ಮಂಗಳೂರು: ಚೈಲ್ಡ್ ಕೇರ್ ಸೆಂಟರ್ಗಳು ಮಕ್ಕಳ ರಕ್ಷಣೆಗಾಗಿ ಇರಬೇಕಾದ ಕೇಂದ್ರಗಳು. ಆದರೆ ಮಂಗಳೂರಿನ ಇದೇ ಕೇಂದ್ರಗಳಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಇದು ಗೊತ್ತಾಗಿದ್ದು ಮಕ್ಕಳ ಸಂರಕ್ಷಣಾ ಕೇಂದ್ರ ಒಂದರ ಮುಖ್ಯಸ್ಥ ಇದೀಗ ಕಂಬಿ ಎಣಿಸುತ್ತಿದ್ದಾನೆ.
ಮಂಗಳೂರಿನ ಚೈಲ್ಡ್ ಕೇರ್ ಸೆಂಟರ್ ನಲ್ಲೇ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಏನೂ ಅರಿಯದ ಮಕ್ಕಳನ್ನು ಕಾಮತೃಷೆಗಾಗಿ ಬಳಸಿಕೊಂಡಿರುವ ಬಗ್ಗೆ ಮಂಗಳೂರು ಪೊಲೀಸರು ಸ್ಟಿಂಗ್ ಆಪರೇಷನ್ ಮಾಡಿ ಕರಾಳ ದಂಧೆಯನ್ನು ಬಯಲಿಗೆಳೆದಿದ್ದಾರೆ. ಮಕ್ಕಳನ್ನು ಒಂದೆಡೆ ಸೇರಿಸಿ ಮನಃಶಾಸ್ತ್ರಜ್ಞರ ಮೂಲಕ ಪ್ರಶ್ನೋತ್ತರಗಳನ್ನು ಏರ್ಪಡಿಸಿ ಮಕ್ಕಳ ಮೇಲಾದ ದೌರ್ಜನ್ಯವನ್ನು ಬಯಲಿಗೆಳೆಯಲಾಗಿದೆ.
ಚೈಲ್ಡ್ ಕೇರ್ ಸೆಂಟರ್ಗಳಲ್ಲಿ ತಂದೆ- ತಾಯಿಯಿಲ್ಲದ ಅನಾಥ ಮಕ್ಕಳು, ಕೌಟುಂಬಿಕ ಸಮಸ್ಯೆಗಳಿಂದ ಅನಾಥರಾಗಿರುವ ಮಕ್ಕಳು ಇರುತ್ತಾರೆ. ಈ ಮಕ್ಕಳನ್ನು ಜವಾಬ್ದಾರಿಯುತವಾಗಿ ಆರೈಕೆ ಮಾಡಬೇಕಾದ ಕರ್ತವ್ಯ ಈ ಚೈಲ್ಡ್ ಕೇರ್ ಸೆಂಟರ್ಗಳದ್ದು. ಆದ್ರೆ ಮಂಗಳೂರಿನ ಕೆಲ ಚೈಲ್ಡ್ ಕೇರ್ ಸೆಂಟರ್ಗಳಲ್ಲೇ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ನೇತೃತ್ವದಲ್ಲಿ ನಡೆದ ರಹಸ್ಯ ಕಾರ್ಯಾಚರಣೆಯಲ್ಲಿ ಇದು ಗೊತ್ತಾಗಿದೆ. ಮಂಗಳೂರಿನ ಉಳ್ಳಾಲದ ನೂರಾನಿ ಯತೀಂಖಾನ್ ಮತ್ತು ದಾರುಲ್ ಮಸಾಕಿನ್ ಸೆಂಟರ್ನಲ್ಲಿ 14 ವರ್ಷದ ಅಪ್ರಾಪ್ತ ಬಾಲಕನಿಗೆ ಸೆಂಟರ್ ಉಸ್ತಾದ್ ನಿಂದಲೇ ಕಿರುಕುಳ ಆಗಿದೆ. ಕಿರುಕುಳ ನೀಡಿದ ಕೋಣಾಜೆ ಮೂಲದ ಆರೋಪಿ ಉಸ್ತಾದ್ ಆಯೂಬ್ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಇದನ್ನು ಓದಿ: ನೌಕರರು ಕೆಲಸಕ್ಕೆ ಬಾರದಿದ್ದರೆ ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರ ಓಡಾಟಕ್ಕೆ ಅವಕಾಶ; ಬಿಎಂಟಿಸಿ ಎಂಡಿ ಸಿ. ಶಿಖಾ
ಚೈಲ್ಡ್ ಕೇರ್ ಸೆಂಟರ್ನಲ್ಲಿ ಈ ರೀತಿ ಕಿರುಕುಳ ನೀಡುತ್ತಿರುವ ಮಾಹಿತಿ ಪೊಲೀಸ್ ಕಮೀಷನರ್ ಅವರಿಗೆ ಬಂದಿತ್ತು. ಇದಕ್ಕಾಗಿ ಡಿ.ಸಿ.ಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು. ಅರಿವು ನೆರವು ಎಂಬ ಕೋವಿಡ್ ಸೋಂಕಿನ ಬಗ್ಗೆ ಜಾಗೃತಿ ಕಾರ್ಯಕ್ರಮದ ಹೆಸರಲ್ಲಿ ಚೈಲ್ಡ್ ಕೇರ್ ಸೆಂಟರಿನ ಮಕ್ಕಳನ್ನು ಕರೆಸಿಕೊಳ್ಳಲಾಯಿತು. ಈ ಕಾರ್ಯಾಗಾರದಲ್ಲಿ ಮನೋವೈದ್ಯರು, ಮಕ್ಕಳ ವೈದ್ಯರನ್ನು ಬಳಸಿಕೊಳ್ಳಲಾಯಿತು. ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಮಕ್ಕಳಿಂದ ಮಾಹಿತಿ ಸಂಗ್ರಹಿಸಲಾಯಿತು. ಒಂದಷ್ಟು ಪ್ರಶ್ನೋತ್ತರಗಳ ಪತ್ರಿಕೆಯನ್ನು ನೀಡಿ ಮಕ್ಕಳಿಂದ ಉತ್ತರ ಪಡೆಯಲಾಯಿತು. ಮಕ್ಕಳಿಂದ ಬಂದ ಉತ್ತರದ ಬಳಿಕ ಚೈಲ್ಡ್ ಕೇರ್ ಸೆಂಟರ್ನಲ್ಲಿ ನಡೆಯುತ್ತಿದ್ದ ಕರ್ಮಕಾಂಡಗಳು ಗೊತ್ತಾಗಿವೆ.
ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಚೈಲ್ಡ್ ಕೇರ್ ಸೆಂಟರ್ ಇದ್ದು ಸುಮಾರು 500 ಮಕ್ಕಳು ಇಲ್ಲಿದ್ದಾರೆ. ಇಡೀ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಈ ರೀತಿಯ ಸೆಂಟರ್ಗಳಿದ್ದು 1024 ಮಕ್ಕಳಿದ್ದಾರೆ. ಸದ್ಯ ಮಂಗಳೂರು ವ್ಯಾಪ್ತಿಯ ನಿಗಾ ಘಟಕಗಳ ಮಕ್ಕಳ ಪರೀಕ್ಷೆ ನಡೆಸಲಾಗಿದ್ದು,ಕಿರುಕುಳ ನೀಡುತ್ತಿದ್ದ ಸೆಂಟರ್ಗಳಿಗೆ ನೋಟಿಸ್ ನೀಡಲಾಗಿದೆ. ಒಟ್ಟಿನಲ್ಲಿ ಈ ರೀತಿಯ ಕೃತ್ಯ ನಡೆಸುತ್ತಿರುವವರು ಯಾರೇ ಆದರೂ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ