• Home
  • »
  • News
  • »
  • trend
  • »
  • Frog and Beetle - ಇದನ್ನು ತಿಂದರೂ ಜೀವಂತ ಹೊರಬರುತ್ತೆ; ಬೆಳಕಿಗೆ ಬಂತು ಜೀರುಂಡೆ ಚಮತ್ಕಾರ

Frog and Beetle - ಇದನ್ನು ತಿಂದರೂ ಜೀವಂತ ಹೊರಬರುತ್ತೆ; ಬೆಳಕಿಗೆ ಬಂತು ಜೀರುಂಡೆ ಚಮತ್ಕಾರ

ಬೀಟಲ್ (ಜೀರುಂಡೆ)

ಬೀಟಲ್ (ಜೀರುಂಡೆ)

ಕೆಲ ಜಾತಿಯ ಜಲ ಜೀರುಂಡೆ ಕೀಟಗಳು ಕಪ್ಪೆಯ ಹೊಟ್ಟೆಯೊಳಗೆ ಹೋಗಿಯೂ ಸಾಯದೇ ಸಲೀಸಾಗಿ ಬದುಕಿ ಹೊರಬರಲ್ಲವು ಎಂಬ ಅಚ್ಚರಿಯ ಸಂಶೋಧನೆಯನ್ನು ಜಪಾನ್ ವಿಜ್ಞಾನಿಯೊಬ್ಬರು ಮಾಡಿದ್ದಾರೆ.

  • Share this:

ಹೆಬ್ಬಾವುಗಳು ಕೆಲ ಪ್ರಾಣಿಗಳನ್ನ ತಿಂದು ಅರಗಿಸಿಕೊಳ್ಳಲಾಗದೇ ಕಕ್ಕಿ ಹೊರಹಾಕುವುದನ್ನು ನೋಡಿರುತ್ತೇವೆ. ಆದರೆ, ಆ ಪ್ರಾಣಿಗಳು ಬದುಕಿರುವ ಸಾಧ್ಯತೆ ತೀರಾ ಕಡಿಮೆ. ಇನ್ನು ಕಪ್ಪೆಗಳ ಬಾಯಿಗೆ ಆಹಾರವಾಗುವ ಕ್ರಿಮಿಕೀಟಗಳು ಬದುಕಿ ಬರಲು ಸಾಧ್ಯವೇ? ಆದರೆ, ಜೀರುಂಡೆಗಳಿಗೆ ಇದು ಸಾಧ್ಯ. ಪ್ರಕೃತಿಯು ನೀರಿನ ಜೀರುಂಡೆಗಳಿಗೆ (Water Beetle) ವಿಶೇಷ ಶಕ್ತಿ ದಯಪಾಲಿಸಿದಂತಿದೆ. ತಮ್ಮನ್ನು ಬೇಟೆಯಾಡಿ ನುಂಗುವ ಕಪ್ಪೆಯ ಗುದದ್ವಾರದಿಂದಲೇ ಇವು ನೂಕಾಡಿಕೊಂಡು ಹೊರಬರುತ್ತವೆ. ಸಂಶೋಧಕರು ಈ ಕ್ರಿಮಿಯ ಚಮತ್ಕಾರ ಕಂಡು ದಂಗಾಗಿದ್ದಾರೆ.


ಸಂಶೋಧಕರು ನಡೆಸಿರುವ ಈ ಪ್ರಯೋಗದ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಹಾಕಲಾಗಿದೆ. ಇಲ್ಲಿ ಕಪ್ಪೆಯ ಹೊಟ್ಟೆಗೆ ಸೇರಿದ 6 ಗಂಟೆಯಲ್ಲಿ ಜೀರುಂಡೆಯು ಕಪ್ಪೆಯ ಗುದದ್ವಾರದ (ಕಕ್ಕಸ್ಸು ಹೊರಬರುವ ಜಾಗ) ಮೂಲಕ ಹೊರಬರುತ್ತಿರುವುದು ಈ ವಿಡಿಯೋದಲ್ಲಿ ಕಾಣಬಹುದು. ಇಲ್ಲಿ ಕಪ್ಪೆಗೂ ಯಾವುದೇ ಹಾನಿಯಾಗಿಲ್ಲ, ಜೀರುಂಡೆಯೂ ಹಾನಿಯಾಗಿಲ್ಲ. ಎರಡೂ ಸುರಕ್ಷಿತವಾಗಿವೆ.


ಇದನ್ನೂ ಓದಿ: ಅಮೆರಿಕದ ಟೈಮ್ಸ್ ಸ್ಕ್ವೇರ್​ನಲ್ಲಿ ರಾಮಮಂದಿರದ ಬೃಹತ್ ಬಿಲ್​ಬೋರ್ಡ್ ಪ್ರದರ್ಶನ


ಇಲ್ಲಿ ಕಪ್ಪೆಯ ಜೀರ್ಣವ್ಯವಸ್ಥೆ ಬಹಳ ಕಠಿಣವಾಗಿರುತ್ತದೆ. ಅತಿಹೆಚ್ಚು ಪಿಎಚ್ (ಜಲಜನಕ ಅಣು ಸಂಯೋಜನೆ) ಹಾಗೂ ಅಲ್ಪ ಆಮ್ಲಜನಕದ ವಾತಾವರಣದಲ್ಲಿ ಬದುಕುಳಿಯುವುದು ಬಹಳ ಕಷ್ಟಸಾಧ್ಯ. ಇಂಥ ಕಠಿಣ ವಾತಾವರಣವಿರುವ ಜೀರ್ಣ ವ್ಯವಸ್ಥೆಯನ್ನ ಭೇದಿಸಿಕೊಂಡು ಹೊರಬರುವ ಜೀರುಂಡೆಗೆ ಪ್ರಕೃತಿದತ್ತ ಶಕ್ತಿ ಇಲ್ಲದೇ ಇಲ್ಲ.


ಪ್ರಯೋಗಕ್ಕೆ ಬಳಸಲಾದ ಈ ಪ್ರಭೇದದ ಕಪ್ಪೆ ತಾನು ಸೇವಿಸುವ ಆಹಾರದಲ್ಲಿ ಜೀರ್ಣವಾಗದ ಕೀಟದ ಭಾಗಗಳನ್ನ 24 ಗಂಟೆಯ ಬಳಿಕ ತನ್ನ ಮಲ ವಿಸರ್ಜನೆಯ ವೇಳೆ ಹೊರಹಾಕುತ್ತದೆ. ಇದರ ಕಠಿಣ ಜೀರ್ಣ ವ್ಯವಸ್ಥೆಯಲ್ಲಿ ಜೀವಿಗಳು ಬದುಕುವ ಸಾಧ್ಯತೆ ಕಡಿಮೆ. ಆದರೆ, ಜೀರುಂಡೆಯು ಕೇವಲ 6 ಗಂಟೆಯಲ್ಲಿ ಜೀವಂತವಾಗಿ ಬಂದಿದೆ. ಇದಕ್ಕೆ ಕಾರಣ ಜೀರುಂಡೆಗಳು ತಮ್ಮ ಚುರುಕು ಕಾಲುಗಳಿಂದ ಕಪ್ಪೆಯ ಜೀರ್ಣನಾಳದಲ್ಲಿ ವೇಗವಾಗಿ ಸಾಗುತ್ತಾ ಗುದದ್ವಾರ ತಲುಪುತ್ತದೆ. ಆದರೆ, ಕಪ್ಪೆಯ ಗುದದ್ವಾರದ ಸ್ನಾಯುಗಳು ಬಹಳ ಗಟ್ಟಿಯಾಗಿ ಮುಚ್ಚಿರುತ್ತವೆ. ಮಲವಿಸರ್ಜನೆಯ ವೇಳೆ ಮಾತ್ರ ಗುದ ಸ್ನಾಯು ಸಡಿಲಗೊಳ್ಳುತ್ತದೆ. ಇಲ್ಲಿ ಜೀರುಂಡೆಗಳು ಕಪ್ಪೆಗೆ ಮಲವಿಸರ್ಜನೆಯಾಗುವಂತೆ ಪ್ರಚೋದಿಸಬಹುದು. ಆ ಬಳಿಕ ಜೀರುಂಡೆ ಕಪ್ಪೆಯ ದೇಹದಿಂದ ಸುಲಭವಾಗಿ ಹೊರನುಸುಳಿಕೊಂಡು ಬರುತ್ತದೆ ಎಂಬುದನ್ನು ಸಂಶೋಧಕರು ಕಂಡುಹಿಡಿದಿದ್ಧಾರೆ.




ಇದನ್ನೂ ಓದಿ: ಕೋವಿಡ್ ವಿರುದ್ಧ ತದ್ರೂಪು ಪ್ರತಿಕಾಯದ ಪ್ರಯೋಗಕ್ಕೆ ವಿಜ್ಞಾನಿಗಳ ಪ್ರಯತ್ನ


ಜೀರುಂಡೆಗಳ ಯಾವ ಶಕ್ತಿ ಇದಕ್ಕೆ ಕಾರಣ ಎಂಬುದನ್ನು ಕಂಡುಹಿಡಿಯಲು ಸಂಶೋಧಕರು ಮತ್ತೊಂದು ಪ್ರಯೋಗ ಮಾಡಿದ್ಧಾರೆ. ಅದರಲ್ಲಿ ಜೀರುಂಡೆಯ ಕಾಲುಗಳನ್ನ ಮೇಣದಿಂದ ಅಂಟಿಸಿ ಕಪ್ಪೆಗೆ ಆಹಾರವಾಗಿಸಿದ್ದಾರೆ. ಕಾಲು ಕಟ್ಟಿದ ಜೀರುಂಡೆಗಳು ಕಪ್ಪೆಯ ಹೊಟ್ಟೆ ಸೇರಿ 24 ಗಂಟೆ ಬಳಿಕ ಸತ್ತು ಹೊರಬಂದಿವೆ. ಜೀರುಂಡೆಗಳು ಹೊರಗೆ ಬರಲು ಅವುಗಳ ಬಲಶಾಲಿ ಕಾಲುಗಳೇ ಕಾರಣ ಇರಬಹುದು ಎನ್ನುತ್ತಾರೆ ಸಂಶೋಧಕರು.


ಜಪಾನ್ ದೇಶದ ಕೋಬ್ ಯೂನಿವರ್ಸಿಟಿಯ ವಿಜ್ಞಾನಿ ಡಾ. ಶಿಂಜಿ ಸುಗಿಯುರಾ ಅವರು ಈ ಅಧ್ಯಯನ ನಡೆಸಿದ್ದಾರೆ. ಅವರು ನಡೆಸಿದ ಈ ಪ್ರಯೋಗದಲ್ಲಿ ಶೇ 90ರಷ್ಟು ಜೀರುಂಡೆಗಳು ಕಪ್ಪೆಯ ಹೊಟ್ಟೆಯಿಂದ ಜೀವಂತವಾಗಿ ಹೊರಬರಲು ಯಶಸ್ವಿಯಾಗಿವೆಯಂತೆ.

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು