HOME » NEWS » Trend » WORK FROM EFFECT SOME EMPLOYEES MAY CHANGE JOB THAN GO BACK TO OFFICE STG HG

Work from home: ಕೆಲಸ ಬೇಕಿದ್ರೂ ಬಿಡ್ತೀವಿ, ಆದ್ರೆ ಆಫೀಸಿಗೆ ಮಾತ್ರ ಹೋಗಲ್ಲ!

ವೈಟ್‌ ಕಾಲರ್ ಉದ್ಯೋಗಿಗಳು ಸಾಂಕ್ರಾಮಿಕ ರೋಗದ ನಂತರವೂ ಕಚೇರಿಗಳಿಗೆ ಮರಳಲು ಬಯಸುವುದಿಲ್ಲ ಎನ್ನಲಾಗುತ್ತಿದೆ. ಸದ್ಯ, ಹೆಚ್ಚು ಕಚೇರಿಗಳು ಉದ್ಯೋಗಿಗಳನ್ನು ಕಚೇರಿಗೆ ಮರಳಲು ಹೇಳಿಲ್ಲವಾದರೂ, ಮುಂಬೈ ಹಾಗೂ ದೆಹಲಿಯಂತಹ ಮೆಟ್ರೋ ಸಿಟಿಗಳು ಖಾಸಗಿ ಕಚೇರಿಗಳಿಗೆ ಶೇ. 50ರ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಿದೆ.

Trending Desk
Updated:June 10, 2021, 2:01 PM IST
Work from home: ಕೆಲಸ ಬೇಕಿದ್ರೂ ಬಿಡ್ತೀವಿ, ಆದ್ರೆ ಆಫೀಸಿಗೆ ಮಾತ್ರ ಹೋಗಲ್ಲ!
ಪ್ರಾತಿನಿಧಿಕ ಚಿತ್ರ
  • Share this:

2020 ರಿಂದ ಅನೇಕರಿಗೆ ವರ್ಕ್‌ ಫ್ರಮ್‌ ಹೋಂ ಸಾಮಾನ್ಯವಾಗಿಬಿಟ್ಟಿದೆ. ಮನೆಯಲ್ಲೇ ಕೆಲಸವಾದ್ದರಿಂದ ಕೆಲಸ ಜಾಸ್ತಿಯಾಗಿದೆಯೆಂಬ ದೂರುಗಳು ಸಾಕಷ್ಟು ಇದ್ದರೂ, ಟ್ರಾಫಿಕ್‌, ವಾಯುಮಾಲಿನ್ಯದ ಕಿರಿಕಿರಿ ಹಾಗೂ ಆರಾಮಾಗಿ ಮನೆಯಲ್ಲೇ ಕೆಲಸ ಮಾಡಬಹುದೆಂದು ಅನೇಕರಿಗೆ ವರ್ಕ್‌ ಫ್ರಮ್ ಹೋಂನ ರುಚಿ ಹತ್ತಿದೆ. ಈ ಹಿನ್ನೆಲೆ ಅನೇಕ ವೈಟ್‌ ಕಾಲರ್ ಉದ್ಯೋಗಿಗಳು ಸಾಂಕ್ರಾಮಿಕ ರೋಗದ ನಂತರವೂ ಕಚೇರಿಗಳಿಗೆ ಮರಳಲು ಬಯಸುವುದಿಲ್ಲ ಎನ್ನಲಾಗುತ್ತಿದೆ. ಸದ್ಯ, ಹೆಚ್ಚು ಕಚೇರಿಗಳು ಉದ್ಯೋಗಿಗಳನ್ನು ಕಚೇರಿಗೆ ಮರಳಲು ಹೇಳಿಲ್ಲವಾದರೂ, ಮುಂಬೈ ಹಾಗೂ ದೆಹಲಿಯಂತಹ ಮೆಟ್ರೋ ಸಿಟಿಗಳು ಖಾಸಗಿ ಕಚೇರಿಗಳಿಗೆ ಶೇ. 50ರ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಿದೆ.


ಆದರೆ, ಕೆಲ ನೌಕರರು ಮಾತ್ರ ಕೊರೊನಾ ಇರಲಿ ಅಥವಾ ಇಲ್ಲದಿರಲಿ ಹೆಚ್ಚು ಉತ್ಪಾದಕ ರೀತಿಯಲ್ಲಿ ಮಾಡಲು ಸಾಧ್ಯವಾದಾಗ ಪ್ರಯಾಣದ ಸಮಯವನ್ನು ವ್ಯರ್ಥ ಮಾಡುವುದರ ಅರ್ಥವೇನು ಎಂದು ಕೇಳುತ್ತಾರೆ. ಪ್ರತಿದಿನ ಮೊದಲಿನಂತೆ ಕಚೇರಿಗೆ ಹೊರಡುವುದು, ಕ್ಯಾಬ್‌ ಬುಕ್ ಮಾಡುವುದು ಅಥವಾ ವಾಹನ ಚಲಾಯಿಸುವುದು ಹಾಗೂ ಗಂಟೆಗಟ್ಟಲೆ ಪ್ರಯಾಣ ಮಾಡುವುದಕ್ಕೆ ಸಮಯ ಹಾಳು ಮಾಡುವುದಕ್ಕೆ ಬೇಸರ ಹೊರಹಾಕಿದ್ದಾರೆ.



ಕಚೇರಿಯಲ್ಲಿದ್ದಾಗ ಸಹೋದ್ಯೋಗಿಗಳ ಜತೆ ಹರಟೆ, ಊಟ ಮಾಡುವುದು ತಪ್ಪಿದ್ದು, ಆ ಸಮಯದಲ್ಲಿ ಕೆಲ ಕಾಲ ನಿದ್ದೆ ಮಾಡಬಹುದೆಂಬುದು ಮಹಿಳಾ ನೌಕರರೊಬ್ಬರು ಹೇಳುತ್ತಾರೆ. ಅಲ್ಲದೆ, ಆಕೆ ಕಚೇರಿಗೆ ಬರಲೇಬೇಕೆಂದು ಒತ್ತಡ ಹಾಕಿದರೆ ಕೆಲಸವನ್ನೇ ಬಿಡುತ್ತೇನೆ. ಈಗಾಗಲೇ ಬೇರೆ ಆಯ್ಕೆಗಳನ್ನು ಹುಡುಕುತ್ತಿದ್ದೇನೆ ಎಂದೂ ಹೇಳಿಕೊಂಡಿದ್ದಾರೆ.


ಕಚೇರಿಗೆ ಮರಳಲು ಕೇಳಿದಾಗ ಹಲವರು ಒಟ್ಟಿಗೇ ಕೆಲಸ ಬಿಡುವುದಿಲ್ಲವಾದರೂ ಅನೇಕರು ಎಚ್‌ಆರ್‌ ವ್ಯವಸ್ಥಾಪಕರೊಂದಿಗೆ ಕೆಲಸದ ವ್ಯವಸ್ಥೆಗಳ ಬಗ್ಗೆ ಮರು ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಕಚೇರಿಗೆ ಬರಲೇಬೇಕೆಂಬ ಒತ್ತಡ ಹೇರಿದರೆ ಮನೆಯಲ್ಲೇ ಕೆಲಸ ಮಾಡುವ ಬೇರೆ ಉದ್ಯೋಗ ಹುಡುಕುವುದು ಮುಂದಿನ ದಾರಿ ಎಂದು ಅನೇಕ ನೌಕರರು ಒಪ್ಪಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮನೆ ಖಾಲಿ ಮಾಡಿರುವ ಹಲವು ಉದ್ಯೋಗಿಗಳು..!


ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿದ್ದ, ಪಿಜಿಯಲ್ಲಿದ್ದ ಬಹುತೇಕ ಉದ್ಯೋಗಿಗಳು ರೂಂ, ಮನೆಗಳನ್ನು ಖಾಲಿ ಮಾಡಿದ್ದು, ತಮ್ಮ ಊರಿನಲ್ಲೇ ವಾಸ ಮಾಡುತ್ತಿದ್ದಾರೆ. ಈಗ ಮತ್ತೆ ಕಚೇರಿಗೆ ಕರೆದರೆ ರಿಮೋಟ್‌ ವರ್ಕ್‌ ಅನ್ನೇ ಹುಡುಕುವುದು ಮುಂದಿನ ಕೆಲಸ ಎನ್ನುತ್ತಾರೆ ಅನೇಕರು. ಪ್ರತಿದಿನ 3 ಗಂಟೆ ಬಸ್‌, ಕ್ಯಾಬ್‌ನಲ್ಲಿ ಹೋಗುವುದು ಅಥವಾ ವಾಹನ ಚಲಾಯಿಸುವುದಕ್ಕಿಂತ ಆ ಸಮಯವನ್ನು ಕುಟುಂಬದ ಜತೆಗೆ ಕಳೆಯಬಹುದೆಂಬುದು ಅನೇಕರ ಅಂಬೋಣ.


ಕೊರೊನಾ ಎರಡನೇ ಅಲೆ ಶುರುವಾಗುವ ಮುನ್ನ ಏಪ್ರಿಲ್‌ನಿಂದ ಕಚೇರಿಗೆ ಉದ್ಯೋಗಿಗಳನ್ನು ಕರೆ ತರಲು ಅನೇಕ ಕಂಪನಿಗಳು ಪ್ಲ್ಯಾನ್‌ ಮಾಡಿದ್ದವು. ಆ ವೇಳೆಯೇ ಕೆಲವರು ವಿರೋಧಿಸಿದ್ದರು. ಈಗ ಮತ್ತೆ ಕೊರೊನಾ ಹೆಚ್ಚಾದ ಕಾರಣ ಆ ಯೋಜನೆ ಉಲ್ಟಾ ಹೊಡೆದಿದ್ದು, ಪುನ: ಕಚೇರಿಗೆ ಕರೆ ತರುವುದು ಹೇಗೆಂಬ ಆಲೋಚನೆಯಲ್ಲಿದ್ದಾರೆ ಅನೇಕ ಕಂಪನಿಗಳು.

ಐಟಿ, ಇ-ಕಾಮರ್ಸ್, ಮಾರ್ಕೆಟಿಂಗ್, ಇನ್‌ವೆಸ್ಟ್ಮೆಂಟ್‌ ಮ್ಯಾನೇಜ್ಮೆಂಟ್, ಯೂಸರ್ ಇಂಟರ್ಫೇಸ್ ಡಿಸೈನ್, ಡಾಟಾ ಸೈನ್ಸಸ್ ಮುಂತಾದ ಕ್ಷೇತ್ರಗಳಿಗೆ ಡಿಜಿಟಲ್‌ ಅಂಶವಿರುವುದರಿಂದ ರಿಮೋಟ್‌ ವರ್ಕ್‌ ಕೆಲಸ ಸೂಕ್ತವೆನಿಸುತ್ತದೆ. ಆದರೆ, ಕೊರೊನಾ ಎಷ್ಟೇ ಇರಲಿ ನಮ್ಮ ಕೆಲಸ ನಡೀಬೇಕಲ್ಲ ಅಂತ ಹಲವು ಉದ್ಯೋಗಗಳು ಕಚೇರಿಯಲ್ಲೇ ಕೆಲಸ ಮುಂದುವರಿಸಿವೆ.


15 ಮಿಲಿಯನ್ ಉದ್ಯೋಗ ನಷ್ಟ..!


ಮೇ 2021 ರಲ್ಲೇ 15 ಮಿಲಿಯನ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಇತ್ತೀಚಿನ CMIE ವರದಿ ಹೇಳುತ್ತಿದೆ. ಕಳೆದ ವರ್ಷ ಅಂದರೆ ಏಪ್ರಿಲ್ 2020 ಯಲ್ಲಿ ದೇಶವ್ಯಾಪಿ ಲಾಕ್‌ಡೌನ್‌ ಸಮಯದಲ್ಲೂ 114 ಮಿಲಿಯನ್ ಉದ್ಯೋಗ ನಷ್ಟವಾಗಿತ್ತು. ಅಲ್ಲದೆ, ಕೆಲ ಉದ್ಯೋಗ ನೇಮಕಾತಿ ಮುಂದುವರೆದಿದ್ದರೂ, ಎಲ್ಲ ಕ್ಷೇತ್ರಗಳ್ಲಲೂ ಅಲ್ಲ ಎಂದು ತಜ್ಞರು ಹೇಳಿದ್ದಾರೆ.


ಕಚೇರಿಗೆ ಹೋಗಲು ಇಷ್ಟಪಡ್ತಾರೆ..!


ಆದರೂ, ಸಾಂಕ್ರಾಮಿಕ ರೋಗ ಮತ್ತೆ ಕಡಿಮೆಯಾದ ಬಳಿಕ ಕಚೇರಿಗೆ ಹೋಗಲು ಹಲವರು ಬಯಸಿದ್ದಾರೆ. ಮನೆಯಲ್ಲೇ ಕೆಲಸ ಹೆಚ್ಚಾಗಿದ್ದರಿಂದ ವರ್ಕ್‌ - ಲೈಫ್‌ ಬ್ಯಾಲೆನ್ಸ್ ತಪ್ಪಿದೆ, ಸಾಮಾಜಿಕ ಸಂಪರ್ಕ ಕಡಿಮೆಯಾಗಿದೆ ಎಂದೂ ದೂರುತ್ತಾರೆ. ಇನ್ನೂ ಕೆಲವರು ಕಚೇರಿಗೆ ಮರಳುವುದೋ, ಮನೆಯಲ್ಲೇ ಕೆಲಸ ಮಾಡುವುದೋ ಎಂಬ ಗೊಂದಲದಲ್ಲೂ ಇದ್ದಾರೆ.


ಮನೆಯಿಂದಲೇ ವಿದೇಶಿ ಕಂಪನಿಯಲ್ಲಿ ಕೆಲಸ..!

ಈ ಮಧ್ಯೆ, ಮನೆಯಿಂದಲೇ ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವ ಇಚ್ಛೆಯನ್ನು ಅನೇಕರು ವ್ಯಕ್ತಪಡಿಸಿದ್ದು, ಈ ರೀತಿಯ ಕೆಲಸ ಹುಡುಕುತ್ತಿದ್ದಾರೆ. ಕೆಲ ತಿಂಗಳುಗಳಿಂದ ಈ ಹೊಸ ಟ್ರೆಂಡ್‌ ಶುರುವಾಗಿದೆ ಎಂದು ನೇಮಕಾತಿ ಸಂಸ್ಥೆ ರ‍್ಯಾಂಡ್‌ಸ್ಟ್ಯಾಡ್ ಇಂಡಿಯಾ ತಿಳಿಸಿದೆ.

ಸಾಂಕ್ರಾಮಿಕದ ನಂತರದ ಜಗತ್ತಿನಲ್ಲೂ ಶೇಕಡಾ 35-40 ರಷ್ಟು ಉದ್ಯೋಗಿಗಳು ಸಂಪೂರ್ಣವಾಗಿ ಮನೆಯಿಂದಲೇ ಕೆಲಸ ಮಾಡಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


First published: June 10, 2021, 2:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories