ಗುಜರಾತ್ (ಜುಲೈ 15); ಇತ್ತೀಚಿನ ದಿನಗಳಲ್ಲಿ ದೇಶದೆಲ್ಲೆಡೆ ದಲಿತ ಮತ್ತು ಬುಡಕಟ್ಟು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾತ್ತಲೇ ಇದೆ. ಅಲ್ಲದೆ ಮಹಿಳೆಯರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡುತ್ತಿರುವ ಪ್ರಕರಣಗಳೂ ಅಲ್ಲಲ್ಲಿ ಕಂಡು ಬರುತ್ತಿದೆ. ಗುಜರಾತ್ನಲ್ಲೂ ಸಹ ಇಂತಹದ್ದೇ ಒಂದು ಪ್ರಕರಣ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಗುಜರಾತ್ನ ದಾಹೋದ್ ಜಿಲ್ಲೆಯ ಹಳ್ಳಿಯೊಂದರಲ್ಲಿ 23 ವರ್ಷದ ಬುಡಕಟ್ಟು ಮಹಿಳೆಯೊಬ್ಬರ ಮೇಲೆ ಆಕೆಯ ಪತಿ ಮತ್ತು ಇತರ ಕೆಲವು ಗ್ರಾಮಸ್ಥರು ಹಲ್ಲೆ ನಡೆಸಿ, ಬೆತ್ತಲೆಗೊಳಿಸಿ ಹಳ್ಳಿಯಲ್ಲಿ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ಸಂತ್ರಸ್ತ ಮಹಿಳೆಯ ಪತಿ ಮತ್ತು ಇತರ 18 ಮಂದಿ ಗ್ರಾಮಸ್ಥರ ವಿರುದ್ಧ ದೂರು ದಾಖಲಾಗಿದ್ದು, 19 ಜನರನ್ನು ಬಂಧಿಸಲಾಗಿದೆ. ಜುಲೈ 6 ರಂದು ಬುಡಕಟ್ಟು ಪ್ರಾಬಲ್ಯದ ಖಜುರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ ತಿಂಗಳ ಆರಂಭದಲ್ಲಿ ನಡೆದ ಘಟನೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಸಬ್ ಇನ್ಸ್ಪೆಕ್ಟರ್ ಬಿಎಂ ಪಟೇಲ್ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವೀಡಿಯೊದಲ್ಲಿ, ಮಹಿಳೆಯ ಪತಿ, ಇತರ ಪುರುಷರು, ಅವರ ಸಂಬಂಧಿಕರು ಸಾರ್ವಜನಿಕವಾಗಿ ಮಹಿಳೆಯನ್ನು ಎಳೆದುಕೊಂಡು ಹೋಗುವುದು, ಹೊಡೆಯುವುದು ಕಂಡುಬರುತ್ತದೆ ಎಂದು ಸಬ್ ಇನ್ಸ್ಪೆಕ್ಟರ್ ಬಿಎಂ ಪಟೇಲ್ ತಿಳಿಸಿದ್ದಾರೆ. ಮಹಿಳೆಗೆ ತನ್ನ ಗಂಡನನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆಯುವ ಶಿಕ್ಷೆಯನ್ನು ಸಹ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೊದಲ್ಲಿ ಇತರ ಮಹಿಳೆಯರು ಸಂತ್ರಸ್ತೆಗೆ ಬಟ್ಟೆಗಳನ್ನು ನೀಡಲು ಬಂದಾಗ, ಆಕೆಯ ಪತಿ ಬಟ್ಟೆಯನ್ನು ಕಸಿದುಕೊಳ್ಳುವುದನ್ನು ಕಾಣಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆ ಇತ್ತೀಚೆಗೆ ಇನ್ನೊಬ್ಬ ಪುರುಷನೊಂದಿಗೆ ಓಡಿಹೋಗಿದ್ದಳು ಎಂದು ಆರೋಪಿಸಲಾಗಿದೆ. ಆಕೆಯ ಪತಿ ಮತ್ತು ಇತರ ಗ್ರಾಮಸ್ಥರು ಆಕೆಯನ್ನು ಪತ್ತೆ ಹಚ್ಚಿ ಹಳ್ಳಿಗೆ ಕರೆತಂದಿದ್ದಾರೆ. ಜುಲೈ 6 ರಂದು ಆಕೆಗೆ ಅಮಾನವೀಯವಾಗಿ ಶಿಕ್ಷೆ ನೀಡಲಾಗಿದೆ. ವೀಡಿಯೊದಲ್ಲಿ ನೋಡಿದ ಎಲ್ಲ ಆರೋಪಿಗಳನ್ನು ನಾವು ಬಂಧಿಸಿದ್ದೇವೆ ಎಂದು ಪಟೇಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಡ್ರೋನ್ ಉತ್ಪಾದನೆ ಮತ್ತು ಹಾರಾಟಕ್ಕೆ ಸಂಬಂಧಿಸಿ ಹೊಸ ಕರಡು ನಿಯಮ ಹೊರಡಿಸಿದ ಕೇಂದ್ರ ಸರ್ಕಾರ
ಭಾರತೀಯ ದಂಡ ಸಂಹಿತೆಯಡಿ ಗಲಭೆ, ಹಲ್ಲೆ, ಕ್ರಿಮಿನಲ್ ಬೆದರಿಕೆ, ಮಹಿಳೆಗೆ ಅವಮಾನಿಸಿದ ಆರೋಪ ಮತ್ತು ಘಟನೆಯ ವಿಡಿಯೋ ಚಿತ್ರೀಕರಣ ಮತ್ತು ಪ್ರಸಾರಕ್ಕಾಗಿ ಐಟಿ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ