ಬೆಂಗಳೂರು : ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ನಾಂದಿಯಾಡಿದೆ. ದಂಧೆ ಬಯಲಿಗೆಳೆದ ಸಂಸದ ತೇಜಸ್ವಿಸೂರ್ಯ ಕೇವಲ ಒಂದು ಕೋಮಿನ 17 ಜನರನ್ನು ಮಾತ್ರ ಉಲ್ಲೇಖಿಸಿರುವುದು ಹಾಗೂ ಪ್ರಕರಣದಲ್ಲಿ ಬಿಜೆಪಿ ಶಾಸಕರ ಕೈವಾಡ ಇರುವ ಬಗ್ಗೆ ಕಾಂಗ್ರೆಸ್ ಕಿಡಿಕಾರಿದೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು. ತೇಜಸ್ವಿ ಸೂರ್ಯ ಓದಿಕೊಂಡಿರುವವನು ಒಳ್ಳೆಯ ಕೆಲಸ ಮಾಡಿದ್ದಾನೆ ಎಂದುಕೊಂಡಿದ್ದೆ. ಆತ ಅಮಾವಾಸ್ಯೆ ಗಿರಾಕಿ. ಸಿಎಂ ಬಿ.ಎಸ್.ಯಡಿಯೂರಪ್ಪ ಎಳೆಸನ್ನು ಕರೆದುಕೊಂಡು ಬಂದು ಇಟ್ಟುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
‘ಕಮ್ಯೂನಲ್ ಹ್ಯಾಂಗಲ್ ಕೊಡೋರನ್ನು ಬಂಧಿಸಿ’
ಬೆಡ್ ಬ್ಲಾಕಿಂಗ್ ಪ್ರಕರಣಕ್ಕೆ ಯಾರು ಕಮ್ಯೂನಲ್ ಹ್ಯಾಂಗಲ್ ಕೊಡುತ್ತಿದ್ದಾರೆ ಅವರನ್ನು ಬಂಧಿಸಬೇಕು. ಸಚಿವ ಆರ್. ಅಶೋಕ್ ಉತ್ತರ ಕೊಡದೆ ಓಡಿ ಹೋಗುತ್ತಿದ್ದಾರೆ. ಉಳಿದ ಸಚಿವರು ಏನು ಮಾಡುತ್ತಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಬರೀ ಮುಸ್ಲಿಂ ಹೆಸರುಗಳನ್ನು ಓದುತ್ತಾನೆ. ಮುಸ್ಲಿಮರು ನನ್ನ ಸಹೋದರರು, ಅವರ ಜೊತೆ ನಾವು ಜೀವಿಸುತ್ತೇವೆ, ಸಾಯುತ್ತವೆ. ಮುಸ್ಲಿಮರು ಮಾಂಸ ಕಡಿಯಲಿಲ್ಲ ಅಂದರೆ ನಾವು ಮಾಂಸ ತಿನ್ನಲ್ಲ. ಅವರು ಪಂಚರ್ ಹಾಕಿಲ್ಲ ಅಂದ್ರೆ ಗಾಡಿ ಮುಂದಕ್ಕೆ ಹೋಗಲ್ಲ. ತೇಜಸ್ವಿ ಸೂರ್ಯ ಅವರ ಮನೆಯವರು ಗಾಡಿ ರಿಪೇರಿ ಮಾಡಿಸಲ್ವಾ ಎಂದು ಡಿಕೆಶಿ ಪ್ರಶ್ನಿಸಿದರು.
‘ಅವರು ಪಂಕ್ಚರ್ ಹಾಕದಿದ್ದರೆ ಗಾಡಿ ಓಡುತ್ತಾ?’
ಬೆಡ್ ಬ್ಲಾಕಿಂಗ್ ದಂಧೆ ವಿಚಾರದಲ್ಲಿ ಸಂಸದರು, ಶಾಸಕರು ಮಾಡಿದ ಕೆಲಸ ನೋಡಿ ನನಗೆ ಸಂತೋಷವಾಗಿತ್ತು, ಆದರೆ ಅವರು ಕೇವಲ ಮುಸ್ಲಿಮರನ್ನು ಟಾರ್ಗೆಟ್ ಮಾಡಿದ್ದಾರೆ. ಅವರಿಗೆ ಸಂವಿಧಾನದ ಅರಿವೇ ಇಲ್ಲ. ಒಳ್ಳೆ ಎಳೆಸನ್ನ ಕರೆದುಕೊಂಡು ಬಂದು ಯಡಿಯೂರಪ್ಪನವರು ಇಟ್ಕೊಂಡಿದ್ದಾರೆ. ಮುಸ್ಲಿಮರನ್ನು ಮೊದಲು ಪಂಕ್ಚರ್ ಹಾಕುವವರು ಎಂದಿದ್ದರು. ಬೆಂಗಳೂರು ಟೆರರಿಸ್ಟ್ ಹಬ್ ಎಂದರು. ಈಗ ಏನ್ ಮಾಡ್ತಾ ಇದ್ದಾರೆ. ಇವ್ರೆನ್ನೆಲ್ಲಾ ವಿದ್ಯಾವಂತರು ಅಂದುಕೊಂಡಿದ್ದೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.
‘ರಮೇಶ್ ಜಾರಕಿಗೊಳಿ ಕೇಸ್ ಏನಾಯ್ತು?’
ಈಗ ಪ್ರಕರಣವನ್ನು ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್ಗೆ ನೀಡಿದ್ದಾರೆ. ನನಗೆ ಸಂದೀಪ್ ಪಾಟೀಲ್ ಸೇರಿ ಯಾವ ಅಧಿಕಾರ ಮೇಲೂ ನಂಬಿಕೆ ಇಲ್ಲ. ಮುಖರ್ಜಿ ಮೇಲೂ ಇಲ್ಲ, ಅನುಚೇತ್ ಮೇಲೂ ಇಲ್ಲ. ರಮೇಶ್ ಜಾರಕಿಹೊಳಿ ಕೇಸ್ ಆಗಿ ಒಂದೂವರೆ ತಿಂಗಳಾಯ್ತು ಏನ್ ಮಾಡ್ತಾ ಇದ್ದಿರಿ ಎಂದು ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳೆ ಈ ಕಡೆ ನೋಡಿ. ನಿಮ್ಮ ಶಾಸಕರು ಮಂತ್ರಿಗಳು ಕೋಮವಾದ ಪ್ರೇರಪಣೆ ಮಾಡ್ತಾ ಇದ್ದಾರೆ. ಇದಕ್ಕೆಲ್ಲ ಯಾರು ಹೊಣೆ ಕೂಡಲೇ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು.
‘ಸಿಎಂ ಯಡಿಯೂರಪ್ಪಗೆ ಇದು ಒಳ್ಳೆ ಚಾನ್ಸ್’
ಬೆಡ್ ಬ್ಲಾಕಿಂಗ್ ಹಗರಣ ಯಾರಿದ್ದರೂ ಅವರೆಲ್ಲರನ್ನೂ ಬಂಧಿಸಿ. ಅವರು ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಬಂಧಿಸಿ. 205 ಜನರನ್ನು ಬಂಧಿಸಿ ನೋಡೋಣ ಎಂದು ಸವಾಲೆಸೆದರು. ಬಿಜೆಪಿಯ ಶಾಸಕರೇ ಬೆಡ್ ಬ್ಲಾಕಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ಲೀಡರ್ಸ್ ಗಳನ್ನು ಬಂಧಿಸಬೇಕು. ಯಡಿಯೂರಪ್ಪ ಅವರಿಗೆ ಒಳ್ಳೆಯ ಅವಕಾಶ. ಕೊನೆ ಸಂದರ್ಭದಲ್ಲಿ ಕೆಟ್ಟು ಹೆಸರು ತೆಗೆದುಕೊಳ್ಳೊದು ಬೇಕಾ ಎಂದರು.
‘ಸರ್ಕಾರಿ ಆಸ್ಪತ್ರೆಗೆ ಹೋದವರು ವಾಪಸ್ ಬರ್ತಿಲ್ಲ!’
ಖಾಸಗಿ ಆಸ್ಪತ್ರೆಗೆ ಹೋದವರು ಬರ್ತಾ ಇದ್ದಾರೆ. ಸಿಎಂ ಮೂರು ದಿನಕ್ಕೆ ಕೊರೋನಾದಿಂದ ಮುಕ್ತರಾಗಿ ಬರ್ತಾರೆ. ನಾನು ಕೊರೋನಾದಿಂದ ಮುಕ್ತವಾಗಿ ಬಂದಿದ್ದೀನಿ. ಆದ್ರೆ ಸರ್ಕಾರಿ ಅಸ್ಪತ್ರೆ ಗೆ ಹೋದವರು ಸಾಯ್ತಾ ಇದ್ದಾರೆ ಎಂದು ಸರ್ಕಾರಿ ಆಸ್ಪತ್ರೆಗಳ ಮೇಲೆ ಡಿಕೆಶಿ ಗಂಭೀರ ಆರೋಪ ಮಾಡಿದರು. ಇನ್ನು ಚಾಮರಾಜನಗರ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಸಾವನ್ನಪ್ಪಿದ ಪ್ರಕರಣದ ತನಿಖೆಗೆ ಹೈಕೋರ್ಟ್ ಇಬ್ಬರು ನಿವೃತ್ತ ನ್ಯಾಯಾಧೀಶರನ್ನ ನೇಮಕ ಮಾಡಲಾಗಿದೆ. ಬಹುಷ ಇವತ್ತು ನಮಗೆಲ್ಲಾ ನ್ಯಾಯಾಲಯದ ಮೇಲೆ ವಿಶ್ವಾಸ ಹೆಚ್ಚಾಗುತ್ತಿದೆ. ಇದಕ್ಕೆ ರಾಜ್ಯದ ಜನರಪರವಾಗಿ ನಾನು ಉನ್ನತ ನ್ಯಾಯಪೀಠಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ