು ವಿಸ್ತರಿಸುವುದು ಖಚಿತ ಎನ್ನಲಾಗಿತ್ತು. ಈ ಕುರಿತು ಮಾತುಕತೆ ನಡೆಸಲು ಯಡಿಯೂರಪ್ಪ ಸಹ ಹಲವಾರು ಬಾರಿ ದೆಹಲಿಗೆ ತೆರಳಿ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಈವರೆಗೆ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿಲ್ಲ. ಹೀಗಾಗಿ ರಾಜ್ಯ ಸಂಪುಟ ವಿಸ್ತರಣೆ ಎಂಬುದು ಹುಲಿ ಬಂತು ಹುಲಿ ಎಂಬಂತಹ ಕಥೆಯಾಗಿದೆ. ಇದರ ಬೆನ್ನಿಗೆ ಇಂದು ವಿಜಯಪುರದಲ್ಲಿ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಹ "ಬಿಜೆಪಿ ಹೈಕಮಾಂಡ್ ನಿಂದ ನಿರ್ದೇಶನ ಬಂದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ" ಎಂದು ಹೇಳುವ ಮೂಲಕ ಸದ್ಯಕ್ಕಂತೂ ಸಂಪುಟ ವಿಸ್ತರಣೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿರುವ ಅವರು, "ಹೈಕಮಾಂಡ್ ನಿಂದ ನಿರ್ದೇಶನ ಬಂದ ತಕ್ಷಣ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಕೇಂದ್ರ ಗೃಹ ಸಚಿವ ಅಮಿತ ಶಾ ಪ್ರವಾಸದಲ್ಲಿದ್ದಾರೆ. ಬಿಜೆಪಿ ರಾಷ್ಟ್ರ ನಾಯಕರು ಎಲ್ಲರೂ ಸೇರಿ ಮಾತನಾಡಿದ ನಂತರ ನಿರ್ದೇಶನ ನೀಡಲಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.
ದೆಹಲಿಗೆ ತೆರಳಿದರೂ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗದೆ ನಿರ್ಲಕ್ಷ್ಯಿಸಿದ್ದಾರೆ ಎಂಬ ಆರೋಗಳಿಗೆ ಪ್ರತಿಕ್ರಿಯಿಸಿದ ಅವರು, "ಸಿಎಂ ಜೊತೆ ನಾನೂ ದೆಹಲಿಗೆ ಹೋಗಿದ್ದೆ. ನಾವು ದೆಹಲಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಭೇಟಿಗೆ ಹೋಗಿದ್ದೆವು. ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗಾಗಿ ಹೋಗಿರಲಿಲ್ಲ" ಎಂದು ತಿಳಿಸಿದ್ದಾರೆ.
ಸರಕಾರ ರಚನೆಗೆ ತ್ಯಾಗ ಮಾಡಿದವರಿಗೆ ಸಚಿವ ಸ್ಥಾನ ಸಿಗಲೇಬೇಕು ಅದು ಸಿಕ್ಕೆ ಸಿಗುತ್ತದೆ ಎಂದು ತಿಳಿಸಿದ ಅವರು, ಸಿಎಂ ಬದಲಾವಣೆ ಹಾಗೂ ತಾವು ಸಿಎಂ ಸ್ಥಾನದ ರೇಸ್ ನಲ್ಲಿರುವ ಕುರಿತು ಯಾವುದೇ ಪ್ರಸ್ತಾಪವಿಲ್ಲ. ಅವೆಲ್ಲ ಗಾಳಿಸುದ್ದಿ, ಮಾಧ್ಯಮಗಳ ಸೃಷ್ಠಿ, ಅವು ಕೇವಲ ಊಹಾಪೋಹಗಳು. ನಮ್ಮ ನಾಯಕರಾದ ಯಡಿಯೂರಪ್ಪ ಅವರೇ ಪೂರ್ಣಾವಧಿಗೆ ಸಿಎಂ ಆಗಿರುತ್ತಾರೆ. ಸಚಿವ ಸ್ಥಾನದ ನಿರ್ಣಯದ ಅಧಿಕಾರ ರಾಷ್ಟ್ರ ನಾಯಕರಿಗಿದೆ. ರಾಷ್ಟ್ರ ನಾಯಕರು ಹೇಳಿದಂತೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ" ಎಂದು ತಿಳಿಸಿದ್ದಾರೆ ಎಂದು ಗೋವಿಂದ ಕಾರಜೋಳ ತಿಳಿಸಿದರು.
ಇದೇ ಸಂದರ್ಭದಲ್ಲಿ ಜೀವ ಬೆದರಿಕೆ ಕುರಿತು ಜೆಡಿಎಸ್ ಶಾಸಕ ಆರೋಪಿಸುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಸುಳ್ಳು ಆರೋಪ ಮಾಡುವವರಿಗೆ ಏನು ಮಾಡೋಕಾಗುತ್ತೆ. ಅವನಿಗೆ ಯಾರಿಂದ ಬೆದರಿಕೆ ಇದೆ? ಸುಮ್ಮನೆ ಹೇಳಿದರೆ ಹೇಗೆ? ನಮ್ಮ ಸರಕಾರದಲ್ಲಿ ಶಾಸಕರಿಗೆ ರಕ್ಷಣೆ ಇಲ್ಲ ಎಂಬುದು ಸುಳ್ಳು. ದೇಶಕ್ಕೆ ಸ್ವಾತಂತ್ರ್ಯ ಬಂದ 70 ವರ್ಷಗಳಲ್ಲಿ ಯಾವುದೇ ಶಾಸಕರಿಗೆ ಅಂಥ ಸ್ಥಿತಿ ಇಲ್ಲ. ಅದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ