Viral Video: ಒಂದೇ ರಸ್ತೆಯಲ್ಲಿ 45 ಸ್ಪೋರ್ಟ್ಸ್​ ಕಾರ್​​ಗಳನ್ನು ತಡೆದ ಪೊಲೀಸರು!; ವಿಡಿಯೋ ವೈರಲ್

ಹಾಂಗ್ ಕಾಂಗ್‌ನಲ್ಲಿ ಬರೋಬ್ಬರಿ 45 ಸೂಪರ್ ಕಾರುಗಳನ್ನು ರಸ್ತೆಯಲ್ಲಿ ಸಾಲಾಗಿ ನಿಲ್ಲಿಸಲಾಗಿತ್ತು. ಅವುಗಳನ್ನು ನೋಡಿದ ಆ ದೇಶದ ಜನರು ವಾವ್ಹ್..! ಎಂದು ಉದ್ಘಾರ ತೆಗೆದಿದ್ದರು.

ಹಾಂಗ್​ಕಾಂಗ್ ರಸ್ತೆಯಲ್ಲಿ ನಿಂತ ಸ್ಪೋರ್ಟ್​ ಕಾರುಗಳು

ಹಾಂಗ್​ಕಾಂಗ್ ರಸ್ತೆಯಲ್ಲಿ ನಿಂತ ಸ್ಪೋರ್ಟ್​ ಕಾರುಗಳು

 • Share this:
  ನೀವು ಹಾಲಿವುಡ್ ನ ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’ ಸರಣಿ ಸಿನಿಮಾಗಳನ್ನು ನೋಡೇ ಇರುತ್ತೀರಿ. ಅವುಗಳಲ್ಲಿ ಬರುವ ಸೂಪರ್ ಕಾರುಗಳ ವೇಗದ ಬಗ್ಗೆ ನೀವು ಅಚ್ಚರಿ ಪಟ್ಟಿರುತ್ತೀರಿ. ಆದರೆ, ಒಂದೇ ಸ್ಥಳದಲ್ಲಿ 45 ಸೂಪರ್ ಕಾರುಗಳನ್ನು ನಿಲ್ಲಿಸಿರುವುದನ್ನು ಎಲ್ಲಿಯಾದರೂ ನೋಡಿದ್ದೀರಾ..? ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’ ಚಿತ್ರದಲ್ಲಿಯೂ ಈ ದೃಶ್ಯ ನಿಮಗೆ ಕಾಣ ಸಿಗುವುದಿಲ್ಲ. ಇತ್ತೀಚೆಗೆ ಹಾಂಗ್ ಕಾಂಗ್‌ನ ಜನರು ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದಾರೆ.

  ಹೌದು, ಹಾಂಗ್ ಕಾಂಗ್‌ನಲ್ಲಿ ಬರೋಬ್ಬರಿ 45 ಸೂಪರ್ ಕಾರುಗಳನ್ನು ರಸ್ತೆಯಲ್ಲಿ ಸಾಲಾಗಿ ನಿಲ್ಲಿಸಲಾಗಿತ್ತು. ಅವುಗಳನ್ನು ನೋಡಿದ ಆ ದೇಶದ ಜನರು ವಾವ್ಹ್..! ಎಂದು ಉದ್ಘಾರ ತೆಗೆದಿದ್ದರು. ಅಷ್ಟಕ್ಕೂ ಅಷ್ಟೊಂದು ಸೂಪರ್ ಕಾರುಗಳು ರಸ್ತೆಯಲ್ಲಿ ಏಕೆ ಸಾಲಾಗಿ ನಿಂತಿದ್ದವು ಅಂತೀರಾ? ರಸ್ತೆಯಲ್ಲಿ ಅಕ್ರಮವಾಗಿ ರೇಸ್ ನಡೆಸುತ್ತಾರೆಂದು ಶಂಕಿಸಿ ಮತ್ತು ವಾಹನಗಳಲ್ಲಿ ಅಕ್ರಮವಾಗಿ ಏನಾದರೂ ಮಾರ್ಪಾಡು ಮಾಡಲಾಗಿದೆಯೇ ಎಂದು ಪರಿಶೀಲಿಸಲು ಸ್ಥಳೀಯ ಪೊಲೀಸರು 4 ಡಜನ್ ಅಲ್ಟ್ರಾ ಪವರ್ ಸೂಪರ್ ಕಾರುಗಳನ್ನು ತಡೆದು ನಿಲ್ಲಿಸಿದ್ದರು. ರಸ್ತೆಯ ಒಂದು ಬದಿಯಲ್ಲಿ ಸಾಲಾಗಿ ನಿಂತಿದ್ದ ಸೂಪರ್ ಕಾರುಗಳನ್ನು ನೋಡಿದ ಅಲ್ಲಿನ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದರು.  ಸ್ಥಳೀಯ ವರದಿಗಳ ಪ್ರಕಾರ ಅತಿವೇಗದಲ್ಲಿ ಸೂಪರ್‌ಕಾರ್‌ಗಳನ್ನು ಚಲಾಯಿಸಿ, ಎಂಜಿನ್ ಜೋರು ಶಬ್ದದಿಂದ ಕಿರಿಕಿರಿಯನ್ನುಂಟು ಮಾಡುತ್ತಿರುವ ಬಗ್ಗೆ ಎಕ್ಸ್‌ ಪ್ರೆಸ್‌ವೇ ಬಳಿ ವಾಸಿಸುತ್ತಿರುವ ಹಲವು ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸರ ಗಮನಕ್ಕೂ ತಂದಿದ್ದರು. ಹೀಗಾಗಿ ಪೊಲೀಸ್ ಅಧಿಕಾರಿಗಳು 45 ಸೂಪರ್ ಕಾರುಗಳನ್ನು ತಡೆದು ರಸ್ತೆಯಲ್ಲಿ ಒಂದರ ಹಿಂದೊಂದರಂತೆ ನಿಲ್ಲಿಸಿದ್ದರು. ಇವುಗಳಲ್ಲಿ ಫೆರಾರಿ, ಲ್ಯಾಂಬೋರ್ಘಿನಿ, ಪೋಷ್ ಸೇರಿದಂತೆ ವಿವಿಧ ದುಬಾರಿ ಮೊತ್ತದ ಕಾರುಗಳಿದ್ದವು.

  ಇದನ್ನೂ ಓದಿ: ಭಯಾನಕ ಘಟನೆ; ಆಲೂಗಡ್ಡೆಯೊಂದಿಗೆ ಹೃದಯ ಬೇಯಿಸಿ ಅಡುಗೆ ಮಾಡಿದ ಕೊಲೆಗಾರ!

  ‘ಫಾಸಿಂಗ್ಟನ್’ ಎಂಬ ಹೆಸರಿನಲ್ಲಿ ಈ ವಾಹನ ತಡೆಯುವ ಕಾರ್ಯಾಚರಣೆಯನ್ನು ಬೆಳ್ಳಂಬೆಳ್ಳಗ್ಗೆಯೇ ಆರಂಭಿಸಿ ಬಹುತೇಕ ಕಾರುಗಳನ್ನು ಪೊಲೀಸರು ಸೆರೆಹಿಡಿದಿದ್ದರು. ಐಲ್ಯಾಂಡ್ ಈಸ್ಟರ್ನ್ ಕಾರಿಡಾರ್ ಎಕ್ಸ್‌ ಪ್ರೆಸ್ ವೇನಲ್ಲಿ ಅನೇಕ ಕಾರುಗಳು ಪಶ್ಚಿಮ ದಿಕ್ಕಿನಲ್ಲಿ ಅತಿವೇಗದಲ್ಲಿ ಚಲಿಸುತ್ತಿರುವುದನ್ನು ಅಧಿಕಾರಿಗಳು ಗಮನಿಸಿದ್ದರು. ಬಳಿಕ ಓಲ್ಡ್ ವಾನ್ ಚಾಯ್ ಪೊಲೀಸ್ ಠಾಣೆಯ ಬಳಿಯ ಗ್ಲೌಸೆಸ್ಟರ್ ರಸ್ತೆಯಲ್ಲಿ 45 ಕಾರುಗಳನ್ನು ತಡೆದು ನಿಲ್ಲಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  ರಸ್ತೆಯ ಒಂದೇ ಬದಿಯಲ್ಲಿ ನಿಲ್ಲಿಸಲಾಗಿದ್ದ ಈ ಸೂಪರ್ ಕಾರುಗಳನ್ನು ವಾಹನ ಚಾಲಕರು, ಪಾದಾಚಾರಿಗಳು ಹಾಗೂ ಸುತ್ತಮುತ್ತಲಿನ ಜನರು ತದೇಕಚಿತ್ತದಿಂದ ನೋಡುತ್ತಿದ್ದರು. ಕಾರುಗಳ ನೋಂದಣಿ ವಿವರ ಮತ್ತು ಚಾಲಕರ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ಕಾರಿನ ಕೆಳಗೆ ಹಾಕಿದ್ದರು. ಹಾಂಗ್ ಕಾಂಗ್‌ನ ಬೀದಿಗಳಲ್ಲಿ ಕಾನೂನುಬಾಹಿರವಾಗಿ ನಡೆಯುವ ರೇಸಿಂಗ್ ಸ್ಪರ್ಧೆಗಳ ಸಂಖ್ಯೆ 2020ರಲ್ಲಿ ಗಮನಾರ್ಹ ಏರಿಕೆ ಕಂಡಿದೆ.

  ಲಾಕ್‌ಡೌನ್ ನಿಂದ ಸಾರ್ವಜನಿಕ ರಸ್ತೆಗಳಲ್ಲಿ ಜನದಟ್ಟಣೆ ಕಡಿಮೆಯಾದ ಪರಿಣಾಮ ಕಾರ್ ರೇಸಿಂಗ್ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ವಿಶ್ವದ ಪ್ರಮುಖ ನಗರಗಳಲ್ಲಿಯೂ ಲಾಕ್‌ಡೌನ್ ಸಂದರ್ಭದಲ್ಲಿ ಅಕ್ರಮ ಕಾರ್ ರೇಸಿಂಗ್ ಜಾಸ್ತಿಯಾಗಿದೆ ಎಂದು ತಿಳಿದುಬಂದಿದೆ.
  Published by:Sushma Chakre
  First published: