Karnataka Politics: ರಾಜ್ಯ ಬಿಜೆಪಿಯಲ್ಲಿ ಒಳಗೊಳಗೇ ಇರುವ ಅಸಮಾಧಾನಗಳು ನಿಧಾನಕ್ಕೆ ಹೊರಬೀಳುತ್ತಿರುವಂತೆ ಕಾಣುತ್ತಿದೆ. ಇಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಸುದ್ದಿಗೋಷ್ಟಿ ನಡೆಸಿದ್ದು ಈ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾನು ನಿನ್ನೆ ಅರುಣ್ ಸಿಂಗ್ ಭೇಟಿ ಮಾಡಿದ್ದೆ, ಪಕ್ಷದ ರಾಜಕಾರಣ, ಆಡಳಿತ, ವ್ಯವಸ್ಥೆ ಬಗ್ಗೆ ಸವಿಸ್ತಾರವಾಗಿ ನಿವೇದನೆ ಮಾಡಿಕೊಂಡಿದ್ದೇನೆ ಎಂದು ಮಾತು ಆರಂಭಿಸಿದರು ಎಚ್ ವಿಶ್ವನಾಥ್. ಇದೇ ರೀತಿ ಆಡಳಿತ ನಡೆಸಿದರೆ ದುರಂತ ಅನುಭವಿಸಬೇಕಾಗುತ್ತದೆ, 2024ರ ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರುತ್ತದೆ. ಸರ್ಕಾರದಿಂದ ಆಗುತ್ತಿರುವ ಅನಾಹುತ ತಪ್ಪಿಸಬೇಕು. ಸಾರ್ವಜನಿಕವಾಗಿ ಕುಸಿಯುತ್ತಿರುವ ಚಿಕಿತ್ಸೆ ನೀಡಬೇಕು. ನಾಯಕತ್ವ ವಿಚಾರವೇ ಅತ್ಯಂತ ಮುಖ್ಯ, ಯಡಿಯೂರಪ್ಪ ಸಿಎಂ ಆಗಲೂ ನಮ್ಮ ಪಾತ್ರವೂ ಇದೆ ಎಂದರು.
ಬಿಜೆಪಿ ಎಂಎಲ್‌ಸಿಯಾಗಿ ನಾನು ಸತ್ಯವನ್ನು ಹೇಳಬೇಕು. ಇಲ್ಲವಾದರೆ ಪಕ್ಷಕ್ಕೆ ವಂಚನೆ, ದ್ರೋಹ ಮಾಡಿದಂತೆ ಆಗುತ್ತದೆ. ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಜೆ ಮಾರಕವಾದದ್ದು. ಇಲ್ಲಿಯೂ ಕುಟುಂಬ ಭ್ರಷ್ಟಾಚಾರ, ಕುಟುಂಬ ರಾಜಕಾರಣ ನಿಲ್ಲಬೇಕು ಎಂದು ಬಿಎಸ್ ವೈ ಮತ್ತವರ ಕುಟುಂಬ ಆಡಳಿತದಲ್ಲಿ ಮಾಡುವ ಹಸ್ತಕ್ಷೇಪದ ಕುರಿತಾಗಿ ಹೇಳಿದರು. ಬಹುಪರಾಕ್ ಹಾಕುವ ಮನುಷ್ಯ ನಾನಲ್ಲ, ಏನು ಹೇಳಬೇಕು ಅದು ಹೇಳಿದ್ದೇನೆ ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡರು. ನಮ್ಮ ಪಕ್ಷದಲ್ಲಿ ಲಕ್ಷ್ಮಣ ರೇಖೆ ಇದೆ, 75 ವರ್ಷ ಮೀರಿದವರಿಗೆ ಆಡಳಿತ ವೇಗ ಆಗುವುದಿಲ್ಲ. ವಯಸ್ಸು, ಆರೋಗ್ಯದಿಂದ ಯಡಿಯೂರಪ್ಪ ಬಳಲಿದ್ದಾರೆ, ಯಡಿಯೂರಪ್ಪ ಅವರಿಗೆ ಶಕ್ತಿ ಇತ್ತು. ಆದರೆ ಇವತ್ತು ಅವರಿಗೆ ಶಕ್ತಿ ಈಗ ಇಲ್ಲ ಎಂದು ಎಚ್ ವಿಶ್ವನಾಥ್ ನೇರವಾಗಿ ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಯ 21,470 ಕೋಟಿ ರೂ. ಕಾಮಗಾರಿ ವಿಚಾರವಾಗಿಯೂ ಮಾಜಿ ಸಚಿವರು ಮಾತನಾಡಿದರು. ಇದು ವಿಜಯೇಂದ್ರ ಮಾಡುತ್ತಿರುವ ಹಸ್ತಕ್ಷೇಪ, ಹಣವಿಲ್ಲದೇ ಯೋಜನೆಗೆ ಮೊತ್ತ ನಿಗದಿ ಆಗಿದೆ. ಕಿಕ್ ಬ್ಯಾಕ್ ಪಡೆದು ಹೋಗುವ ಪ್ಲ್ತಾನ್ ವಿಜಯೇಂದ್ರನದ್ದು ಎಂದು ನೇರ ಆರೋಪ ಮಾಡಿದರು. ಈ ಯೋಜನೆಗೆ ಹಣಕಾಸು ಇಲಾಖೆಯ ಅನುಮತಿ ಇಲ್ಲ, ಬೋರ್ಡ್ ಮೀಟಿಂಗ್ ಕೂಡ ಮಾಡಿಲ್ಲ. ಮಕ್ಕಳಿಂದಲೇ ಯಡಿಯೂರಪ್ಪ ಜೈಲಿಗೆ ಹೋಗಿದ್ದಾರೆ, ಈಗ ಮತ್ತೊಮ್ಮೆ ಜೈಲಿಗೆ ಹೋಗುವ ಆತಂಕ ನಮ್ಮದು ಎಂದು ಹೆಚ್.ವಿಶ್ವನಾಥ್ ಹೇಳಿದರು.
ನಾವು ಬಂದಮೇಲೆ ತಾನೆ ಬಹುಮತ ಬಂದಿದ್ದು, ಈಶ್ವರಪ್ಪನವರೇ ಇಷ್ಟು ಸಣ್ಣ ವಿಷಯ ಅರ್ಥ ಆಗಲ್ವೇ? ಇದು ಕೂಡ ಕುಟುಂಬ ರಾಜಕಾರಣದ ಗಿರಾಕಿ…ಈಶ್ವರಪ್ಪ ಯಾಕೆ ರಾಜ್ಯಪಾಲರ ಬಳಿ ಹೋಗಿದ್ಯಾಕೆ? ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ದೂರು ನೀಡಿಲ್ವಾ? ಈ ವಿಷಯ ಈಗ ಚರ್ಚೆಯಾಗುವುದಿಲ್ಲ, ಹೇಳುವಂತ ಧೈರ್ಯ ಯಾರಿಗೂ ಇಲ್ಲ ಎಂದು ಎಚ್ ವಿಶ್ವನಾಥ್ ನೇರ ಆರೋಪಗಳನ್ನು ಮಾಡಿದ್ರು. ನಾನು ಮಂತ್ರಿಗಿರಿ ಎಲ್ಲ ನೋಡಿ ಬಂದವನು ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ