Corona Fear| ಕೊರೋನಾ ಸೋಂಕಿನ ಭಯ, ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ!

ಪೊಲೀಸರು ಬಾಗಿಲು ಮುರಿದು ಮನೆಯೊಳಗೆ ಬಂದಾಗ, ಈ ನಾಲ್ವರೂ ನೆಲದ ಮೇಲೆ ನಿರ್ಜೀವವಾಗಿ ಮಲಗಿರುವುದನ್ನು ನೋಡಿದ್ದಾರೆ. ಜೊತೆಗೆ ಮನೆಯಲ್ಲಿ ಆತ್ಮಹತ್ಯೆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕರ್ನೂಲ್; ಭಾರತದಲ್ಲಿ ಕೊರೋನಾ ವೈರಸ್​ ಮೊದಲ ಮತ್ತು ಎರಡನೇ ಅಲೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಸಾವಿರಾರು ಜನ ಈ ಸೋಂಕಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಹಲವರು ತಮ್ಮವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಆದರೆ, ಹೀಗೆ ಕೊರೋನಾ ಸೋಂಕಿನಿಂದ ಮೃತಪಟ್ಟವರು ಪ್ರಕರಣಗಳು ಒಂದೆಡೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದರೆ, ಹಲವರು ಸೋಂಕಿನ ಭಯಕ್ಕೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕೊರೋನಾ ಸೋಂಕಿನ ಭಯಕ್ಕೆ ದೇಶದಾದ್ಯಂತ ಹಲವರು ಆತ್ಮಹತ್ಯೆಗೆ ಶರಣಾಗಿರುವ ಸುದ್ದಿಯನ್ನು ನಾವು ಈಗಾಗಲೇ ಕೇಳಿದ್ದೇವೆ. ಆದರೆ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ಕು ಜನ ತಾವೂ ಸಹ ಕೊರೋನಾ ಸೋಂಕಿಗೆ ಒಳಗಾಗಬಹುದೆಂಬ ಭಯದಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ.

  ಮೃತರನ್ನು ಪ್ರತಾಪ್ (42), ಅವರ ಪತ್ನಿ ಹೇಮಲತಾ (36), ಮಗ ಜಯಂತ್ (17) ಮತ್ತು ಮಗಳು ರಿಶಿತಾ (14) ಎಂದು ಗುರುತಿಸಲಾಗಿದೆ. ಕುಟುಂಬದ ಮುಖ್ಯಸ್ಥ ಪ್ರತಾಪ್ ಟಿವಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಮಗ ಜಯಂತ್ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಮಗಳು ರಿಶಿತಾ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿದ್ದರು ಎನ್ನಲಾಗುತ್ತಿದೆ.

  ಬುಧವಾರ (ಜೂನ್ 23) ಬೆಳಿಗ್ಗೆಯಿಂದಲೇ ಮನೆಯಿಂದ ಯಾರೂ ಹೊರಬರದಿದ್ದಾಗ, ಅಕ್ಕ-ಪಕ್ಕದವರು ಮನೆಯ ಬಳಿ ಹೋಗಿ ಬಾಗಿಲು ತಟ್ಟಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  ಪೊಲೀಸರು ಬಾಗಿಲು ಮುರಿದು ಮನೆಯೊಳಗೆ ಬಂದಾಗ, ಈ ನಾಲ್ವರೂ ನೆಲದ ಮೇಲೆ ನಿರ್ಜೀವವಾಗಿ ಮಲಗಿರುವುದನ್ನು ನೋಡಿದ್ದಾರೆ. ಜೊತೆಗೆ ಮನೆಯಲ್ಲಿ ಆತ್ಮಹತ್ಯೆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  ಇದನ್ನೂ ಓದಿ: UP Assembly Election| ಮತ್ತೆ ಯೋಗಿ ಆದಿತ್ಯನಾಥ್​ ನಾಯಕತ್ವದಲ್ಲೇ ವಿಧಾನಸಭೆ ಚುನಾವಣೆಗೆ ಹೋಗಲಿದೆ ಉತ್ತರಪ್ರದೇಶ ಬಿಜೆಪಿ

  ಮೃತರು ತಮ್ಮ ಆತ್ಮಹತ್ಯೆಯ ಬಗ್ಗೆ ಡೆತ್​ನೋಟ್ ಬರೆದಿದ್ದು, ಆ ಡೆತ್ ನೋಟ್‌ನಲ್ಲಿ "ಕೊರೋನಾ ಕಾರಣದಿಂದಾಗಿ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಸಾವುಗಳ ಬಗ್ಗೆ ಕೇಳಿ ಕೇಳಿ ಒತ್ತಡಕ್ಕೆ ಒಳಗಾಗಿದ್ದೇವೆ. ನಮಗೂ ಕೊರೋನಾ ಸೋಂಕು ಬರಬಹುದು ಎಂಬ ಅತಂಕವಿದೆ. ಹೀಗಾಗಿ ನಾವು ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ" ಎಂದು ಬರೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: