Infosys Sudha Murthy: ನಿಮ್ಮ ಮಗಳನ್ನು ಮದುವೆಯಾಗ್ತೀನಿ ಎಂದು ಬಂದ ಹುಡುಗನಿಗೆ ಸುಧಾ ಮೂರ್ತಿ ಕೇಳಿದ್ದು ಒಂದೇ ಪ್ರಶ್ನೆ.. ಏನದು ?

Sudha Murthy: ತಾನು ಇಷ್ಟಪಟ್ಟ ಹುಡುಗಿ ಹೀಗಂದ ಮೇಲೆ ಇನ್ನೇನು ಮಾಡೋದು ಎಂದು ಆಕೆಯ ತಂದೆ ತಾಯಿಯ ಬಳಿ ಮಾತನಾಡೋಕೆ ರಿಷಿ ಬ್ರಿಟನ್​ನಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ. ಮೊದಲು ಇನ್ಫೋಸಿಸ್ ಫೌಂಡೇಶನ್​ ಸಂಸ್ಥಾಪಕಿ ಮತ್ತು ಅಕ್ಷತಾ ತಾಯಿ ಸುಧಾ ಮೂರ್ತಿಯವರನ್ನು ಭೇಟಿಯಾಗಿದ್ದಾರೆ.

ಮಗಳು ಮತ್ತು ಅಳಿಯನೊಂದಿಗೆ ಸುಧಾ ಮೂರ್ತಿ

ಮಗಳು ಮತ್ತು ಅಳಿಯನೊಂದಿಗೆ ಸುಧಾ ಮೂರ್ತಿ

  • Share this:
Sudha Murthy: ಮಕ್ಕಳು ಬೆಳೆದು ದೊಡ್ಡವರಾದಾಗ ಅವರ ಮದುವೆ ಬಗ್ಗೆ ಅಪ್ಪ ಅಮ್ಮ ಆಲೋಚಿಸೋದು ಸಹಜ. ಅನೇಕ ಸಲ ಮಕ್ಕಳು ತಾವೇ ತಮ್ಮ ಸಂಗಾತಿಯನ್ನು ಆರಿಸಿಕೊಂಡು ಪೋಷಕರ ಬಳಿ ಪ್ರಸ್ತಾಪಿಸುವುದು ಕೂಡಾ ಅಷ್ಟೇ ಸಹಜ ಪ್ರಕ್ರಿಯೆ. ಇನ್ಫೋಸಿಸ್ ಸಂಸ್ಥಾಪಕರಾದ ಎನ್ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ವಿಚಾರದಲ್ಲಿ ಆದದ್ದು ಅದೇ. ಆದ್ರೆ ಈಗಿನ ವಿಚಾರ ಸುಧಾ ಮೂರ್ತಿಯವರ ಬಗ್ಗೆ ಮತ್ತು ಇದನ್ನು ಖುದ್ದು ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಮಗಳು ಅಕ್ಷತಾ ಮೂರ್ತಿ ಲಂಡನ್​ನಲ್ಲಿ ಕಲಿಯುತ್ತಿದ್ದಾಗ ಆಕೆಯ ಸಹಪಾಠಿಯಾಗಿ ರಿಷಿ ಸುನಕ್ ಆಕೆಯನ್ನು ಇಷ್ಟಪಡುತ್ತಾನೆ. ಇಬ್ಬರಿಗೂ ಒಬ್ಬರನ್ನೊಬ್ಬರು ಇಷ್ಟವಿದ್ದರೂ ರಿಷಿ ಪ್ರೊಪೋಸ್ ಮಾಡಿದಾಗ ಅಕ್ಷತಾ ತಾನು ಈ ಬಗ್ಗೆ ತಂದೆ ತಾಯಿಯ ಒಪ್ಪಿಗೆ ಪಡೆಯಬೇಕು, ನಂತರ ನಿರ್ಧಾರ ತಿಳಿಸುವೆ ಎಂದರಂತೆ.

ನಿನ್ನ ಒಪ್ಪಿಗೆ ಏನು ಎನ್ನುವುದನ್ನು ಮೊದಲು ಹೇಳು, ಒಟ್ಟಿಗೆ ಬಾಳಬೇಕಾದವರು ನಾವು ಎಂದರಂತೆ ರಿಷಿ. ಆದರೂ ತಾನು ಇದನ್ನು ತಂದೆ ತಾಯಿಯ ಜೊತೆ ಚರ್ಚಿಸಲೇಬೇಕು ಎಂದು ಅಕ್ಷತಾ ಹೇಳಿದ್ದಾರೆ. ನಂತರ ಈ ವಿಚಾರವನ್ನು ತನ್ನ ಪೋಷಕರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರಿಗೂ ತಿಳಿಸಿದ್ದಾರೆ. ತಾನು ಇಷ್ಟಪಟ್ಟ ಹುಡುಗಿ ಹೀಗಂದ ಮೇಲೆ ಇನ್ನೇನು ಮಾಡೋದು ಎಂದು ಆಕೆಯ ತಂದೆ ತಾಯಿಯ ಬಳಿ ಮಾತನಾಡೋಕೆ ರಿಷಿ ಬ್ರಿಟನ್​ನಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ. ಮೊದಲು ಇನ್ಫೋಸಿಸ್ ಫೌಂಡೇಶನ್​ ಸಂಸ್ಥಾಪಕಿ ಮತ್ತು ಅಕ್ಷತಾ ತಾಯಿ ಸುಧಾ ಮೂರ್ತಿಯವರನ್ನು ಭೇಟಿಯಾಗಿದ್ದಾರೆ.

ಇದನ್ನೂ ಓದಿ: Sudha Murthy: ಈ ವರ್ಷ ಡಿಸೆಂಬರ್ 31ಕ್ಕೆ ಇನ್ಫೋಸಿಸ್ ಫೌಂಡೇಶನ್​ಗೆ ಸುಧಾ ಮೂರ್ತಿ ವಿದಾಯ, ನಿವೃತ್ತಿ ನಂತರದ ಅವರ ಪ್ಲಾನ್​ ಏನು ಗೊತ್ತಾ?

ತಾನು ಮೂಲ ಪೇಶಾವರದವನು, ತನ್ನ ಕುಟುಂಬ ಕಳೆದ 7 ತಲೆಮಾರುಗಳ ಹಿಂದೆಯೇ ಭಾರತವನ್ನು ತೊರೆದು ನಾನಾ ಕಡೆ ಅಲೆದಾಡಿದೆ. ನಂತರ ಕೆಲ ತಲೆಮಾರುಗಳಿಂದ ಬ್ರಿಟನ್​ನಲ್ಲಿ ನೆಲೆಸಿದ್ದೇವೆ. ನಾನೀಗ ಸಂಪೂರ್ಣವಾಗಿ ಬ್ರಿಟಿಷ್ ಪ್ರಜೆ ಮತ್ತು ನಾನು ಹಿಂದೂ ಧರ್ಮವನ್ನು ಅನುಸರಿಸುತ್ತೇನೆ ಎಂದು ತನ್ನ ಬಗ್ಗೆ ರಿಷಿ ಪರಿಚಯ ಮಾಡಿಕೊಂಡಿದ್ದಾರೆ. ಇದನ್ನೆಲ್ಲಾ ಕೇಳಿಸಿಕೊಂಡ ಸುಧಾ ಮೂರ್ತಿ ಎದುರಿಗಿದ್ದ ಸ್ಫುರದ್ರೂಪಿ ಹುಡುಗನನ್ನು ಕೇಳಿದ್ರಂತೆ.. “ನಾನು ನಿನಗೆ ಒಂದೇ ಒಂದು ಪ್ರಶ್ನೆ ಕೇಳುತ್ತೇನೆ. ನೀನು ಅದಕ್ಕೆ ಪ್ರಾಮಾಣಿಕವಾದ ಉತ್ತರವನ್ನೇ ಕೊಡಬೇಕು. ನನ್ನ ನಿರ್ಧಾರ ನೀನು ಕೊಡುವ ಈ ಉತ್ತರದ ಮೇಲೆ ನಿಂತಿದೆ.”

ಒಂದು ವೇಳೆ ಬ್ರಿಟನ್ ಮತ್ತು ಭಾರತದ ನಡುವೆ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ರೆ ನೀನು ಯಾವ ತಂಡವನ್ನು ಚಿಯರ್ ಮಾಡುತ್ತೀಯಾ ಅಥವಾ ಪ್ರೋತ್ಸಾಹಿಸುತ್ತೀಯಾ ಮತ್ತು ಯಾಕೆ? ಎಂದು ಪ್ರಶ್ನೆ ಕೇಳಿದ್ದಾರೆ ಸುಧಾ ಮೂರ್ತಿ. ಇದಕ್ಕೆ ಉತ್ತರಿಸಿದ ರಿಷಿ, “ನಾನು ಆ ಸಂದರ್ಭದಲ್ಲಿ ಖಂಡಿತವಾಗಿಯೂ ಬ್ರಿಟನ್ ತಂಡವನ್ನೇ ಪ್ರೋತ್ಸಾಹಿಸುತ್ತೇನೆ. ಆದರೆ ಈ ಒಂದು ಸಂದರ್ಭ ಬಿಟ್ಟು ಭಾರತ ಪ್ರಪಂಚದ ಬೇರೆ ಯಾವುದೇ ದೇಶದ ವಿರುದ್ಧ ಆಡುತ್ತಿದ್ದರೂ ನನ್ನ ಬೆಂಬಲ ಸದಾ ಭಾರತಕ್ಕೇ ಆಗಿರುತ್ತದೆ” ಎಂದರಂತೆ. ಯಾಕೆ ಹೀಗೆ ಎನ್ನುವುದಕ್ಕೂ ರಿಷಿ ಸುನಕ್ ಕೊಟ್ಟ ಉತ್ತರ ಬಹಳ ಆಪ್ತವಾಗಿದೆ.

ನನ್ನನ್ನು ಇಷ್ಟು ವರ್ಷ ಪ್ರಜೆಯಾಗಿ ಸ್ವೀಕರಿಸಿದ್ದು ಬ್ರಿಟನ್. ನನ್ನ ವಿದ್ಯಾಭ್ಯಾಸಕ್ಕೆ ಸ್ಕಾಲರ್​ಶಿಪ್, ಫರೀಶಿಪ್​ಗಳನ್ನು ಈ ನನ್ನ ದೇಶ ಕೊಟ್ಟಿದೆ. ಹಾಗಾಗಿ ನಾನು ಮೊದಲು ನನ್ನ ದೇಶವನ್ನು ಬೆಂಬಲಿಸುತ್ತೇನೆ. ನಂತರ ನನ್ನ ಮೂಲದೇಶವಾದ ಭಾರತವನ್ನು ಬೆಂಬಲಿಸುತ್ತೇನೆ ಎಂದರಂತೆ. ಈ ಮಾತುಗಳಲ್ಲಿನ ಪ್ರಾಮಾಣಿಕತೆ ನನಗೆ ಬಹಳ ಮೆಚ್ಚುಗೆಯಾಯಿತು ಎಂದು ಸುಧಾ ಮೂರ್ತಿ ಹೇಳಿದ್ದಾರೆ. ಇಂದು ಅಕ್ಷತಾ ಮತ್ತು ರಿಶಿ ಸುನಕ್ ತಮ್ಮ ಇಬ್ಬರು ಮಕ್ಕಳಾದ ಕೃಷ್ಣಾ ಮತ್ತು ಅನುಷ್ಕಾ ಜೊತೆಗೆ ಲಂಡನ್​ನಲ್ಲಿ ವಾಸವಾಗಿದ್ದಾರೆ. ರಿಶಿ ಸುನಕ್ ಬ್ರಿಟನ್ ಯಶಸ್ವಿ ರಾಜಕಾರಣಿಯಾಗಿ ಸರ್ಕಾರದಲ್ಲಿ ಚಾನ್ಸಲರ್ ಆಫ್ ಎಕ್ಸ್​ಚೆಕರ್ ಅಂದ್ರೆ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Published by:Soumya KN
First published: