ಮದುವೆ ಅನ್ನೋದು ಪ್ರತಿಯೊಬ್ಬರಿಗೂ ದೊಡ್ಡ ಕನಸ್ಸು. ಅದರಲ್ಲೂ ಹೆಣ್ಣು ಮಕ್ಕಳು ಈ ವಿಷಯದಲ್ಲಿ ತುಂಬಾನೇ ಕಾಳಜಿ ವಹಿಸುತ್ತಾರೆ. ಮದುವೆಯ ದಿನ ತಾವು ಧರಿಸುವ ಆಭರಣ, ವಸ್ತ್ರ ಯಾವುದೇ ಇರಲಿ ಎಲ್ಲವೂ ವಿಭಿನ್ನವಾಗಿರಬೇಕು. ಅಲ್ಲದೇ ಮದುವೆಗೆ ಬರುವ ಅತಿಥಿಗಳಿಗಿಂತ ಭಿನ್ನವಾಗಿ ಕಾಣಬೇಕೆಂಬುದು ಪ್ರತಿಯೊಬ್ಬರ ಹಂಬಲ. ಅದೇ ರೀತಿ ಇಲ್ಲೊಬ್ಬ ವಧು ತಮ್ಮ ಮದುವೆಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.
ಮದುವೆಯ ದಿನ ತಾವು ಧರಿಸುವ ವೈಟ್ ಗೌನ್ಗಾಗಿ ವಧು ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಅದರ ವಿನ್ಯಾಸ, ಬಟ್ಟೆ ಎಲ್ಲವನ್ನೂ ಬಹಳ ಹುಡುಕಾಡಿ ರೆಡಿ ಮಾಡಿದ್ದರು. ತನ್ನ ಮದುವೆಯಲ್ಲಿ ತಾನೇ ಹೈಲೈಟ್ ಆಗಿರಬೇಕೆಂದು ನಿರ್ಧರಿಸಿದ್ದರು. ಆದರೆ ಎಲ್ಲವೂ ಆಕೆ ಅಂದುಕೊಂಡಂತೆ ನಡೆಯಲಿಲ್ಲ. ವಧುವಿನ ಅತ್ತೆಯೇ ಆಕೆಗೆ ಶತ್ರುವಾಗಿ ಬದಲಾಗಿಬಿಟ್ಟಿದ್ದರು. ಮದುವೆಯ ದಿನ ವಧುವಿನ ಒಪ್ಪಿಗೆ ಇಲ್ಲದೆ ಯಾರೂ ಕೂಡ ಶ್ವೇತ ವಸ್ತ್ರದ ಗೌನ್ ಧರಿಸುವಂತಿಲ್ಲ. ಆದರೆ ಆಕೆಯ ಪತಿಯ ತಾಯಿ ಮಾತ್ರ ಅದನ್ನೆಲ್ಲಾ ಮರೆತು ಬಿಂದಾಸ್ ಆಗಿ ವೈಟ್ ಗೌನ್ ಧರಿಸಿದ್ದರು. ಸೊಸೆ ಇದನ್ನು ನೋಡಿ ಒಳಗೊಳಗೆ ಎಷ್ಟು ಚಡಪಡಿಸಿದ್ಲೋ ಗೊತ್ತಿಲ್ಲ. ಆದರೆ ಅತ್ತೆಯ ವೈಟ್ ಗೌನ್ಗೊಂದು ಗಂಡಾಂತರ ಬಂದೇ ಬಿಡ್ತು!
ವಧುವಿನ ಅತ್ತೆ ತಮ್ಮ ಮಗನ ಮದುವೆಯಲ್ಲಿ ಸಂಭ್ರಮದಿಂದ ವೈಟ್ ಗೌನ್ ಧರಿಸಿ ಓಡಾಡುತ್ತಿದ್ದರು. ಆ ಮದುವೆಗೆ ಅಡುಗೆ ಬಡಿಸಲು ಬಂದಿದ್ದ ಕ್ಲೋಯಿ ಬೀ ಎನ್ನುವ ಊಟ ಬಡಿಸುವಾಕೆ ಬಿಸಿಯಾದ ಗ್ರೇವಿಯನ್ನು ಅತ್ತೆ ಮೇಲೆ ಚೆಲ್ಲಿಬಿಟ್ಟರು. ಆದರೆ ಅದೃಷ್ವಶಾತ್ ಅತ್ತೆಗೆ ಏನು ಆಗಲಿಲ್ಲ. ಅವರು ಕೂಡಲೇ ತಮ್ಮ ವಸ್ತ್ರವನ್ನು ಬದಲಿಸಿಕೊಂಡು ಬರಲು ಮನೆಗೆ ಹೊರಟರು. ಅಷ್ಟರಲ್ಲಿ ಈ ಘಟನೆಯಿಂದ ಬೇಸರವಾಗಿ ನಿಂತಿದ್ದ ಅಡುಗೆ ಬಡಿಸುವಾಕೆ ಬಳಿಗೆ ಬಂದ ವಧು, ಅವಳ ಕೈ ಕುಲುಕಿ, 55 ಪೌಂಡ್ ಟಿಪ್ಸ್ ನೀಡಿದ ಘಟನೆ ನಡೆದಿದೆ.
ಮಹಾರಾಷ್ಟ್ರದಲ್ಲಿ ಕರ್ಫ್ಯೂ: ವಲಸಿಗರಿಗೆ, ನಿರುದ್ಯೋಗಿಗಳಿಗೆ ಆಹಾರ ವಿತರಿಸಿದ ಅರ್ಥ್ ಕೆಫೆ
ಎಸ್! ಸ್ವತಃ ಕ್ಲೋಯಿ ಬೀ ಎನ್ನುವ ಸಾಮಾಜಿಕ ಬಳಕೆದಾರರು ತಮ್ಮ ಸ್ವಂತ ಅನುಭವವನ್ನು ಟಿಕ್ ಟಾಕ್ನಲ್ಲಿ ಹಂಚಿಕೊಂಡಿದ್ದಾರೆ. ಕ್ಲೋಯಿ ಬೀ ಅವರಿಗೆ ಮಿದುಳು ಸಂಬಂಧಿತ ಸಮಸ್ಯೆ ಇದೆ. ಆ ಪ್ರಕಾರ ಅವರಿಗೆ ವಸ್ತುಗಳನ್ನು ಕೈ ಯಲ್ಲಿ ಹಿಡಿದು ಸಮತೋಲನ ಮಾಡುವುದು ಕಷ್ಟ. ಇದೇ ಕಾರಣಕ್ಕೆ ಆಗಾಗ ಕೈಯಲ್ಲಿರುವ ವಸ್ತುಗಳನ್ನು ಬೀಳಿಸುತ್ತಿರುತ್ತಾರಂತೆ. ಇದೇ ರೀತಿಯಾಗಿ ಮದುವೆಯ ದಿನವೂ ನಡೆದಿದೆ. ಅಂದು ಕೂಡ ಕ್ಲೋಯಿ ಬೀ ಕೈಯಿಂದ ಅಕಸ್ಮಾತ್ ಆಗಿ ಬಿಸಿ ಬಿಸಿ ಗ್ರೇವಿ ವಧುವಿನ ಅತ್ತೆಯ ಡ್ರೆಸ್ ಮೇಲೆ ಬಿದ್ದಿದೆ. ಈ ಘಟನೆಯಿಂದ ಬಹಳವೇ ನೊಂದಿದ್ದ ಕ್ಲೋಯಿ ಬೀ , ತನ್ನಿಂದ ಈ ಮದುವೆ ಸಂಭ್ರಮದಲ್ಲಿ ಎಡವಟ್ಟಾಯ್ತು. ತನ್ನಿಂದ ತಪ್ಪಾಯ್ತು ಎಂದು ಬೇಸರದಿಂದ ಅಳುತ್ತಾ ನಿಂತಿದ್ದರಂತೆ. ಆದರೆ ಕ್ಷಣ ಮಾತ್ರದಲ್ಲಿ ಆಕೆಯನ್ನು ಈ ತಪ್ಪಿತಸ್ಥ ಭಾವನೆಯಿಂದ ಹೊರ ತಂದಿದ್ದು ಆ ಮದುವೆಯ ವಧು.
ಅವರ ಕೈ ಕುಲುಕಿ, ಧನ್ಯವಾದಗಳು. ನನ್ನ ಅತ್ತೆ ನನ್ನ ಮದುವೆಯ ದಿನ ಶ್ವೇತವಸ್ತ್ರದ ಗೌನ್ ಧರಿಸಬಾರದಿತ್ತು ಎಂದು ಹೇಳಿ 55 ಪೌಂಡ್ ಟಿಪ್ಸ್ ನೀಡಿದ್ದಾಳೆ. ಈ ಘಟನೆಯಿಂದ ಆಶ್ಚರ್ಯಕ್ಕೆ ಒಳಗಾದ ಕ್ಲೋಯಿ ಈ ಅಪರೂಪದ ಸಂಗತಿಯನ್ನು ಟಿಕ್ ಟಾಕ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಇನ್ಮುಂದೆ ನಾನು ಮತ್ತು ಆ ವಧು ಎಲ್ಲೇ ನೋಡಿದರು ಹಾಯ್ ಎನ್ನುತ್ತೀವಿ ಎಂದು ಹೇಳುವ ಮೂಲಕ ಈ ಎಲ್ಲಾ ಘಟನೆಗಳಾಚೆಗೂ ಒಂದು ಸ್ನೇಹದ ಸೆಳೆತವಿದೆ ಎನ್ನುವುದನ್ನು ತಿಳಿಸಿದ್ದಾರೆ.
ಇನ್ನು ಈ ವೀಡಿಯೋ 450,000 ವೀಕ್ಷಣೆ ಗಳಿಸಿದ್ದು, 103,000 ಮೆಚ್ಚುಗೆಯನ್ನು ಗಳಿಸಿದೆ. ಅಲ್ಲದೇ ರಾತ್ರೋ ರಾತ್ರಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರ ಕಮೆಂಟ್ಸ್ಗಳಿಂದ ತುಂಬಿ ಹೋಗಿದೆ. ಕೆಲವರು ಸೊಸೆಯ ಪರ ಮಾತನಾಡಿದರೆ, ಇನ್ನು ಕೆಲವರು ಅತ್ತೆಯ ವಕಾಲತ್ತು ವಹಿಸಿಕೊಂಡಿದ್ದಾರೆ. ಇದೆಲ್ಲದರ ಆಚೆಗೆ ಕ್ಲೋಯಿ ಮಾತ್ರ ಈವರೆಗೂ ಬೆರಗೂ ಮೂಡಿಸುವ ಈ ಘಟನೆಯನ್ನು ಇನ್ನೂ ಮೆಲುಕು ಹಾಕುತ್ತಿದ್ದಾರೆ. ಹಾಗಾದ್ರೆ ಈ ವಿಡಿಯೋ ನೋಡಿದ ಅತ್ತೆ ಮುಂದೆ ಏನು ಮಾಡಬಹುದು? ಅನ್ನೋ ತುಂಟ ಪ್ರಶ್ನೆಗಳು ಕೂಡ ಕೆಲವರನ್ನು ಕಾಡುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ