Pregnant Women: ಭೋರ್ಗೆರೆವ ಅಲೆಗಳ ನಡುವೆ ಸಮುದ್ರದ ಮಧ್ಯದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಶಿಯಾಲ್ ಬೇತ್ ಎಂಬಲ್ಲಿ ಕಳೆದ ಮಂಗಳವಾರದಂದು ಗರ್ಭಿಣಿ ಮಹಿಳೆಯೋರ್ವರು ದೋಣಿಯೊಂದರಲ್ಲಿ ಚಲಿಸುವಾಗ ಪ್ರಸವ ವೇದನೆ ತಡೆಯಲಾಗದೆ ಆ ದೋಣಿಯಲ್ಲೇ ಮಗುವೊಂದಕ್ಕೆ ಜನ್ಮ ನೀಡಿರುವ ರೋಚಕ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಮಗುವಿಗೆ ಜನ್ಮ ನೀಡಿದ ಮಹಿಳೆ

ಮಗುವಿಗೆ ಜನ್ಮ ನೀಡಿದ ಮಹಿಳೆ

  • Share this:
ಒಮ್ಮೊಮ್ಮೆ ಎಂತೆಂತಹ ಆಕಸ್ಮಿಕ ಘಟನೆಗಳು ನಡೆಯುತ್ತವೆ ಎಂದರೆ ಅವುಗಳನ್ನು ಊಹಿಸಲೂ ಸಹ ಆಗದು. ಆದರೆ, ನಿಜಕ್ಕೂ ಹೀಗಾಯಿತೆ ಎಂದು ಘಟನೆಯ ನಂತರ ಗೊತ್ತಾದ ಮೇಲೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಸದ್ಯ ಅಂತಹುದ್ದೆ ಒಂದು ಘಟನೆ ಈಗ ರಾಜಕೋಟ್ (Rajkot) ನಿಂದ ವರದಿಯಾಗಿದೆ. ಸದ್ಯ ಗುಜರಾತ್ (Gujarat) ರಾಜ್ಯದ ಅಮ್ರೇಲಿ ಜಿಲ್ಲೆಯ (Amreli District) ದ್ವೀಪ ಪ್ರದೇಶವಾದ (Island area) ಶಿಯಾಲ್ ಬೇತ್ (Sheol Beth)ಎಂಬಲ್ಲಿ ಕಳೆದ ಮಂಗಳವಾರದಂದು ಗರ್ಭಿಣಿ ಮಹಿಳೆಯೋರ್ವರು (Pregnant woman) ದೋಣಿಯೊಂದರಲ್ಲಿ (Boat) ಚಲಿಸುವಾಗ ಪ್ರಸವ ವೇದನೆ ತಡೆಯಲಾಗದೆ ಆ ದೋಣಿಯಲ್ಲೇ ಮಗುವೊಂದಕ್ಕೆ ಜನ್ಮ ನೀಡಿರುವ ರೋಚಕ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ದೋಣಿ ಸಾಗುವಾಗ ಮಹಿಳೆಗೆ ಹೆರಿಗೆ ನೋವು
ಅಸಲಿಗೆ ಆ ಮಹಿಳೆಯು ಪ್ರಸವದ ನಿರೀಕ್ಷೆಯಲ್ಲಿದ್ದರು. ಹಾಗಾಗಿ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ಆಕೆಯನ್ನು ಆಕೆಯ ಹಳ್ಳಿಯಿಂದ ಸನಿಹದ ರಜುಲಾ ಎಂಬಲ್ಲಿನ ಆಸ್ಪತ್ರೆಯೊಂದಕ್ಕೆ ಹೆರಿಗೆಗೆಂದು ಕರೆದುಕೊಂಡು ಹೋಗುವ ಮೂಲಕ ನೆರವಾಗಿದ್ದರು. ಆದರೆ, ಸಮುದ್ರದ ಅಲೆಗಳ ಮಧ್ಯೆಯೇ ದೋಣಿ ಸಾಗುವಾಗ ಮಹಿಳೆಗೆ ತಾಳಲಾಗದ ಪ್ರಸವ ವೇದನೆ ಪ್ರಾರಂಭವಾಗಿ ಅದೇ ದೋಣಿಯಲ್ಲೇ ಆಕೆ ಮಗುವಿಗೆ ಜನ್ಮ ನೀಡಿದಳು ಎಂದು ತಿಳಿದುಬಂದಿದೆ.

ದೋಣಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಅದಕ್ಕೂ ಮುಂಚೆ ರಜುಲಾದಲ್ಲಿ ಸ್ಥಿತವಿರುವ ಪಿಪವಾವ್ ಬಂದರಿನ 108 ವೈದ್ಯಕೀಯ ನೆರವು ಸಿಬ್ಬಂದಿಗೆ ದ್ವೀಪ ಗ್ರಾಮವಾದ ಶಿಯಾಲ್ ಬೇತ್ ಎಂಬಲ್ಲಿಂದ ಗೀತಾ ಬಢೆಲ್ಯಾ ಎಂಬ ಮಹಿಳೆಯಿಂದ ನೆರವು ಕೋರಿ ಕರೆ ಬಂದಿದೆ, ಗೀತಾ ಅವರಿಗೆ ಪ್ರಸವ ವೇದನೆ ಶುರುವಾಗಿತ್ತೆನ್ನಲಾಗಿದೆ. ಹಾಗಾಗಿ ವೈದ್ಯಕೀಯ ನೆರವು ನೀಡುವ ಸಿಬ್ಬಂದಿ ತಕ್ಷಣ ದೋಣಿಯ ಮೂಲಕ ಗೀತಾ ಇದ್ದ ಗ್ರಾಮಕ್ಕೆ ತೆರಳಿ ಅವರನ್ನು ಅಲ್ಲಿಂದ ಕರೆದುಕೊಂಡು ದೋಣಿಯ ಮೂಲಕ ರಜುಲಾದ ಆಸ್ಪತ್ರೆಗೆ ಬರುತ್ತಿದ್ದರೆನ್ನಲಾಗಿದೆ. ಇದೇ ಸಂದರ್ಭದಲ್ಲಿ ಗೀತಾ ಅವರಿಗೆ ನೋವು ತಡೆಯಲಾಗದೆ ದೋಣಿಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ಇದನ್ನೂ ಓದಿ:  National Technology Day: ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ: ಸುಧಾರಿತ ಮತ್ತು ಸುಸ್ಥಿರ ಅಭಿವೃದ್ಧಿಗೆ ತಂತ್ರಜ್ಞಾನ ಎಷ್ಟು ಬೇಕು?

ಅಷ್ಟಕ್ಕೂ ಈ ಕಥೆಯು ಸ್ವಲ್ಪ ರೋಮಾಂಚಕತೆಯಿಂದಲೇ ಕೂಡಿದೆ ಎಂದು ಹೇಳಬಹುದು. ಏಕೆಂದರೆ ಅದಾಗಲೇ ಅರಬ್ಬಿ ಸಮುದ್ರದಲ್ಲಿ ಗಾಳಿಯಿದ್ದ ಕಾರಣ ಅಲೆಗಳ ರಭಸ ವಿಪರೀತವಾಗಿತ್ತೆನ್ನಲಾಗಿದೆ. ಅಲ್ಲದೆ, ಪ್ಯಾರಾ ಮೆಡಿಕಲ್ ಸಿಬ್ಬಂದಿ ಒಂದು ದೋಣಿಯಲ್ಲಿದ್ದರೆ ಮಗುವಿಗೆ ಜನ್ಮ ನೀಡಿರುವ ಮಹಿಳೆ ತನ್ನ ಕೆಲ ಗ್ರಾಮಸ್ಥರೊಂದಿಗೆ ಇನ್ನೊಂದು ದೋಣಿಯಲ್ಲಿದ್ದರೆನ್ನಲಾಗಿದೆ. ಇವರಿಬ್ಬರು ಸಾಗುವಾಗ ಸಮುದ್ರದ ಮಧ್ಯದಲ್ಲಿ ಗೀತಾ ಅವರಿಗೆ ಪ್ರಸವ ವೇದನೆ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಏನೂ ಮಾಡಲು ಸಾಧ್ಯವಾಗದೆ ಇದ್ದ ಕಾರಣ ಗೀತಾಳ ಗ್ರಾಮಸ್ಥರು ಸಮುದ್ರದ ಮಧ್ಯದಲ್ಲೇ ಇನ್ನೊಂದು ದೋಣಿಯಲ್ಲಿ ಸಾಗುತ್ತಿದ್ದ ಅರೆ ವೈದ್ಯಕೀಯ ಸಿಬ್ಬಂದಿಯ ಸಲಹೆ-ಸೂಚನೆಗಳನ್ನು ಪಡೆಯುತ್ತ ಗೀತಾ ಮಗುವಿಗೆ ಜನ್ಮ ನೀಡಲು ಸಹಕರಿಸಿದ್ದಾರೆನ್ನಲಾಗಿದೆ.

ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಈ ಒಟ್ಟಾರೆ ಘಟನೆಯಲ್ಲಿ ಭಾಗಿಯಾಗಿದ್ದ ಅಂಬುಲೆನ್ಸ್ ಸೇವೆಯ ವ್ಯವಸ್ಥಾಪಕರಾದ ಚೇತನ್ ಗಾಢೆ ಅವರು ಈ ರೀತಿ ಹೇಳಿದ್ದಾರೆ, "ನಮ್ಮ ವೈದ್ಯಕೀಯ ತಂತ್ರಜ್ಞ ಹಾಗೂ ದೋಣಿ ನಾವಿಕನಾದ ಪ್ರಶಾಂತ್ ಜೋಶಿ ಎಂಬುವವರು ಹಳ್ಳಿಗೆ ಭೇಟಿ ನೀಡಿದಾಗ ಆ ಮಹಿಳೆಗೆ ಪ್ರಸವದ ವೇದನೆ ಆರಂಭವಾಗಿತ್ತು. ತಕ್ಷಣ ನಮ್ಮವರು ಆಕೆಗೆ ಬೇಕಾದ ಕೆಲ ಪ್ರಥಮ ವೈದ್ಯಕೀಯ ಅವಶ್ಯಕತೆಗಳನ್ನು ಪೂರೈಸಿ ಆಸ್ಪತ್ರೆಗೆ ಕರೆದುಕೊಂಡು ಬರಲು ಏರ್ಪಾಟು ಮಾಡಿದರು. ಆದರೆ ಅವರು ಮಧ್ಯದಲ್ಲಿಯೇ ಆರೋಗ್ಯಕರವಾದ ಗಂಡು ಮಗುವಿಗೆ ಜನ್ಮ ನೀಡಿದರು" ಎಂದು ಹೇಳಿದ್ದಾರೆ.

ಇದನ್ನೂ ಓದಿ:  Explained: ಅಯೋಧ್ಯೆಯಷ್ಟೇ ಮಹತ್ವದ್ದೇಕೆ ಜ್ಞಾನವಾಪಿ ಭೂಮಿ? ಅಷ್ಟಕ್ಕೂ ವಿವಾದಕ್ಕೆ ಒಳಗಾಗಿದ್ದೇಕೆ ಮಸೀದಿ?

ತದನಂತರ ಮಗು ಹಾಗೂ ತಾಯಿಯನ್ನು ಸುರಕ್ಷಿತವಾಗಿ ರಜುಲಾಗೆ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮೂಲಗಳ ಪ್ರಕಾರ, ತಾಯಿ ಹಾಗೂ ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆಂದು ತಿಳಿದುಬಂದಿದೆ. ಗಾಢೆ ಹೇಳುವಂತೆ ಅವರ ಸಿಬ್ಬಂದಿಗಳಿಗೆ ಇಂತಹ ಕಷ್ಟಕರ ಪರಿಸ್ಥಿತಿಗಳಲ್ಲೇ ಯಾವ ರೀತಿ ಕಾರ್ಯ ನಿರ್ವಹಿಸಬೇಕೆಂಬುದರ ಬಗ್ಗೆ ಸಾಕಷ್ಟು ತರಬೇತಿ ನೀಡಲಾಗಿದ್ದು ಅವರು ಅದನ್ನು ಅಂತಹ ಸಂಕಷ್ಟದ ಸಮಯದಲ್ಲಿ ಸಮರ್ಥವಾಗಿ ನಿಭಾಯಿಸುತ್ತಾರೆ ಎನ್ನುತ್ತಾರೆ. ಒಟ್ಟಿನಲ್ಲಿ ಇದು ಯಾವುದೇ ಸಾಹಸಕ್ಕಿಂತ ಕಡಿಮೆಯಂತೂ ಅಲ್ಲವೇ ಅಲ್ಲ ಎನ್ನಬಹುದಾಗಿದೆ.
Published by:Ashwini Prabhu
First published: