Dogs Tilt Heads: ಶ್ವಾನ ಪ್ರಿಯರು ತಮ್ಮ ನಾಯಿಗಳು (Dog) ಮಾಡುವ ಪ್ರತಿಯೊಂದು ಚಟುವಟಿಕೆಗಳನ್ನು ಇಷ್ಟಪಡುತ್ತಾರೆ. ನಾಯಿಗಳ ಮುಗ್ಧತೆ, ತುಂಟತನ ಮತ್ತು ಅವು ತೋರಿಸುವ ಪ್ರೀತಿಯೇ ಅಂತದ್ದು. ಅವುಗಳು ಏನೇ ಮಾಡಲಿ, ಹೇಗೆಯೇ ಇರಲಿ , ಅವುಗಳನ್ನು ಇಷ್ಟಪಡದೇ ಇರಲು ಸಾಧ್ಯವೇ ಇಲ್ಲ. ಕೆಲವೊಬ್ಬರಂತೂ ನಾಯಿಗಳು ಮಾಡುವ ಕ್ರಿಯೆಗಳನ್ನು ನೋಡುತ್ತಾ ಇಡೀ ದಿನವನ್ನೇ ಕಳೆಯಬಲ್ಲರು. ನಾಯಿಗಳು ಮತ್ತು ಮನುಷ್ಯನ ನಡುವಿನ ಸಂಬಂಧ ಬಹಳ ವಿಶೇಷವಾದದ್ದು. ಹಾಗೆಯೇ, ಮನುಷ್ಯರು ತಮ್ಮ ನಾಯಿಗಳ ವರ್ತನೆ ಅಥವಾ ಚಟುವಟಿಕೆಯ ಹಿಂದಿರುವ ಹೆಚ್ಚಿನ ಕಾರಣಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ, ಬಹಳಷ್ಟು ಮಂದಿಗೆ ಒಂದು ವಿಷಯದ ಬಗ್ಗೆ ತಿಳಿದಿರಲಿಕ್ಕಿಲ್ಲ. ಅದುವೇ, ನಾಯಿಗಳು ಮನುಷ್ಯರ ಮಾತನ್ನು ಕೇಳುವಾಗ ಒಂದೇ ಕಡೆಗೆ ತಲೆಯನ್ನು ಏಕೆ ತಿರುಗಿಸುತ್ತವೆ ಎಂಬ ಸಂಗತಿ.
ಹೌದು, ನಾಯಿಗಳು ಮನುಷ್ಯರ ಮಾತುಗಳನ್ನು ಕೇಳುವಾಗ ಹೆಚ್ಚಿನ ಸಂದರ್ಭಗಳಲ್ಲಿ, ಒಂದೇ ಕಡೆಗೆ ತಲೆಯನ್ನು ಏಕೆ ವಾಲಿಸುತ್ತವೆ ಎಂದು ನಾವೆಲ್ಲರು ಆಶ್ಚರ್ಯ ಪಟ್ಟಿರುತ್ತೇವೆ. ನಾಯಿಗಳ ಈ ರೀತಿಯ ವರ್ತನೆಯ ಹಿಂದಿನ ಕಾರಣವನ್ನು ಹಂಗೇರಿಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಹಂಗೇರಿಯ ವಿಜ್ಞಾನಿಗಳ ಸಂಶೋಧನೆ
ಹಂಗೇರಿಯ ಬುಡಾಪೆಸ್ಟ್ನ ಇಟ್ವೋಸ್ ಲೊರಾಂಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು, ಮನುಷ್ಯರು ಮಾತನಾಡುವಾಗ ನಾಯಿಗಳು ಒಂದು ಬದಿಗೆ ತಲೆಯನ್ನು ಯಾಕೆ ಬಾಗಿಸುತ್ತವೆ ಎಂಬುದನ್ನು ಕಂಡು ಹಿಡಿದಿದ್ದಾರೆ. ಮನುಷ್ಯ ಏನು ಹೇಳುತ್ತಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ ನಾಯಿಗಳು ಹಾಗೆ ತಲೆಯನ್ನು ಒಂದೇ ಕಡೆ ವಾಲಿಸುತ್ತವೆ ಎಂದು ಜನರು ನಂಬಿದ್ದರು. ಆದರೆ ಅಸಲಿಗೆ ವಿಷಯ ಹಾಗಿಲ್ಲ. ಅಂದರೆ, ನಾಯಿಗಳ ಆ ವರ್ತನೆಗೆ ಕಾರಣ, ಜನರು ಅಂದುಕೊಂಡದ್ದಕ್ಕಿಂತ ಸಂಪೂರ್ಣ ವಿರುದ್ಧವಾಗಿದೆ ಎನ್ನುತ್ತದೆ ಹಂಗೇರಿಯ ವಿಜ್ಞಾನಿಗಳ ಸಂಶೋಧನೆ.
ಇದನ್ನು ಓದಿ: Girlfriends: ಒಬ್ಬನಿಗೆ ಮಿನಿಮಮ್ 3 ಗರ್ಲ್ಫ್ರೆಂಡ್ಸ್ ಇದಾರಂತೆ, ಈ ಊರಲ್ಲಿ ಎಲ್ರೂ ಹೀಗೇ!
ಈ ಸಂಶೋಧನೆಯ ಸಂದರ್ಭದಲ್ಲಿ ವಿಜ್ಞಾನಿಗಳು ನಾಯಿಗಳ ಕ್ರಿಯೆಗಳನ್ನು ಅಧ್ಯಯನ ಮಾಡಿದರು. ಆಗ, ನಾಯಿಯ ತಲೆಯ ಚಲನೆ ಮತ್ತು ಮಾಲೀಕನ ಧ್ವನಿಯ ನಡುವೆ ಸಂಬಂಧ ಇದೆ ಎಂಬುವುದು ಕಂಡು ಬಂತು. ಈ ಅಧ್ಯಯನದ ಪ್ರಕಾರ, ನಾಯಿಗಳು ತಮ್ಮ ತಲೆಯನ್ನು ಧ್ವನಿಯ ಸ್ವರಕ್ಕೆ ಅನುಗುಣವಾಗಿ ವಾಲಿಸುತ್ತವೆ. ಮಾಲೀಕ ವಿವರಿಸುವ ಸ್ವರದಲ್ಲಿ ಏನನ್ನಾದರು ಹೇಳಿದರೆ, ನಾಯಿಗಳು ತಮ್ಮ ತಲೆ ವಾಲಿಸುವ ಮೂಲಕ ಅದನ್ನು ಗಮನವಿಟ್ಟು ಕೇಳುತ್ತವೆ. ನಾಯಿಯ ಚಲನೆಗಳಲ್ಲಿ, ಅದು ಯಾವ ತಳಿಗೆ ಸೇರಿದ್ದು ಎಂಬ ಅಂಶ ಕೂಡ ಪಾತ್ರ ವಹಿಸುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
40 ವಿವಿಧ ತಳಿಯ ನಾಯಿಗಳು
ಅತ್ಯಂತ ಬುದ್ಧಿವಂತ ತಳಿಯ ನಾಯಿಗಳು ಬಹಳ ಬೇಗನೆ ಕಲಿಯುತ್ತವೆ, ತಮ್ಮ ಮಾಲೀಕರ ಮಾತುಗಳನ್ನು ಗಮನವಿಟ್ಟು ಕೇಳುತ್ತವೆ ಹಾಗೂ ತಮ್ಮ ತಲೆಯನ್ನು ಒಂದು ಕಡೆ ಬಾಗಿಸುತ್ತವೆ. ಕನಿಷ್ಟ 40 ವಿವಿಧ ತಳಿಯ ನಾಯಿಗಳು, ಸಂಶೋಧನೆಯ ಶೇಕಡಾ 43ರಷ್ಟು ಸಮಯದಲ್ಲಿ ತಮ್ಮ ತಲೆಯನ್ನು ಬಾಗಿಸಿದವು. ಕಡಿಮೆ ಬುದ್ಧಿವಂತಿಕೆ ಉಳ್ಳವು ಎಂದು ಪರಿಗಣಿಸಲಾದ ತಳಿಯ ನಾಯಿಗಳು , ಸಂಶೋಧನೆಯ ಸಮಯದಲ್ಲಿ ಶೇಕಡಾ 2ರಷ್ಟು ಬಾರಿ ತಮ್ಮ ತಲೆಗಳನ್ನು ಬಾಗಿಸಿದವು.
ಇದನ್ನು ಓದಿ: Honeymoon: ಫಸ್ಟ್ ನೈಟಲ್ಲಿ ಹೊಸಾ ಜೋಡಿ ಜೊತೆ ತಾಯಿ ಇರಲೇಬೇಕು, ಇದು ಆ ದೇಶದ ಪದ್ಧತಿ!
ಸಂಶೋಧಕರು ಹೇಳಿರುವ ಪ್ರಕಾರ, ನಾಯಿಗಳು ಗಮನವಿಟ್ಟು ಕೇಳುವಾಗ ತಮ್ಮ ತಲೆಯನ್ನು ವಾಲಿಸುತ್ತವೆ. ಆದರೆ, ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಏಕೆಂದರೆ ನಾಯಿ ತಲೆಯನ್ನು ಒಂದು ಕಡೆ ಬಾಗಿಸಿದಾಗ, ಅದು ತನ್ನ ತಲೆಯಲ್ಲಿ ಒಂದು ಚಿತ್ರಣ ಮೂಡಿಸುವ ಸಾಧ್ಯತೆ ಇದೆ. ಸಂಶೋಧನೆಯ ಬಳಿಕವೇ ಅದನ್ನು ಕಂಡು ಹಿಡಿಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ