ಬೆಂಗಳೂರು (ಅಕ್ಟೋಬರ್ 21); ಮಂಗಳವಾರ ಸಂಜೆ ಎಡೆಬಿಡದೆ ಸುರಿದ ಭಾರೀ ಪ್ರಮಾಣದ ಮಳೆಗೆ ಇಡೀ ರಾಜ್ಯ ರಾಜಧಾನಿ ಬೆಂಗಳೂರು ಸ್ತಬ್ಧವಾಗಿದೆ. ನಿನ್ನೆ ಒಂದೇ ದಿನ ಸುಮಾರು 66.8 ಮಿ.ಮೀ ದಾಖಲೆಯ ಮಳೆಯಾಗಿದೆ. ಇದಲ್ಲದೆ ರಾಜ್ಯದಾದ್ಯಂತ ಹಾವೇರಿ, ಬಿಜಾಪುರ, ಧಾರವಾಡ, ಮಂಡ್ಯ, ಚಿಕ್ಕಬಳ್ಳಾಪುರ, ಬೀದರ್, ಶಿವಮೊಗ್ಗ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಹಲವೆಡೆ ಕೃಷಿಗಳು ಮಳೆಯಿಂದಾಗಿ ತಮ್ಮ ಬೆಳೆಯನ್ನು ಕಳೆದುಕೊಂಡಿದ್ದರೆ, ಇನ್ನೂ ಹಲವೆಡೆ ಜನ ಮನೆಗಳು ಕುಸಿದಿದ್ದು ಜನರ ಬದುಕು ಬೀದಿಗೆ ಬಿದ್ದಿದೆ. ಈ ನಡುವೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮುಂದಿನ ಎರಡು ದಿನ ರಾಜ್ಯದಲ್ಲಿ ಮತ್ತೊಮ್ಮೆ ಭಾರೀ ಮಳೆಯಾಗಲಿದೆ, ಬೆಂಗಳೂರಿನಲ್ಲೂ ಮಳೆ ಅಬ್ಬರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತಕ್ಕೆ ತೆಲಂಗಾಣ ಮತ್ತು ಆಂಧ್ರಪ್ರದೇಶ ಈಗಾಗಲೇ ಬೆಚ್ಚಿ ಬಿದ್ದಿದೆ. ಕಳೆದ 10 ದಿನಗಳಿಂದ ಸುರಿಯುತ್ತಿರುವ ಇತಿಹಾಸ ಕಾಣದ ಮಳೆಗೆ ಪ್ರವಾಹ ಸೃಷ್ಟಿಯಾಗಿದ್ದು, ಅನೇಕ ಜನ ಪ್ರವಾಹದಿಂದಾಗಿ ಮೃತಪಟ್ಟಿದ್ದಾರೆ. ಇನ್ನೂ ಅನೇಕರು ಮನೆಮಠ-ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.
ಈ ಮಳೆಯಿಂದಾಗಿ ಎಷ್ಟು ನಷ್ಟ ಉಂಟಾಗಿದೆ ಎಂದು ಈವರೆಗೆ ಅಂದಾಜಿಸಿಲ್ಲ. ಆದರೆ, ಕನಿಷ್ಟ 50 ಸಾವಿರ ಕೋಟಿ ನಷ್ಟವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ತೆಲಂಗಾಣಕ್ಕೆ 15 ಕೋಟಿ ದೇಣಿಗೆ ನೀಡಿ ಗಮನ ಸೆಳೆದಿದ್ದರು.
ಇದನ್ನೂ ಓದಿ : ನ್ಯಾಯಾಧೀಶರಿಗೆ ಹುಸಿ ಬಾಂಬ್ ಪತ್ರ ಪ್ರಕರಣದ ಹಿಂದಿನ ಅಸಲಿಯತ್ತು ಏನು ಗೊತ್ತಾ?
ಆಂಧ್ರಪ್ರದೇಶದ ಮತ್ತು ತೆಲಂಗಾಣಕ್ಕೆ ಕಂಟಕವಾಗಿರುವ ಇದೇ ಬಂಗಾಳ ಕೊಲ್ಲಿಯ ವಾಯಭಾರ ಕುಸಿತ ಇದೀಗ ಕರ್ನಾಟಕಕ್ಕೂ ಎಚ್ಚರಿಕೆ ನೀಡುತ್ತಿದೆ. ರಾಜ್ಯದಲ್ಲಿ ಈಗಾಗಲೇ ಎಲ್ಲಾ ಬೆಳೆಗಳು ಕೈಸೇರುವ ಹಂತದಲ್ಲಿದೆ. ಆದರೆ, ಬೆಳೆಗಳ ಕಟಾವು ಸಂದರ್ಭದಲ್ಲಿ ಹೀಗೆ ಮಳೆಯಾಗುತ್ತಿರುವುದರಿಂದ ರೈತರ ತುಂಬಾ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ, ಮುಂದಿನ ಎರಡು ದಿನ ಮತ್ತೆ ಮಳೆಯಾಗುವ ಸೂಚನೆ ನೀಡಲಾಗಿದ್ದು, ರೈತರು ದಾರಿ ಕಾಣದಂತಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ