ದುರಾದೃಷ್ಟ (Bad Luck) ಅನ್ನೋದು ಯಾವಾಗ ನಮ್ಮ ಬೆನ್ನು ಹತ್ತುತ್ತದೆ ಎಂದು ಹೇಳೋದಕ್ಕೆ ಆಗೋದಿಲ್ಲ. ಒಮ್ಮೆ ಜವರಾಯನ ವಕ್ರದೃಷ್ಟಿ ಬೀಳುತ್ತಿದ್ದಂತೆ ಎಂತಹ ಪರಿಸ್ಥಿತಿ (Situation) ಇದ್ದರೂ ಕೂಡ ನಾವು ಸಾವಿನಿಂದ (Death) ಪಾರಾಗಲು ಸಾಧ್ಯವೇ ಇಲ್ಲ.. ಅದು ಸಂತಸದ ಸಮಾರಂಭವೇ ಆಗಿರಲಿ ದುಃಖದ ಕ್ಷಣವೇ ಆಗಿರಲಿ ಜವರಾಯನ ಕ್ರೂರ ದೃಷ್ಟಿಗೆ ಎಲ್ಲರೂ ಶರಣಾಗಲೇಬೇಕು ಎಂಬುದು ನಮ್ಮ ಮುಂದೆ ನಡೆದಿರುವ ಹಲವಾರು ಘಟನೆಗಳಿಂದ (Incident) ಅನೇಕ ಬಾರಿ ಸಾಬೀತಾಗಿದೆ. ಇದ್ದಕ್ಕಿದ್ದಂತೆ ಮೋಜು-ಮಸ್ತಿಯಲ್ಲಿ ತೊಡಗಿದ್ದವರು ಏಕಾಏಕಿ ಸಾವನ್ನಪ್ಪಿರುವ ಅನೇಕ ಘಟನೆಗಳು ನಮ್ಮ ಮುಂದೆ ಇವೆ. ಅದೇ ರೀತಿ ಈಗ ಸಂತಸದ ಸಮಯದಲ್ಲಿ ಇದ್ದ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಅನಿರೀಕ್ಷಿತ ಘಟನೆ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ.
ಬೋಟಿಂಗ್ ಮಾಡುತ್ತಿದ್ದವರ ಮೇಲೆ ಉರುಳಿದ ದೈತ್ಯಾಕಾರದ ಬಂಡೆ
ಬ್ರೆಜಿಲ್ನ ಮಿನಾಸ್ ಗೆರೈಸ್ ರಾಜ್ಯದ ಫರ್ನಾಸ್ ಸರೋವರದಲ್ಲಿಜಾಲಿ ಮೂಡ್ ನಲ್ಲಿ ಬೋಟಿಂಗ್ ಮಾಡುತ್ತಿದ್ದ ಬೋಟ್ ಗಳ ಮೇಲೆ ದೈತ್ಯಾಕಾರದ ಬೃಹತ್ ಬಂಡೆಯೊಂದು ಉರುಳಿದ್ದು, 3 ಬೋಟ್ ಗಳಲ್ಲಿದ್ದ ಕನಿಷ್ಛ 10 ಮಂದಿ ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿದ್ದಾರೆ. ಇನ್ನು ಕಲ್ಲಿನ ಬಂಡೆ ಬೀಳುತ್ತಿರುವ ದೃಶ್ಯವನ್ನು ಕಂಡು ಕೆಲವರು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಮೂರು ದೋಣಿಗಳು ಸಿಲುಕಿಕೊಂಡಿದ್ದರಿಂದ 10 ಮಂದಿ ಸಾವಿಗೀಡಾಗಿ 32 ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, 20 ಪ್ರವಾಸಿಗರು ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಒಡನಾಡಿಯನ್ನು ಕಳೆದುಕೊಂಡ ನವಿಲಿನ ಆಕ್ರಂದನ
ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡ ಮಿನಾಸ್ ಗೆರೈಸ್ ನ ಅಗ್ನಿಶಾಮಕ ದಳದ ಕಮಾಂಡರ್ ಕರ್ನಲ್ ಎಡ್ಗಾರ್ಡ್ ಎಸ್ಟೆವೊ ಡಿ ಸಿಲ್ವಾ, ಸೋ ಜೋಸ್ ಡ ಬಾರ್ರಾ ಮತ್ತು ಕ್ಯಾಪಿಟೋಲಿಯೊ ನಗರಗಳ ಮಧ್ಯೆದಲ್ಲಿ ಈ ದುರುಂತ ಸಂಭವಿಸಿದೆ. ಟೂರಿಸ್ಟ್ ಸ್ಥಳವಾಗಿರುವ ಫರ್ನಾಸ್ ಸರೋವರದಲ್ಲಿಶನಿವಾರ ಮಧ್ಯಾಹ್ನ 12.30ರ ಹೊತ್ತಿಗೆ ಘಟನೆ ನಡೆದಿದೆ. ಫರ್ನಾಸ್ ಸರೋವರದಲ್ಲಿ ಹಲವು ಪ್ರವಾಸಿಗರ ಬೋಟ್ಗಳು ಇದ್ದವು. ಈ ಹೊತ್ತಲ್ಲಿ ಅಲ್ಲಿದ್ದ ದೊಡ್ಡ ಕಲ್ಲುಗುಡ್ಡದ ಒಂದು ಭಾಗ ಒಡೆದು ಮೂರು ಬೋಟ್ಗಳ ಮೇಲೆ ಬಿದ್ದಿದೆ. ಶನಿವಾರ ವೀಕೆಂಡ್ ಆಗಿದ್ದರಿಂದ ಸಹಜವಾಗಿಯೇ ಇಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಹಾಗೇ ನಿನ್ನೆ ಕೂಡ ಹಲವು ಪ್ರವಾಸಿಗರು ಬಂದಿದ್ದರು. ಆದರೆ ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
ಅಪಾಯದಲ್ಲಿ ಸಿಲುಕಿರುವವರ ರಕ್ಷಣೆ ಕಾರ್ಯ
ಇನ್ನು ಬ್ರೆಜಿಲ್ ನ ಪ್ರಖ್ಯಾತ ಪ್ರವಾಸಿ ತಾಣ ಫರ್ನಾಸ್ ಸರೋವರದಲ್ಲಿ, ಈ ಸರೋವರ ಸಾವೊ ಪಾಲೊದಿಂದ ಉತ್ತರಕ್ಕೆ ಸುಮಾರು 260 ಮೈಲುಗಳಷ್ಟು ದೂರವಿದೆ. ಅಪಾಯದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಬ್ರೆಜಿಲ್ ನೇವಿ ಮತ್ತು ಸ್ಥಳೀಯ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಭಾರಿ ಮಳೆಯಿಂದಾಗಿ ಕುಸಿದುಬಿದ್ದ ಬಂಡೆ
ಇನ್ನು ಭಾರೀ ಮಳೆಯಿಂದಾಗಿ ಬಂಡೆಯ ಭಾಗವು ಕುಸಿದಿದೆ ಎಂದು ಅಲ್ಲಿನ ಗವರ್ನರ್ ರೋಮು ಜೆಮಾ ಹೇಳಿದ್ದಾರೆ. ಪ್ರವಾಸಿಗರಿಗೆ ಅಗತ್ಯ ರಕ್ಷಣೆ ಮತ್ತು ಸಹಾಯ ಒದಗಿಸುವ ಕಾರ್ಯ ಭರದಿಂದ ಸಾಗಿದೆ. ನಾಪತ್ತೆಯಾದವರ ಹುಡುಕಾಟ ಮುಂದುವರಿದಿದ್ದು, ಈಜು ತಜ್ಞರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: H&M ಶೋರೂಂನಲ್ಲಿ ಬಟ್ಟೆಗಳ ಮೇಲೆ ಹೇನು, ಕ್ರಿಮಿ-ಕೀಟ! ಅಂಗಡಿ ಕ್ಲೋಸ್
ಪ್ರವಾಸಿಗರ ಪಾಲಿನ ಸ್ವರ್ಗವಾಗಿರುವ ಫರ್ನಾಸ್ ಸರೋವರ
ಇನ್ನು ಫರ್ನಾಸ್ ಸರೋವರ ಅದ್ಭುತ ಪ್ರವಾಸಿ ತಾಣವಾಗಿದ್ದು, ಸರೋವರದ ಸುತ್ತಲೂ ಕಲ್ಲಿನ ಗುಡ್ಡವಿದೆ. ಅಷ್ಟೇ ಅಲ್ಲ ಗುಹೆಗಳು, ಜಲಪಾತಗಳೂ ಇವೆ. ಇಲ್ಲೊಂದು ಜಲವಿದ್ಯುತ್ ಅಣೆಕಟ್ಟು ಕೂಡ ಇದೆ. ಆದರೆ ಈ ಸುಂದರ ಪ್ರದೇಶದಲ್ಲಿ ನಡೆದ ದುರಂತದ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಘಟನೆಯನ್ನು ಕಣ್ಣಾರೆ ನೋಡಿದವರಂತೂ ಕಂಗಾಲಾಗಿ ಹೋಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ