ಬಾಡಿಬಿಲ್ಡರ್ ಗಳು (Bodybuilder) ಅಂತ ಹೇಳಿದರೆ ಸಾಕು ನಮ್ಮ ಕಣ್ಣು ಮುಂದೆ ಬರುವುದು ಎತ್ತರದ ಮತ್ತು ಕಟ್ಟು ಮಸ್ತಾದ ದೇಹವನ್ನು ಹೊಂದಿರುವ ವ್ಯಕ್ತಿ ಅಂತ. ಆದರೆ ಬಾಡಿಬಿಲ್ಡರ್ ಅಂತ ಹೇಳಿದರೆ ಹೀಗೆ ಇರಬೇಕು ಅನ್ನೋ ಯಾವುದೇ ನಿಯಮಗಳಿಲ್ಲ ಬಿಡಿ. ಏಕೆಂದರೆ ಇಲ್ಲೊಬ್ಬ ಬಾಡಿಬಿಲ್ಡರ್ ಇದ್ದಾರೆ ನೋಡಿ, ಇವರು 2021 ರಲ್ಲಿ ಇಡೀ ವಿಶ್ವದಲ್ಲಿಯೇ ಅತ್ಯಂತ ಕುಳ್ಳಗಿನ ಬಾಡಿಬಿಲ್ಡರ್ ಅಂತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (Guinness World Records) ಪ್ರಶಸ್ತಿಯನ್ನು ಪಡೆದಿರುವವರು. ಈ ವಿಶ್ವದ ಅತ್ಯಂತ ಕುಳ್ಳಗಿನ ಬಾಡಿಬಿಲ್ಡರ್ ಇರುವುದು ಕೇವಲ 3 ಅಡಿ 4 ಇಂಚು ಎತ್ತರ ಮಾತ್ರ. ಈ ಕುಳ್ಳಗಿನ ಬಾಡಿಬಿಲ್ಡರ್ ಪ್ರತೀಕ್ ವಿಠ್ಠಲ್ ಮೋಹಿತೆ. ಅವರು ಈಗ ಮತ್ತೆ ಸುದ್ದಿಯಲ್ಲಿ (News) ಇರುವುದು ಅವರ ಮದುವೆಯಿಂದಾಗಿ ಅಂತ ಹೇಳಿದರೆ ಸುಳ್ಳಲ್ಲ. ಏಕೆಂದರೆ ಅವರು ಇದೀಗ ತನಗಿಂತ ಒಂದು ಅಡಿ ಎತ್ತರವಿರುವ ಹುಡುಗಿಯನ್ನು ಮದುವೆಯಾಗಿದ್ದಾರೆ ನೋಡಿ.
4 ಅಡಿ 2 ಇಂಚು ಎತ್ತರವಿರುವ ಜಯಾ ಅವರನ್ನು ಪ್ರತೀಕ್ ಅವರು ಮದುವೆಯಾಗಿದ್ದಾರೆ. ಇವರು ಈಗಾಗಲೇ ಹೇಳಿದಂತೆ 2021 ರಲ್ಲಿ "ವಿಶ್ವದ ಅತ್ಯಂತ ಕುಳ್ಳ ಸ್ಪರ್ಧಾತ್ಮಕ ಬಾಡಿ ಬಿಲ್ಡರ್ (ಪುರುಷ) ಗಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿಯನ್ನು ಪಡೆದವರು.
ಮಹಾರಾಷ್ಟ್ರ ಮೂಲದ 28 ವರ್ಷದ ಬಾಡಿಬಿಲ್ಡರ್ 22 ವರ್ಷದ ಜಯಾ ಅವರನ್ನು ವಿವಾಹವಾದರು. ಪ್ರತೀಕ್ ನಾಲ್ಕು ವರ್ಷಗಳ ಹಿಂದೆ ತನ್ನ ಸಂಗಾತಿಯನ್ನು ಭೇಟಿಯಾದರು ಮತ್ತು ನಂತರ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು ಎಂದು ಡೈಲಿ ಮೇಲ್ ವರದಿ ಮಾಡಿದೆ.
ವರನ ಗೆಟಪ್ ನಲ್ಲಿರುವ ಫೋಟೋಗಳನ್ನು ಹಂಚಿಕೊಂಡ ಪ್ರತೀಕ್
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಬಾಡಿಬಿಲ್ಡರ್ ಪ್ರತೀಕ್ ಅವರು ಹಂಚಿಕೊಂಡಿರುವ ಫೋಟೋಗಳಲ್ಲಿ, ಅವರು ವರನ ಗೆಟಪ್ ನಲ್ಲಿ ಇರುವ ಮತ್ತು ಆ ಗೆಟಪ್ ನಲ್ಲಿ ವಾಹನದ ಮೇಲೆ ಸಂತೋಷದಿಂದ ನಿಂತು ಡ್ಯಾನ್ಸ್ ಮಾಡುತ್ತಿರುವುದನ್ನು ಸಹ ವೀಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ: 9 ಮಕ್ಕಳ ಈ ತಾಯಿಗೆ ಬರೀ 39 ವರ್ಷ! 17ನೇ ವರ್ಷದಿಂದಲೇ ಮಗು ಹೆರುತ್ತಿದ್ದಾಳೆ ಈ ಮಹಿಳೆ!
ಮತ್ತೊಂದು ಫೋಟೋದಲ್ಲಿ, ಪ್ರತೀಕ್ ವಿಠ್ಠಲ್ ಮೋಹಿತೆ ತನ್ನ ಹೆಂಡತಿ ಮತ್ತು ಇತರ ಕುಟುಂಬ ಸದಸ್ಯರ ಪಕ್ಕದಲ್ಲಿ ನಿಂತಿರುವುದನ್ನು ನೋಡಬಹುದು.
ಇಷ್ಟೇ ಅಲ್ಲದೆ ಈ ಬಾಡಿಬಿಲ್ಡರ್ ತನ್ನ ಹಲ್ದಿ ಸಮಾರಂಭದ ಕೆಲವು ವೀಡಿಯೋಗಳನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪ್ರತೀಕ್ ವಿಠ್ಠಲ್ ಮೋಹಿತೆ ಅವರು 2012 ರಲ್ಲಿ ತಮ್ಮ ದೇಹದಾರ್ಢ್ಯ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಆರಂಭದಲ್ಲಿ ಅವರ ಗಾತ್ರದಿಂದಾಗಿ ವ್ಯಾಯಾಮಗಳನ್ನು ಮಾಡಲು ಮತ್ತು ಉಪಕರಣಗಳನ್ನು ಹಿಡಿಯಲು ಹೆಣಗಾಡಿದ್ದರು.
View this post on Instagram
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿ ಗೆದ್ದ ಪ್ರತೀಕ್
ಅವರು ತಮ್ಮ ಸ್ನೇಹಿತನ ಸಲಹೆಯ ಮೇರೆಗೆ ಗಿನ್ನೆಸ್ ವಿಶ್ವ ದಾಖಲೆ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದರು ಮತ್ತು 2021 ರಲ್ಲಿ ವಿಶ್ವದ ಅತ್ಯಂತ ಕುಳ್ಳಗಿನ ಸ್ಪರ್ಧಾತ್ಮಕ ಬಾಡಿಬಿಲ್ಡರ್ ಎಂದು ಹೆಸರಿಸಲ್ಪಟ್ಟರು.
ಇದನ್ನೂ ಓದಿ: ಟಾಮ್ ಆ್ಯಂಡ್ ಜೆರ್ರಿಯನ್ನೇ ಕಾಪಿ ಮಾಡಿದ್ರಾ ಆರ್‌ಆರ್‌ಆರ್! ವೈರಲ್ ಆಗ್ತಿದೆ ಸೇಮ್ ಟು ಸೇಮ್ ವಿಡಿಯೋ!
"ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿಯನ್ನು ಪಡೆಯುವುದು ನನ್ನ ಜೀವನದ ಕನಸಾಗಿತ್ತು ಮತ್ತು ಅದನ್ನು ಪಡೆದಿರುವುದು ತುಂಬಾನೇ ಹೆಮ್ಮೆ ಮತ್ತು ಗೌರವವಿದೆ. ನನಗೆ ತುಂಬಾ ಸಂತೋಷವಾಗಿದೆ ಮತ್ತು ಇಲ್ಲಿಯವರೆಗೆ ಇದು ನನ್ನ ವೃತ್ತಿಜೀವನದ ಅತಿದೊಡ್ಡ ಸಾಧನೆಯಾಗಿದೆ" ಎಂದು ಪ್ರತೀಕ್ ಹೇಳಿದ್ದಾರೆ.
"ನಾನು ಜಯಾಳನ್ನು ನೋಡಿದ ಕ್ಷಣದಿಂದ ಅವಳನ್ನು ಇಷ್ಟಪಟ್ಟೆ ಮತ್ತು ಅವಳು ಸಹ ನನ್ನನ್ನು ಇಷ್ಟಪಟ್ಟಳು. ಈಗ ಮದುವೆಯಾಗಿದೆ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಲು ಮೊದಲು ಒಂದು ಕೆಲಸವನ್ನು ಹುಡುಕಬೇಕು" ಎಂದು ಪ್ರತೀಕ್ ಡೈಲಿ ಮೇಲ್ ಗೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ