ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾದ ಗೋಣಿಕೊಪ್ಪದ ಲೋಪಮುದ್ರಾ ಆಸ್ಪತ್ರೆ!

ಸರ್ಕಾರ ನಮಗೆ ಏನು ಕೊಟ್ಟಿದೆ ಎನ್ನೋದಕ್ಕಿಂತ ನಾವು ಏನು ಕೊಟ್ಟಿದ್ದೇವೆ ಎನ್ನೋದು ಮುಖ್ಯವಾಗುತ್ತದೆ. ಅದರಲ್ಲೂ ಜನರು ಸಂಕಷ್ಟದಲ್ಲಿ ಇರುವ ಈ ಸಂದರ್ಭದಲ್ಲಿ ಜನರಿಗೆ ಒಂದಷ್ಟು ಅನುಕೂಲ ಮಾಡಬೇಕು ಎನ್ನೋದು ನಮ್ಮ ಉದ್ದೇಶ ಎನ್ನುತ್ತಿದ್ದಾರೆ ವೈದ್ಯ ಅಮೃತ್ ನಾಣಯ್ಯ.

ಗೋಣಿಕೊಪ್ಪದ ಲೋಪಮುದ್ರಾ ಆಸ್ಪತ್ರೆ.

ಗೋಣಿಕೊಪ್ಪದ ಲೋಪಮುದ್ರಾ ಆಸ್ಪತ್ರೆ.

  • Share this:
ಕೊಡಗು: ಕೋವಿಡ್ ಸೋಂಕಿತರು ಎಷ್ಟೋ ಖಾಸಗಿ ಆಸ್ಪತ್ರೆಗಳಿಗೆ ಕೇಳಿದಷ್ಟು ಹಣ ನೀಡುವ ಎಟಿಎಂಗಳು ಎನ್ನುವಂತೆ ಆಗಿದ್ದಾರೆ. ಅದರಲ್ಲೂ ಮಹಾನಗರಗಳಲ್ಲಂತು ಸೋಂಕಿತರಿಗೆ ಬೆಡ್ ಗಳು ಸಿಗದಂತೆ ಮಾಡಿ ಅದರಲ್ಲೂ ಲಕ್ಷಾಂತರ ರೂಪಾಯಿ ಹಣ ಸುಲಿಗೆ ಮಾಡಲಾಗುತ್ತಿದೆ. ಆದರೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪದಲ್ಲಿರುವ ಲೋಪಮುದ್ರಾ ಆಸ್ಪತ್ರೆ ಕೋವಿಡ್ ಸೋಂಕಿತರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ.

ಹೌದು, ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಮಿತಿಮೀರುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಾತ್ರವೇ ಕೋವಿಡ್ ಆಸ್ಪತ್ರೆ ಇದ್ದು, ಜಿಲ್ಲೆಯ ಎಲ್ಲಾ ಭಾಗಗಳ ಆರೋಗ್ಯದ ಗಂಭೀರ ಸಮಸ್ಯೆ ಎದುರಿಸುತ್ತಿರುವ ಸೋಂಕಿತರು ಇದೇ ಆಸ್ಪತ್ರೆಯನ್ನೇ ಅವಲಂಬಿಸುವಂತೆ ಆಗಿದೆ. ಅದರಲ್ಲೂ ಜಿಲ್ಲಾ ಕೇಂದ್ರ ಮಡಿಕೇರಿಯ ಈ ಆಸ್ಪತ್ರೆಗೆ ದಕ್ಷಿಣ ಕೊಡಗಿನ ಶ್ರೀಮಗಂಲ, ಕುಟ್ಟಾ ಈ ಭಾಗಗಳಿಂದ ಮಡಿಕೇರಿಗೆ ತಲುಪಬೇಕಾದರೆ ಬರೋಬ್ಬರಿ 95 ಕಿಲೋಮೀಟರ್ ಸಾಗಬೇಕು. ಇದು ಸೋಂಕಿತರಿಗೆ ತೀವ್ರ ಸಮಸ್ಯೆಯಾಗಿದೆ. ಅಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸೋಂಕಿತರ ಆರೋಗ್ಯ ಗಂಭೀರಗೊಳ್ಳುತ್ತಿದ್ದು, ಆಕ್ಸಿಜನೇಟೆಡ್ ಬೆಡ್ ಗಳ ಅಗತ್ಯ ತೀವ್ರವಾಗಿ ಕಾಡುತ್ತಿದೆ. ಇದೆಲ್ಲವನ್ನು ಗಮನಿಸಿದ ಗೋಣಿಕೊಪ್ಪದ ಲೋಪಮುದ್ರಾ ಆಸ್ಪತ್ರೆ ತನ್ನ ಕಟ್ಟಡದ ಮೂರನೇ ಮಹಡಿಯಲ್ಲಿ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ.

ಇದನ್ನು ಓದಿ: ಪಾಸಿಟಿವಿಟಿ ಇರುವ ಕಡೆ ಟೆಸ್ಟ್ ಹೆಚ್ಚಿಸಲು, ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೌಕರ್ಯ ಹೆಚ್ಚಿಸಲು ಪ್ರಧಾನಿ ಮೋದಿ ಕರೆ

30 ಬೆಡ್​ಗಳನ್ನು ಸಿದ್ಧಗೊಳಿಸಿರುವ ಲೋಪಮುದ್ರಾ ಆಸ್ಪತ್ರೆ ಅದರಲ್ಲಿ 20 ಆಕ್ಸಿಜನೇಟೆಡ್, 10 ಆಕ್ಸಿಜನ್ ಕಾನ್ಸಂಟ್ರೇಟರ್ ಮೂಲಕ ಚಿಕಿತ್ಸೆ ಕೊಡಲು ಸಿದ್ಧತೆ ಮಾಡಿಕೊಂಡಿದೆ. ಕಳೆದ ಏಳು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಲೋಪಮುದ್ರಾ ಆಸ್ಪತ್ರೆ ಮೂರು ಮಹಡಿಗಳನ್ನು ಹೊಂದಿದ್ದು, ಕೆಳಗಿನ ಎರಡು ಅಂತಸ್ತುಗಳಲ್ಲಿ ಸಾಮಾನ್ಯ ರೋಗಿಗಳಿಗೆ ಎಂದಿನಂತೆ ಚಿಕಿತ್ಸೆ ನೀಡಲಿದೆ ಎಂದು ಆಸ್ಪತ್ರೆಯ ವೈದ್ಯೆ ಸೌಮ್ಯ ನಾಣಯ್ಯ ಹೇಳಿದ್ದಾರೆ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ 30 ಬೆಡ್ ಗಳ ಕೋವಿಡ್ ಚಿಕಿತ್ಸಾ ವಿಭಾಗಕ್ಕೆ ಕೊಡಗು ಉಸ್ತುವಾರಿ ಸಚಿವ ವಿ ಸೋಮಣ್ಣ ಶನಿವಾರ ಚಾಲನೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಸದ್ಯ ಈಗಿರುವ ಸಿಬ್ಬಂದಿಗಳನ್ನು ಬಳಕೆ ಮಾಡಿಕೊಂಡು ಚಿಕಿತ್ಸೆ ನೀಡಲು ನಿರ್ಧರಿಸಿದೆ.

ಸೋಂಕಿತರ ಚಿಕಿತ್ಸೆಗೆ ಬೇಕಾಗಿರುವ 200 ಲೀಟರ್ ಸಾಮರ್ಥ್ಯದ ಜಂಬೂ ಆಕ್ಸಿಜನ್ ಟ್ಯಾಂಕನ್ನು ಖರೀದಿಸಿದೆ. ಈ ಆಕ್ಸಿಜನ್ ಸಾಕಾಗದ ಸಂದರ್ಭದಲ್ಲಿ ಅದರ ಜೊತೆಗೆ ಬೇಕಾಗಿರುವ ಆಕ್ಸಿಜನ್ ಮತ್ತು ಔಷಧಿಯನ್ನು ಸರ್ಕಾರ ಒದಗಿಸಿಕೊಡುವಂತೆ ಆಸ್ಪತ್ರೆಯ ವೈದ್ಯರಾದ ಅಮೃತ್ ನಾಣಯ್ಯ ಸಚಿವರಲ್ಲಿ ಮನವಿ ಮಾಡಿದ್ದಾರೆ. ಈ ಆಸ್ಪತ್ರೆಗೆ ದಾಖಲಾಗುವ ಸೋಂಕಿತರಿಗೆ ಉಚಿತ ಊಟದ ವ್ಯವಸ್ಥೆಯನ್ನು ಆಸ್ಪತ್ರೆಯೇ ಮಾಡಲಿದೆ. ಹೀಗೆ ಉಚಿತ ಚಿಕಿತ್ಸೆ ನೀಡಲು ಸಿದ್ಧಗೊಂಡಿರುವ ಲೋಪಮುದ್ರಾ ಆಸ್ಪತ್ರೆಯ ಸಹಾಯಕ್ಕೆ ಕರುಣಾ ಟ್ರಸ್ಟ್ ನಿಂತಿದೆ. ಅಷ್ಟಕ್ಕೂ ಹೀಗೆ ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಿರುವುದು ಏಕೆ ಎಂದರೆ, ಸರ್ಕಾರ ನಮಗೆ ಏನು ಕೊಟ್ಟಿದೆ ಎನ್ನೋದಕ್ಕಿಂತ ನಾವು ಏನು ಕೊಟ್ಟಿದ್ದೇವೆ ಎನ್ನೋದು ಮುಖ್ಯವಾಗುತ್ತದೆ. ಅದರಲ್ಲೂ ಜನರು ಸಂಕಷ್ಟದಲ್ಲಿ ಇರುವ ಈ ಸಂದರ್ಭದಲ್ಲಿ ಜನರಿಗೆ ಒಂದಷ್ಟು ಅನುಕೂಲ ಮಾಡಬೇಕು ಎನ್ನೋದು ನಮ್ಮ ಉದ್ದೇಶ ಎನ್ನುತ್ತಿದ್ದಾರೆ ವೈದ್ಯ ಅಮೃತ್ ನಾಣಯ್ಯ.
Published by:HR Ramesh
First published: