ಸಿಎಂ ಸಭೆಗೆ ಬೆಳಗಾವಿ ಶಾಸಕರು ಗೈರು: ಈ ಬಗ್ಗೆ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ..

ಸುವರ್ಣಸೌಧದಲ್ಲಿ ಡಿಸೆಂಬರ್ ನಲ್ಲಿ ಅಧಿವೇಶನ ನಡೆಸುತ್ತೇವೆ. ಬೆಂಗಳೂರು ವಿಧಾನಸೌಧ ರೀತಿ ಸುವರ್ಣಸೌಧ ಆಗಬೇಕೆಂಬ ಆಸೆ ಇದೆ ಎಂದು ಸಿಎಂ ತಿಳಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

 • Share this:
  ಬೆಳಗಾವಿ: ಜಿಲ್ಲಾ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋವಿಡ್​​ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ಸಂಬಂಧ ಅಧಿಕಾರಿಗಳ ಜೊತೆ ಸುವರ್ಣಸೌಧದಲ್ಲಿ ಸಭೆ ನಡೆಸಿದರು. ಸಿಎಂ ಸಭೆಗೆ ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರು ಗೈರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಎಲ್ಲಾ ಸಂದರ್ಭದಲ್ಲಿ ಎಲ್ಲರೂ ಇರಬೇಕು ಅಂತಾ ಏನಿಲ್ಲ. ಲಕ್ಷ್ಮಣ್ ಸವದಿ ಜೊತೆ ನಿನ್ನೆ ಮಾತನಾಡಿದ್ದೀನಿ, ಅಭಯ್ ಪಾಟೀಲ್ ಇಂದು ಭೇಟಿಯಾಗಿ ಹೋಗಿದ್ದಾರೆ. ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸಂಪರ್ಕಕ್ಕೆ ಯತ್ನಿಸಿದೀನಿ. ಯಾವುದೇ ರೀತಿಯ ತೊಂದರೆ ಇಲ್ಲ. ಕಡಿಮೆ ಸಮಯದಲ್ಲಿ ಸಭೆ ಆಯೋಜನೆ ಮಾಡಿದ್ದರಿಂದ ಕೆಲವರಿಗೆ ಅನಾನುಕೂಲ ಆಗಿದೆ ಎಂದು ಸಬೂಬು ನೀಡಿದರು.

  ಕೋವಿಡ್ ಮೂರನೇ ಅಲೆ ತಡೆಗೆ ಸಾಕಷ್ಟು ಮುಂಜಾಗ್ರತೆ ಕೈಗೊಂಡಿದ್ದೇವೆ. ಗಡಿ ಜಿಲ್ಲೆಗಳಲ್ಲಿ ಮುಂಜಾಗ್ರತೆ ಕೈಗೊಳ್ಳಲು ಮೊದಲ ಸಭೆಯಲ್ಲಿ ತಿಳಿಸಿದ್ದೆ. ನಾನೇ ಖುದ್ದು ಗಡಿಜಿಲ್ಲೆ ಗೆ ಭೇಟಿ ನೀಡುವ ತೀರ್ಮಾನ ಮಾಡಿದ್ದೆ. ಬೆಳಗಾವಿ ಜಿಲ್ಲೆಯಲ್ಲಿ ಸದ್ಯ 0.81 ಪಾಸಿಟಿವಿಟಿ ರೇಟ್ ಇದೆ. ಕೋವಿಡ್‌ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಬೆಳಗಾವಿ ಜಿಲ್ಲೆಯ 10 ಕಡೆ ಆಮ್ಲಜನಕ ತಯಾರಿಕಾ ಘಟಕ ತೆರೆಯಲು ತೀರ್ಮಾನ ಮಾಡಲಾಗಿದೆ. ಮುಂದಿನ 20 ದಿನಗಳಲ್ಲಿ ಆಕ್ಸಿಜನ್ ಘಟಕ ಆರಂಭಕ್ಕೆ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

  ಚಿಕ್ಕೋಡಿಯಲ್ಲಿ 1 ಕೋಟಿ 36 ಲಕ್ಷ ವೆಚ್ಚದಲ್ಲಿ ಆರ್‌ಟಿಪಿಸಿಆರ್ ಟೆಸ್ಟಿಂಗ್ ಲ್ಯಾಬ್ ನಿರ್ಮಾಣವಾಗಲಿದೆ. ಇನ್ಮುಂದೆ ಟೆಸ್ಟಿಂಗ್ ಸಾಮರ್ಥ್ಯ ಹೆಚ್ಚಿಸಲಾಗುತ್ತೆ. ಗೋಕಾಕ್‌ನಲ್ಲಿಯೂ ಆರ್‌ಟಿಪಿಸಿಆರ್ ಟೆಸ್ಟಿಂಗ್ ಸೆಂಟರ್ ಸ್ಥಾಪನೆಗೆ ಬೇಡಿಕೆ ಇದೆ. ಐದು ಹೊಸ ತಾಲೂಕು ಕೇಂದ್ರಗಳಲ್ಲಿ ಆಸ್ಪತ್ರೆ ಮೇಲ್ದರ್ಜೆಗೆ ಕ್ರಮ ಕೈಗೊಳ್ಳಲಾಗಿದೆ. ಬೆಳಗಾವಿ ದೊಡ್ಡ ಜಿಲ್ಲೆ ನಿತ್ಯ 25 ಸಾವಿರ ವ್ಯಾಕ್ಸಿನೇಷನ್‌ ಮಾಡ್ತಿದಾರೆ. ಇನ್ನು 3 ದಿನಗಳಲ್ಲಿ ನಿತ್ಯ 40 ಸಾವಿರ ವ್ಯಾಕ್ಸಿನೇಷನ್‌ ಗೆ ಗುರಿ ಹೊಂದಲಾಗಿದೆ. ರಾಜ್ಯಕ್ಕೆ 63 ಲಕ್ಷ ಕೋವಿಡ್ ಲಸಿಕೆ ಬರುತ್ತಿದೆ. ಹೆಚ್ಚಿಗೆ ವ್ಯಾಕ್ಸಿನ್ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡುತ್ತೇನೆ ಎಂದರು.

  ಬೆಳಗಾವಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ವ್ಯಾಕ್ಸಿನೇಷನ್‌ ಆಗಿದೆ. ಗಡಿಗ್ರಾಮಗಳಲ್ಲಿ ಹೆಚ್ಚಿನ ಲಸಿಕೆ ಅಭಿಯಾನ ಮಾಡಲು ಸಲಹೆ ಕೊಟ್ಟಿದ್ದೇನೆ. 3ನೇ ಅಲೆ ತಡೆಗೆ ಮಕ್ಕಳ ತಜ್ಞರ ನೇತೃತ್ವದಲ್ಲಿ ಚಿಲ್ಡ್ರನ್ ಹೆಲ್ತ್ ಕ್ಯಾಂಪ್‌ಗೆ ಸೂಚನೆ ನೀಡಲಾಗಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇನ್ನು ನೆರೆಯಿಂದ ಹಾನಿಯಾದ ಬಗ್ಗೆ ಸಮೀಕ್ಷೆ ಮಾಡಲು ತಿಳಿಸಿದ್ದೇನೆ. ನೀರು ಇಳಿದ ಮೇಲೆ ಶೀಘ್ರದಲ್ಲೇ ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಯಲಿದೆ.

  ಬಿದ್ದ ಮನೆಗಳಿಗೆ ಪರಿಹಾರ ನೀಡುವಲ್ಲಿ ಕಳೆದ ಬಾರಿಯಾದ ತೊಂದರೆ-ಗೊಂದಲ ಈ ಬಾರಿ ಆಗಬಾರದು. ಕಳೆದ ಬಾರಿ ಪ್ರವಾಹದಲ್ಲಿ ಬಿದ್ದ ಮನೆಗಳಿಗೆ ಪರಿಹಾರ ನೀಡುವಲ್ಲಿ ಗೊಂದಲ ಇದೆ. ಬಾಕಿ ಹಣವನ್ನು ನೀಡಲು ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ಡೇಟ್ ಬಾರ್ ಆದ ಪ್ರಕರಣ ಬಗ್ಗೆ ಸಹಾನುಭೂತಿಯಿಂದ ಕ್ರಮ ಕೈಗೊಳ್ಳುವ ಬಗ್ಗೆಯೂ ಚಿಂತನೆ ನಡೆದಿದೆ. ಕೆಟಗರಿ ಮಾಡಿ ಮುಂದಿನ ವಾರ ಬೆಂಗಳೂರಿಗೆ ಬರಲು ಡಿಸಿಗೆ ತಿಳಿಸಿದ್ದೇನೆ. ಹಣಕಾಸು, ರೆವಿನ್ಯೂ ಇಲಾಖೆ ಜೊತೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

  ಸುವರ್ಣಸೌಧದಲ್ಲಿ ಡಿಸೆಂಬರ್ ನಲ್ಲಿ ಅಧಿವೇಶನ ನಡೆಸುತ್ತೇವೆ. ಬೆಂಗಳೂರು ವಿಧಾನಸೌಧ ರೀತಿ ಸುವರ್ಣಸೌಧ ಆಗಬೇಕೆಂಬ ಆಸೆ ಇದೆ ಎಂದರು. ಬೆಳಗಾವಿಗೆ ಶುಗರ್ ಕಮಿಷನರ್ ಕಚೇರಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುತ್ತೇವೆ. ಸುವರ್ಣಸೌಧಕ್ಕೆ ಇಲಾಖೆಗಳ ಕಚೇರಿ ಸ್ಥಳಾಂತರ ಬಗ್ಗೆ ಶೀಘ್ರ ತೀರ್ಮಾನ ಮಾಡಲಾಗುವುದು.

  ಕೋವಿಡ್ ವೇಳೆ ಬಿಜೆಪಿ ಜನಾಶೀರ್ವಾದ ಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೋವಿಡ್ ವಿಚಾರದಲ್ಲಿ ಎಲ್ಲರಿಗೂ ಒಂದೇ ರೂಲ್ಸ್ ಅಂತಾ ಹೇಳಿದ್ದೇನೆ. ವಿನಯ್ ಕುಲಕರ್ಣಿ ಬಿಡುಗಡೆ ವೇಳೆ ಬೆಂಬಲಿಗರ ಅದ್ಧೂರಿ ಮೆರವಣಿಗೆ ಸಂಬಂಧ ಪ್ರತಿಕ್ರಿಯಿಸಿದ ಸಿಎಂ ಅವರ ವಿರುದ್ಧ ನಮ್ಮ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದರು.
  Published by:Kavya V
  First published: