CT Ravi v/s Congress: ನೆಹರು ಹೆಸರಲ್ಲಿ ಹುಕ್ಕಾಬಾರ್ ಮಾಡಲಿ ಎಂದ ಸಿ.ಟಿ.ರವಿಗೆ ಸಿದ್ದರಾಮಯ್ಯ, ಡಿಕೆಶಿ ತಿರುಗೇಟು!

ಸಿ.ಟಿ.ರವಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಕಿಡಿಕಾರಿದರು. ದೆಹಲಿಯಲ್ಲಿ ಜೇಟ್ಲಿ, ಮಧ್ಯಪ್ರದೇಶದಲ್ಲಿ ಮೋದಿ, ವಾಜಪೇಯಿ, ಸಾವರ್ಕರ್ ಹೆಸರು ಏಕೆ ಇಟ್ಟಿದ್ದಾರೆ? ನೆಹರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಇಡೀ ಕುಟುಂಬದ ಬಲಿದಾನ ಇದೆ.

ಡಿಕೆಶಿ, ಸಿದ್ದರಾಮಯ್ಯ, ಸಿ.ಟಿ.ರವಿ

ಡಿಕೆಶಿ, ಸಿದ್ದರಾಮಯ್ಯ, ಸಿ.ಟಿ.ರವಿ

  • Share this:
ಬೆಂಗಳೂರು: ಇಂದಿರಾ ಕ್ಯಾಂಟೀನ್​ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್​ ಎಂದು ಬದಲಿಸುವಂತೆ ಆಗ್ರಹಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇಂದು ಮತ್ತೆ ಕಾಂಗ್ರೆಸ್ಸಿಗರನ್ನು ಕೆರಳಿಸುವಂತ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್​ನವರು ಬೇಕಾದರೆ ಅವರ ಕಚೇರಿಯಲ್ಲಿ ಇಂದಿರಾ ಬಾರ್​, ನೆಹರು ಹುಕ್ಕಾಬಾರ್​ ಬೇಕಾದರೆ ತೆರೆಯಲಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕಾಂಗ್ರೆಸ್​ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ ಮಾತನಾಡಿ, ಸಿ.ಟಿ.ರವಿ ಬಿಜೆಪಿ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದ್ದಾರೆ. ಮಾಜಿ ಪ್ರಧಾನಿಗಳಾದ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.  

ನೆಹರು ಕುಟುಂಬದ ತ್ಯಾಗ ದೊಡ್ಡದು, ಅವರಂತೆ ಯಾರು ಕೂಡ ತ್ಯಾಗ ಮಾಡಿಲ್ಲ. ನೆಹರು ಕುಟುಂಬದ ಆಸ್ತಿಯನ್ನು ದಾನ ಮಾಡಿದ್ದಾರೆ, ಅದು ಸಿ.ಟಿ.ರವಿಗೆ ಗೊತ್ತಿಲ್ಲ ಅಂತ ಕಾಣುತ್ತದೆ. ಇಂದಿರಾಗಾಂಧಿ, ರಾಜೀವ್ ಗಾಂಧಿ ಪ್ರಾಣ ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಪ್ರಧಾನಿ ಸ್ಥಾನ ತ್ಯಾಗ ಮಾಡಿದರು ಎಂದು ಕಾಂಗ್ರೆಸ್​ ವರಿಷ್ಠರನ್ನು ಡಿಕೆ ಶಿವಕುಮಾರ್​​ ಸಮರ್ಥಿಸಿಕೊಂಡರು.

ಮೇಕೆದಾಟು ವಿಚಾರವಾಗಿರುವ ಸಿ.ಟಿ.ರವಿಗೆ ಡಿಕೆಶಿ ತಿರುಗೇಟು ನೀಡಿದರು. ನಮಗೂ ತಮಿಳುನಾಡಿನಲ್ಲಿ ರಾಜಕೀಯ ಹೊಂದಾಣಿಕೆ ಇದೆ, ಆದರೆ ರಾಜ್ಯದ ಹಿತದ ಬಗ್ಗೆ ಬದ್ಧತೆ ಇದೆ.  ಮೇಕೆದಾಟು ಕುಡಿಯುವ ನೀರಿನ ಬಗ್ಗೆ ಯಾರ ಅನುಮತಿಯೂ ಬೇಕಿಲ್ಲ. ನನ್ನ ಕ್ಷೇತ್ರದಲ್ಲಿ  ಮೇಕೆದಾಟು ಯೋಜನೆ ಇದೆ. ನಾವು ಸಿಎಂ ಬೊಮ್ಮಾಯಿ ಹೇಳಿಕೆ  ಜೊತೆ ನಿಲ್ಲುತ್ತೇವೆ ಎಂದರು.

ಇನ್ನು ಸಿ.ಟಿ.ರವಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಕಿಡಿಕಾರಿದರು. ದೆಹಲಿಯಲ್ಲಿ ಜೇಟ್ಲಿ, ಮಧ್ಯಪ್ರದೇಶದಲ್ಲಿ ಮೋದಿ, ವಾಜಪೇಯಿ, ಸಾವರ್ಕರ್ ಹೆಸರು ಏಕೆ ಇಟ್ಟಿದ್ದಾರೆ? ನೆಹರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಇಡೀ ಕುಟುಂಬದ ಬಲಿದಾನ ಇದೆ. ಅವರ ತಾತ ಮೋತಿಲಾಲ್ ಕಾಲದಿಂದಲೂ ಹೋರಾಟ ಮಾಡಿದ್ದಾರೆ. ಸಿ.ಟಿ.ರವಿ ಯಾವ ಹೋರಾಟ ಮಾಡಿದ್ದಾರೆ. ಸಿ.ಟಿ.ರವಿಗೆ ಗೌರವ ಕೊಡುವುದು ಕಲಿತಿಲ್ಲ. ನಾನು ವಾಜಪೇಯಿ, ಅಡ್ವಾಣಿ ಬಗ್ಗೆ ಲಘುವಾಗಿ ಮಾತನಾಡಲ್ಲ. ಲಘುವಾಗಿ ಎಲ್ಲರೂ ಮಾತನಾಡಬಹುದು, ಅವರಂತೆ ನಾವು ಲಘುವಾಗಿ ಮಾತನಾಡಿದರೆ ಏನು ವ್ಯತ್ಯಾಸವಿರುತ್ತದೆ ಎಂದು ಸಿ.ಟಿ.ರವಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಇದನ್ನೂ ಓದಿ: CT Ravi: ಇಂದಿರಾ ಬಾರ್, ನೆಹರು ಹುಕ್ಕಾಬಾರ್ ಬೇಕಾದರೆ ತೆರೆಯಲಿ: ಮತ್ತೆ ಕಾಂಗ್ರೆಸ್ಸಿಗರನ್ನು ಕೆರಳಿಸಿದ ಸಿ.ಟಿ.ರವಿ

ರಾಜೀವ್​ ಗಾಂಧಿ ಖೇಲ್​ರತ್ನ ಪ್ರಶಸ್ತಿಯ ಹೆಸರನ್ನು ಕೇಂದ್ರ ಸರ್ಕಾರ ಧಾನ್ಯಚಂದ್​​ ಖೇಲ್​​ರತ್ನ ಎಂದು ಬದಲಿಸಿದ ಬೆನ್ನಲ್ಲೇ ರಾಜ್ಯದಲ್ಲಿನ ಇಂದಿರಾ ಕ್ಯಾಂಟೀನ್​ ಹೆಸರನ್ನು ಬದಲಿಸುವಂತೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಒತ್ತಾಯಿಸಿದ್ದರು. ಇಂದಿರಾ ಹೆಸರು ಬದಲು ಅನ್ನಪೂರ್ಣೇಶ್ವರಿ ಹೆಸರನ್ನು ಇಡುವಂತೆ  ಆಗ್ರಹಿಸಿದ್ದು,  ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿತ್ತು. ಈಗ ಮತ್ತೆ ವಿವಾದಾತ್ಮಕ ಹೇಳಿಕೆ ಮೂಲಕ  ಕಾಂಗ್ರೆಸ್ಸಿಗರನ್ನು ಸಿ.ಟಿ.ರವಿ ಕೆರಳಿಸಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಬಾರ್​, ನೆಹರು ಹುಕ್ಕಾ ಬಾರ್ ಎಂಬ ಹೆಸರಲ್ಲಿ ಕ್ಯಾಂಟೀನ್ ತೆಗೆಯಲಿ ಎಂದು ಸಿ.ಟಿ.ರವಿ ಸವಾಲೆಸೆದಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: