ಕುಟುಂಬ ಎನ್ನುವುದೇ ಒಂದು ಸುಂದರ ಪರಿಕಲ್ಪನೆ. ಪ್ರೀತಿ ,ಬಾಂಧವ್ಯ, ಸ್ನೇಹ ಎಲ್ಲವನ್ನು ಯಾವುದೇ ಮಿತಿ ಇಲ್ಲದೇ ಆಹ್ಲಾದಿಸಬಹುದು. ಮೊದಲೆಲ್ಲ ಅವಿಭಕ್ತ ಕುಟುಂಬಗಳೇ ಹೆಚ್ಚಿದ್ದವು. ಕೂಡು ಕುಟುಂಬ ಎನ್ನುವುದು ಹಲವಾರು ರೀತಿಯಲ್ಲಿ ಉತ್ತಮವಾದ ಆಯ್ಕೆ. ಆದರೆ ಇದೀಗ ಹಲವಾರು ಜನರು ಅವಿಭಕ್ತ ಕುಟುಂಬದಿಂದ ದೂರವಾಗಿದ್ದು. ತಮ್ಮ ವೈಯಕ್ತಿಕ ಕಾರಣಗಳಿಂದ ಸಮಾಜದಲ್ಲಿ ವಿಭಕ್ತ ಕುಟುಂಬಗಳು ಹೆಚ್ಚಿವೆ. ಅವಿಭಕ್ತ ಕುಟುಂಬದಲ್ಲಿ ಸಿಗುತ್ತಿದ್ದ ಆ ಪ್ರೀತಿ, ವಿಶ್ವಾಸಗಳು ಈ ವಿಭಕ್ತ ಕುಟುಂಬಗಳಲ್ಲಿ ಕಡಿಮೆ. ಹಾಗಂತ ಸಣ್ಣ ಕುಟುಂದಲ್ಲಿ ಏನು ಸಿಗುವುದಿಲ್ಲ ಅಂತ ಅಲ್ಲ. ಆರ್ಥಿಕವಾಗಿ ಮತ್ತು ಖಾಸಗಿ ವಿಚಾರವಾಗಿ ಸಣ್ಣ ಕುಟುಂಬ ಒಳ್ಳೆಯದು ಆದರೆ, ಕೂಡು ಕುಟುಂಬ ಕೊಡುವ ಅನುಭವ ವಿಭಿನ್ನ. ಹಾಗಾದರೆ ಕೂಡು ಕುಟುಂಬದಲ್ಲಿ ವಾಸಿಸುವುದರಿಂದ ಆಗುವ ಲಾಭ ಏನು ಇಲ್ಲಿದೆ.
1. ಕುಟುಂಬದ ಮಹತ್ವ: ಸಧ್ಯದ ಸಾಮಾಜಿಕ ವ್ಯವಸ್ಥೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಕುಟುಂಬದ ಮಹತ್ವ ತಿಳಿಸುವುದು ದೊಡ್ಡ ಜವಾಬ್ದಾರಿಯಾಗಿದೆ. ಸಣ್ಣ ಕುಟುಂಬವಿರುವ ಕಾರಣ ಕುಟುಂಬದ ಉಳಿದ ಸದಸ್ಯರ ಜೊತೆ ಆ ಮಕ್ಕಳಿಗೆ ಯಾವುದೇ ಬಾಂಧವ್ಯ ಇರುವುದಿಲ್ಲ. ಕೂಡು ಕುಟುಂದಲ್ಲಿ ಬದುಕಿದರೆ ಮಕ್ಕಳು ಪ್ರತಿಯೊಬ್ಬರಿಗೆ ಗೌರವ ಕೊಡುವುದು ಸೇರಿದಂತೆ ಹಲವಾರು ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅಲ್ಲದೇ, ಕುಟುಂಬದ ಜನರ ನಡುವೆ ಪ್ರೀತಿ ಸಹ ಹೆಚ್ಚಾಗುತ್ತದೆ. ಮಕ್ಕಳು ಮಾಡುವ ಯಾವುದೇ ತಪ್ಪು ಮಾಡಿದರೂ ಸಹ , ಅದನ್ನು ತಿದ್ದಿ ಬುದ್ದಿ ಹೇಳಲು ಹಿರಿಯರು ಇರುತ್ತಾರೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೂಡ ಕುಟುಂಬ ಒಳ್ಳೆಯದು.
ಇದನ್ನೂ ಓದಿ: Friendship Day 2021: ಗೆಳೆತನವನ್ನು ಆಚರಿಸೋಕೆ ಒಂದು ದಿನ ಸಾಕಾ? ಇಂದಿನ ಮಹತ್ವವೇನು?
2. ಮಕ್ಕಳು ಒಬ್ಬಂಟಿಯಾಗುವುದಿಲ್ಲ: ಸಾಮಾನ್ಯವಾಗಿ ಆರ್ಥಿಕತೆಯ ದೃಷ್ಟಿಯಿಂದ ಗಂಡ – ಹೆಂಡತಿ ಇಬ್ಬರು ದುಡಿಯುವುದು ಅನಿವಾರ್ಯವಾಗಿದೆ. ಇದು ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಹೊರಗಡೆ ದುಡಿಯಲು ಹೋದಾಗ ಮಕ್ಕಳು ಮನೆಯಲ್ಲಿ ಕೆಲ ಸಮಯ ಒಬ್ಬರೇ ಇರಬೇಕಾದ ಅನಿವಾರ್ಯತೆ ಇರುತ್ತದೆ. ಅದು ಪೋಷಕರನ್ನು ಚಿಂತೆಗೀಡು ಮಾಡುತ್ತದೆ. ಮಕ್ಕಳನ್ನು ಮನೆಯಲ್ಲಿ ಒಬ್ಬರೆ ಬಿಟ್ಟು ಕೆಲಸಕ್ಕೆ ಹೋಗುವುದು ಕಷ್ಟಕರ. ಆದರೆ ಕೂಡು ಕುಟುಂಬವಾದಲ್ಲಿ ಕೇವಲ ಹಿರಿಯರು ಮಾತ್ರವಲ್ಲದೇ ಸಹೋದರ, ಸಹೋದರಿಯರು ಇರುವುದರಿಂದ ಮಕ್ಕಳನ್ನು ನೆಮ್ಮದಿಯಾಗಿ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಬಹುದು. ಕುಟುಂಬಸ್ಥರಿಗಿಂತ ಹೆಚ್ಚಿನ ನಂಬಿಕಸ್ಥರು ಬೇರಾರೂ ಇರಲು ಸಾಧ್ಯವಿಲ್ಲ.ಹಾಗಾಗಿ ದುಡಿಯುವ ಪೋಷಕರಿಗೆ ಇದು ಉತ್ತಮ. ಅಲ್ಲದೇ ಮಕ್ಕಳಿಗೂ ಸಹ ಒಬ್ಬಂಟಿ ಎನ್ನುವ ಭಾವ ಆವರಿಸುವುದಿಲ್ಲ. ಜೊತೆಗೆ ತಮ್ಮವರು, ನಮ್ಮವರು ಎಂಬುದರ ಅರಿವು ಅವರಿಗೆ ಬರುತ್ತದೆ. ಇದು ಕುಟುಂಬದ ಮಕ್ಕಳ ನಡುವಿನ ಪ್ರೀತಿ ಮತ್ತು ನಂಬಿಕೆಯನ್ನು ಹೆಚ್ಚಿಸಿ ಬಾಂಧವ್ಯ ಗಟ್ಟಿಗೊಳಿಸುತ್ತದೆ.
3. ಆರ್ಥಿಕವಾಗಿ ತೊಂದರೆಯಾಗುವುದಿಲ್ಲ: ಸಾಮಾನ್ಯವಾಗಿ ಆರ್ಥಿಕ ಸಮಸ್ಯೆ ಪ್ರತಿಯೊಬ್ಬರಿಗೂ ಬಂದೆ ಬರುತ್ತದೆ. ಸಣ್ಣ ಕುಟುಂಬವಿದ್ದಾಗ ಕೇವಲ ಒಬ್ಬರ ತಲೆಯ ಮೇಲೆ ಬೀಳುತ್ತದೆ. ಆದರೆ ಕೂಡು ಕುಟುಂಬವಿದ್ದರೆ, ಪ್ರತಿಯೊಂದು ಜವಾಬ್ದಾರಿ ಹಂಚಿ ಹೋಗುತ್ತದೆ. ಆರ್ಥಿಕ ಜವಾಬ್ದಾರಿಗಳು ಕುಟುಂಬದ ಸದಸ್ಯರಲ್ಲಿ ಹಂಚಿ ಹೋಗುವುದರಿಂದ , ಯಾವುದೇ ಹೆಚ್ಚಿನ ತೊಂದರೆಯಾಗುವುದಿಲ್ಲ. ಅಲ್ಲದೇ ಇದು ಕುಟುಂಬದಲ್ಲಿ ಉಂಟಾಗುವ ಇರಿಸು ಮುರಿಸು ಕಡಿಮೆ ಆಗುವಂತೆ ಮಾಡುತ್ತದೆ.
4. ಜ್ಞಾನದ ಪರಿಧಿ ಹೆಚ್ಚಾಗುತ್ತದೆಮಕ್ಕಳು ಸಣ್ಣ ಕುಟುಂಬದಲ್ಲಿ ಬೆಳೆದರೆ ಕೇವಲ ಸ್ಕೂಲ್ , ಓದು ಎಂಬುದರಲ್ಲೇ ಸಮಯ ಕಳೆಯುತ್ತಾರೆ. ಪೋಷಕರು ಕೆಲಸಕ್ಕೆ ಹೋಗುವ ಕಾರಣ ಅವರೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಹಾಗೆಯೇ ಹೊರಗೆ ಹೆಚ್ಚಿನ ಸಮಯ ಸಹ ಕಳೆಯುವುದಿಲ್ಲ. ಇದರಿಂದ ಮಕ್ಕಳಲ್ಲಿ ಸಾಮಾಜಿಕ ಜ್ಞಾನವನ್ನು ಹೆಚ್ಚಿಸಲು ಕಷ್ಟವಾಗುತ್ತದೆ. ಅದೇ ಕೂಡು ಕುಟುಂಬವಾದರೆ ಅಲ್ಲಿ ಹೆಚ್ಚಿನ ಜನರು ಇರುವ ಕಾರಣ ಮಕ್ಕಳಿಗೆ ಪುಸ್ತಕದ ಜೊತೆ ಹೊರಗಿನ ಜ್ಞಾನ ಕೂಡ ಲಭಿಸುತ್ತದೆ. ಕೇವಲ ಇದಿಷ್ಟೇ ಅಲ್ಲ ಕೂಡ ಕುಟುಂಬದಿಂದ ಹಲವಾರು ರೀತಿಯಲ್ಲಿ ಪ್ರಯೋಜನಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ