• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ಬಿಸಿಲಿನಿಂದ ದಣಿದಿದ್ದ ಅಳಿಲಿಗೆ ನೀರು ಕುಡಿಸಿ ಮಾನವೀಯತೆ ಮೆರೆದ ವ್ಯಕ್ತಿ; ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

Viral Video: ಬಿಸಿಲಿನಿಂದ ದಣಿದಿದ್ದ ಅಳಿಲಿಗೆ ನೀರು ಕುಡಿಸಿ ಮಾನವೀಯತೆ ಮೆರೆದ ವ್ಯಕ್ತಿ; ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

ಅಳಿಲಿಗೆ ನೀರು ಕುಡಿಸುತ್ತಿರುವ ವ್ಯಕ್ತಿ

ಅಳಿಲಿಗೆ ನೀರು ಕುಡಿಸುತ್ತಿರುವ ವ್ಯಕ್ತಿ

41 ಸೆಕೆಂಡುಗಳ ವೈರಲ್ ವಿಡಿಯೋ ಕ್ಲಿಪ್‌ನಲ್ಲಿ, ವ್ಯಕ್ತಿಯು ಬಾಟಲಿಯಿಂದ ಅಳಿಲಿನ ಮರಿಗೆ ನೀರನ್ನು ಕುಡಿಯಲು ಸಹಾಯ ಮಾಡುತ್ತಾನೆ. ನಂತರ ಅದಕ್ಕೆ ಸಾಂತ್ವನ ನೀಡುತ್ತಾನೆ.

  • Share this:

ಬಿಸಿಲಿನ ಧಗೆಗೆ ದಾಹದಿಂದ ಪರಿತಪಿಸುತ್ತಿದ್ದ ಪುಟ್ಟ ಅಳಿಲು ಮರಿಗೆ ವ್ಯಕ್ತಿಯೊಬ್ಬರು ನೀರು ಕುಡಿಸಿ, ಆ ನಂತರ ಅಳಿಲನ್ನು ಮುದ್ದು ಮಾಡುತ್ತಾ ಸಂತೈಸುತ್ತಿರುವ ಮನಮಿಡಿಯುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್​ ಆಗಿದೆ. ಅರಣ್ಯ ಅಧಿಕಾರಿ ಸುಶಾಂತ್​ ನಂದ ಅವರು ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದು, ನೆಟ್ಟಿಗರು ಮತ್ತೊಮ್ಮೆ ಮಾನವೀಯತೆಯ ಮಡಿಲೊಳಗೆ ಮಿಂದೆದ್ದಿದ್ದಾರೆ. ಈ ವೀಡಿಯೋದಲ್ಲಿ ಸುಸ್ತಾಗಿ, ನೀರಿಗಾಗಿ ಹಂಬಲಿಸಿ, ಹುಡುಕಾಡುತ್ತಾ ಅಳಿಲು ಮರಿಯೊಂದು ವ್ಯಕ್ತಿಯ ಸಮೀಪಕ್ಕೆ ಬಂದಿದೆ.


ಬಾಯಾರಿದ ಅಳಿಲಿಗೆ ನೀರು ಕೊಡುವ ವ್ಯಕ್ತಿಯ ಹೃದಯಸ್ಪರ್ಶಿ ವಿಡಿಯೋ ವೈರಲ್ ಆದ ನಂತರ ಆನ್‌ಲೈನ್‌ನಲ್ಲಿ ಪ್ರಶಂಸೆ ಗಳಿಸಿದೆ. ಮೂಲತಃ ವಿಡಿಯೋ-ಹಂಚಿಕೆ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾದ
ಕ್ಲಿಪ್ ಅನ್ನು ಟ್ವಿಟ್ಟರ್‌ನಲ್ಲಿ ಮನರಂಜನಾ ಪ್ರಚಾರಕ ಡ್ಯಾನಿ ಡೆರಾನಿ ಅವರು ಮರುಹಂಚಿಕೆ ಮಾಡಿದ್ದಾರೆ ಮತ್ತು "ನೀವು ಅಳಿಲಿನ ಮರಿಗೆ ನೀರು ಕೊಡುವುದನ್ನು ನೋಡಲು ಬಯಸುತ್ತೀರಿ" ಎಂಬ ಶೀರ್ಷಿಕೆಯೊಂದಿಗೆ ಬರೆಯಲಾಗಿದೆ.


41 ಸೆಕೆಂಡುಗಳ ವೈರಲ್ ಕ್ಲಿಪ್‌ನಲ್ಲಿ, ವ್ಯಕ್ತಿಯು ಬಾಟಲಿಯಿಂದ ಅಳಿಲಿನ ಮರಿಗೆ ನೀರನ್ನು ಕುಡಿಯಲು ಸಹಾಯ ಮಾಡುತ್ತಾನೆ. ನಂತರ ಅದಕ್ಕೆ ಸಾಂತ್ವನ ನೀಡುತ್ತಾನೆ ಮತ್ತು ಅದನ್ನು ತನ್ನ ಕೈಯಲ್ಲಿ ಏರಲು ಸಹ ಅನುಮತಿಸುತ್ತಾನೆ. ಸಾಮಾನ್ಯವಾಗಿ ಅಳಿಲುಗಳು ಮನುಷ್ಯರನ್ನು ಕಂಡೊಡನೆ ಸರಕ್ಕನೇ ಓಡಿ ಮರ ಏರಿಬಿಡುತ್ತವೆ. ಆದರೆ ಈ ಅಳಿಲು ಮಾತ್ರ ವ್ಯಕ್ತಿಯನ್ನು ಕಂಡೊಡನೆ ನಿಂತಿದೆ. ಇದನ್ನು ಮನಗಂಡ ವ್ಯಕ್ತಿ ಬೇಸಿಗೆಯ ಧಗೆಗೆ ಅಳಿಲಿನ ದಾಹವನ್ನು ಅರ್ಥ ಮಾಡಿಕೊಂಡು, ಅದಕ್ಕೆ ವಾಟರ್​ ಬಾಟೆಲ್​ನಿಂದ ನೀರು ಕುಡಿಸಲು ಪ್ರಯತ್ನಿಸಿದ್ದಾರೆ. ಸದ್ಯ ಬದುಕಿದೆ ಬಡ ಜೀವವೇ ಎಂಬಂತೆ ಅಳಿಲು ಒಂದೇ ಸಮನೆ ನೀರು ಕುಡಿದು ದಾಹವನ್ನು ತಣಿಸಿಕೊಂಡಿದೆ.



ಆ ನಂತರ ಸ್ವಲ್ಪ ಸುಧಾರಿಸಿಕೊಂಡಂತೆ ಕಂಡ ಅಳಿಲಿನ ಬೆನ್ನು ಸವರುತ್ತಾ ವ್ಯಕ್ತಿ ಸಂತೈಸಿದ್ದಾರೆ. ಕೂಡಲೇ ಮತ್ತಷ್ಟು ನೀರು ಕುಡಿಸಲು ಪ್ರಯತ್ನಿಸಿ ತಮ್ಮ ಬೊಗಸೆಯಲ್ಲಿ ನೀರು ಹಾಕಿಕೊಂಡು ಕುಡಿಸಲು ಪ್ರಯತ್ನಿಸಿದ್ದಾರೆ. ಆದರೆ ಅಳಿಲು ಆ ವ್ಯಕ್ತಿಯ ತೋಳಿನ ಆಸರೆಯಲ್ಲಿ ಸಂತೋಷದಿಂದ ಮುಂದಕ್ಕೆ ಸಾಗುತ್ತದೆ. ಅಳಿಲಿನ ಈ ನಡೆ ನೋಡುಗರ ಮನಸ್ಸಲ್ಲಿ ಪುಳಕವನ್ನುಂಟು ಮಾಡುತ್ತದೆ. ಮೂರನೇ ಬಾರಿಗೆ ವ್ಯಕ್ತಿ ನೀರನ್ನು ಕುಡಿಸಿದ ಮೇಲೆ ಸಂಪೂರ್ಣ ದಾಹ ತಣಿಸಿಕೊಂಡ ಅಳಿಲು ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವ ವಿಡಿಯೋಗೆ ನೆಟ್ಟಿಗರು ಭಾವುಕರಾಗಿದ್ದಾರೆ.


ಈ ವೀಡಿಯೋವನ್ನು ಹಂಚಿಕೊಂಡಿರುವ ಅರಣ್ಯ ಅಧಿಕಾರಿ ಸುಶಾಂತ್​ ನಂದ ಅವರು ದಯವಿಟ್ಟು ಈ ವಿಡಿಯೋವನ್ನು ಹೆಚ್ಚು ಶೇರ್ ಮಾಡಿ, ನಮ್ಮ ಭೂಮಿ ಬದುಕಲು ಇನ್ನಷ್ಟು ಸಹನೀಯವಾಗುತ್ತದೆ ಎಂದು ಟ್ಯಾಗ್​ಲೈನ್ ಹಾಕಿದ್ದಾರೆ. ಆ ಮೂಲಕ ಪುಟ್ಟ ಮೂಕ ಪ್ರಾಣಿಗಳ ಕಡೆಗೆ ಹಿಂದೆಂದಿಗಿಂತಲೂ ಈಗ ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎನ್ನುವುದನ್ನು ತಿಳಿಸಿದ್ದಾರೆ.


ಮಾರ್ಚ್​ 19 ರಂದು ಹಂಚಿಕೊಂಡಿರುವ ಈ ವೀಡಿಯೋ ಇಲ್ಲಿಯವರೆಗೆ ಸುಮಾರು 40 ಸಾವಿರ ವೀಕ್ಷಣೆ ಗಳಿಸಿದೆ. ಅಲ್ಲದೆ, ಸಾವಿರಕ್ಕೂ ಅಧಿಕ ರೀ ಟ್ವೀಟ್‌ ಗಳಿಸಿದ್ದು, 6 ಸಾವಿರಕ್ಕೂ ಅಧಿಕ ಮೆಚ್ಚುಗೆ ಪಡೆದುಕೊಂಡಿದೆ. ಅಲ್ಲದೇ ಈ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಮೇಲಿಂದ ಮೇಲೆ ಕಾಣುತ್ತಲೇ ಇದೆ. ಜೊತೆಗೆ ಇನ್ನು ಮುಂದೆ ನಿಮ್ಮ ಬಳಿಗೆ ಅಳಿಲು ಬಂದರೆ ಅದಕ್ಕೆ ನೀರು ಕೊಟ್ಟು ನಿಮ್ಮ ಅಳಿಲು ಸೇವೆ ಮಾಡಿ ಎನ್ನುವುದನ್ನು ಎಲ್ಲರ ಮನಸ್ಸಿನಲ್ಲೂ ತುಂಬುತ್ತಿದೆ. ಅಲ್ಲದೇ ಈ ಪೋಸ್ಟ್​ಗೆ ಪ್ರೀತಿ, ದಯೆ, ಕಾಳಜಿಯ ಕುರಿತಂತೆ ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆಗಳು ಬರುತ್ತಿವೆ. ಕೊರೊನಾ ಕಾಲಘಟ್ಟದಲ್ಲಿ ಮರೆಯಾಗಿದ್ದ ಮಾನವೀಯತೆ ಮತ್ತೊಮ್ಮೆ ಮುನ್ನಲೆಗೆ ಬರುತ್ತಿದೆ ಎನ್ನುವುದು ಕಮೆಂಟ್ಸ್​ಗಳಲ್ಲಿ ವ್ಯಕ್ತವಾಗುತ್ತಿದೆ.

ಅಲ್ಲದೇ ಈಗ ಬೇಸಿಗೆಕಾಲ ಆರಂಭವಾಗಿದ್ದು, ಮನುಷ್ಯರಿಗೆ ಬಿಸಿಲಿನ ಧಗೆ ತಡೆಯಲು ಸಾಧ್ಯವಾಗದೇ ಮಜ್ಜಿಗೆ, ಎಳನೀರು, ವಾಟರ್​ ಬಾಟಲ್‌ಗಳ ಮೊರೆ ಹೋಗಿದ್ದೇವೆ. ಇದರೊಟ್ಟಿಗೆ ನಿಮ್ಮ ಮನೆಯ ಬಾಲ್ಕನಿಯಲ್ಲಿ ಪಕ್ಷಿಗಳಿಗೆ ಕುಡಿಯಲು ನೀರು ಇಡಿ ಎನ್ನುವ ಅಭಿಯಾನವೂ ಶುರುವಾಗಿದೆ. ಪಕ್ಷಿ ಜ್ವರ, ವೈರಸ್​ನ ಭಯದಿಂದ ಮೊದಲಿನಂತೆ ಜನರು ಬಾಲ್ಕನಿ, ಟೆರೇಸ್‌ಗಳಲ್ಲಿ ಪಕ್ಷಿಗಳಿಗೆ ಆಹಾರ ಇಡುವುದು, ನೀರಿನ ಬಟ್ಟಲು ಇಡುವವರ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಈ ವೀಡಿಯೋ ಮತ್ತೊಮ್ಮೆ ಎಲ್ಲರಲ್ಲೂ ಸಹಜೀವನದ ಅರಿವಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವುದಂತೂ ಸುಳ್ಳಲ್ಲ.

Published by:Sushma Chakre
First published: