ರಾಜಕೀಯ ನೆಲೆ ಬದಲಿಸಿ ರಾತ್ರೋರಾತ್ರಿ ವಿಮಾನವೇರಿದ ಮುಂಬೈವೀರ ಸುಧಾಕರ್‌; ಕುಮಾರಸ್ವಾಮಿ ವಾಗ್ದಾಳಿ

ಕಳೆದ ಎರಡು ದಶಕಗಳಿಂದ ಡಾ|ಸುಧಾಕರ್ ಅವರು ಯಾವ್ಯಾವ ನಾಯಕರಿಗೆ ಎಂತೆಂಥ ಸೇವೆಗಳನ್ನು ಮಾಡಿದ್ದಾರೆ ಎಂಬ ಹಿನ್ನೆಲೆ ಬಗೆಗೆ ನಾನು ಮಾತನಾಡಲಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಪರೋಕ್ಷವಾಗಿ ಸಚಿವರ ಕಾಲೆಳೆದಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ

ಹೆಚ್.ಡಿ. ಕುಮಾರಸ್ವಾಮಿ

 • Share this:
  ಬೆಂಗಳೂರು (ಆಗಸ್ಟ್‌ 31); ರಾಜಕೀಯ ನೆಲೆ ಬದಲಿಸಿ ರಾತ್ರೋರಾತ್ರಿ ವಿಮಾನವೇರಿ ಓಡಾಡಿದ ಮುಂಬೈವೀರ ಡಾ| ಸುಧಾಕರ್‌ ಕಳೆದ ಎರಡು ದಶಕಗಳಿಂದ ಯಾವ್ಯಾವ ನಾಯಕರಿಗೆ ಎಂತೆಂಥ ಸೇವೆಗಳನ್ನು ಮಾಡಿದ್ದಾರೆ ಎಂಬ ಹಿನ್ನೆಲೆ ಬಗೆಗೆ ನಾನು ಮಾತನಾಡಲಾರೆ. ಆದರೆ, ಇಂಥವರು ನನ್ನ ಹಿನ್ನೆಲೆ ಬಗ್ಗೆ ಮಾತನಾಡಿದರೆ ರಾಜ್ಯದ ಜನ ನಗುತ್ತಾರೆ ಎಂದು ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

  ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ಡ್ರಗ್ಸ್‌ ದಂಧೆ ಇದೀಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಡಾ|ಸುಧಾಕರ್‌ ಹೆಚ್‌.ಡಿ. ಕುಮಾರಸ್ವಾಮಿ ಹಿನ್ನೆಲೆಯನ್ನು ಉಲ್ಲೇಖಿಸಿ ಕಿಡಿಕಾರಿದ್ದಾರು.  ಸಚಿವ ಸುಧಾಕರ್‌ ಮಾತಿಗೆ ಸರಣಿ ಟ್ವೀಟ್‌ ಮೂಲಕ ತಿರುಗೇಟು ನೀಡಿರುವ ಕುಮಾರಸ್ವಾಮಿ, "ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ನನ್ನ ಹಿನ್ನೆಲೆ ಬಗೆಗೆ ಮಾತನಾಡಿದ್ದಾರೆ. ಬಹುಶಃ ಸುಧಾಕರ್ ಅವರಿಗೆ ಸ್ಮರಣಶಕ್ತಿ ಕಡಿಮೆ ಇದ್ದಂತಿದೆ. ರಾಜಕೀಯವಾಗಿ ಈಗಾಗಲೇ ಎಷ್ಟು ನೆಲೆಗಳನ್ನು ಬದಲಾಯಿಸಿ ರಾತ್ರೋರಾತ್ರಿ ವಿಮಾನ ಬದಲಿಸಿ ಓಡಾಡಿ ಬಂದವರು ನನ್ನ ಹಿನ್ನೆಲೆ ಬಗೆಗೆ ಮಾತನಾಡಿದರೆ ರಾಜ್ಯದ ಜನತೆ ನಗುತ್ತಾರೆ.  ಬಿಜೆಪಿ ಸಿದ್ಧಾಂತದ ಬಗ್ಗೆ ಮಾತನಾಡುವಷ್ಟು ಅರ್ಹತೆ ಸುಧಾಕರ್ ಅವರಿಗೆ ಬಂದಿದೆಯೇ ಎಂಬುದನ್ನು ಅವರ ಪಕ್ಷದ ಕಾರ್ಯಕರ್ತರು ಕೂಡ ಒಪ್ಪುವುದಿಲ್ಲ. ಡ್ರಗ್ಸ್ ಮಾಫಿಯಾ, ಬೆಟ್ಟಿಂಗ್ ದಂಧೆ ಮಾಡುವವರಿಂದ ವಸೂಲಿ ಮಾಡಿದ ಹಣದಿಂದಲೇ ನನ್ನ ಸರ್ಕಾರವನ್ನು ಬುಡಮೇಲು ಮಾಡಲಾಯಿತು ಎಂಬುದು ಸೂರ್ಯ-ಚಂದ್ರರಷ್ಟೇ ಸ್ಪಷ್ಟ. ಇದನ್ನು ಮುಂಬೈವೀರರು ಚೆನ್ನಾಗಿಯೇ ಬಲ್ಲರು. ಅದಕ್ಕೆ ಸಚಿವ ಸುಧಾಕರ್ ಹೊರತಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.  ಮತ್ತೊಂದು ಟ್ವೀಟ್‌ನಲ್ಲಿ, "ಸಚಿವ ಸ್ಥಾನ ಸಿಕ್ಕಿದೆ ಎಂಬ ಉತ್ಸಾಹದಲ್ಲಿ ನನ್ನ ಹಿನ್ನೆಲೆ-ಮುನ್ನೆಲೆ ಬಗೆಗೆ ಮಾತನಾಡುವುದು ಸುಧಾಕರ್ ಅವರ ನೈಜ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಅಧಿಕಾರ ಶಾಶ್ವತ ಮತ್ತು ತಮ್ಮ ಸ್ವಂತ ಶಕ್ತಿ ಎಂಬ ಭ್ರಮೆಯಲ್ಲಿ ಇರುವವರು ಮಾತ್ರ ಹೀಗೆ ಮಾತನಾಡುತ್ತಾರೆ ಎಂಬುದು ನನ್ನ ಗ್ರಹಿಕೆ.

  ಕಳೆದ ಎರಡು ದಶಕಗಳಿಂದ ಸುಧಾಕರ್ ಅವರು ಯಾವ್ಯಾವ ನಾಯಕರಿಗೆ ಎಂತೆಂಥ ಸೇವೆಗಳನ್ನು ಮಾಡಿದ್ದಾರೆ ಎಂಬ ಹಿನ್ನೆಲೆ ಬಗೆಗೆ ನಾನು ಮಾತನಾಡಲಾರೆ.

  ಜನಸೇವೆಯಲ್ಲಿ ವಿಶ್ವಾಸವಿಟ್ಟು ರಚ‌ನೆಗೊಂಡ ಸರಕಾರವೊಂದು ಮಾಫಿಯಾದ ಹಣದಿಂದ ಹೇಗೆ ಬುಡಮೇಲಾಯಿತು ಎಂಬುದಷ್ಟನ್ನೇ ಜನತೆಯ ಮುಂದೆ ಹೇಳಿದ್ದೇನೆ. ಆದರೆ ಸಚಿವ ಸುಧಾಕರ್ ಹೆಗಲು ಮುಟ್ಟಿಕೊಳ್ಳುವ ಪ್ರಮೇಯ ಉದ್ಭವಿಸಿದ್ದು ಏಕೆಂದು ಅರ್ಥವಾಗಲಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಇದಲ್ಲದೆ, ವಚನದ ಮೂಲಕವೂ ಸಚಿವರ ಕಾಲೆಳೆದಿರುವ ಕುಮಾರಸ್ವಾಮಿ, "ಕೆಸರಲ್ಲಿ ಬಿದ್ದ ಪಶುವಿನಂತೆ ಅನು ದೆಸೆದೆಸೆಗೆ ಬಾಯ ಬಿಡುತ್ತಿದ್ದೇನೆ. ಅಯ್ಯಾ, ಆರೈವವರಿಲ್ಲ, ಅಕಟಕಟ ಪಶುವೆಂದೆನ್ನ ಕೂಡಲಸಂಗಮದೇವ ಕೊಂಬ ಹಿಡಿದೆತ್ತುವನ್ನಕ್ಕ" ಎಂದು ತಮ್ಮ ಖಾಸಗಿ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
  Published by:MAshok Kumar
  First published: