ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ 9 ತಿಂಗಳು 16 ದಿನಗಳ ಬಳಿಕ ಇಂದು ಹಿಂಡಲಗಾ ಜೈಲಿನಿಂದ ಬಿಡುಗಡೆಯಾದರು. ಮಾಜಿ ಸಚಿವ ವಿನಯ್ ಕುಲಕರ್ಣಿ ಸ್ವಾಗತಿಸಿಲು ಅಭಿಮಾನಿಗಳು ಹಿಂಡಲಗಾ ಜೈಲಿನ ಎದುರು ಜಮಾಯಿಸಿದ್ರು. ವಿನಯ್ ಕುಲಕರ್ಣಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿನಯ್ ಕುಲಕರ್ಣಿ ಹಣೆಗೆ ತಿಲಕವಿಟ್ಟು ಕೈಗೆ ರಾಖಿ ಕಟ್ಟಿ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಇದೇ ವೇಳೆ ಅಭಿಮಾನಿಗಳು ಬೃಹದಾಕಾರದ ಸೇಬಿನ ಹಾರ ಹಾಕಿ ವಿನಯ್ ಕುಲಕರ್ಣಿ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಬೆಳಗಾವಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರೂ ಕೋವಿಡ್ ನಿಯಮ ಗಾಳಿಗೆ ತೂರಿ ಮೂರು ಸಾವಿರಕ್ಕೂ ಹೆಚ್ಚು ಬೆಂಬಲಿಗರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ವಿನಯ್ ಕುಲಕರ್ಣಿ ನೋಡಲು ಮುಗಿಬಿದ್ರು. ಹಿಂಡಲಗಾ ಜೈಲಿನ ಎದುರು ಅಭಿಮಾನಿಗಳ ಮಧ್ಯೆ ತೆರಳಿದ ವಿನಯ್ ಕುಲಕರ್ಣಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಹಿಂಡಲಗಾ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಹಿಂಡಲಗಾ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚನ್ನಮ್ಮ ವೃತ್ತಕ್ಕೆ ತೆರಳಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ರು. ಇದಾದ ಬಳಿಕ ನಾಗನೂರು ರುದ್ರಾಕ್ಷಿಮಠಕ್ಕೆ ಭೇಟಿ ನೀಡಿ ಅಲ್ಲಮಪ್ರಭು ಸ್ವಾಮೀಜಿ ಆಶೀರ್ವಾದ ಪಡೆದರು.ಈ ವೇಳೆಯೂ ಸಹ ವಿನಯ್ ಕುಲಕರ್ಣಿ ಬೆಂಬಲಿಗರು ಕಿಕ್ಕಿರಿದು ಸೇರಿ ಕೋವಿಡ್ ರೂಲ್ಸ್ ಬ್ರೇಕ್ ಮಾಡಿದರು.
ಮಠದಿಂದ ಹೊರಬಂದ ಬಳಿಕ ವಿನಯ್ ಕುಲಕರ್ಣಿ ಮತ್ತೆ ತೆರೆದ ವಾಹನದ ಮೇಲೆ ನಿಂತು ಅಭಿಮಾನಿಗಳತ್ತ ವಿಕ್ಟರಿ ಸಿಂಬಾಲ್ ತೋರಿಸಿದ್ರು. ಇನ್ನು ವಿನಯ್ ಕುಲಕರ್ಣಿ ಬಿಡುಗಡೆ ಕುರಿತಂತೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಕ್ಷಾ ಹಬ್ಬದ ಮುನ್ನಾದಿನ ವಿನಯ್ ಅಣ್ಣ ಬಿಡುಗಡೆ ಖುಷಿ ತಂದಿದ್ದು ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದೆ ಎಂದ್ರು.
ಇದನ್ನೂ ಓದಿ: ವಲಸಿಗರಿಗೆ ಏನ್ರಯ್ಯಾ ಬಿಜೆಪಿಗೆ ಹೋಗಿಬಿಟ್ರಿ ಅಂದ್ರೆ, ಅಲ್ಲಿದ್ರೂ ನಾವು ನಿಮ್ಮವರೇ ಕಣಣ್ಣ ಅಂತಾರೆ: ಸಿದ್ದರಾಮಯ್ಯ
ನಾಗನೂರು ರುದ್ರಾಕ್ಷಿಮಠದಿಂದ ನೇರವಾಗಿ ಹಲಗಾ ಗ್ರಾಮದ ಜೈನ ಬಸದಿಗೆ ಭೇಟಿ ನೀಡಿದ್ರು. ಹಲಗಾ ಜೈನ ಬಸದಿಯಲ್ಲಿ ಬಾಲಾಲ ಆಚಾರ್ಯ ಸಿದ್ಧಸೇವಾ ಮುನಿಸ್ವಾಮೀಜಿ ಆಶೀರ್ವಾದ ಪಡೆದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಯಿತು. ಇದಾದ ಬಳಿಕ ಬೆಳಗಾವಿ ಬಾಗಲಕೋಟೆ ರಸ್ತೆ ಮಾರ್ಗವಾಗಿ ತೆರಳಿದ ವಿನಯ್ ಕುಲಕರ್ಣಿ ಸಾಂಬ್ರಾ ಗ್ರಾಮದ ಹೊರವಲಯದಲ್ಲಿ ರಸ್ತೆ ಬದಿ ಸುಮಾರು ಅರ್ಧ ಗಂಟೆ ಕಾಲ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದರು. ಇನ್ನು ಜೈಲಿನಿಂದ ಬಿಡುಗಡೆಯಾದ ಬಳಿಕ ಮಾತನಾಡಿದ ವಿನಯ್ ಕುಲಕರ್ಣಿ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ನಾನೇನು ತಪ್ಪು ಮಾಡಿಲ್ಲ ನಿರ್ದೋಷಿಯಾಗಿ ಹೊರಬರುತ್ತೇನೆ. 9 ತಿಂಗಳು ಜೈಲಿನಲ್ಲಿದ್ದಿದ್ದು ಟಾಸ್ಕ್ ರೀತಿ ಇತ್ತು. ನನ್ನೊಳಗೆ ಹಲವು ಬದಲಾವಣೆ ಆಗಿದ್ದು ಪುಸ್ತಕ ಓದುವುದನ್ನು ಕಲಿತಿದ್ದೇನೆ ಎಂದರು.
ಜೈಲಿನಿಂದ ಬಿಡುಗಡೆಯಾದ ಬಳಿಕ ಅದ್ದೂರಿ ಮೆರವಣಿಗೆ ನಡೆಸಿದ ವಿನಯ್ ಕುಲಕರ್ಣಿ ಹಾಗೂ 200 ರಿಂದ 300 ಬೆಂಬಲಿಗರ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ಆರೋಪದಡಿ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ ಹಿಂಡಲಗಾ ಗ್ರಾಮ ಪಂಚಾಯತಿ ಪಿಡಿಒ ದೂರು ನೀಡಿದ್ದು ಮತ್ತೊಂದು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ