• Home
  • »
  • News
  • »
  • trend
  • »
  • ಬೆಂಕಿ ಹೊತ್ತಿ ಉರಿಯುತ್ತಿದ್ದ ಕಟ್ಟಡದಿಂದ ಜಿಗಿದು ಬಚಾವಾದ ಸಾಹಸಿ ಬೆಕ್ಕಿನ ವಿಡಿಯೋ ವೈರಲ್

ಬೆಂಕಿ ಹೊತ್ತಿ ಉರಿಯುತ್ತಿದ್ದ ಕಟ್ಟಡದಿಂದ ಜಿಗಿದು ಬಚಾವಾದ ಸಾಹಸಿ ಬೆಕ್ಕಿನ ವಿಡಿಯೋ ವೈರಲ್

ಕಟ್ಟಡದಿಂದ ಹಾರಿದ ಬೆಕ್ಕು

ಕಟ್ಟಡದಿಂದ ಹಾರಿದ ಬೆಕ್ಕು

ಬೆಕ್ಕು ತನ್ನ ಪ್ರಾಣ ಉಳಿಸಿಕೊಳ್ಳಲು ಬೆಂಕಿ ಹತ್ತಿ ಉರಿಯುತ್ತಿರುವ ಕಟ್ಟಡವೊಂದರ 5ನೇ ಮಹಡಿಯ ಕಿಟಕಿಯಿಂದ ಹೊರ ಜಿಗಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • Share this:

ಬೆಕ್ಕೊಂದು ತಾನು ವಾಸಿಸುತ್ತಿದ್ದ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಾಗ, ಮನುಷ್ಯರ ಸಹಾಯಕ್ಕೆ ಕಾಯದೆ, ಕಟ್ಟಡದಿಂದ ಕೆಳ ಜಿಗಿದು ಪ್ರಾಣ ಉಳಿಸಿಕೊಂಡಿದೆ. ಆದರೆ, ನೆಲ ತಲುಪಿದ ಕ್ಷಣದಿಂದ ಬೆಕ್ಕು ಕಣ್ಮರೆಯಾಗಿದ್ದು, ಅದನ್ನು ಹೇಗೆ ಹುಡುಕಬೇಕೆಂಬುವುದು ಈಗ ಯಕ್ಷಪ್ರಶ್ನೆಯಾಗಿದೆ. ಪ್ರಾಣ ಉಳಿಸಿಕೊಳ್ಳಬೇಕಾದ ಸಂದರ್ಭ ಬಂದಾಗ ನಾವು ಎಂತಹ ಸಾಹಸಕ್ಕೂ ಸಿದ್ಧರಾಗುತ್ತೇವೆ. ಪ್ರಾಣಿಗಳೂ ಇದಕ್ಕೆ ಹೊರತಲ್ಲ. ಮನುಷ್ಯನಾಗಲೀ , ಪ್ರಾಣಿಯಾಗಲೀ ಜೀವಭಯ ಎಲ್ಲರಿಗೂ ಒಂದೇ ತಾನೇ? ಇದೀಗ ಬೆಕ್ಕೊಂದು ಅಂತಹ ಸಾಹಸಕ್ಕೆ ಕೈಹಾಕಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ , ಬೆಕ್ಕು ತನ್ನ ಪ್ರಾಣ ಉಳಿಸಿಕೊಳ್ಳಲು ಬೆಂಕಿ ಹೊತ್ತಿ ಉರಿಯುತ್ತಿರುವ ಕಟ್ಟಡವೊಂದರ 5ನೇ ಮಹಡಿಯ ಕಿಟಕಿಯಿಂದ ಹೊರ ಜಿಗಿಯುತ್ತಿರುವ ದೃಶ್ಯವಿದೆ.


ಅಮೆರಿಕದ ಚಿಕಾಗೋ ರಾಜ್ಯ ಇಲಾಖೆಯು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಈ ಬೆಕ್ಕಿನ ಜಿಗಿತದ ವಿಡಿಯೋ ನೋಡಿ, ‘ಅಬ್ಬಬ್ಬಾ, ಮಾರ್ಜಾಲದ ಧೈರ್ಯವೇ!' ಎಂದು ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಬೆಂಕಿ ಹತ್ತಿಕೊಂಡ ಕಟ್ಟಡದ 5ನೇ ಮಹಡಿಯ ಕಿಟಕಿಯಿಂದ ಹೊಗೆ ಹೊರಗೆ ಬರುತ್ತಿದ್ದರೂ ಲೆಕ್ಕಿಸದೆ, ಅತ್ಯಂತ ಜಾಗರೂಕತೆ ಹಾಗೂ ಧೈರ್ಯದಿಂದ ಬೆಕ್ಕು ಹೊರಗೆ ಜಿಗಿದೆ. ಅದೃಷ್ಟವಶಾತ್, ಮೇಲಿನಿಂದ ಜಿಗಿದಾಗ ಕಟ್ಟಡದ ಎದುರಿಗಿದ್ದ ಆವರಣ ಗೋಡೆಗೆ ಢಿಕ್ಕಿ ಹೊಡೆಯದೆ, ಅದರ ಪಕ್ಕದ ಹುಲ್ಲು ಹಾಸಿನ ಮೇಲೆ ಬಿದ್ದಿದ್ದರಿಂದ ಬೆಕ್ಕಿಗೆ ಯಾವುದೇ ಹಾನಿಯಾಗಿಲ್ಲ. ಬೆಕ್ಕು ಮೇಲಿನಿಂದ ಜಿಗಿದು, ನೆಲ ತಲುಪುತ್ತಿದ್ದಂತೆ, ಜೋರಾಗಿ ಕಿರುಚಿದ್ದರಿಂದ ಗಾಬರಿಯಾಗಿದ್ದ ಪ್ರತ್ಯಕ್ಷದರ್ಶಿಗಳು, ಅದು ಸುರಕ್ಷಿತವಾಗಿ ನೆಲ ತಲುಪಿದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಬಳಿಕ ಆ ಬೆಕ್ಕು ಏನೂ ಆಗಿಲ್ಲವೆಂಬಂತೆ ತನ್ನ ದಾರಿ ಹಿಡಿದಿತ್ತು.



ಈ ವಿಡಿಯೋವನ್ನು ಈಗಾಗಲೇ ಸುಮಾರು 8 ಲಕ್ಷ ಮಂದಿ ವೀಕ್ಷಿಸಿದ್ದು, 12 ಸಾವಿರ ಮಂದಿ ಲೈಕ್ ಮಾಡಿದ್ದಾರೆ.


ಆದರೆ, ಇದೀಗ ಹೆನ್ನೆಸ್ಸಿ ಎಂಬ ಹೆಸರಿನ ಆ ಧೈರ್ಯಶಾಲಿ ಬೆಕ್ಕು, ಕಾಣೆಯಾಗಿದ್ದು, ಘಟನೆ ನಡೆದ ಬಳಿಕ ಒಮ್ಮೆಯೂ ಮನೆಯ ಕಡೆ ಮುಖ ಮಾಡಿಲ್ಲ ಎನ್ನಲಾಗುತ್ತಿದೆ. ಹೆನ್ನೆಸ್ಸಿ ಒಂದು ಸಾಕು ಬೆಕ್ಕಾಗಿದ್ದು, ಅದಕ್ಕೆ ಮನೆಯಿಂದ ಹೊರಗೆ ಹೋಗಿ ಅಭ್ಯಾಸವಿಲ್ಲ ಎಂದು ಅದರ ಮಾಲೀಕ ಹೇಳಿರುವುದಾಗಿ, ಚಿಕಾಗೋ ಅಗ್ನಿಶಾಮಕ ಇಲಾಖೆ ಮಾಹಿತಿ ನೀಡಿದೆ. ಬೆಕ್ಕಿನ ಪ್ರಾಣ ಉಳಿಯಿತೆಂದು ಖುಷಿಪಟ್ವ ಕಟ್ಟದ ನೆರೆಹೊರೆಯವರು, ಅದು ಕಾಣೆಯಾಗಿರುವ ಸಂಗತಿಯಿಂದ ಕಳವಳಗೊಂಡಿದ್ದು, ಅದರ ಹುಡುಕಾಟದಲ್ಲಿ ತೊಡಗಿದ್ದಾರೆ.



ಈ ಘಟನೆ ನಡೆದದ್ದು, ಈಗಲ್‍ವುಡ್ ಪ್ರದೇಶದ ಒಂದು ಕಟ್ಟಡದಲ್ಲಿ. ಕಟ್ಟಡದ ಅಡುಗೆ ಮನೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದಾಗ, ಕೂಡಲೇ ಸ್ಪಂದಿಸಿದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಕೇವಲ 15 ನಿಮಿಷಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು. ಕಟ್ಟಡದಿಂದ ಜಿಗಿಯ ಹೊರಟಿದ್ದ ಬೆಕ್ಕಿಗೂ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಸಹಾಯ ಮಾಡಲು ಪ್ರಯತ್ನಿಸಿದ್ದರು. ಆದರೆ ಬಹುಶ: ಬೆಕ್ಕು ಅವರ ಸಹಾಯ ತೆಗೆದುಕೊಳ್ಳುವ ‘ಮೂಡ್’ನಲ್ಲಿ ಇರಲಿಲ್ಲ ಎಂದೆನಿಸುತ್ತದೆ, ಹಾಗಾಗಿ ಸ್ವತಃ ಜೀವ ಉಳಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿತ್ತು.



ಬೆಕ್ಕಿನ ಹುಡುಕಾಟಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ತಿಳಿದಂತೆಲ್ಲ ಅದನ್ನು ಹಂಚಿಕೊಳ್ಳುವುದಾಗಿ ಚಿಕಾಗೋ ಅಗ್ನಿಶಾಮಕ ಇಲಾಖೆ ಟ್ವೀಟ್ ಮಾಡಿದೆ. ಸದ್ಯಕ್ಕೆ ಟ್ವಿಟ್ಟರ್‌ನಲ್ಲಿ, ಈ ‘ಸಾಹಸಿ ಬೆಕ್ಕಿನ’ ಹುಡುಕಾಟಕ್ಕೆ ಸಂಬಂಧಿಸಿ ಸಲಹೆಗಳ ಮಹಾಪೂರವೇ ಹರಿದು ಬರುತ್ತಿವೆ.

First published: