ಸ್ಯಾಂಡಲ್ವುಡ್ನಲ್ಲಿ ಡ್ರಗ್ ಆರೋಪ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಪ್ರಕರಣದಲ್ಲಿ ಕೆಲ ಹೀರೋ ಹಾಗೂ ಹೀರೋಯಿನ್ಗಳ ಹೆಸರು ಕೂಡ ಮುನ್ನೆಲೆಗೆ ಬಂದಿದೆ. ಕೆಲವರು ಡ್ರಗ್ ಇದೆ ಎಂದು ಒಪ್ಪಿಕೊಂಡರೆ ಇನ್ನೂ ಕೆಲವರು ಡ್ರಗ್ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ. ಈ ಮಧ್ಯೆ ಪ್ರಶಾಂತ್ ಸಂಬರಗಿ ಎಂಬುವವರು ನಟಿ ಸಂಜನಾ ಗಲ್ರಾನಿ ವಿರುದ್ಧ ಡ್ರಗ್ ಆರೋಪ ಮಾಡಿದ್ದರು. ಇದಕ್ಕೆ ನಟಿ ಸಂಜನಾ ಸಿಟ್ಟಾಗಿದ್ದು, ನಾನು ಪ್ರಶಾಂತ್ ಸಂಬರಗಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
"ಪ್ರಶಾಂತ್ ಸಂಬರಗಿ ಇಷ್ಟು ದಿನ ಎಲ್ಲಿದ್ದ? ಈಗ ಬಂದು ಒಂದಾದ ಮೇಲೊಂದು ಆರೋಪಗಳು ಮಾಡುತ್ತಿದ್ದಾನೆ. ಸಂಜನಾ ಡ್ರಗ್ಸ್ ನಲ್ಲಿದ್ದಾರೆ ಅಂತ ಏನೂ ಸಾಕ್ಷಿ ಇಲ್ಲದೆ ಹೇಗೆ ಹೇಳುತ್ತಾನೆ? ಪ್ರಶಾಂತ್ ಸಂಬರಗಿಯನ್ನು ನಾನು ಸುಮ್ಮನೆ ಬಿಡುವುದಿಲ್ಲ,"ಎಂದು ಸಂಜನಾ ಆಕ್ರೋಶ ಹೊರಹಾಕಿದರು.
"ಈಗಾಗಲೇ ಸಿಸಿಬಿ ಪ್ರಕರಣದ ತನಿಖೆ ಮಾಡುತ್ತಿದೆ. ಪೊಲೀಸರ ಬಗ್ಗೆ ನಂಬಿಕೆ ಇದೆ. ನಾನು ಅವರನ್ನು ಗೌರವಿಸುತ್ತೇನೆ. ಎಫ್ಐಆರ್ನಲ್ಲಿ ನನ್ನ ಹೆಸರೂ ಇಲ್ಲ. ನನಗಿದು ಕಿರುಕುಳದ ರೀತಿ ಭಾಸವಾಗುತ್ತಿದೆ. ನಾನು ಸ್ಟ್ರಗಲ್ ಮಾಡಿ ಈ ಮಟ್ಟಕ್ಕೆ ಬಂದಿದ್ದೇನೆ. ನಾನೇನೂ ತಪ್ಪು ಮಾಡಿಲ್ಲ. ಈ ಪ್ರಕರಣದಲ್ಲಿ ನನಗೇನು ಸಂಬಂಧವೇ ಇಲ್ಲ. ಹೀಗಾಗಿ ಇದನ್ನು ದಯವಿಟ್ಟು ಇಲ್ಲೇ ನಿಲ್ಲಿಸಿ," ಎಂದು ಕಣ್ಣೀರಿಟ್ಟರು.
ಶ್ರೀಲಂಕಾ ಬ್ಯಾಲೀಸ್ ಕೆಸಿನೋದ ಪಾರ್ಟಿಯಲ್ಲಿ ಸಂಜನಾ ಡಾನ್ಸ್ ಮಾಡಿದ ವಿಡಿಯೋ ಒಂದು ವೈರಲ್ ಆಗಿತ್ತು. ಶಾಸಕ ಜಮೀರ್ ಅಹ್ಮದ್ ಹಾಗೂ ಸಂಜನಾ ಒಂದೇ ದಿನ ಶ್ರೀಲಂಕಾ ತೆರಳಿದ್ದೇಕೆ ಎಂದು ಪ್ರಶಾಂತ್ ಸಂಬರಗಿ ಪ್ರಶ್ನಿಸಿದ್ದರು. ಈ ಬಗ್ಗೆ ಪ್ರತಿಕ್ರಿಸಿರುವ ಸಂಜನಾ, ಅಲ್ಲಿಗೆ ಚೀಫ್ ಗೆಸ್ಟ್ ಆಗಿ ಹೋಗಿದ್ದೆ. ಯಶ್, ಉಪೇಂದ್ರ ಸೇರಿ ತುಂಬಾ ಜನ ಸೆಲೆಬ್ರಿಟಿಗಳು ಹೋಗಿದ್ದಾರೆ. ವಿವೇಕ್ ಓಬೆರಾಯ್ ಮುಖ್ಯ ಅತಿಥಿ ಆಗಿ ಬಂದಿದ್ದರು. ನನ್ನ ಅಪ್ಪ, ಅಮ್ಮ ಕೂಡ ಜೊತೆಗೆ ಬಂದಿದ್ದರು. ಈ ಬಗ್ಗೆ ಊಹಾಪೋಹಗಳು ಮಾಡಬೇಡಿ. ಜಮೀರ್ ಅವರೇ ಪ್ರಶಾಂತ್ ವಿರುದ್ಧ ಕ್ರಮ ಕೈಗೊಳ್ಳಿ, ಎಂದು ಆಗ್ರಹಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ