ಸ್ಟೀಲ್ ಪಾತ್ರೆಗಳ ಮೂಲಕ ಪರಿಸರ ಉಳಿಸುತ್ತಿರುವ ಬೆಂಗಳೂರಿನ ಬ್ಯಾಂಕ್ ;  ಸಾಧ್ಯವಾಗಿಸಿದ್ದೆಲ್ಲಾ ಹೆಣ್ಣುಮಕ್ಕಳೇ !

ಆರಂಭದಲ್ಲಿ ಇವರಿಬ್ಬರೇ ತಮ್ಮ ಖರ್ಚಿನಲ್ಲಿ ಒಂದಷ್ಟು ಸ್ಟೀಲ್ ತಟ್ಟೆ, ಎರಡು ಬಗೆಯ ಲೋಟಗಳು, ಚಮಚ, ಬಟ್ಟಲುಗಳನ್ನು ತಂದಿಟ್ಟುಕೊಂಡರು. ಅದನ್ನು ತಮ್ಮ ಅಕ್ಕಪಕ್ಕದವರು ಪರಿಚಿತರಿಗೆ ಬಾಡಿಗೆಗೆ ಕೊಡೋಕೆ ಶುರು ಮಾಡಿದ್ರು. ಮೊದಲಿಗೆ ಪ್ಲಾಸ್ಟಿಕ್ ಮತ್ತು ಪೇಪರ್ ವಸ್ತುಗಳಿಗಿಂತ ಸ್ಟೀಲ್ ವಸ್ತುಗಳು ಯಾಕೆ ಒಳ್ಳೆಯದು ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ರು.

ರಿಶಿತಾ ಶರ್ಮಾ ಮತ್ತು ಲಕ್ಷ್ಮಿ ಶಂಕರನ್

ರಿಶಿತಾ ಶರ್ಮಾ ಮತ್ತು ಲಕ್ಷ್ಮಿ ಶಂಕರನ್

  • Share this:
ಬೆಂಗಳೂರು (ಏಪ್ರಿಲ್ 05): ಇದೊಂದು ವಿಶಿಷ್ಟ ಬ್ಯಾಂಕ್. ನೀವು ಬಂದು ಸಾಲ ಕೇಳಲಿ ಅಂತಲೇ ಇವರು ಕಾಯುತ್ತಿರುತ್ತಾರೆ. ಇಲ್ಲಿ ನೀವು ವಸ್ತುಗಳನ್ನು ಬಾಡಿಗೆಗೆ ಪಡೆಯಬಹುದು, ನಂತರ ಮರಳಿ ಕೊಡುವಾಗ ಬಳಸಿದ್ದಕ್ಕೆ ಬಾಡಿಗೆ ಕೊಟ್ಟರಾಯಿತು. ಹೀಗೆ ಮಾಡೋದ್ರಿಂದ ನಿಮ್ಮ ಸುತ್ತಲಿನ ಪರಿಸರ ನಿಮಗೆ ಧನ್ಯವಾದ ಹೇಳುತ್ತೆ. ಬ್ಯಾಂಕಿಗೂ ಪರಿಸರಕ್ಕೂ ಏನಿದು ಸಂಬಂಧ ? ಅಷ್ಟಕ್ಕೂ ಇದ್ಯಾವುದಪ್ಪಾ ವಿಚಿತ್ರ ಬ್ಯಾಂಕ್ ಎಂದುಕೊಳ್ತಿದ್ದೀರಾ? ಇದು ಕಟ್ಲೆರಿ ಬ್ಯಾಂಕ್…ಅಂದ್ರೆ ಆಹಾರ ಸೇವಿಸೋಕೆ ಬಳಸೋ ನಾನಾ ಬಗೆಯ ಪಾತ್ರೆಗಳ ವಿಶಿಷ್ಟ ಬ್ಯಾಂಕ್.

ಒಂದು ಸಣ್ಣ ಬರ್ತಡೇ ಪಾರ್ಟಿ ಇದ್ದರೂ ಅಲ್ಲೊಂದಷ್ಟು ಪ್ಲಾಸ್ಟಿಕ್ ಲೋಟ, ಚಮಚ, ಪೇಪರ್ ಕಪ್ಸ್, ಆಹಾರದ ಪ್ಯಾಸ್ಟಿಕ್ ಪೊಟ್ಟಣಗಳು ಎಲ್ಲಾ ಇದ್ದೇ ಇರುತ್ತವೆ. ಮೊದಲೇ ಬಗೆಬಗೆಯ ಕಸ ಮತ್ತು ಪ್ಲಾಸ್ಟಿಕ್​ನಿಂದ ನಾವು ಪರಿಸರಕ್ಕೆ ಸಾಕಷ್ಟು ಹಾನಿ ಮಾಡಿಬಿಟ್ಟಿದ್ದೇವೆ. ಖುಷಿಯ ಸಮಾರಂಭದ ಸಂದರ್ಭಗಳಲ್ಲೂ ಈ ಅವ್ಯವಸ್ಥೆ ಬೇಕಾ ಎಂದು ಬೆಂಗಳೂರಿನ ರಿಶಿತಾ ಶರ್ಮಾ ಮತ್ತು ಲಕ್ಷ್ಮಿ ಶಂಕರನ್ ಇದಕ್ಕೊಂದು ಪರಿಹಾರ ಕಂಡುಹಿಡಿಯಲು ನಿರ್ಧರಿಸಿದ್ರು. ಆಗ ಹುಟ್ಟಿಕೊಂಡದ್ದೇ ರೆಂಟ್ – ಎ – ಕಟ್ಲೆರಿ ಎನ್ನುವ ಕಟ್ಲೆರಿ ಬ್ಯಾಂಕ್.

ಆರಂಭದಲ್ಲಿ ಇವರಿಬ್ಬರೇ ತಮ್ಮ ಖರ್ಚಿನಲ್ಲಿ ಒಂದಷ್ಟು ಸ್ಟೀಲ್ ತಟ್ಟೆ, ಎರಡು ಬಗೆಯ ಲೋಟಗಳು, ಚಮಚ, ಬಟ್ಟಲುಗಳನ್ನು ತಂದಿಟ್ಟುಕೊಂಡರು. ಅದನ್ನು ತಮ್ಮ ಅಕ್ಕಪಕ್ಕದವರು ಪರಿಚಿತರಿಗೆ ಬಾಡಿಗೆಗೆ ಕೊಡೋಕೆ ಶುರು ಮಾಡಿದ್ರು. ಮೊದಲಿಗೆ ಪ್ಲಾಸ್ಟಿಕ್ ಮತ್ತು ಪೇಪರ್ ವಸ್ತುಗಳಿಗಿಂತ ಸ್ಟೀಲ್ ವಸ್ತುಗಳು ಯಾಕೆ ಒಳ್ಳೆಯದು ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ರು. ಕಸ ನಿರ್ವಹಣೆಯ ಕಾರ್ಯಕ್ರಮಗಳಿಗೆ ಹೋಗಿ ಅಲ್ಲಿನ ಜನರಿಗೆ ಇದರ ಬಗ್ಗೆ ಜಾಗೃತಿ ಮೂಡಿಸೋ ಕೆಲಸ ಮಾಡಿದ್ರು.

ಸ್ಟೀಲ್ ಪಾತ್ರೆಗಳಾದ್ರೆ ಒಮ್ಮೆ ಬಳಸಿದ ನಂತರ ಶುಚಿಯಾಗಿ ತೊಳೆದಿಟ್ಟು ಮತ್ತೊಮ್ಮೆ ಬಳಸಬಹುದು. ಇದರಿಂದ ಈಗಾಗಲೇ ಎಲ್ಲಾ ಕಡೆ ಕಾಣೋ ಕಸದ ರಾಶಿಗಳಿಗೆ ನಮ್ಮ ಕಡೆಯಿಂದ ಮತ್ತಷ್ಟು ಪ್ಲಾಸ್ಟಿಕ್ ಮತ್ತಿತರ ಕಸ ಹೋಗೋದನ್ನು ತಪ್ಪಿಸಬಹುದು. ಇದು ಪರಿಸರಕ್ಕೆ ಒಳ್ಳೆಯದು ಮಾತ್ರವಲ್ಲ, ಖರ್ಚೂ ಕಡಿಮೆಯಾಗಿ ನಮಗೂ ಅನುಕೂಲ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಟ್ರು. ಸಾಮಾಜಿಕ ಜಾಲತಾಣಗಳನ್ನೂ ಬಳಸಿಕೊಂಡು ತಮ್ಮ ಕೆಲಸ ಶುರುಮಾಡಿದ್ರು. ಕೇವಲ 100 ತಟ್ಟೆ-ಲೋಟಗಳ ಸೆಟ್ ಇಂದ ಶುರುವಾದ ಈ ಕಟ್ಲೆರಿ ಬ್ಯಾಂಕ್ ಇಂದು ಬೆಂಗಳೂರಿನ ನಾನಾ ಕಡೆ 25ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ.

ಪ್ರತೀ ಏರಿಯಾದಲ್ಲೂ ಆಸಕ್ತಿ ಇರುವ ಒಬ್ಬೊಬ್ಬರು ಮುಂದೆ ಬಂದು ವಸ್ತುಗಳ ನಿರ್ವಹಣೆ, ಸ್ವಚ್ಛತೆ, ಜನರೊಂದಿಗೆ ವ್ಯವಸಹರಿಸುವದರ ಬಗ್ಗೆ ಇವರ ಬಳಿ ಮಾಹಿತಿ ಪಡೆದು ನಂತರ ತಾವೇ ಆಸಕ್ತಿಯಿಂದ ಮಾಡುತ್ತಿದ್ದಾರೆ. ಆರಂಭದಲ್ಲಿ 1500 ರೂಪಾಯಿಗಳಷ್ಟು ಹಣವನ್ನು ಠೇವಣಿಯಾಗಿ ಇರಿಸಿಕೊಂಡು ನಂತರ ಅಗತ್ಯ ಕಟ್ಲೆರಿ ಕೊಡುತ್ತಿದ್ದ ಇವರಿಗೆ ಈಗ ಅನೇಕ ಗ್ರಾಹಕರು ಚಿರಪರಿಚಿತರಾಗಿದ್ದಾರೆ. ನಂಬಿಕೆ ಆಧಾರದ ಮೇಲೆ ಠೇವಣಿ ಇಟ್ಟುಕೊಳ್ಳದೇ ವಸ್ತುಗಳನ್ನು ಕೊಡುತ್ತಾರೆ. ಒಂದು ಸೆಟ್​ಗೆ 15 ರೂಪಾಯಿ ಬಾಡಿಗೆ ಪಡೆಯುತ್ತಾರೆ. ಸರ್ಕಾರಿ ಶಾಲೆಯ ಕಾರ್ಯಕ್ರಮಗಳು, ಸಮುದಾಯದ ಕಾರಯಕ್ರಮಗಳಿಗೆ ಉಚಿತವಾಗಿ ಕೂಡಾ ಕಟ್ಲೆರಿ ನೀಡುತ್ತಾರೆ.

ಬಳಸಿದ ನಂತರ ಹಿಂದಿರುಗಿ ಬರುವ ಎಲ್ಲಾ ಪಾತ್ರೆಗಳನ್ನು ಮತ್ತೊಮ್ಮೆ ಶುಚಿ ಮಾಡಿ ಸ್ಟೆರಿಲೈಜ್ ಮಾಡುತ್ತಾರೆ. ಇವರು ಪಡೆಯುವ ಬಾಡಿಗೆ ಹಣದ ಜೊತೆ ಈ ಶುಚಿತ್ವದ ಕೆಲಸಗಳಿಗೆ ಕೆಲವೊಮ್ಮೆ ಕೈಯಿಂದಲೇ ಖರ್ಚಾಗುವ ಸಂದರ್ಭಗಳೂ ಇದೆ. ಆದರೆ ಈ ಎಲ್ಲಾ ಕೆಲಗಳನ್ನು ಈ ಮಹಿಳೆಯರು ಇಷ್ಟಪಟ್ಟೇ ಮಾಡುತ್ತಿದ್ದಾರೆ. ಇನ್ನು, ದೂರದ ಪ್ರದೇಶಗಳಿಗೆ ಒಯ್ಯುವವರಿಗೆ ಭಾರ ಕಡಿಮೆಯಾಗಲಿ ಎಂದು ಮೆಲಮೈನ್ ಅಥವಾ ಫೈಬರ್ ತಟ್ಟೆ-ಬಟ್ಟಲುಗಳನ್ನೂ ತಂದಿಟ್ಟಿದ್ದಾರೆ. ಹೈದರಾಬಾದ್ ಮತ್ತು ಚೆನ್ನೈನಲ್ಲೂ ಕಟ್ಲೆರಿ ಬ್ಯಾಂಕ್ ಬಗ್ಗೆ ಆಸಕ್ತಿ ವಹಿಸಿ ಇವರ ಮಾರ್ಗದರ್ಶನದಲ್ಲಿ ಒಂದಿಬ್ಬರು ಶುರು ಮಾಡಿದ್ದಾರೆ. ಆದರೆ ಅಲ್ಲಿನ್ನೂ ಈ ವಿಚಾರದಲ್ಲಿ ಹೆಚ್ಚಿನ ಜಾಗೃತಿ ಮೂಡುವ ಅವಶ್ಯಕತೆ ಇದೆ ಎನ್ನುತ್ತಾರೆ ರಿಶಿತಾ ಶರ್ಮಾ. ಒಟ್ಟಿನಲ್ಲಿ ಪುನರ್ಬಳಕೆ ಮತ್ತು ಸದ್ಬಳಕೆ ಇವರ ಉದ್ದೇಶ. ಪರಿಸರಕ್ಕೆ ತಾವು ಇಷ್ಟಾದರೂ ಸಹಾಯ ಮಾಡಲು ಸಾಧ್ಯವಾಗಿದ್ದಕ್ಕೆ ರಿಶಿತಾ ಮತ್ತು ಲಕ್ಷ್ಮಿ ಇಬ್ಬರಿಗೂ ಸಂತಸವಿದೆ.
Published by:Soumya KN
First published: