ಅಯ್ಯೋ..! ಫೋಟೋ ಕ್ಲಿಕ್ಕಿಸುವ ಮಂಪರಿನಲ್ಲಿ ಕಾಲು ಜಾರಿ ನೀರಿಗೆ ಬಿದ್ದ ಫೋಟೋಗ್ರಾಫರ್‌!

ಇದೀಗ ಭಾರತೀಯ ಮದುವೆಗಳ ಅಂತಹ ಹಲವಾರು ಸಂಗತಿಗಳು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ದೃಶ್ಯಗಳ ಸಮೇತ ಸುದ್ದಿಯಾಗುತ್ತಲೇ ಇರುತ್ತದೆ. ವರ, ವಧು, ಸಂಬಂಧಿಕರು ಅಥವಾ ಸ್ನೇಹಿತರು ಮಾಡುವ ಯಾವುದಾದರೂ ಒಂದು ಕ್ರಿಯೆ ತಮಾಷೆಯಾಗಿ ಪರಿವರ್ತನೆಗೊಂಡು ಅದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತದೆ.

ವಧು-ವರ

ವಧು-ವರ

  • Share this:

ಜಗತ್ತಿನ ಯಾವ ಜಾಗವೇ ಇರಲಿ, ಮದುವೆ ಸಮಾರಂಭಕ್ಕಿರುವ ಕಳೆಯೇ ಬೇರೆ. ಅದು ಇಷ್ಟದ ಮದುವೆ ಆಗಿರಲಿ ಅಥವಾ ಇಷ್ಟವಿಲ್ಲದ ಮದುವೆಯಾಗಿರಲಿ, ಅದಕ್ಕಿರುವ ಪ್ರಾಶಸ್ತ್ಯವಂತೂ ಕಡಿಮೆ ಆಗುವುದಿಲ್ಲ. ಅದರಲ್ಲೂ ನಮ್ಮ ಭಾರತೀಯ ಮದುವೆಗಳಂತೂ ಎಲ್ಲ ವಿಷಯದಲ್ಲೂ ವರ್ಣಮಯ. ನಾವು ಮದುವೆ ಎಷ್ಟೇ ಚೆನ್ನಾಗಿ ನಡೆಯಲಿ ಎಂದುಕೊಂಡರೂ ಏನಾದರೂ ಎಡವಟ್ಟು, ಇಲ್ಲವೇ ಇರಿಸುಮುರಿಸು ಅಥವಾ ಅಲ್ಲೋ ಇಲ್ಲೋ ಸಣ್ಣ ಮನಸ್ತಾಪಗಳು ಆಗುವುದಂತೂ ಇದ್ದೇ ಇರುತ್ತದೆ. ಅದಾಗದಿದ್ದರೂ ಅತಿಥಿಗಳನ್ನು ನಕ್ಕು ನಗಿಸುವಂತೆ ಮಾಡುವ ಅಥವಾ ಕಡೇ ಪಕ್ಷ ಎಲ್ಲರ ಮುಖದಲ್ಲಿ ಮುಗುಳ್ನಗು ತರಿಸುವಂತದ್ದೇನಾದರೂ ನಡೆದೇ ನಡೆಯುತ್ತದೆ. ಇದೀಗ ಭಾರತೀಯ ಮದುವೆಗಳ ಅಂತಹ ಹಲವಾರು ಸಂಗತಿಗಳು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ದೃಶ್ಯಗಳ ಸಮೇತ ಸುದ್ದಿಯಾಗುತ್ತಲೇ ಇರುತ್ತದೆ. ವರ, ವಧು, ಸಂಬಂಧಿಕರು ಅಥವಾ ಸ್ನೇಹಿತರು ಮಾಡುವ ಯಾವುದಾದರೂ ಒಂದು ಕ್ರಿಯೆ ತಮಾಷೆಯಾಗಿ ಪರಿವರ್ತನೆಗೊಂಡು ಅದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಆದರೆ ಅದನ್ನೆಲ್ಲಾ ಸೆರೆ ಹಿಡಿಯುವ ಫೋಟೋಗ್ರಾಫರ್‌ನಿಂದಲೇ ಫಜೀತಿಯಾದರೆ? ಅದು ಹೇಗಿರುತ್ತದೆ ಎಂದು ನೋಡಬೇಕಿದ್ದರೆ ನೀವು ಸದ್ಯಕ್ಕೆ ಇಂಟರ್‌ನೆಟ್‍ನಲ್ಲಿ ವೈರಲ್ ಆಗುತ್ತಿರುವ ಈ ಪಂಜಾಬಿ ಮದುವೆಯ ದೃಶ್ಯ ನೋಡಲೇಬೇಕು.


ಈ ವಿಡಿಯೋದಲ್ಲಿರುವ ದೃಶ್ಯದಲ್ಲಿ, ವರ ಮತ್ತು ವಧು ತಮ್ಮ ಮದುವೆಯ ಮಂಟಪದಿಂದ ಹೊರ ನಡೆದುಕೊಂಡು ಬರುತ್ತಿದ್ದಾರೆ. ವಧು ಸುಂದರವಾದ ಲೆಹಂಗಾದಲ್ಲಿ ಲಕಲಕಿಸುತ್ತಿದ್ದರೆ, ವರ ಚಿನ್ನದ ಬಣ್ಣದ ಶೇರ್ವಾನಿ ತೊಟ್ಟು ಮಿಂಚುತ್ತಿದ್ದಾನೆ. ಅಕ್ಕಪಕ್ಕ ನಿಂತಿರುವವರೆಲ್ಲಾ ಅವರ ಮೇಲೆ ಹೂವಿನ ದಳಗಳನ್ನು ಎಸೆದು ಶುಭಕೋರುತ್ತಿದ್ದಾರೆ.


ಈ ದೃಶ್ಯದಲ್ಲಿ ನಗುವ ಸಂಗತಿಯೇನಿದೆ? ಎಲ್ಲಾ ಮದುವೆಯಲ್ಲೂ ಇದು ಸಾಮಾನ್ಯ ಎನ್ನುತ್ತೀರಾ? ನೀವು ಮುಂದಿನ ದೃಶ್ಯದಲ್ಲಿ ವಧುವಿನ ಮುಖಭಾವ ದಿಢಿರನೇ ಬದಲಾಗುವುದನ್ನು ಕಾಣಬಹುದು. ತನ್ನ ಮುಂದೆ ದೆವ್ವವನ್ನು ಕಂಡಂತೆ ಕಣ್ಣು ಬಾಯಿ ಅರಳಿಸಿ ನೋಡತೊಡಗುತ್ತಾಳೆ ಆಕೆ. ವರನ ಮುಖಭಾವವೂ ಕೂಡ ಅದೇ ಆಗಿರುತ್ತದೆ!.


ಅವರಿಬ್ಬರಿಗೂ ತಾವು ನೋಡುತ್ತಿರುವ ದೃಶ್ಯವನ್ನು ನಂಬಲೇ ಆಗುತ್ತಿಲ್ಲ. ನೆರೆದವರು ಕೂಡ ಒಬ್ಬೊಬ್ಬರೇ ಶಾಕ್ ಆಗತೊಡಗುತ್ತಾರೆ. ಅವರು ನೋಡುತ್ತಿರುವ ದಿಕ್ಕಿನ ಕಡೆ ಕ್ಯಾಮೆರಾ ತಿರುಗಿದಾಗ, ವಧು - ವರ ಸೇರಿದಂತೆ ನೆರೆದವರೆಲ್ಲರೂ ಶಾಕ್ ಆಗಿದ್ದರ ಹಿಂದಿನ ಕಾರಣ ನೋಡುಗರಿಗೆ ತಿಳಿಯುತ್ತದೆ.


ಅಲ್ಲಿ ಮುಂದೆ ಇದ್ದ ಈಜುಕೊಳದ ತುದಿಯಲ್ಲಿ ನಿಂತು ವಧುವರರ ಪೋಟೋ ತೆಗೆಯುತ್ತಿದ್ದ ಫೋಟೋಗ್ರಾಫರ್ ಆಯತಪ್ಪಿ ಈಜುಕೊಳಕ್ಕೆ ಬಿದ್ದಿರುತ್ತಾನೆ. ಯಾರೋ ಅವನ ಕೈ ಹಿಡಿದು ಮೇಲೇತ್ತುತ್ತಾರೆ. ಅದೃಷ್ಟವಶಾತ್ ಫೋಟೋಗ್ರಾಫರ್‌ಗೆ ಯಾವುದೇ ಹಾನಿಯಾಗಿಲ್ಲ. ಆತ ಸುಸ್ಥಿತಿಯಲ್ಲಿ ಈಜುಕೊಳದಿಂದ ಮೇಲೆ ಬಂದ ಬಳಿಕ ಶಾಕ್ ಆಗಿದ್ದ ಎಲ್ಲರೂ ಫೋಟೋಗ್ರಾಫರ್ ಮಾಡಿಕೊಂಡ ಫಜೀತಿ ಕಂಡು ನಗತೊಡಗುತ್ತಾರೆ. ಈ ವಿಡಿಯೋ ನೆಟ್ಟಿಗರ ಮುಖದಲ್ಲೂ ನಗು ತರಿಸುತ್ತಿದೆ.


ಈ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ 'Wishnwed' ಎಂಬ ಫೋಟೋಗ್ರಫಿ ಪೇಜ್‍ನಲ್ಲಿ ಅಪ್‍ಲೋಡ್ ಮಾಡಲಾಗಿದ್ದು ಸಾವಿರಾರು ವೀಕ್ಷಣೆ ಮತ್ತು ಮೆಚ್ಚುಗೆಗಳನ್ನು ಪಡೆಯುತ್ತಿದೆ.


First published: