ಬಾಗಲಕೋಟೆ: ಶಾಲಾ ಮಕ್ಕಳಿಗೆ ವಸತಿ ಸೌಲಭ್ಯ ನೀಡದೆ ಮುಖ್ಯ ಶಿಕ್ಷಕಿ ದರ್ಬಾರ್​​

ಪ್ರಭಾರಿ ಮುಖ್ಯ ಶಿಕ್ಷಕಿ, ಪ್ರತಿ ತಿಂಗಳು ವಿದ್ಯಾರ್ಥಿನಿಯರಿಗೆ ಕೊಡಬೇಕಾದ ಸಾಮಾಗ್ರಿಗಳನ್ನು ಖರೀದಿಸಿ ತಮ್ಮ ಮನೆಯಲ್ಲೇ ಇಟ್ಟುಕೊಂಡಿರುತ್ತಾರೆ. ಶಾಲಾ ರಜಾವಧಿಯಲ್ಲೂ ಮಕ್ಕಳಿಗೆ ಸಾಮಾಗ್ರಿ ಕೊಡಲಾಗಿದೆ ಎಂದು ಬಿಲ್ ಪಡೆದು ವಂಚಿಸುತ್ತಿದ್ದಾರೆ. ಸಾಮಾಗ್ರಿ ಖರೀದಿ ಬಿಲ್ ಹಾಗೂ ವಿತರಣಾ ವಹಿ ಕೇಳಿದರೆ ಪ್ರಭಾರಿ ಮುಖ್ಯ ಶಿಕ್ಷಕಿ ಭುವನೇಶ್ವರಿ, ದಾಖಲೆಗಳನ್ನು ಲೆಕ್ಕ ತಪಾಸಣೆಗೆಂದು ಕಳುಹಿಸಲಾಗಿದೆ ಅಂತ ಸಬೂಬು ಹೇಳುತ್ತಿದ್ದಾರಂತೆ.

news18-kannada
Updated:February 15, 2020, 9:02 PM IST
ಬಾಗಲಕೋಟೆ: ಶಾಲಾ ಮಕ್ಕಳಿಗೆ ವಸತಿ ಸೌಲಭ್ಯ ನೀಡದೆ ಮುಖ್ಯ ಶಿಕ್ಷಕಿ ದರ್ಬಾರ್​​
ಕಸ್ತೂರ್ ಬಾ ಗಾಂಧಿ ಬಾಲಿಕಾ ವಿದ್ಯಾಲಯ
  • Share this:
ಬಾಗಲಕೋಟೆ (ಫೆ,15): ಸರ್ಕಾರ ಬಡ ಹೆಣ್ಣು ಮಕ್ಕಳು ಶಿಕ್ಷಣ ವಂಚಿತರಾಗಬಾರದು ಎಂದು ಕಸ್ತೂರ್​​​ ಬಾ ಗಾಂಧಿ ಬಾಲಿಕಾ ವಿದ್ಯಾಲಯ ತೆರೆದಿದೆ.  ಹೆಣ್ಣು ಮಕ್ಕಳಿಗಾಗಿಯೇ ವಸತಿ ಸೌಲಭ್ಯ ಮತ್ತು ಕಲಿಕಾ ಸಾಮಾಗ್ರಿ ವಿತರಿಸಲು ಲಕ್ಷಾಂತರ ರೂಪಾಯಿ ಬಿಡುಗಡೆ ಮಾಡಿದೆ. ಆದರೆ, ಬಾಗಲಕೋಟೆಯಲ್ಲಿ ಪ್ರಭಾರಿ ಮುಖ್ಯ ಶಿಕ್ಷಕಿಯೊಬ್ಬರು ಶಾಲಾ ಮಕ್ಕಳಿಗೆ ಸರ್ಕಾರದ ಸೌಲಭ್ಯ ನೀಡದೆ ವಂಚಿಸುತ್ತಿದ್ದಾಳೆ. ಹೀಗಾಗಿ ಹೆಣ್ಣುಮಕ್ಕಳು ಅತಂತ್ರ ಸ್ಥಿತಿಯಲ್ಲಿದ್ಧಾರೆ.

ಬಾಗಲಕೋಟೆ ಜಿಲ್ಲೆಯ ಕದಾಂಪೂರ ಪುನರ್ವಸತಿ ಕೇಂದ್ರದಲ್ಲಿರುವ ಕಸ್ತೂರ್ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ 6,7 ಮತ್ತು 8ನೇ ತರಗತಿಯವರೆಗೆ ಒಟ್ಟು 150 ಹೆಣ್ಣು ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. 6ನೇ ತರಗತಿ ವಿದ್ಯಾರ್ಥಿನಿಯರು ಡೆಸ್ಕ್ ಇಲ್ಲದೆ ನೆಲದ ಮೇಲೆ ಕುಳಿತು ಕಲಿಯುತ್ತಿದ್ದು, 7 ಹಾಗೂ 8ನೇ ತರಗತಿ ವಿದ್ಯಾರ್ಥಿನಿಯರಿಗೆ ಡೆಸ್ಕ್ ಸೌಲಭ್ಯವಿದೆ.

ಸರ್ಕಾರ ಇಂತಹ ಶಾಲೆಗಳಿಗೆಂದೇ ಕಲಿಕಾ ಸಾಮಾಗ್ರಿ, ವಸತಿ ಶಾಲೆ ವಿದ್ಯಾರ್ಥಿನೀಯರಿಗೆ ದಿನಬಳಕೆ ವಸ್ತುಗಳನ್ನು ಕೊಡಲು ಲಕ್ಷಾಂತರ ರೂಪಾಯಿ ಹಣ ಬಿಡುಗಡೆ ಮಾಡಿದೆ. ಆದರೆ ಇಲ್ಲಿರುವ ಮಕ್ಕಳ ಗೋಳು ಮಾತ್ರ ಹೇಳತೀರದು. ಯಾಕೆಂದರೆ  ಇಲ್ಲಿರುವ ವಿದ್ಯಾರ್ಥಿನಿಯರನ್ನ ಕೇಳಿದರೆ ಸರ್ಕಾರದ ಸೌಲಭ್ಯಗಳು ತಮಗೆ ಸೂಕ್ತವಾಗಿ ಸಿಗುತ್ತಿಲ್ಲ ಅನ್ನುವ ಮಾತು ಕೇಳಿ ಬರುತ್ತಿವೆ.ವಿದ್ಯಾರ್ಥಿನಿಯರ ಸ್ಕೂಲ್ ಬ್ಯಾಗ್, ಶೂ, ಸಾಕ್ಸ್  ಕಿತ್ತು ಹೋಗಿವೆ. ವಸತಿ ಶಾಲಾ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ಪ್ರತಿ ವಿದ್ಯಾರ್ಥಿಗೆ ಎರಡು ಮೈಗೆ ಹಚ್ಚುವ ಸೋಪ್, ಎರಡು ಬಟ್ಟೆ ತೊಳೆಯಲು ಸೋಪ್, ಟೂತ್ ಪೇಸ್ಟ್, ಕೊಡಲು ಸರ್ಕಾರ ಅನುದಾನ ನೀಡಿದೆ. ಆದರೆ ಪ್ರಭಾರಿ ಮುಖ್ಯ ಶಿಕ್ಷಕಿ ಭುವನೇಶ್ವರಿ ಕಡಿಮೆ ಬೆಲೆಗೆ ಸಾಮಾಗ್ರಿ ಖರೀದಿಸಿ, ಹೆಚ್ಚು ಬಿಲ್ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಸರಿಯಾಗಿ ಸಾಮಾಗ್ರಿ ಕೊಡುತ್ತಿಲ್ಲ.  ಗುಣಮಟ್ಟದ ಆಹಾರವು ನೀಡುತ್ತಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ವಿದ್ಯಾರ್ಥಿನಿಯರು.ಇನ್ನು ಪ್ರಭಾರಿ ಮುಖ್ಯ ಶಿಕ್ಷಕಿ ಶಾಲಾ ಅಭಿವೃದ್ದಿ ನೆಪದಲ್ಲಿ ಮಕ್ಕಳ ಪಾಲಕರಿಂದ ಹಣವನ್ನ ಪೀಕಿದ್ದಾರೆ ಅನ್ನುವ ದೂರುಗಳ ಪತ್ರ ವಿದ್ಯಾರ್ಥಿನಿಯರು ಮೇಲಾಧಿಕಾರಿಗಳಿಗೆ ಬರೆದಿದ್ದಾರೆ. ಇನ್ನು ಕಸ್ತೂರ್ ಬಾ ಗಾಂಧಿ ವಸತಿ ಶಾಲೆಯಲ್ಲಿ ಮಕ್ಕಳು ತಮ್ಮ ಗೋಳನ್ನು ಯಾರಿಗೂ ಹೇಳಿಕೊಳ್ಳಲಾಗದೆ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ‌.

ಪ್ರಭಾರಿ ಮುಖ್ಯ ಶಿಕ್ಷಕಿ, ಪ್ರತಿ ತಿಂಗಳು ವಿದ್ಯಾರ್ಥಿನಿಯರಿಗೆ ಕೊಡಬೇಕಾದ ಸಾಮಾಗ್ರಿಗಳನ್ನು ಖರೀದಿಸಿ ತಮ್ಮ ಮನೆಯಲ್ಲೇ ಇಟ್ಟುಕೊಂಡಿರುತ್ತಾರೆ. ಶಾಲಾ ರಜಾವದಿಯಲ್ಲೂ ಮಕ್ಕಳಿಗೆ ಸಾಮಾಗ್ರಿ ಕೊಡಲಾಗಿದೆ ಎಂದು ಬಿಲ್ ಪಡೆದು ವಂಚಿಸುತ್ತಿದ್ದಾರೆ. ಸಾಮಾಗ್ರಿ ಖರೀದಿಸಿರುವ ಬಿಲ್ ಹಾಗೂ ವಿತರಣಾ ದಾಖಲೆಯ ಬಗ್ಗೆ ಕೇಳಿದರೆ  ಪ್ರಭಾರಿ ಮುಖ್ಯ ಶಿಕ್ಷಕಿ ಭುವನೇಶ್ವರಿ, ದಾಖಲೆಗಳನ್ನು ಲೆಕ್ಕ ತಪಾಸಣೆಗೆಂದು ಕಳುಹಿಸಲಾಗಿದೆ ಎಂದು ಹೇಳುತ್ತಿದ್ದಾರಂತೆ.

ಇನ್ನು ಬಾಗಲಕೋಟೆ ಜಿಲ್ಲೆ ಡಿಡಿಪಿಐಗೂ ಈ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಕಚೇರಿಯ ಲೆಕ್ಕ ಅಧೀಕ್ಷಕರ ನೇತೃತ್ವದಲ್ಲಿ ತನಿಖೆಗೆ ಸೂಚಿಸಲಾಗಿದ್ದು, ತನಿಖೆ ವೇಳೆ ತಪ್ಪು ಕಂಡು ಬಂದರೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಅಂತಿದ್ದಾರೆ ಡಿಡಿಪಿಐ ಶ್ರೀಶೈಲ ಬಿರಾದಾರ.

ನಾನು ಸರ್ಕಾರಿ ನಿಯಮದಂತೆ ಮಕ್ಕಳಿಗೆ ಸಾಮಾಗ್ರಿ ವಿತರಿಸಿದ್ದೇನೆ, ಯಾವುದೇ ತನಿಖೆಗೂ ಸಿದ್ದವೆನ್ನುತ್ತಿದ್ದಾರೆ ಆರೋಪ ಹೊತ್ತಿರುವ ಪ್ರಭಾರಿ ಮುಖ್ಯ ಶಿಕ್ಷಕಿ ಭುವನೇಶ್ವರಿ.

ಮುಖ್ಯ ಶಿಕ್ಷಕಿ ಭುವನೇಶ್ವರಿ.


ಒಟ್ಟಿನಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಅನ್ನುವಂತಾಗಿದೆ ಇಲ್ಲಿನ ಮಕ್ಕಳ ಸ್ಥಿತಿ. ಸರ್ಕಾರ ಹೆಣ್ಣು ಮಕ್ಕಳ ಕಲಿಕೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದರು ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಯರಿಗೆ ಸೂಕ್ತವಾಗಿ ಕೊಡದೆ ವಂಚಿಸುತ್ತಿರುವುದು  ಮಾತ್ರ ವಿಪರ್ಯಾಸ. ಈ ಬಗ್ಗೆ ಶೀಘ್ರವೇ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮಕೈಗೊಂಡು, ವಿದ್ಯಾರ್ಥಿನೀಯರಿಗೆ ನ್ಯಾಯಯುತ ಸೌಲಭ್ಯಗಳನ್ನು ಕೊಡಬೇಕಿದೆ.

(ವರದಿ: ರಾಚಪ್ಪ  ಬನ್ನಿದಿನ್ನಿ)
First published: February 15, 2020, 9:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading