HOME » NEWS » Uncategorized » BHAGALAKOTE HORTICULTURE VV 10TH CONVOCATION HELD TODAY RHHSN RBK

ತೋಟಗಾರಿಕೆ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿ; ಬಾಗಲಕೋಟೆ ತೋಟಗಾರಿಕೆ ವಿವಿ ಘಟಿಕೋತ್ಸವದಲ್ಲಿ ಶ್ಲಾಘನೆ

14 ಚಿನ್ನದ ಪದಕ ಪಡೆದ ಪ್ರಶಾಂತ ಮಾತನಾಡಿ, ನಾನು ಮೂಲತಃ ರೈತ ಕುಟುಂಬದವನಾಗಿದ್ದು, ತಮ್ಮದೇಯಾದ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಕೃಷಿ ವಿಜ್ಞಾನಿಯಾಗಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದರು.

news18-kannada
Updated:April 6, 2021, 8:48 PM IST
ತೋಟಗಾರಿಕೆ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿ; ಬಾಗಲಕೋಟೆ ತೋಟಗಾರಿಕೆ ವಿವಿ ಘಟಿಕೋತ್ಸವದಲ್ಲಿ ಶ್ಲಾಘನೆ
ಬಾಗಲಕೋಟೆ ತೋಟಗಾರಿಕೆ ವಿವಿ ಘಟಿಕೋತ್ಸವದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು.
  • Share this:
ಬಾಗಲಕೋಟೆ (ಏ. 06): ತೋಟಗಾರಿಕಾ ಬೆಳೆಗಳ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದೆ ಎಂದು ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಮಹಾನಿರ್ದೇಶಕ ಡಾ.ತ್ರಿಲೋಚನ್ ಮೊಹಾಪಾತ್ರ ಹೇಳಿದರು. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿಂದು ಜರುಗಿದ ವಿವಿಯ 10ನೇ ಘಟಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆನ್‍ಲೈನ್ ಮೂಲಕ ಭಾಗವಹಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ 2,156.73 ಸಾವಿರ ಹೆಕ್ಟೇರ್ ವ್ಯಾಪ್ತಿ ಹೊಂದಿದ್ದು, ವಿಸ್ತೀರ್ಣದಲ್ಲಿ 2ನೇ ಸ್ಥಾನದಲ್ಲಿದೆ. 19,184.06 ಸಾವಿರ ಮಿಲಿಯನ್ ಟನ್‍ನಷ್ಟು ಉತ್ಪಾದನೆ ಇದ್ದು, 8ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ತೋಟಗಾರಿಕೆ ವಿಸ್ತರಣೆಯ ವ್ಯಾಪ್ತಿ ಮಹತ್ವದ್ದಾಗಿದೆ. ಇದಕ್ಕಾಗಿ ಒಣ ಭೂಮಿಯಲ್ಲಿ ಮತ್ತು ತ್ಯಾಜ್ಯ ಭೂಮಿಯಲ್ಲಿ ತೋಟಗಾರಿಕೆಯ ಸಾಮರ್ಥ್ಯವನ್ನು ಅನ್ವೇಷಿಸಿ ಅಭಿವೃದ್ಧಿಪಡಿಸಬೇಕಾಗಿದೆ ಎಂದು ತಿಳಿಸಿದರು.

ತೋಟಗಾರಿಕೆಯು ಕರ್ನಾಟಕ ಉದಯೋನ್ಮುಖ ವಲಯಗಳಲ್ಲಿ ಪ್ರಮುಖ ಕ್ಷೇತ್ರವಾಗಿದ್ದು, ರಾಜ್ಯದ ಸುಮಾರು 23 ಲಕ್ಷ ಕುಟುಂಬಗಳು ಇದರಲ್ಲಿ ತೊಡಗಿಕೊಂಡಿವೆ. ತೋಟಗಾರಿಕೆಯು ಸುಮಾರು 21.5 ಲಕ್ಷ ಹೆಕ್ಟೇರ್ ಪ್ರದೇಶವನ್ನು ಹೊಂದಿದ್ದು, 191.84 ಲಕ್ಷ ಟನ್ ತೋಟಗಾರಿಕಾ ಉತ್ಪನ್ನಗಳನ್ನು ಉತ್ಪಾದಿಸಿದೆ. ತೋಟಗಾರಿಕೆ ಉತ್ಪಾದನೆಯು ವರ್ಷವಿಡೀ ರೈತರನ್ನು ವಿಸ್ತೃತ ಉದ್ಯೋಗದಲ್ಲಿ ತೊಡಗಿಸುತ್ತದೆ. ವರ್ಷದುದ್ದಕ್ಕೂ ಆದಾಯದ ಮೂಲವಾಗಿದೆ ಎಂದು ತಿಳಿಸಿದರು.

ಭಾರತವು ಕೃಷಿ ಉತ್ಪನ್ನಗಳ ರಫ್ತಿನಲ್ಲಿ 7ನೇ ಸ್ಥಾನದಲ್ಲಿದ್ದು, ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. ತೋಟಗಾರಿಕೆ ಬೆಳೆಗಳಾದ ಬಾಳೆಹಣ್ಣು ಮತ್ತು ಮಾವಿನೊಂದಿಗೆ ತಾಜಾ ತರಕಾರಿಗಳಾದ ಈರುಳ್ಳಿ, ಬಟಾಣಿ ಮತ್ತು ಆಲೂಗಡ್ಡೆಗಳ ರಫ್ತು ವೃದ್ದಿಸಿದೆ. ಅದೇ ರೀತಿ ಮಸಾಲೆಗಳು ಮತ್ತು ಹೂವುಗಳ ರಫ್ತು ಹೆಚ್ಚಿಸಿ ವಿದೇಶಿ ವಿನಿಮಯವನ್ನು ದ್ವಿಗುಣಗೊಳಿಸುವ ಭರವಸೆಯನ್ನು ಮೂಡಿಸಿದೆ. ಭಾರತವು ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಪ್ರಮುಖ ದೇಶವಾಗಿ ಹೊರಹೊಮ್ಮಿದ್ದು, ಕೃಷಿ ಆರ್ಥಿಕತೆಯಲ್ಲಿ ತೋಟಗಾರಿಕೆಯ ಪಾಲು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ತಿಳಿಸಿದರು.

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ದೇಶದ 6 ವಿಶೇಷ ವಿಶ್ವವಿದ್ಯಾಲಯಗಳಲ್ಲಿ 3ನೇ ತೋಟಗಾರಿಕೆ ವಿಶ್ವವಿದ್ಯಾಲಯವಾಗಿದೆ. ತೋಟಗಾರಿಕೆ ಅಭಿವೃದ್ಧಿಯಲ್ಲಿ ಕರ್ನಾಟಕ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಬಹಳ ಹಿಂದೆಯೇ ತೋಟಗಾರಿಕೆ ನಿರ್ದೇಶನಾಲಯ ಸ್ಥಾಪನೆ ಮತ್ತು ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆ ವಿಜ್ಞಾನಕ್ಕೆ ಬೆಂಬಲ ನೀಡಿರುವುದು ಸ್ಪಷ್ಟವಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ರಾಜ್ಯದ ತೋಟಗಾರಿಕೆಯ ಪ್ರಗತಿಗೆ ದೊಡ್ಡ ಉತ್ತೇಜನ ನೀಡಿದೆ. ಭಾರತದಲ್ಲಿಯೇ ತೋಟಪಟ್ಟಿ ಬೆಳೆಗಳ ವಿಸ್ತೀರ್ಣದಲ್ಲಿ ಮೊದಲನೇ ಮತ್ತು ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಸಮಗ್ರವಾದ ಸಂಶೋಧನೆ ಮತ್ತು ಅಭಿವೃದ್ದಿಯು ತೋಟಗಾರಿಕೆ ಕ್ಷೇತ್ರದಲ್ಲಿ ಉತ್ಪಾದಕತೆ, ಉತ್ತಮ ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಪ್ರಮುಖವಾಗಿದೆ. ತೋಟಗಾರಿಕೆಯಲ್ಲಿ ಸಾರ್ವಜನಿಕ ಸಂಶೋಧನೆಗೆ ಕರ್ನಾಟಕ ರಾಜ್ಯವು ಹೆಚ್ಚಿನ ಬೆಂಬಲವನ್ನು ನೀಡುತ್ತಿದೆ. ರಾಜ್ಯದಲ್ಲಿ ತೋಟಗಾರಿಕೆ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲದ ಕೊರತೆ ಇರುವುದು ಕಂಡುಬಂದಿದೆ. ವಿಶ್ವವಿದ್ಯಾಲಯ ಕೇವಲ 12 ವರ್ಷಗಳಲ್ಲಿ ಐಸಿಎಆರ್-ಜೆಆರ್​ಎಫ್ ಪ್ರಶಸ್ತಿಗಳಲ್ಲಿ ಪ್ರಥಮ ಸ್ಥಾನವನ್ನು ಸತತ 4 ಬಾರಿ ಪಡೆದುಕೊಂಡಿದ್ದು ಹೆಮ್ಮೆಯ ವಿಷಯವೆಂದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್.ಶಂಕರ ಹಾಗೂ ಬಾಗಲಕೋಟೆ ತೋವಿವಿಯ ಸಹಕುಲಪತಿಗಳಾದ ಆರ್.ಶಂಕರ, ತೋಟಗಾರಿಕೆ ವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ ಸೇರಿದಂತೆ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರು ಇದ್ದರು.

ಬಿಎಸ್‍ಸಿ ತೋಟಗಾರಿಕೆಯಲ್ಲಿ ಪ್ರಶಾಂತಗೆ 14 ಚಿನ್ನದ ಪದಕ!

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕುನ್ನೂರ ಗ್ರಾಮದ ಯುವಕ ಪ್ರಶಾಂತ ವಿ. ಬಿಎಸ್ಸಿ ತೋಟಗಾರಿಕೆ ಪದವಿಯಲ್ಲಿ ಬರೋಬ್ಬರಿ 14 ಚಿನ್ನದ ಪದಕಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದ್ದಾರೆ. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಜರುಗಿದ 10ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಆರ್.ಶಂಕರ ಅವರಿಂದ ಚಿನ್ನದ ಪದಕಗಳನ್ನು ಪಡೆದುಕೊಂಡರು.14 ಚಿನ್ನದ ಪದಕ ಪಡೆದ ಪ್ರಶಾಂತ ಮಾತನಾಡಿ, ನಾನು ಮೂಲತಃ ರೈತ ಕುಟುಂಬದವನಾಗಿದ್ದು, ತಮ್ಮದೇಯಾದ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಕೃಷಿ ವಿಜ್ಞಾನಿಯಾಗಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದರು.

ಅದೇ ರೀತಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಾರಲಹಳ್ಳಿ ಗ್ರಾಮದ ಬಿಎಸ್ಸಿ ಸ್ನಾತಕೋತ್ತರ ವಿದ್ಯಾರ್ಥಿ ಪುಷ್ಪಾ ಎಚ್.ಎ. 4 ಚಿನ್ನದ ಪದಕ ಪಡೆದರೆ, ಕೊಡಗು ಜಿಲ್ಲೆಯ ಕುಶಾಲನಗರದ ಸಿ.ಡಿ. ವೀಣಾ ಎಂ.ಎಸ್ಸಿ ಸ್ನಾತಕೋತ್ತರದಲ್ಲಿ 4, ಚಿಕ್ಕಬಳ್ಳಾಪೂರ ಜಿಲ್ಲೆ ಶಿಡ್ಲಗಟ್ಟ ತಾಲೂಕಿನ ಜಂಗಮಕೋಟೆ ಗ್ರಾಮದ ಪೃಥ್ವಿ ಬಸವರಾಜ ಎಂಎಸ್ಸಿ ತೋಟಗಾರಿಕೆಯಲ್ಲಿ 4, ಆಂಧ್ರಪ್ರದೇಶದ ಚಿತ್ತೂರ ಜಿಲ್ಲೆಯ ಉಪ್ಪರಪಳ್ಳಿಯ ಕುರುಬಲಕೋಟಾ ಮಾಧವಿ ಎಂಎಸ್.ಸಿ ತೋಟಗಾರಿಕೆಯಲ್ಲಿ 3 ಹಾಗೂ ರಾಯಚೂರಿನ ಗೌತಮ ಎಂ.ಎಸ್.ಸಿ ತೋಟಗಾರಿಕೆಯಲ್ಲಿ 2 ಚಿನ್ನದ ಪದಕ ಪಡೆದುಕೊಂಡರು.

ಇದನ್ನು ಓದಿ: ಸರ್ಕಾರದ ಬಿಗಿ ಕ್ರಮಕ್ಕೆ ಅವಕಾಶ ಮಾಡಿಕೊಡಬೇಡಿ; ಸಾರಿಗೆ ನೌಕರರಿಗೆ ಸಿಎಂ ಬಿಎಸ್​ವೈ ಕಟ್ಟುನಿಟ್ಟಿನ ಎಚ್ಚರಿಕೆ!

ಡಾಕ್ಟರೇಟ್ ಪದವಿಯಲ್ಲಿ ಸುಹಾಸಿನಿ ಚಿಕ್ಕಲಕಿ 2, ಹರ್ಷದ ಖಯೂಮ್ 1, ಎಂಎಸ್ಸಿ ತೋಟಗಾರಿಕೆಯಲ್ಲಿ ವಿಮಲಶ್ರೀ ಎಚ್, ರಂಜಿತ್ ಆರ್, ಚದಂಬರ ಟಿ.ಕೆ, ಶ್ರಾವಣಿ, ಗಾಯತ್ರಿ ಕುದರಿ, ಅಮೂಲ್ಯ ಎಸ್, ತಲಾ ಹಾಗೂ ಗೌತಮಿ ವೈ ಎರಡು ಚಿನ್ನದ ಪದಕ ಪಡೆದುಕೊಂಡರು. ಬಿ.ಎಸ್ಸಿ (ಹಾನ್ಸ್) ತೋಟಗಾರಿಕೆ/ಬಿ.ಟೆಕ್ (ಆಹಾರ ತಂತ್ರಜ್ಞಾನ)ದಲ್ಲಿ ಎಸ್.ರಾಜರಾಜೇಶ್ವರಿ, ರಶ್ಮಿತಾ ಜಿ, ನಿಖಿಲ್ ಗೌಡ, ಲಾವಣ್ಯ ಎಸ್.ಎಂ, ಕಾರ್ತಿಕ ಡಿ.ಆರ್, ಹರ್ಷದಾ ಮದಲಿ, ಅರುಣಾ, ದೀಪಾ ಹೊರಪೇಟ, ತಲಾ ಒಂದು, ಶಿವಾನಂದ ಕೋಟಿ, ಶಿಖಾ ಮನೋಹರನ್ ತಲಾ ಎರಡು, ದಿಯಾ ಜ್ಯೋತಿಸ್, ಯಶಸ್ವಿನಿ ಜೆ, ಕರುಣಾ ಅಪ್ಪುಗೋಳ, ಮೇಘರಾಣಿ ಟಿ ತಲಾ 3 ಚಿನ್ನದ ಪದಕ ಪಡೆದುಕೊಂಡರು. ಘಟಿಕೋತ್ಸವದಲ್ಲಿ 468 ಬಿ.ಎಸ್ಸಿ (ಆನರ್ಸ್) ತೋಟಗಾರಿಕೆ ಮತ್ತು ತೋಟಗಾರಿಕೆ/ಬಿ.ಟೆಕ್ (ಆಹಾರ ತಂತ್ರಜ್ಞಾನ) ವಿದ್ಯಾರ್ಥಿಗಳು, ಎಂ.ಎಸ್ಸಿ (ತೋಟಗಾರಿಕೆ)ಪದವಿ ಕಾರ್ಯಕ್ರಮದಲ್ಲಿ ಬರುವ 10 ವಿಭಾಗಗಳಲ್ಲಿ 67 ಮತ್ತು ಪಿಎಚ್.ಡಿ 26 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ 10ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿಗಳನ್ನು ಪ್ರದಾನ ಮಾಡಲಾಯಿತು.

ಅಲ್ಲದೇ ಎಲ್ಲಾ ಮಹಾವಿದ್ಯಾಲಯಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ಅರ್ಹ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಮತ್ತು ದಾನಿಗಳ ಚಿನ್ನದ ಪದಕಗಳನ್ನು ನೀಡಲಾಗುವುದು. ಅದರಂತೆ, ಸ್ನಾತಕೋತ್ತರ ಪದವಿಯಲ್ಲಿ ಆಯಾ ವಿಷಯಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಮತ್ತು ವಿಶ್ವವಿದ್ಯಾಲಯದ 21 ಹಾಗೂ ದಾನಿಗಳ 43 ಚಿನ್ನದ ಪದಕಗಳನ್ನು ನೀಡಲಾಯಿತು.  ಒಟ್ಟು 64 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.
Published by: HR Ramesh
First published: April 6, 2021, 8:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories