ಬೆಂಗಳೂರು (ನವೆಂಬರ್ 17): ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಮಾಜಿ ಮೇಯರ್ ಸಂಪತ್ ರಾಜ್ ಬಂಧನವಾಗಿದೆ.. ಇಷ್ಟು ದಿನ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಸಂಪತ್ ರಾಜ್ನನ್ನು ಸಿಸಿಬಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಸಿಸಿಬಿ ಕಾರ್ಯಾಚರಣೆ ಇಂಚಿಂಚೂ ಮಾಹಿತಿಯನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ.
ಸಿಸಿಬಿ ಕೈಗೆ ಸಿಕ್ಕಿ ಬಿದ್ದಿದ್ದ ರಿಯಾಜುದ್ದೀನ್ ಸಂಪತ್ ರಾಜ್ ಬಗ್ಗೆ ಕೆಲವಷ್ಟು ಮಾಹಿತಿ ನೀಡಿದ್ದ. ಸಂಪತ್ ರಾಜ್ ಪುಲಿಕೇಶಿನಗರದ ಸ್ನೇಹಿತರ ಮನೆಗೆ ಬರಬಹುದು ಎಂದು ತಿಳಿಸಿದ್ದ. ರಿಯಾಜುದ್ದೀನ್ ನೀಡಿದ ಮಾಹಿತಿ ಆಧರಿಸಿ ಸೋಮವಾರ ಪುಲಿಕೇಶಿನಗರದಲ್ಲಿ 20 ಸಿಸಿಬಿ ಪೊಲೀಸರು ಮಫ್ತಿಯಲ್ಲಿ ತಿರುಗಾಡುತ್ತಿದ್ದರು. ಅನುಮಾನದ ಮೇಲೆ ಇಡೀ ದಿನ ಮನೆಯ ಸುತ್ತಮುತ್ತ ಪೊಲೀಸರು ಓಡಾಟ ನಡೆಸಿದ್ದರು. ಕೆಲವು ತಾಂತ್ರಿಕ ದಾಖಲೆ ಆಧರಿಸಿ ಸಂಪತ್ ರಾಜ್ ಗೆಳೆಯನ ಮನೆಯಲ್ಲಿ ಇರುವುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. 9:45 ಕ್ಕೆ ಎಸಿಪಿ ವೇಣುಗೋಪಾಲ್ ಪುಲಿಕೇಶಿನಗರ ಸಂಪತ್ ರಾಜ್ ಸ್ನೇಹಿತನ ಮನೆ ಬಳಿ ಆಗಮಿಸಿದ್ದರು. ರಾತ್ರಿ 10 ಗಂಟೆಗೆ ಸರಿಯಾಗಿ ಸಂಪತ್ ರಾಜ್ನನ್ನು ಪೊಲೀಸರು ಬಂಧಿಸಿದ್ದಾರೆ.
ಸಂಪತ್ ರಾಜ್ ಬಂಧಿಸದಿದ್ದರೆ ಇತ್ತು ಸಂಕಷ್ಟ:
ಸಂಪತ್ ರಾಜ್ ಬಂಧನ ಆಗದೆ ಇದ್ದರೆ ಎಸಿಪಿ ಹಾಗೂ ಇನ್ಸ್ಪೆಕ್ಟರ್ಗೆ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿತ್ತು. ನಿನ್ನೆಯ ಸಭೆಯಲ್ಲಿ ಒಂದು ದಿನದಲ್ಲಿ ಸಂಪತ್ ರಾಜ್ ಬಂಧನ ಆಗಬೇಕು. ಇಲ್ಲದಿದ್ದರೆ ಎಸಿಪಿ ಹಾಗೂ ಇನ್ಸ್ಪೆಕ್ಟರ್ನ ಸಸ್ಪೆಂಡ್ ಆಗುತ್ತಾರೆ ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದರು. ಈ ವೇಳೆ ಎರಡು ದಿನ ಕಾಲಾವಕಾಶ ಕೊಡುವಂತೆ ಸಿಸಿಬಿ ಮುಖ್ಯಸ್ಥರು ಕೇಳಿದ್ದರು. ಹೀಗಾಗಿ, ನಿನ್ನೆ ಶತಾಯಗತಾಯ ಬಂಧನ ಮಾಡಲೇಬೇಕು ಎನ್ನುವ ತೀರ್ಮಾನಕ್ಕೆ ಸಿಸಿಬಿ ಪೊಲೀಸರು ಬಂದಿದ್ದರು. ಅದರಂತೆ ನಿನ್ನೆ ಬಂಧನ ಮಾಡಲಾಗಿದೆ.
ಕಳೆದ 10 ದಿನಗಳಿಂದ ಸಂಪತ್ ರಾಜ್ ಸ್ನೇಹಿತನ ಮನೆಯಲ್ಲೇ ಉಳಿದುಕೊಂಡಿದ್ದ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮನೆಯಲ್ಲಿಯೇ ಮಾಜಿ ಮೇಯರ್ ಉಳಿದಿದ್ದ. ಸಿಕ್ಕಿ ಬೀಳುವ ಭಯದಿಂದ ಹೊರಗಡೆ ಬರುತ್ತಿರಲಿಲ್ಲ ಮತ್ತು ಯಾರೊಂದಿಗೂ ದೂರವಾಣಿ ಮೂಲಕ ಮಾತನಾಡುತ್ತಿರಲಿಲ್ಲ. ಹೀಗಾಗಿ ಸಂಪತ್ ರಾಜ್ ಬೆಂಗಳೂರಿನಲ್ಲಿ ಇರುವುದ ಹೌದೋ ಅಥವಾ ಇಲ್ಲವೋ ಎನ್ನುವ ಅನುಮಾನ ಕಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ