ನೌಕರರು ಕೆಲಸಕ್ಕೆ‌ ಬಾರದಿದ್ದರೆ ಖಾಸಗಿ ಬಸ್​ಗಳಲ್ಲಿ ಪ್ರಯಾಣಿಕರ ಓಡಾಟಕ್ಕೆ ಅವಕಾಶ; ಬಿಎಂಟಿಸಿ ಎಂಡಿ ಸಿ. ಶಿಖಾ

ಇನ್ನು ನಾಳಿನ ಮುಷ್ಕರದ ಬಿಸಿ ಇಂದು ಮಧ್ಯಾಹ್ನದಿಂದಲೇ ಪ್ರಾರಂ‌ಭವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಸೆಕೆಂಡ್ ಶಿಫ್ಟ್​ ನೌಕರರು ಕೆಲಸಕ್ಕೆ ಬಾರದ ಕಾರಣ ನಿಲ್ದಾಣಗಳು ಬಸ್​ ಇಲ್ಲದೆ ಖಾಲಿಖಾಲಿಯಾಗಿವೆ. ಬಸ್​ಗಳು ಬಾರದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ.

ಬೆಂಗಳೂರು ಸಾರಿಗೆ ಸಂಸ್ಥೆ

ಬೆಂಗಳೂರು ಸಾರಿಗೆ ಸಂಸ್ಥೆ

 • Share this:
  ಬೆಂಗಳೂರು: ಆರನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ನಾಳೆಯಿಂದ ಮತ್ತೊಮ್ಮೆ ಅನಿರ್ದಿಷ್ಟಾವಧಿ ಧರಣಿಗೆ ಕರೆ ನೀಡಿದ್ದಾರೆ. ಸಾರಿಗೆ ನೌಕರರ ಮುಷ್ಕರ ಸರ್ಕಾರಕ್ಕೆ ಮತ್ತೆ ತಲೆನೋವಾಗಿ ಪರಿಣಮಿಸಿದ್ದು, ಮುಷ್ಕರ ಕೈಬಿಡುವಂತೆ ಸರ್ಕಾರ ಹಾಗೂ ಸಾರಿಗೆ ಸಂಸ್ಥೆಗಳು ಮನವಿ ಮಾಡುತ್ತಿವೆ. ಈ ಸಂಬಂಧ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಬಿಎಂಟಿಸಿ ಎಂಡಿ ಸಿ. ಶಿಶಾ ಅವರು ಮುಷ್ಕರ ಕೈ ಬಿಡುವಂತೆ ನೌಕರರಿಗೆ ಮನವಿ ಮಾಡಿದ್ದಾರೆ.

  ಬಿಎಂಟಿಸಿ ಈಗಾಗಲೇ ನಷ್ಟದಲ್ಲಿದೆ. ಕೋವಿಡ್​ಗೂ ಮೊದಲು ನಿತ್ಯ 5 ಕೋಟಿ ಗಳಿಕೆ ಆಗ್ತಾ ಇತ್ತು. ಆದರೆ ಈಗ 2.5 ಕೋಟಿ ಮಾತ್ರ ನಿತ್ಯ ಬಿಎಂಟಿಸಿಯಿಂದ ಆದಾಯ ಆಗುತ್ತಿದೆ. ಸಾರಿಗೆ ನೌಕರರ 8-9 ಬೇಡಿಕೆಗಳ ಕುರಿತಾಗಿ ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಸದ್ಯ ಕೋವಿಡ್ ಪ್ರೋಟೋಕಾಲ್ ಇರುವುದರಿಂದ ನಿರ್ಧಾರ ಆಗಿಲ್ಲ. ಮುಂದಿನ ದಿನಗಳಲ್ಲಿ ಬೇಡಿಕೆಗಳನ್ನು ಈಡೇರಿಸುವ ವಿಶ್ವಾಸವನ್ನು ಸರ್ಕಾರ ನೀಡಿದೆ ಎಂದು ಸಿ. ಶಿಖಾ ಹೇಳಿದರು.

  ಸಾರಿಗೆ ಇಲಾಖೆ ಈಗಾಗಲೇ ಖಾಸಗಿ ಬಸ್ ಗಳ ಮಾಲೀಕರ ಜೊತೆ ಮಾತುಕತೆ ಮಾಡ್ತಾ ಇದೆ. ಒಂದು ವೇಳೆ ಬಿಎಂಟಿಸಿ ನೌಕರರು‌ ಬಂದಿಲ್ಲ ಅಂದ್ರೆ ಖಾಸಗಿ ಬಸ್ ಗಳಲ್ಲಿ ಪ್ರಯಾಣಿಕರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುವುದು. ನಾಳೆ ನೌಕರರು ಹಾಜರಾಗಿಲ್ಲ ಅಂದ್ರೆ ದಿನದ ಸಂಬಳ ಕಡಿತ ಆಗುತ್ತದೆ. ಮತ್ತೆ ಮತ್ತೆ ಸರ್ಕಾರ ನಿಯಮ ಉಲ್ಲಂಘನೆ ಮಾಡಿದರೆ ಎಸ್ಮಾ ಜಾರಿಯಾಗಲಿದೆ. ಇಂದು ಸೆಕೆಂಡ್ ಶಿಫ್ಟ್ ನೌಕರರು‌ ಕೆಲಸಕ್ಕೆ ಹಾಜರಾಗಿಲ್ಲ ಎಂಬ ಮಾಹಿತಿ ಬಂದಿದೆ. ಅದರ ಬಗ್ಗೆ ಅಧಿಕಾರಿಗಳಿಗೆ ಈಗಾಗಲೇ ಮಾತನಾಡಲು ಸೂಚನೆ ನೀಡಲಾಗಿದೆ. ನಗರದ ಪ್ರಯಾಣಿಕರಿಗೆ ದಯವಿಟ್ಟು ತೊಂದರೆಯಾಗದಂತೆ ನೌಕರರು ಕೆಲಸಕ್ಕೆ ಹಾಜರಾಗಿ ಎಂದು ಶಿಖಾ ಅವರು ನ್ಯೂಸ್ 18 ಮೂಲಕ ನೌಕರರಿಗೆ ಮನವಿ ಮಾಡಿದರು.

  ಇದನ್ನು ಓದಿ: ನಾಳಿನ ಸಾರಿಗೆ ಮುಷ್ಕರಕ್ಕೆ ಈಗಿನಿಂದಲೇ ಬಿಸಿ; ಮಧ್ಯಾಹ್ನದ ಬಳಿಕ ಬಹುತೇಕ ಓಡಾಟ ನಿಲ್ಲಿಸಿದ ಬಸ್​ಗಳು

  ಸಾರಿಗೆ ನೌಕರರು ಮತ್ತು ಸರ್ಕಾರದ ಮಧ್ಯೆ ತಿಕ್ಕಾಟ ಮುಂದುವರಿದಿದೆ. ಸರ್ಕಾರದ ಭರವಸೆಗಳ ನಡುವೆಯೂ ನಾಳೆ ಮುಷ್ಕರಕ್ಕೆ ಸಜ್ಜಾಗಿರುವ ಸಾರಿಗೆ ನೌಕರರ ವಿರುದ್ಧ ಸರ್ಕಾರವೂ ತೊಡೆತಟ್ಟಿ ನಿಂತಿದೆ. ನಾಳೆ ಮುಷ್ಕರ ನಡೆಸಲು ನೌಕರರು ಹಠ ತೊಟ್ಟರೆ ಸರ್ಕಾರ ಎಸ್ಮಾ ಜಾರಿಗೂ ಸಜ್ಜಾಗಿದೆ ಎಂದು ಮೂಲಗಳು ಹೇಳುತ್ತಿವೆ. ಸಾರಿಗೆ ನೌಕರರ ಒಂಬತ್ತು ಪ್ರಮುಖ ಬೇಡಿಕೆಗಳ ಪೈಕಿ ಆರನೇ ವೇತನ ಆಯೋಗದ ವರದಿ ಜಾರಿಯ ಬೇಡಿಕೆಯನ್ನು ಮಾತ್ರ ಈಡೇರಿಸಲು ಸಾಧ್ಯ ಇಲ್ಲ ಎಂದು ಸರ್ಕಾರ ಬಹಳ ಸ್ಪಷ್ಟವಾಗಿ ಹೇಳಿದೆ. ಆರನೇ ವೇತನ ಜಾರಿ ಬದಲು ಸಾರಿಗೆ ನೌಕರರಿಗೆ ಶೇ. 8ರಷ್ಟು ಸಂಬಳ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಆದರೆ, ವೇತನ ಹೆಚ್ಚಳ ಬೇಕಾಗಿಲ್ಲ. ತಮಗೆ ಆರನೇ ವೇತನ ಆಯೋಗ ಜಾರಿಯೇ ಆಗಬೇಕು ಎಂಬುದು ಸಾರಿಗೆ ನೌಕರರ ಸಂಘದ ಹಠ. ಹೀಗಾಗಿ, ಬುಧವಾರ ಮುಷ್ಕರ ನಡೆಸಿಯೇ ತೀರುತ್ತೇವೆ ಎಂದು ನೌಕರರು ಹಠ ತೊಟ್ಟಿದ್ದಾರೆ.

  ಇನ್ನು ನಾಳಿನ ಮುಷ್ಕರದ ಬಿಸಿ ಇಂದು ಮಧ್ಯಾಹ್ನದಿಂದಲೇ ಪ್ರಾರಂ‌ಭವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಸೆಕೆಂಡ್ ಶಿಫ್ಟ್​ ನೌಕರರು ಕೆಲಸಕ್ಕೆ ಬಾರದ ಕಾರಣ ನಿಲ್ದಾಣಗಳು ಬಸ್​ ಇಲ್ಲದೆ ಖಾಲಿಖಾಲಿಯಾಗಿವೆ. ಬಸ್​ಗಳು ಬಾರದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ. ಬಸ್ ಕೊರತೆ ಇರುವುದರಿಂದ ಇರುವ ಬಸ್​ಗಳಲ್ಲೇ ಪ್ರಯಾಣ ಮಾಡಿ ಸಹಕರಿಸುವಂತೆ ಮೈಕ್ ಮೂಲಕ ಬಿಎಂಟಿಸಿ ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.
  Published by:HR Ramesh
  First published: