ಗುಹೆಗಳು (Caves) ಅಂದಾಗ ನಮ್ಮಲ್ಲೇನೋ ರೋಮಾಂಚನ ಹಾಗೂ ಕೌತುಕ ನೆಲೆಗೊಳ್ಳುತ್ತದೆ. ನಮ್ಮ ಊರಲ್ಲಿರುವ ಗುಹೆಗಳ ಕುರಿತು ಹಿರಿಯರು ರೋಚಕವಾದ ಕತೆಗಳನ್ನು ಹೇಳಿದಂತೆ ಅಲ್ಲಿಗೆ ಭೇಟಿ ನೀಡುವ ಹಾಗೂ ಗುಹೆಗಳೊಳಗೆ ಸಾಗಿ ಅಲ್ಲಿ ಏನಿದೆ ಎಂಬುದನ್ನು ನೋಡುವ ಕುತೂಹಲ ಹೆಚ್ಚುತ್ತದೆ. ಇನ್ನು ಕೆಲವೊಮ್ಮೆ ಇಂತಹ ಗುಹೆಗಳಿಗೆ ಭೇಟಿ ನೀಡಿದವರು ಮರಳಿ ಬರಲೇ ಇಲ್ಲ ಎಂಬಂತಹ ನಡುಕ ಹುಟ್ಟಿಸುವ ಮಾತುಗಳು ಕೂಡ ಅಂತಹದ್ದು ಆ ಗುಹೆಯಲ್ಲಿ ಏನಿದೆ ಎಂಬ ಭಯಮಿಶ್ರಿತ (Fear) ಗೊಂದಲಕ್ಕೆ ನಮ್ಮನ್ನು ತಳ್ಳುತ್ತದೆ. ಅಂತೂ ಗುಹೆಗಳ ಕುರಿತಾದ ಮಾಹಿತಿಗಳು ಎಷ್ಟೇ ಭಯಾನಕವಾಗಿದ್ದರೂ ಅವುಗಳು ಒಂದಿಲ್ಲೊಂದು ಗತಕಾಲದ ವೈಭವ ಹಾಗೂ ಮಾಹಿತಿಯ ನೆಲೆಯಾಗಿದೆ ಎಂಬುದಂತೂ ನಿಜ. ಅದೆಷ್ಟೋ ಪೂರ್ವಜರ ಕಾಲದ ಮಾಹಿತಿ ಹಾಗೂ ರಹಸ್ಯಗಳು ಇಂತಹ ಗುಹೆಗಳಲ್ಲಿ ದೊರೆತಿರುವುದು ಇತಿಹಾಸಗಳಲ್ಲಿ ಕೂಡ ಬಿಂಬಿತವಾಗಿದೆ.
ಭಾರತದ ಐದು ರಹಸ್ಯ ಗುಹೆಗಳು
ನೀವು ಸಾಹಸ ಪ್ರಿಯರಾಗಿದ್ದು ನಿಮ್ಮ ಪ್ರಯಾಣದಲ್ಲಿ ಇಂತಹ ಸಾಹಸ ಮಿಶ್ರಿತ ತಾಣಗಳು ಹಾಗೂ ಕೌತುಕಮಯವಾದ ರಹಸ್ಯಗಳ ಮಿಶ್ರಣ ಇರಬೇಕೆಂದು ಬಯಸುವವರಾದರೆ ಭಾರತದ ಐದು ರಹಸ್ಯ ಗುಹೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.
ಸೋನ್ ಭಂಡಾರ್ ಗುಹೆಗಳು
ಬಿಹಾರದ ರಾಜ್ಗಿರ್ನಲ್ಲಿ ವೈಭರ್ ಬೆಟ್ಟಗಳ ತಪ್ಪಲಿನಲ್ಲಿರುವ ಸೋನ್ ಭಂಡಾರ್ ಗುಹೆಗಳು ಕ್ರಿಸ್ತಪೂರ್ವ 3 ಅಥವಾ 4 ನೇ ಶತಮಾನದಲ್ಲಿ ರಚನೆಗೊಂಡ ಕೃತಕ ನಿರ್ಮಾಣಗಳು ಎಂದೆನಿಸಿವೆ. ಸೋನ್ ಭಂಡಾರ್ ಎಂದರೆ ಚಿನ್ನದ ಸಂಗ್ರಹ ಎಂದರ್ಥವನ್ನು ನೀಡುತ್ತದೆ.
ದಂತಕಥೆಯ ಪ್ರಕಾರ ಈ ಗುಹೆಗಳಲ್ಲಿ ನಿಧಿ ಇದೆ ಎಂದು ಹೇಳಲಾಗುತ್ತದೆ ಹಾಗೂ ಗುಹೆಯ ನಿರ್ದಿಷ್ಟ ಗೋಡೆಯಲ್ಲಿ ರಹಸ್ಯ ಗುಪ್ತಪದವನ್ನು ಉಚ್ಚರಿಸಿದಾಗ ಗುಹೆಯನ್ನು ತೆರೆಯುವ ಬಾಗಿಲೂ ಇದೆ ಎಂದು ಹೇಳಲಾಗುತ್ತದೆ.
ಎಡಕ್ಕಲ್ ಗುಹೆಗಳು
ಕೇರಳದ ವಯನಾಡ್ನಲ್ಲಿರುವ ಈ ಗುಹೆಗಳು ಎರಡು ಕೊಠಡಿಗಳನ್ನೊಳಗೊಂಡಿದ್ದು ಮತ್ತು ನೈಸರ್ಗಿಕವಾಗಿ ರೂಪುಗೊಂಡಿವೆ. ಈ ಗುಹೆಗಳು ಅಂಬುಕುತಿ ಪರ್ವತದಲ್ಲಿ ನೆಲೆಗೊಂಡಿವೆ. ಸಮುದ್ರ ಮಟ್ಟದಿಂದ 1,300 ಮೀಟರ್ಗಿಂತಲೂ ಹೆಚ್ಚು ಎತ್ತರದಲ್ಲಿರುವ ಎಡಕ್ಕಲ್ ಗುಹೆಗಳು ಸಾವಿರಾರು ವರ್ಷಗಳಷ್ಟು ಹಳೆಯದಾದ ವಿಶಿಷ್ಟ ಕೆತ್ತನೆಗಳನ್ನು ಹೊಂದಿವೆ.
ಕೆತ್ತನೆಗಳು ನವಶಿಲಾಯುಗದ ಶಿಲಾಯುಗದ ಸಮಯದಲ್ಲಿ 6000 BC ಯಷ್ಟು ಹಿಂದಿನವುಗಳಾಗಿವೆ. ಇದನ್ನು ಬ್ರಿಟಿಷ್ ಪೊಲೀಸ್ ಅಧಿಕಾರಿ ಫ್ರೆಡ್ ಫಾಸೆಟ್ ಅನ್ವೇಷಿಸಿದರು ಎಂಬುದಾಗಿ ಹೇಳಲಾಗುತ್ತದೆ.
ಬೋರಾ ಗುಹೆಗಳು
ದೇಶದ ಅತಿದೊಡ್ಡ ಗುಹೆಗಳಲ್ಲಿ ಒಂದು ಎಂಬುದಾಗಿ ಬೋರಾ ಗುಹೆಗಳನ್ನು ಕರೆಯಲಾಗುತ್ತದೆ. ಸುಣ್ಣದ ಗುಹೆಗಳಾದ ಬೋರಾ ಗುಹೆಗಳು ಆಂಧ್ರಪ್ರದೇಶದ ವಿಶಾಖ ಪಟ್ಟಣದಲ್ಲಿವೆ.
ಇದನ್ನೂ ಓದಿ: ನಾಗಾಲ್ಯಾಂಡ್ ಒಡಲಿನಲ್ಲಿವೆ 'ಹಸಿರು ಹಳ್ಳಿ'ಗಳು! ಈ ಗ್ರಾಮಗಳ ಸೊಬಗನ್ನು ನೋಡುವುದೇ ಚೆಂದ
ಮಿಲಿಯನ್ ವರ್ಷಗಳಷ್ಟು ಹಳೆಯದಾದ ಸ್ಟಾಲಗ್ಮೈಟ್ ರಚನೆಗಳಿಗೆ ಹೆಸರುವಾಸಿಯಾಗಿದೆ ಹಾಗೂ ಸಮುದ್ರ ಮಟ್ಟದಿಂದ 1400 ಮೀಟರ್ ಎತ್ತರದಲ್ಲಿವೆ. ಸುಣ್ಣದ ಕಲ್ಲಿನ ನಿಕ್ಷೇಪಗಳ ಮೇಲೆ ಗೋಸ್ಥಾನಿ ನದಿಯು ಹರಿದು ಹೋದ ಪರಿಣಾಮವಾಗಿ ಈ ಗುಹೆಗಳು ರೂಪುಗೊಂಡವು ಎಂದು ಹೇಳಲಾಗುತ್ತಿದೆ.
ಉಂಡವಲ್ಲಿ ಗುಹೆಗಳು
ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಈ ಕಲ್ಲಿನ ಗುಹೆಗಳು ಗುಪ್ತರ ವಾಸ್ತುಶಿಲ್ಪಕ್ಕೆ ನಿದರ್ಶನವಾಗಿವೆ. ಗುಹೆಗಳನ್ನು ಮರಳುಗಲ್ಲಿನಿಂದ ಕೆತ್ತಲಾಗಿದ್ದು, ಅವು ಪ್ರಾಚೀನ ಧಾರ್ಮಿಕ ಆಚರಣೆಗಳ ಬಗ್ಗೆ ನಮಗೆ ಮಹತ್ವದ ಮಾಹಿತಿಯನ್ನು ಒದಗಿಸುತ್ತವೆ. ಗುಹೆಯ ಒಂದು ಭಾಗದಲ್ಲಿ ಒರಗಿರುವ ಭಂಗಿಯಲ್ಲಿ ಬೃಹತ್ ವಿಷ್ಣುವಿನ ಏಕಶಿಲೆಯಿದೆ.
ಭೀಮ್ಬೆಟ್ಕ ಕಲ್ಲಿನ ಗುಹೆಗಳು
ಮಧ್ಯಪ್ರದೇಶದ ವಿಂಧ್ಯ ಶ್ರೇಣಿಯ ತಪ್ಪಲಿನಲ್ಲಿರುವ ಈ ಗುಹೆಗಳನ್ನು 2003 ರಲ್ಲಿ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿ ಗೊತ್ತುಪಡಿಸಲಾಗಿದೆ.
1957 ರಲ್ಲಿ ಪತ್ತೆಯಾದ ಈ ಗುಹೆಗಳು ಭಾರತದಲ್ಲಿರುವ ಇತಿಹಾಸಪೂರ್ವ ಕಲೆಯ ಅತಿದೊಡ್ಡ ಸಂಗ್ರಹಗಳಲ್ಲಿ ಒಂದೆನಿಸಿದೆ. ಪೂರ್ವಶಿಲಾಯುಗದ ಹಿಂದಿನ ವರ್ಣಚಿತ್ರಗಳು ಈ ಗುಹೆಗಳಲ್ಲಿದೆ ಹಾಗೂ ಈ ವರ್ಣಚಿತ್ರಗಳು ನಮ್ಮ ಪೂರ್ವಜರ ಜೀವನವನ್ನು ಪ್ರದರ್ಶಿಸುತ್ತವೆ, ಅಂತೆಯೇ ಭವ್ಯ ಭಾರತದ ಪರಂಪರೆಗೆ ಉತ್ತಮ ನಿದರ್ಶನ ಎಂದೆನಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ