Udupi News: ಉಡುಪಿಯಲ್ಲಿ 14 ನೇ ಶತಮಾನದ ಕನ್ನಡ ಶಾಸನ ಪತ್ತೆ!

Udupi News: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರದ ಗಾಣದಬೆಟ್ಟು ಎಂಬಲ್ಲಿ ಶಾಸನವೊಂದು ಪತ್ತೆಯಾಗಿದೆ. ಸಂಶೋಧಕರ ತಂಡವೊಂದು ಈ ಶಾಸವನ್ನು ಪತ್ತೆಹಚ್ಚಿದೆ.

ಶಾಸನ

ಶಾಸನ

  • Share this:
ಇತಿಹಾಸದ ಹಲವು ವೈಭವಗಳನ್ನು ತನ್ನ ಮೈಮೇಲೆ ಹೊದ್ದುಕೊಂಡಿರುವ ಕರ್ನಾಟಕದಲ್ಲಿ  ಕನ್ನಡ (Kannada) ಅತ್ಯಂತ ಪ್ರಾಚೀನ ಭಾಷೆ. ತನ್ನದೇ ಆದ ವೈಶಿಷ್ಟ್ಯತೆ ಹೊಂದಿರುವ ಈ ಭಾಷೆಯ (Language) ಲಿಪಿಗೆ ಸಾವಿರಾರು ವರ್ಷಗಳ ಹಿಂದಿನ ಇತಿಹಾಸವಿದೆ. ಸದ್ಯ ಕರ್ನಾಟಕದ (Karnataka) ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರದ ಗಾಣದಬೆಟ್ಟು ಎಂಬಲ್ಲಿ ಶಾಸನವೊಂದು ಪತ್ತೆಯಾಗಿದೆ. ಸಂಶೋಧಕರ (Researchers Team) ತಂಡವು 14ನೇ ಶತಮಾನದ ಕನ್ನಡ ಶಾಸನವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಪ್ರಸ್ತುತ ಸಿಕ್ಕಿರುವಂಥ ಶಾಸನವು ಕನ್ನಡ ಭಾಷೆಯ ಹಾಗೂ ಲಿಪಿಯ 10 ಸಾಲುಗಳನ್ನು ಒಳಗೊಂಡಿದೆ. ಅಲ್ಲದೇ 3 ಅಡಿ ಎತ್ತರ ಹಾಗೂ 2 ಅಡಿ ಅಗಲ ವಾಗಿರುವ ಈ ಶಾಸನ ಗ್ರಾನೈಟ್‌ ಕಲ್ಲಿನಲ್ಲಿ ಕೊರೆಯಲ್ಪಟ್ಟಿದೆ. ಇನ್ನು ಈ ಶಾಸನದ ಮೇಲ್ಭಾಗದಲ್ಲಿ ಶಂಖ, ಚಕ್ರದ ಕೆತ್ತನೆಯಿದೆ. ಇದು ಶಕವರ್ಷ 1331 ನೇ ಮಾರ್ಗಶಿರ ಶುದ್ಧ ಗುರುವಾರ ಅಂದರೆ ಸಾಮಾನ್ಯ ವರ್ಷ 1409 ವಿರೋಧಿ ಸಂವತ್ಸರ ನವೆಂಬರ್‌ 7 ಕ್ಕೆ ಸರಿಹೊಂದುತ್ತೆ ಅಂತ ಸಂಶೋಧಕರ ತಂಡದ ಶ್ರುತೇಶ್‌ ಆಚಾರ್ಯ ಹೇಳಿದ್ದಾರೆ. ಅಲ್ಲದೇ ಈ ಶಾಸನವು ಅಮ್ಮು ಶೆಟ್ಟಿ ಅನ್ನುವವರಿಗೆ ಸೇರಿದ ಜಾಗದಲ್ಲಿ ಸಿಕ್ಕಿದ್ದಾಗಿ ಅವರು ತಿಳಿಸಿದ್ದಾರೆ.

ಶಾಸನದಲ್ಲೇನಿದೆ?
ಇನ್ನು ಈ ಶಾಸನದಲ್ಲಿ ಏನು ಬರೆಯಲಾಗಿದೆ ಅನ್ನೋದನ್ನು ನೋಡೋದಾದ್ರೆ, ಇದರಲ್ಲಿ ಬೆಟ್ಟಿಂ ಅಂದರೆ ಈಗಿನ ಗಾಣದಬೆಟ್ಟು ಪ್ರದೇಶದಿಂದ ಅಜೆಕಾರ್‌ನಲ್ಲಿರುವ ವಿಷ್ಣು ದೇವರಿಗೆ ಮಣ್ಣೆಯ ಕಾತು ಮೂಲಿಗೆಯಿಂದ 11 ತೆಂಗಿನಕಾಯಿ (ಅಥವಾ 11 ತೆಂಗಿನಕಾಯಿಯಿಂದ  ಮಾಡಿದ ತೆಂಗಿನ ಎಣ್ಣೆ) ಯನ್ನು ದಾನವಾಗಿ ನೀಡಿರುವುದಾಗಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಭಯಂಕರ ವೇಷದೊಳಗಿನ ಬಂಗಾರದ ಮನುಷ್ಯ! ಕೋಟಿಗೊಬ್ಬ ರವಿ ಕಟಪಾಡಿ

ಇನ್ನು, ಸಂಶೋಧಕರ ತಂಡದಲ್ಲಿ ಉಡುಪಿಯ ಓರಿಯಂಟಲ್ ಆರ್ಕೈವ್ಸ್ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊಫೆಸರ್ ಎಸ್‌ಎ ಕೃಷ್ಣಯ್ಯ, ಯು ಕಮಲಾಬಾಯಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಕೆ ಶ್ರೀಧರ್ ಭಟ್ ಮತ್ತು ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿರುವ ಪ್ಲೀಚ್ ಇಂಡಿಯಾ ಫೌಂಡೇಶನ್‌ನ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇದ್ದಾರೆ. ಸಂಶೋಧನಾ ತಂಡವನ್ನು ಪ್ರಕಾಶ್ ಶೆಟ್ಟಿ ಮರ್ಣೆ, ಸುರೇಶ್ ಶೆಟ್ಟಿ ಗಾಣದಬೆಟ್ಟು, ರವಿ ಸಂತೋಷ್ ಆಳ್ವ ಮತ್ತು ಸುಶಾಂತ್ ಶೆಟ್ಟಿ ಸಂಶೋಧನೆಯ ಸಂದರ್ಭದಲ್ಲಿ ಬೆಂಬಲವಾಗಿದ್ದರು.

ಉಡುಪಿಯಲ್ಲಿ ಈ ಹಿಂದೆಯೂ ಶಾಸನಗಳು  ಸಿಕ್ಕಿವೆ
ಇನ್ನು ಉಡುಪಿಯಲ್ಲಿ ಹೀಗೆ ಐತಿಹಾಸಿಕ ಶಾಸನಗಳು ಸಿಕ್ಕಿರುವುದು ಇದೇ ಮೊದಲೇನಲ್ಲ. ಇದೇ ವರ್ಷ ಜೂನ್‌ ನಲ್ಲಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಂದನವನ ಗ್ರಾಮದಲ್ಲಿ 15ನೇ ಶತಮಾನದ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಶಿಲಾಶಾಸನ ಪತ್ತೆಯಾಗಿತ್ತು. ಸಂಜೀವ ಪ್ರಭುವಿನ ಒಡೆತನದ ಜಮೀನಿನಲ್ಲಿ ಪತ್ತೆಯಾದ ಈ ಶಾಸನ ಕಾನ ಶಿಲೆಯಲ್ಲಿ ಕೆತ್ತಲಾಗಿತ್ತು. 5 ಅಡಿ ಎತ್ತರ ಮತ್ತು 2.5 ಅಡಿ ಅಗಲವಿರುವ ಶಾಸನವು ಕನ್ನಡದಲ್ಲಿ 38 ಸಾಲುಗಳನ್ನು ಹೊಂದಿತ್ತು. ಆ ಶಾಸನದಲ್ಲಿಯೂ ಕೂಡ ಹೀಗೆಯೇ ಮೇಲಿನ ತುದಿಯಲ್ಲಿರುವ ವಾಮನ ವಿಗ್ರಹದ ಎರಡೂ ಬದಿಯಲ್ಲಿ ಶಂಖ, ಚಕ್ರ, ಸೂರ್ಯ ಮತ್ತು ಚಂದ್ರರನ್ನು ಕೆತ್ತಲಾಗಿದೆ.

ಇದನ್ನೂ ಓದಿ: ಮಳೆ ಹಾನಿ ಮಾಹಿತಿ, ವೀಡಿಯೋ, ಫೋಟೋ ವಾಟ್ಸ್​ಆ್ಯಪ್ ಮಾಡಿ; ನಂಬರ್ ಇಲ್ಲಿದೆ

ಇದು ‘ಸ್ವಸ್ತಿ ಶ್ರೀ ಗಣಾಧಿಪತಯೇ ನಮಃ’ ಎಂಬ ಶೀರ್ಷಿಕೆಯನ್ನು ಹೊಂದಿದ್ದು, ದಿನಾಂಕವನ್ನು 1442 ವರ್ತಮಾನ ಪ್ರಮಾಧಿ ಸಂವತ್ಸರದ ಶ್ರವಣ ಶುದ್ಧ 15 ಬುಧವಾರ ಎಂದು ಉಲ್ಲೇಖಿಸಲಾಗಿತ್ತು. ಇದು ವಿಜಯನಗರ ಸಾಮ್ರಾಜ್ಯದ ತುಳುವ ರಾಜ ಕೃಷ್ಣದೇವರಾಯನ ಕಾಲಕ್ಕೆ ಸೇರಿದ್ದೆಂದು ಕಲ್ಲಿನ ಶಾಸನದ ದಿನಾಂಕದ ರೇಖೆಯು ಸ್ಪಷ್ಟವಾಗಿ ಹೇಳುತ್ತದೆ. ಈ ಅವಧಿಯಲ್ಲಿ ಬಾರಕೂರ ರಾಜ್ಯವನ್ನು ರತ್ನಪ್ಪ ಒಡೆಯರ ಮಗ ವಿಜಯಪ್ಪ ಒಡೆಯರು ಆಳುತ್ತಿದ್ದರು ಎಂಬುದನ್ನು ಇತಿಹಾಸ ಹೇಳುತ್ತದೆ.

ಹೀಗೆಯೇ ಒಂದಲ್ಲ ಎರಡಲ್ಲ, ಉಡುಪಿಯಲ್ಲಿ ಕನ್ನಡಕ್ಕೆ ಸೇರಿದ ಇಂತಹ ಐತಿಹಾಸಿಕ ಶಿಲಾಶಾಸನಗಳು ಸಾಕಷ್ಟು ಸಿಕ್ಕಿವೆ. ಇನ್ನು ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆ ಎಂಬುದಕ್ಕೆ ಈಗಾಗಲೇ ಸಾಕಷ್ಟು ಸಾಕ್ಷಿ ಪುರಾವೆ ಹಾಗೂ ನಿದರ್ಶನಗಳು ಸಿಕ್ಕಿವೆ. ಕನ್ನಡ ಲಿಪಿ ಸುಮಾರು 1500 – 1600 ವರ್ಷಗಳಿಗಿಂತಲೂ ಹಳೆಯದು ಎನ್ನಲಾಗುತ್ತೆ.
First published: