Viral Video: ಚೀನಾದ ರೈಲು ಹತ್ತಿದ ಜಾನುವಾರುಗಳು; ವೈರಲ್ ವಿಡಿಯೋಗೆ ಕಣ್ಣರಳಿಸಿದ ನೆಟ್ಟಿಗರು

Viral Video: ಕುರಿ, ಮೇಕೆ ಮತ್ತು ಹಂದಿಗಳ ಹಿಂಡು ರೈಲಿನಲ್ಲಿ ಚೀನಾದ ಸಿಚುವಾನ್ ಭೂಪ್ರದೇಶದ ಪುಕ್ಸಿಯಾಂಗ್‌ನಿಂದ ಪ್ಯಾನ್ಸಿಹುವಾಗೆ ಹೊರಟಿವೆ. ಕೆಲವೊಂದನ್ನು ರೈಲಿನ ಕಿಟಕಿಗಳಿಗೆ ಹಗ್ಗದ ಸಹಾಯದಿಂದ ಕಟ್ಟಿ ಹಾಕಲಾಗಿದೆ.

ರೈಲಿನೊಳಗೆ ಹಸು, ಹಂದಿಗಳು

ರೈಲಿನೊಳಗೆ ಹಸು, ಹಂದಿಗಳು

  • Share this:
ಚೀನಾದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ರೈಲಿನಲ್ಲಿ ಅಪರೂಪದ ದೃಶ್ಯಗಳು ಕಂಡುಬಂದಿದೆ. ಜಾನುವಾರಗಳ ಗುಂಪು ರೈಲಿನೊಳಗೆ ಪ್ರವೇಶಿಸಿ ಅತ್ತಿತ್ತ ಪಿಳಿ ಪಿಳಿ ನೋಡುತ್ತಿರುವ ದೃಶ್ಯ ನೆಟ್ಟಿಗರಿಗೆ ಮುದ ನೀಡಿದೆ. ಅಂದಹಾಗೇ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಹಂಚಿಕೊಂಡ ಈ ವಿಡಿಯೋದಲ್ಲಿ ಕುರಿ, ಮೇಕೆ ಮತ್ತು ಹಂದಿಗಳ ಹಿಂಡು ರೈಲಿನಲ್ಲಿ ಚೀನಾದ ಸಿಚುವಾನ್ ಭೂಪ್ರದೇಶದ ಪುಕ್ಸಿಯಾಂಗ್‌ನಿಂದ ಪ್ಯಾನ್ಸಿಹುವಾಗೆ ಹೊರಟಿವೆ. ಹೀಗೆ ರೈಲು ಹತ್ತಿದ ಪ್ರಾಣಿಗಳು ಒಂದರ ಹಿಂದೆ ಒಂದು ಸಾಗಿವೆ. ಕೆಲವೊಂದನ್ನು ರೈಲಿನ ಕಿಟಕಿಗಳಿಗೆ ಹಗ್ಗದ ಸಹಾಯದಿಂದ ಕಟ್ಟಿ ಹಾಕಲಾಗಿದೆ. ಇನ್ನು, ಕೆಲವೊಂದು ಟ್ರೈನಿನೊಳಗೆ ಓಡಾಡಿಕೊಂಡಿವೆ. ಪ್ರಯಾಣಿಕರು ಸಹ ಈ ಜಾನುವಾರುಗಳನ್ನು ನೋಡಿಕೊಂಡು ತಮ್ಮ ಪಾಡಿಗೆ ತಾವು ಪ್ರಯಾಣ ಮಾಡುತ್ತಿದ್ದಾರೆ. ಈ ಎಲ್ಲಾ ದೃಶ್ಯಗಳು ನೆಟ್ಟಿಗರಿಗೆ ಆಶ್ಚರ್ಯವನ್ನುಂಟು ಮಾಡಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ಪ್ರಕಾರ, ಬಡವರ ಅನುಕೂಲಕ್ಕಾಗಿ ಮಾಡಿರುವ ರೈಲಿನಲ್ಲಿ ಈ ದೃಶ್ಯ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ. ರೈತರು ತಮ್ಮ ಜಾನುವಾರುಗಳನ್ನು ಗ್ರಾಮೀಣ ಭಾಗದಿಂದ ಕರೆದುಕೊಂಡು ಬಂದು, ಪಟ್ಟಣಕ್ಕೆ ತಲುಪಿಸುತ್ತಾರೆ. ಕೆಲವು ಜಾನುವಾರು ರೈಲಿನಲ್ಲೇ ಮಾರಾಟವಾಗುತ್ತದೆ. ಕೆಲವು ಜಾನುವಾರುಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾಗುತ್ತದೆ. ಬಹಳ ನಿಧಾನವಾಗಿ ಚಲಿಸುವ ಈ ರೈಲು 353 ಕಿ.ಮೀ ಪ್ರಯಾಣಿಸಲು 9 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಅಲ್ಲದೇ ಈ ರೈಲಿನಲ್ಲಿ ಪ್ರಯಾಣಿಸಲು ಕೇವಲ 2 ಯುವಾನ್ (30 ಯುಎಸ್ ಸೆಂಟ್ಸ್) ಟಿಕೆಟ್ ಹಣ ನೀಡಿದರೆ ಸಾಕು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.



ಇನ್ನು, ಈ ಅಪರೂಪದ ವಿಡಿಯೋ ಬಗ್ಗೆ ನೆಟ್ಟಿಗರು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದು, ಕುತೂಹಲವನ್ನು ಪ್ರದರ್ಶಿಸಿದ್ದಾರೆ. 'ಪ್ರಾಣಿಗಳ ಜೊತೆಗೆ ಪ್ರಯಾಣಿಸುವುದು ಆಸಕ್ತಿದಾಯಕವಾಗಿದೆ. ಆದರೆ ಅವುಗಳ ವಾಸನೆ ಮಾತ್ರ ಸಹಿಸಲು ಅಸಾಧ್ಯ' ಎಂದಿದ್ದಾರೆ.

ಮತ್ತೊಬ್ಬರು. 'ಈ ರೈಲು ಚೀನಾದ ರೈತರಿಗೆ ತೆರೆಯಲಾಗಿದ್ದು, ಅತ್ಯಂತ ಕಡಿಮೆ ಬೆಲೆಯ ಟಿಕೆಟ್ ಸೌಲಭ್ಯವಿದ್ದು, ಇದು ಸ್ಥಳೀಯ ಅರ್ಥವ್ಯವಸ್ಥೆಯನ್ನು ಮೇಲೆತ್ತಲು ಪ್ರಯೋಜನಕಾರಿಯಾಗಿದೆ' ಎಂದಿದ್ದಾರೆ. ಅಲ್ಲದೇ 'ಚೀನಾದಲ್ಲಿ ಇದೊಂದು ರೈಲು ಮಾತ್ರವೇ ಪ್ರಾಣಿಗಳನ್ನು ಜೊತೆಗೆ ಕರೆದುಕೊಂಡು ಹೋಗಲು ಅನುಮತಿ ನೀಡಿರುವುದು' ಎಂದು ತಿಳಿಸಿದ್ದಾರೆ.

ಬಹುತೇಕರು ಈ ವಿಡಿಯೋ ಮೆಚ್ಚಿಕೊಂಡು ಶೇರ್ ಮಾಡಿದ್ದಾರೆ. ಆ ಪ್ರಾಣಿಗಳನ್ನು ಸಾಕಲು ಮನಸ್ಸಾಗುತ್ತಿದೆ ಎಂದಿದ್ದಾರೆ. ಅಲ್ಲದೇ ಬಹುತೇಕರು ಪ್ರಯಾಣಿಕರು ಎಷ್ಟು ನಿರಾಳವಾಗಿ ಅವುಗಳ ಜೊತೆಗೆ ಪ್ರಯಾಣಿಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಇದು ಚೀನಾದ ಬಡ ಪ್ರದೇಶವಾಗಿದೆ. ಅಲ್ಲಿನ ಜನರಿಗೆ ನೆರವಾಗಲು ಸರ್ಕಾರ ಈ ರೈಲು ಮಾಡಿದೆ. ಇಲ್ಲಿ ಜಾನುವಾರು ಉದ್ಯಮವೇ ಪ್ರಮುಖ ಆದಾಯದ ಮೂಲವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ರೈತರು ಉತ್ತಮ ಜೀವನ ನಡೆಸಲು, ಪರ್ವತಗಳಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ದೊಡ್ಡ ನಗರಗಳಲ್ಲಿ ಶಿಕ್ಷಣ ಪಡೆಯಲು ಬಡವರಿಗೆ ಸಹಾಯ ಮಾಡುವುದು ಇದರ ಉದ್ದೇಶ. ಮಾರ್ಕೆಟ್‌ಗೆ ಸಾಗಿಸಲು ಗೂಡ್ಸ್ ಗಾಡಿ ವೆಚ್ಚ ತಗ್ಗಿಸಲು ಇದೊಂದು ಉತ್ತಮ ಅವಕಾಶ ಎಂದು ಹಲವಾರು ಜನರು ಕಮೆಂಟ್ಸ್ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಒಂದು ದೇಶದ ಅವಶ್ಯಕತೆ ಇನ್ನೊಂದು ದೇಶಕ್ಕೆ ಅಚ್ಚರಿ ! ಇದೇ ಬದುಕಿನ ವೈಶಿಷ್ಟ್ಯ.
First published: